ಸನ್ಮಾರ್ಗ ವಾರ್ತೆ
ಟೆಹ್ರಾನ್: ಮಧ್ಯಪ್ರಾಚ್ಯ ಪ್ರದೇಶದಿಂದ ಯುಎಸ್ ಮತ್ತು ಇಸ್ರೇಲ್‌ನ ಮಿಲಿಟರಿ ವಾಪಸಾತಿಯು ಅನಿವಾರ್ಯವಾಗಿದೆ ಎಂದು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ಹೇಳಿದೆ. ಯುಎಸ್ ಮತ್ತು ಇಸ್ರೇಲ್ ಈ ಎರಡೂ ದೇಶಗಳ ಉಪಸ್ಥಿತಿಯಿಲ್ಲದ ಪ್ರದೇಶವನ್ನು ಸ್ವೀಕರಿಸಲು ಸಿದ್ಧವಾಗಿರಬೇಕು ಮತ್ತು ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯು ಯುದ್ಧದ ಸ್ವರೂಪವನ್ನೇ ಮರುರೂಪಿಸಬಹುದು ಎಂದು ಸೋಮವಾರ ಎಚ್ಚರಿಸಿದೆ.
ಯುದ್ಧವು ಇನ್ನೂ ಮುಗಿದಿಲ್ಲ ಎಂದು ಐಆರ್‌ಜಿಸಿ ವಕ್ತಾರ ಹೊಸೈನ್ ಮೊಹೆಬ್ಬಿ ತಿಳಿಸಿದ್ದು, ಯುಎಸ್ ಜೊತೆಗಿನ ಸಂಘರ್ಷವು ತೀವ್ರಗೊಂಡರೆ ಇರಾನ್ ತನ್ನ ಶಸ್ತ್ರಾಸ್ತ್ರಗಳು, ಮಿಲಿಟರಿ ತಂತ್ರಗಳು ಮತ್ತು ದಾಳಿಯ ಗುರಿಗಳನ್ನು ಬದಲಾಯಿಸಲಿದೆ ಎಂದು ಹೇಳಿದ್ದಾರೆ. “ನಾವು ಖಂಡಿತವಾಗಿಯೂ ನಮ್ಮ ಹೋರಾಟದ ರೀತಿಯನ್ನು ಬದಲಾಯಿಸುತ್ತೇವೆ. ನಾವು ಹೊಸ ಮತ್ತು ಹೆಚ್ಚು ಮಾರಕ ಶಸ್ತ್ರಾಸ್ತ್ರಗಳನ್ನು ರಣರಂಗಕ್ಕೆ ತರುತ್ತೇವೆ. ನಮ್ಮ ಗುರಿಗಳು ಇನ್ನು ಮುಂದೆ ಮೊದಲಿನಂತೆ ಇರುವುದಿಲ್ಲ” ಎಂದು ಮೊಹೆಬ್ಬಿ ವಿವರಿಸಿದರು. ಇರಾನ್ ಎಂದಿಗೂ ಪರಮಾಣು ಶಸ್ತ್ರಾಸ್ತ್ರವನ್ನು ಪಡೆದುಕೊಳ್ಳದಂತೆ ನೋಡಿಕೊಳ್ಳಲು ಟ್ರಂಪ್ ದೃಢಸಂಕಲ್ಪ ಮಾಡಿದ್ದಾರೆ ಎಂದು ವಿಶ್ವಸಂಸ್ಥೆಯ ಯುಎಸ್ ರಾಯಭಾರಿ ಮೈಕ್ ವಾಲ್ಟ್ಜ್ ಹೇಳಿದರು.
ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಸಮಸ್ಯೆಯ ಬಗ್ಗೆ ನಿರ್ಧರಿಸಲು ನ್ಯೂಯಾರ್ಕ್‌ನಲ್ಲಿ ಇಂದು ಗಲ್ಫ್ ವಿದೇಶಾಂಗ ಸಚಿವರೊಂದಿಗೆ ನಿರ್ಣಾಯಕ ಸಭೆಯನ್ನು ನಡೆಸಲಿದ್ದಾರೆ. ಇರಾನ್ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವಿನ ಒಪ್ಪಂದವು ಅಲ್ಪಕಾಲಿಕವಾಗಿದ್ದರೂ ಸಹ ಅತ್ಯಗತ್ಯವಾಗಿದೆ ಮತ್ತು ಮಧ್ಯವರ್ತಿ ಪ್ರಯತ್ನಗಳು ಮುಂದುವರಿಯುತ್ತವೆ ಎಂದು ಕತಾರ್ ವಿದೇಶಾಂಗ ಸಚಿವಾಲಯ ತಿಳಿಸಿದೆ. ಇರಾನ್ ಜೊತೆ ಮಾತುಕತೆ ನಡೆಸಲು ಮತ್ತು ಶಾಂತಿ ಒಪ್ಪಂದಕ್ಕೆ ಬರಲು ಟ್ರಂಪ್ ಸಿದ್ಧರಿದ್ದಾರೆ ಎಂಬ ಯುಎಸ್ ಪ್ರತಿಕ್ರಿಯೆಯ ನಂತರ ಕತಾರ್‌ನ ಈ ಮಧ್ಯಪ್ರವೇಶ ಬಂದಿದೆ. ಕತಾರ್ ನಾಯಕರು ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ಭಾಗವಹಿಸಲು ನ್ಯೂಯಾರ್ಕ್‌ಗೆ ತೆರಳುವ ಮೊದಲು ಇರಾನ್ ವಿದೇಶಾಂಗ ಸಚಿವರು ಅಬ್ಬಾಸ್ ಅರಾಘ್ಚಿ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.












