ಶರ್ಜೀಲ್ ಇಮಾಮ್‌ಗೆ ಮಧ್ಯಂತರ ಜಾಮೀನು ಮಂಜೂರು

0
235

ಸನ್ಮಾರ್ಗ ವಾರ್ತೆ

ನವ ದೆಹಲಿ: ಗಲಭೆ ಸಂಚಿನ ಪ್ರಕರಣವೊಂದರಲ್ಲಿ ಯುಎಪಿಎ (UAPA) ಅಡಿಯಲ್ಲಿ ಜೈಲಿನಲ್ಲಿರುವ ವಿದ್ಯಾರ್ಥಿ ಹೋರಾಟಗಾರ ಶರ್ಜೀಲ್ ಇಮಾಮ್‌ಗೆ ಮಧ್ಯಂತರ ಜಾಮೀನು ಮಂಜೂರಾಗಿದೆ. ಅಕ್ಟೋಬರ್ 4 ರಿಂದ 10 ರವರೆಗೆ ಸಂಬಂಧಿಕರ ಮದುವೆಯಲ್ಲಿ ಭಾಗವಹಿಸಲು ನ್ಯಾಯಾಲಯವು ಅವರಿಗೆ ರಜೆ ನೀಡಿದೆ. ಶರ್ಜೀಲ್ ಇಮಾಮ್ ಅವರ ಸಹೋದರ ಮುಝಮ್ಮಿಲ್ ಇಮಾಮ್ ಇದನ್ನು ‘ಎಕ್ಸ್’ (X) ಮೂಲಕ ಅಧಿಕೃತವಾಗಿ ಘೋಷಿಸಿದ್ದಾರೆ.

“ನಮ್ಮ ಸಂಬಂಧಿಕರ ಮದುವೆಯಲ್ಲಿ ಭಾಗವಹಿಸಲು ನನ್ನ ಸಹೋದರ ಶರ್ಜೀಲ್ ಇಮಾಮ್‌ಗೆ ಅಕ್ಟೋಬರ್ 4 ರಿಂದ 10 ರವರೆಗೆ ಮಧ್ಯಂತರ ಜಾಮೀನು ಮಂಜೂರು ಮಾಡಲಾಗಿದೆ” ಎಂದು ಮುಝಮ್ಮಿಲ್ ‘ಎಕ್ಸ್’ ನಲ್ಲಿ ಬರೆದಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಅವರು ಮಾಡಿದ ಭಾಷಣಕ್ಕೆ ಸಂಬಂಧಿಸಿದಂತೆ 2020 ರ ಜನವರಿಯಲ್ಲಿ ಬಂಧಿಸಲ್ಪಟ್ಟ ಶರ್ಜೀಲ್ ಇಮಾಮ್, ದೆಹಲಿ ಗಲಭೆಯಲ್ಲಿ ‘ದೊಡ್ಡ ಸಂಚು’ ಆರೋಪದ ಮೇಲಿನ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಯಾಗಿ ಜೈಲಿನಲ್ಲಿ ಮುಂದುವರಿದಿದ್ದಾರೆ.

ಇದಕ್ಕೂ ಮೊದಲು, ಮಾರ್ಚ್‌ನಲ್ಲಿ ತಮ್ಮ ಸಹೋದರನ ಮದುವೆಯಲ್ಲಿ ಭಾಗವಹಿಸಲು ನ್ಯಾಯಾಲಯವು ಶರ್ಜೀಲ್‌ಗೆ ಹತ್ತು ದಿನಗಳ ಮಧ್ಯಂತರ ಜಾಮೀನು ನೀಡಿತ್ತು. ಜೈಲಿಗೆ ಹಿಂತಿರುಗಿದ ನಂತರ, ಅವರ ನಿಯಮಿತ ಜಾಮೀನು ಅರ್ಜಿಗಳನ್ನು ದೆಹಲಿ ಹೈಕೋರ್ಟ್ ಪರಿಗಣಿಸುತ್ತಿದೆ. ದೆಹಲಿ ಹೈಕೋರ್ಟ್ ವಿಭಾಗೀಯ ಪೀಠವು ಇತ್ತೀಚೆಗೆ ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್ ಅವರ ಜಾಮೀನು ಅರ್ಜಿಗಳ ವಿಚಾರಣೆ ನಡೆಸಲು ದಿನ ನಿಗದಿಪಡಿಸಿತ್ತು, ಆದರೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಅವರ ಅಡಚಣೆಯಿಂದಾಗಿ ವಿಚಾರಣೆಯನ್ನು ಸೆಪ್ಟೆಂಬರ್ 30 ಕ್ಕೆ ಮುಂದೂಡಲಾಯಿತು. ಈ ಮಧ್ಯೆ, ಮತ್ತೊಂದು ಕೌಟುಂಬಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೆಲವು ದಿನಗಳ ತಾತ್ಕಾಲಿಕ ರಜೆಗಾಗಿ ಮಧ್ಯಂತರ ಜಾಮೀನು ಮಂಜೂರು ಮಾಡಲಾಗಿದೆ.