ಮದ್ರಸಾ ಮಸೀದಿಗಳನ್ನು ಸಹಿಸದವರು ಮುಸ್ಲಿಮರನ್ನು ಸಹಿಸುತ್ತಾರಾ?

0
368

✍️ ಅರಫಾ ಮಂಚಿ

ಅಮೆರಿಕನ್ ಹಿಂದೂಸ್ ಫಾರ್ ಎಂಗೇಜ್‌ಮೆಂಟ್ ಆಂಡ್ ಡಯಲಾಗ್ ಬ್ಯಾನರಲ್ಲಿ ನ್ಯೂಯಾರ್ಕ್‌ನ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನ ನಡೆದ ಕಾರ್ಯಕ್ರಮದಲ್ಲಿ ಆರೆಸ್ಸೆಸ್ ಮುಖ್ಯಸ್ಥ ದೊಡ್ಡ ಭಾಷಣ ಮಾಡಿದ್ದಾರೆ.  ಐದು ಸಾವಿರದಷ್ಟು ಅನಿವಾಸಿ ಭಾರತೀಯರೊಂದಿಗೆ ಅವರು ಮಾತಾಡುತ್ತಾ ಹೇಳಿದ್ದು, ಭಾರತದ ಮುಸ್ಲಿಮರನ್ನು ಒಪ್ಪದಿರುವ ಯಾರೂ ಹಿಂದೂವಲ್ಲ. ತಮ್ಮ ಹಿಂದುತ್ವ ಯಾರನ್ನೂ ಹೊರತಳ್ಳುವ ತತ್ವಶಾಸ್ತ್ರವಲ್ಲ… ಹೀಗೆ ಮಾನವೀಯ ಸಂವೇದನೆಯ ಹಲವು ಮಾತುಗಳು ಅವರಿಂದ ಬಂದಿವೆ. 2018ರ ನಂತರ ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರೊಡನೆ ಮಾತುಕತೆಗೆ ತೊಡಗಿಕೊಂಡಿದ್ದೇವೆ. ಧರ್ಮಗಳು ಬೇರೆ ಬೇರೆ ಇದ್ದರೂ ಮಾನವೀಯತೆ ಒಂದೇ ಅಂದಿದ್ದಾರೆ. ಆದರೆ, ವಾಸ್ತವ ಇನ್ನೊಂದು ನೋಡಿ, 2018ರ ನಂತರ ಗೋಮಾಂಸ ಸೇವನೆ ಮತ್ತು ಗೋಸಾಗಾಟದ ಹೆಸರಲ್ಲಿ ಮುಸ್ಲಿಮರನ್ನು ಟಾರ್ಗೆಟ್ ಮಾಡುವುದು ಹೆಚ್ಚಾಗಿದೆ ಎಂದು ಮಾನವಹಕ್ಕು ಸಂಘಟನೆಗಳ ವರದಿ ತಿಳಿಸುತ್ತವೆ. 2018ರ ನಂತರವೇ ಅವರ ಪರಿವಾರದಿಂದ ಚರ್ಚ್ ದಾಳಿ ಘಟನೆಗಳು, ಮತಾಂತರ ಆರೋಪದಲ್ಲಿ ಸಿಸ್ಟರ್‌ಗಳು ಮತ್ತು ಪಾದ್ರಿಗಳಿಗೆ ಹೊಡೆಯುವುದು, ಕ್ರಿಸ್‌ಮಸ್ ಆಚರಣೆಯ ಮೇಲೆ ದಾಳಿಯೆಲ್ಲ ಹೆಚ್ಚಾಗಿದೆ. 2018ರಂದು ದಿಲ್ಲಿಯಲ್ಲಿ, ಹಿಂದೂ ರಾಷ್ಟ್ರದ ಪರಿಕಲ್ಪನೆಯು ಮುಸ್ಲಿಮರನ್ನು ಹೊರಗಿಡುವುದಿಲ್ಲ ಎಂದಿದ್ದರು. ಭಾಗವತ್ ಆಗ ಹೇಳಿದ್ದು ಈಗ ನ್ಯೂಯಾರ್ಕ್ನಲ್ಲಿ ಆಡಿದ್ದು ಸರಿಸುಮಾರಾಗಿ ಹೋಲುತ್ತವೆ. ಬಾಯಿಯಲ್ಲಿ ಹಿತಕಾಂಕ್ಷೆಯ ಮಾತುಗಳು ಕರ್ಮದಲ್ಲಿ ಮರಣ ಮೃದಂಗವಾದನ.

ಹಾಗಿದ್ದರೆ ಹೇಳಿ ಇವರು ಯಾರು?

ಮುಸ್ಲಿಮರಿಲ್ಲದ ಭಾರತ ಎಂಬ ದೃಷ್ಟಿ ಹಿಂದುತ್ವದ್ದು ಅಲ್ಲ ಎಂದಾದರೆ ಸಂಘಿಗಳು ಹಿಂದುಗಳೇ ಅಲ್ವಾ? ಎಷ್ಟು ಸ್ಪೀಡಾಗಿ ಅವರು ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರ ವಿರುದ್ಧ ಒಟ್ಟಾಗುತ್ತಾರೆ. ಹುಡುಕಿ ಹೊಡೆಯುವುದು, ಕೊಲ್ಲುವುದು ಮಾಡ್ತಾರೆ? ಮುಸ್ಲಿಮರು ಭಾರತದಲ್ಲಿ ಇರಬಾರದೆಂದು ಬಯಸುವವನು ನಿಜವಾದ ಹಿಂದೂ ಅಲ್ಲ ಅನ್ನುವಾಗ ಈ ಸಂಘಿಗಳ ಪರಿವಾರ ಅವರದೇ ಬಿಜೆಪಿ ಸರಕಾರ ಅದರ ಸಚಿವರು ಬಿಜೆಪಿ ನಾಯಕರು ಕಾರ್ಯಕರ್ತರು ಕೂಡ ಕಟ್ಟಕಡೆಗೆ ಚುನಾವಣೆ ಬಂದರೆ ಪ್ರಧಾನಿ ಮೋದಿ ವರೆಗೂ ಮುಸ್ಲಿಂ ದ್ವೇಷ ಕೆರಳಿಸುವ ಮಾತುಗಳಿಂದ ಸಮಾಜವನ್ನು ಪ್ರಚೋದಿಸುತ್ತಿರುವುದು ನಡೆಯುತ್ತದೆ. 2018ರ ದಿಲ್ಲಿ ಮತ್ತು ಈಗ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನ ಭಾಗವತ್‌ರ ಮಾತಿನಾಧಾರದಲ್ಲಿ ಹೇಳುವುದಾದರೆ ಇವರೆಲ್ಲ ಹಿಂದೂಗಳಲ್ಲ.

ಭಾವೈಕ್ಯದ ಟ್ಯಾಗ್

ಭಾವೈಕ್ಯ ಪ್ರಾಮಾಣಿಕವಾಗಿದ್ದಿದ್ದರೆ ಭಾರತ ಎಲ್ಲರಿಗೂ ಶಾಂತ ಭೂಮಿ ಆಗಿರಬೇಕಿತ್ತು. ಆದರೆ, ಎನ್‌ಆರ್‌ಸಿ ಮೂಲಕ ಮುಸ್ಲಿಮರನ್ನು ಬಾಂಗ್ಲಾದೇಶಿ ಮಾಡುವುದು, ಮುಸ್ಲಿಂ ವೋಟರ್ಸ್‌ಗಳಿಗೆ ಕಷ್ಟ ತಂದಿಡುವುದು, ಮುಸ್ಲಿಮರು ಹಸಿರು ಧ್ವಜ ಹಾರಿಸಿದರೆ ಪಾಕಿಸ್ತಾನಿ ಎಂದು ಬೀದಿಯಿಂದ ಟಿವಿಯವರೆಗೂ ಕೂಗು ಹಾಕ್ತಿರುವುದು, ಅದಾನ್ ವಿರುದ್ಧ ಕೋರ್ಟಿಗೆ ಹೋಗುವುದು, ಮಸೀದಿ ಮುಂದೆ ರಾಮ್ ಚರಿತ ಮಾನಸ ಓದುವುದು, ರೈಲಲ್ಲಿ ಉದ್ದ ಗಡ್ಡ ಕಂಡರೆ ಹೊಡೆಯುವುದು, ಅಪಮಾನಿಸುವುದು… ಹೀಗೆ ಎಷ್ಟಿಲ್ಲ ಇವರ ಅಸಹನೆಯ ಕರ್ಮಕಾಂಡಗಳು. ಈಗ ನ್ಯೂಯಾರ್ಕ್‌ನಲ್ಲಿ ಇದೇ ಪರಿವಾರದ ಸುಪ್ರೀಮೊ ಶಾಂತಿ ದೂತನಾಗುತ್ತಿದ್ದಾರೆ. ಆಹಾರದ ವಿಷಯದಲ್ಲಿ ಮುಸ್ಲಿಮರನ್ನು ಬೆಂಬತ್ತಿ ಮನೆಯೊಳಗೆ ನುಗ್ಗಿ ಆಡಿನ ಮಾಸಂವನ್ನು ದನದ್ದೆಂದು ಹೇಳಿ ಕೊಲ್ಲುವುದು ಇವರು 2015ರಲ್ಲಿ ಶುರುಮಾಡಿದ್ದು. ಮೋದಿ ಸರ್ಕಾರ ಬಂದು ಸುಮಾರು ಒಂದು ವರ್ಷ ಆಗಿತ್ತಾಗ. ಉತ್ತರಪ್ರದೇಶದ ನೊಯ್ಡಾ ಸಮೀಪದ ದಾದ್ರಿಯಲ್ಲಿ ಅಕ್ಲಾಕ್‌ರ ಮನೆಗೆ ನುಗ್ಗಿ ಅವರನ್ನು ಕೊಂದು ಹಾಕುವುದೊಂದಿಗೆ ಗೋವು ರೌಡಿಸಂ ಶುರುವಾಯಿತು. ರಾಜಸ್ತಾನದಲ್ಲಿ ಪೆಹ್ಲೂ ಖಾನ್ ಹತ್ಯೆ‌, ಟೋಪಿ ಧರಿಸಿದ್ದ ಹುಡುಗ ಜುನೈದ್‌ನ ಹತ್ಯೆ ಆದದ್ದೂ ಅವರದೇ ಪರಿವಾರದಿಂದ. ಇತ್ತ ಕರ್ನಾಟಕದಲ್ಲಿ ಇಂತಹದೇ ಕೃತ್ಯ ಪುನೀತ್ ಕೆರೆಹಳ್ಳಿ ಎಸಗಿ ಈಗಲೂ ಟಳಾಯಿಸುತ್ತಿದ್ದಾನೆ. ಪಬ್ಲಿಕ್‌ನಲ್ಲಿ ನಮಾಝ್ ಮಾಡಿದರೆ ಇವರ ಪರಿವಾರ ಉರಿಯುತ್ತದೆ. ನೊಯ್ಡಾದಲ್ಲಿ ಮುಸ್ಲಿಮರನ್ನು ನಮಾಝ್ ಮಾಡಲು ಬಿಡಲಿಲ್ಲ. ಇವೆಲ್ಲ ಇವರ ಪರಿವಾರದಿಂದ ಆಗುತ್ತಿದೆ. ಭಾಗವತ್‌ರ ಬಾಯಲ್ಲಿ ಮಾನವೀಯತೆ, ಸಹನೆ ಮತ್ತು ಶಾಂತಿಯ ಮಂತ್ರ. ತದ್ವಿರುದ್ಧ ಲೆಗಸಿ. ಈಗಲೂ ಮುಂದುವರಿಯುತ್ತಿದೆ.

ಖರ್ಗೇಜಿ ಶುದ್ಧೀಕರಣ

ಈ ಜನರು ಎಷ್ಟು ಹೀನ ಮನಸ್ಥಿತಿಯವರೆಂಬುದು ಜಾತಿ ಆಧಾರಿತವಾಗಿ ನಡವಳಿಕೆಯಲ್ಲಿ ಅನಾವರಣವಾಗುತ್ತದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಉತ್ತರಖಂಡದ ಹಲ್ವಾನದ ರಾಮಲೀಲ ಮೈದಾನದಲ್ಲಿ ಭಾಷಣ ಕೊಟ್ಟು ಮರಳಿದ ಬಳಿಕ ಸಂಘಿಗಳು ಸ್ಥಳ ಶುದ್ಧೀಕರಣ ಮಾಡಿದ್ದಾರೆ. ದಲಿತ ಹಿಂದುಳಿದವರ ಬಗ್ಗೆಯೂ ಈ ಪರಿವಾರ ಅಸಹನೆಯ ಅಪ್ಪಟ ಸಾಕ್ಷ್ಯ ಇದು. ದಲಿತ ಖರ್ಗೆಯಿಂದ ಮೈದಾನ ಮಲಿನವಾಗಿದೆ ಎಂದು ತಿಳಿದುಕೊಳ್ಳುವ ಮನಸ್ಥಿತಿ. ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ಭಾಗವತ್ ಇದನ್ನು ಖಂಡಿಸಬೇಕಿತ್ತು. ದೇಶದ ಬಹುದೊಡ್ಡ ವಿರೋಧ ಪಕ್ಷದ ಅಧ್ಯಕ್ಷರನ್ನು ಭಾಗವತ್ ಪರಿವಾರ ಅಪಮಾನಿಸಿದೆ.

ಅಸದುದ್ದೀನ್ ಉವೈಸಿ ರಿಮಾರ್ಕ್

ಎಂಐಎಐಎನ್‌ನ ಅಸದುದ್ದೀನ್ ಉವೈಸಿಯವರು ಫೇಸ್‌ಬುಕ್ ಪೋಸ್ಟ್‌ನಲ್ಲಿ ಹೇಳಿದ್ದು ಹೀಗೆ, ಆರೆಸ್ಸೆಸ್ ʻಪ್ರಜಾಪ್ರಭುತ್ವವನ್ನು ವಿರೋಧಿಸುತ್ತದೆ ಮತ್ತು ನಿರಂತರವಾಗಿ ಸರ್ವಾಧಿಕಾರವನ್ನು ಒತ್ತಾಯಿಸುತ್ತಿದೆ’. ಇಷ್ಟೇಅಲ್ಲ, ಇದರ ಸ್ಥಾಪಕರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನಲ್ಲಿದ್ದವರು ಎಂದು ಉವೈಸಿ ನೆನಪಿಸಿದ್ದಾರೆ. ಹೌದು ಆರೆಸ್ಸೆಸ್ ಸ್ಥಾಪಕ ಹೆಗಡೆವಾರ್ ಕಾಂಗ್ರೆಸ್ಸಿಗರಾಗಿದ್ದರು. ಸುಮಾರು ನೂರು ವರ್ಷ ಹಿಂದೆ ಮೇಲ್ಜಾತಿ ಹಿಂದುಗಳ ಮೂಲಕ ಸಾರ್ವರ್ಕರ್‌ರ ಹಿಂದುತ್ವ ಅಪ್ಪಿಕೊಂಡು ಆರೆಸ್ಸೆಸ್ ಸ್ಥಾಪನೆಯಾಗಿದೆ. ಉವೈಸಿಯವರು ಆರೆಸ್ಸೆಸ್ ಸರ್ವಾಧಿಕಾರಕ್ಕೆ ಒತ್ತಾಯಿಸುತ್ತದೆ ಎಂದೂ ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ಹೇಳಿದ್ದಾರೆ. ದೇಶದ ಕೆಳವರ್ಗ, ದೀನದಲಿತ ವರ್ಗಗಳು ಅವರ ಅಡಿಯಾಳಾಗಿ ಉಳಿಸುವುದಕ್ಕೆ ಮತ್ತು ಬ್ರಿಟಿಷರನ್ನು ಓಲೈಸಿ ಅಧಿಕಾರದ ಶಕ್ತಿ ಕೇಂದ್ರದಲ್ಲಿ ಕೂರುವುದು ಅವರಿಗೆ ಬೇಕಿತ್ತು. ಹೀಗಾಗಿ ಆರೆಸ್ಸೆಸ್ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿಲ್ಲ ಎನ್ನುವರಿದ್ದಾರೆ.

ಸರಿ. ಈ ಉದ್ದೇಶವನ್ನು ಕಾಂಗ್ರೆಸ್ ಹಾಳು ಮಾಡಿತು. ದಲಿತರಿಗೆ ಮೀಸಲಾತಿ ಕೊಟ್ಟಿತು. ಕೆಳವರ್ಗ ಹೆಮ್ಮೆಯಿಂದ ಮುಕ್ತವಾಗಿ ಬದುಕುವ ಅವಕಾಶ ಸೃಷ್ಟಿಸಿತು. ದೇಶದ ಶೋಷಿತ ವರ್ಗ ಸ್ವಾತಂತ್ರ್ಯ ಪೂರ್ವದಲ್ಲಿದ್ದಂತೆ ಮತ್ತೆ ಸವರ್ಣೀಯರ ಅಡಿಯಾಳಾಗಿರಬೇಕೆಂದಿದ್ದರೆ ಈಗ ಏನಾಗಬೇಕು? ಪ್ರಜಾಪ್ರಭುತ್ವ ಹೋಗಿ ಸರ್ವಾಧಿಕಾರ ಬರಬೇಕು. ಭಾರತ ಸ್ವತಂತ್ರಗೊಂಡು ಪಂಡಿತ್ ಜವಾಹರಲಾಲ್‌ ಪ್ರಧಾನಿಯಾದರು. ದಲಿತೋದ್ಧಾರದ ಕೆಲಸ ಮಾಡಿದರು. ಮೀಸಲಾತಿ ಬಂತು. ಸಮಾಜದ ಶೋಷಿತ ವರ್ಗ ಶಿಕ್ಷಣ ಪಡೆದು ಗೌರವದ ಬದುಕು ಬದುಕುವಂತೆ ನೆಹರೂ ಕಾಂಗ್ರೆಸ್ ಮಾಡಿತು. ಸರ್ವಾಧಿಪತ್ಯ ಇದ್ದರೆ ಮಾತ್ರ ಭಾರತವನ್ನು ಮತ್ತೆ ಬ್ರಿಟಿಷ್ ಇಂಡಿಯಾದ ಆ ಸ್ಥಿತಿಗೆ ಹಿಂಚಲಿಸುವಂತೆ ಮಾಡಬಹುದು. ಸವರ್ಣೀಯರಲ್ಲಿ ಸರ್ವಾಧಿಪತ್ಯ ಹಂಬಲ 2014ರ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಓಪನ್ ಆಗಿದೆ. ಮೋದಿ ಆ ಗುರಿಯತ್ತ ದೇಶವನ್ನು ಮುನ್ನಡೆಸುವ ಸೂಚನೆಯನ್ನು ಕೊಟ್ಟರು. ಅದರ ಭಾಗವಾಗಿ ಭಾರತಕ್ಕೆ ಹೊಸ ಸಂಸತ್ತು. ಆ ಸಂಸತ್ತಿಗೆ ಸೆಂಗೋಲ್ ತಂದು ರಾಜಾಧಿಪತ್ಯದ ಸೂಚನೆ ಇಟ್ಟರು. ಸ್ವಯಂಸೇವಕ್ ಪ್ರಧಾನಿಯಾಗಿ ಮುಸ್ಲಿಂ ವಿರೋಧಕ್ಕೆ ಮುಫ್ತಾಗಿ ಲೈಸನ್ಸ್ ಸಿಕ್ಕಿದೆ. ಹಿಂದುತ್ವದ ಸರ್ವಾಧಿಕಾರ! ಭಾಗವತ್ ನಾಯಕತ್ವದಲ್ಲಿ ಏಕತೆಯನ್ನು ಜಪಿಸುತ್ತಿದ್ದಾರೆ. ಸಂಘಿಗಳು ಗುರಿಯತ್ತ ಹೊರಳುತ್ತಿದ್ದಾರೆ.

ಬಸವರರಾಜ ರಾಯರೆಡ್ಡಿ ರಾಜೀನಾಮೇ ಕೇಳಿದ್ದೂ ಇವರೇ

ಮುಸ್ಲಿಮರು ಆಯೋಜಿಸಿದ್ದ ಸಭೆಯಲ್ಲಿ ರಾಜ್ಯ ಸಚಿವ ಬಸವರಾಜ ರಾಯ ರೆಡ್ಡಿ ಹೇಳಿದ್ದು ಇತರ ಧರ್ಮಗಳಿಗೆ ಹೋಲಿಸಿದರೆ ಇಸ್ಲಾಮ್ ಅತ್ಯಂತ ಶ್ರೇಷ್ಠ ಧರ್ಮ ಅಂತಾಗಿತ್ತು, ನಿಮಗೂ ಗೊತ್ತು. ಅಷ್ಟಕ್ಕೆ ಮೋಹನ್ ಭಾಗವತ್‌ರ ಹಿಂದುತ್ವ ನಾಯಕರು ಮುಗಿಬಿದ್ದಿದ್ದಾರೆ. ಬಸವರಾಜ ರೆಡ್ಡಿ ವಿರುದ್ಧ ಮುಗಿಬೀಳಲು ಅವರು ಹಿಂದು ಧರ್ಮವನ್ನ ಕೀಳಂದಿಲ್ಲ. ಇತರೆಲ್ಲ ಧರ್ಮಕ್ಕಿಂತ ಇಸ್ಲಾಮ್ ಶ್ರೇಷ್ಠ. ಅಂದಿದ್ದು. ಅದು ಅವರ ಅಭಿಪ್ರಾಯ.

ಕೊನೆಗೆ ನಾನು ಹೇಳುವುದಿಷ್ಟೆ:

ಭಾಗವತರ ಅಗ್ರಿಸಿವ್ ಪರಿವಾರ ಮುಸ್ಲಿಂ ಕ್ರಿಶ್ಚಿಯನ್ನರನ್ನು ಭಾರತದಲ್ಲಿ ಸಹಿಸುವುದಿಲ್ಲ. ಅದು ಜಗಜ್ಜಾಹೀರು. ಅಮೆರಿಕನ್ನರೂ ಆರೆಸ್ಸೆಸ್ ಅನ್ನು ಪಾಸಿಟಿವ್ ಆಗಿ ತೆಗೆದುಕೊಳ್ಳದಿರುವುದಕ್ಕೆ ಕಾರಣ ಇದೇ ಆಗಿದೆ.