ಹೆಣ್ಣಿನಂತೆ ವೇಷ ಧರಿಸಿ ದೆಹಲಿಯಲ್ಲಿ ಎರಡು ಗಂಟೆಗಳ ಕಾಲ ಅಲೆದಾಡಿದ ಯುವಕ, ಎದುರಾದ ಭೀಕರ ಅನುಭವಗಳು

0
399

ಸನ್ಮಾರ್ಗ ವಾರ್ತೆ

ನವ ದೆಹಲಿ: ರಾತ್ರಿ ವೇಳೆ ಹುಡುಗಿಯರು ಎಷ್ಟು ಸುರಕ್ಷಿತರಾಗಿದ್ದಾರೆ ಎಂಬುದನ್ನು ಪತ್ತೆ ಮಾಡಲು ಯುವಕನೊಬ್ಬ ದೆಹಲಿಯ ಬೀದಿಗಳಲ್ಲಿ ಪ್ರಯೋಗವೊಂದನ್ನು ನಡೆಸಿದ್ದಾನೆ. ಕಂಟೆಂಟ್ ಕ್ರಿಯೇಟರ್ ಕೂಡ ಆಗಿರುವ ಆ ಯುವಕ, ರಾತ್ರಿ ವೇಳೆ ಹುಡುಗಿಯಂತೆ ವೇಷ ಧರಿಸಿ, ಮುಖ ಮುಚ್ಚಿಕೊಂಡು ಸ್ಕೂಟಿಯಲ್ಲಿ ನಗರದಲ್ಲಿ ಸಂಚರಿಸಿದ್ದಾರೆ. ಈ ಪ್ರಯೋಗವು ತನಗೆ ಎಂದಿಗೂ ಮರೆಯಲಾಗದ ಭಯಾನಕ ಅನುಭವವನ್ನು ನೀಡಿದೆ ಮತ್ತು ಕೆಲವು ಪ್ರತಿಕ್ರಿಯೆಗಳು ತನಗೆ ತುಂಬಾ ಅಸಹ್ಯವನ್ನುಂಟುಮಾಡಿದವು ಎಂದು ಬಹಿರಂಗಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಅವರು ಹಂಚಿಕೊಂಡಿರುವ ಪೋಸ್ಟ್ ಈಗ ವೈರಲ್ ಆಗುತ್ತಿದೆ.

ಇದು ಒಂದು ಪ್ರಯೋಗವಾಗಿರುವುದರಿಂದ ತಾನು ಕೇವಲ ಎರಡು ಗಂಟೆಗಳ ಕಾಲ ಮಾತ್ರ ಹೆಣ್ಣಿನಂತೆ ವೇಷ ಧರಿಸಿದ್ದೆಂದೂ, ಆ ಸಮಯದಲ್ಲಿ ತನಗೇ ಇಷ್ಟು ಕೆಟ್ಟ ಅನುಭವಗಳಾಗಿದ್ದರೆ, ರಾತ್ರಿ ವೇಳೆ ಸಂಚರಿಸುವ ಮಹಿಳೆಯರು ಎಷ್ಟು ಸಂಕಟಗಳನ್ನು ಅನುಭವಿಸಿರಬೇಕು ಎಂದು ಯುವಕ ವೀಡಿಯೊದಲ್ಲಿ ಪ್ರಶ್ನಿಸಿದ್ದಾನೆ. ಪೆಟ್ರೋಲ್ ಬಂಕ್‌ಗೆ ಹೋದಾಗಿನಿಂದಲೇ ತಾನು ಅನೇಕ ಪುರುಷರ ಕುಕ್ಕುವ ನೋಟಗಳನ್ನು ಎದುರಿಸಬೇಕಾಯಿತು ಎಂದು ಯುವಕ ಹೇಳಿದ್ದಾನೆ. ನಗರದ ಗದ್ದಲದಲ್ಲಿ ಆಟೋಗಳು, ಕಾರುಗಳು ಮತ್ತು ದ್ವಿಚಕ್ರ ವಾಹನಗಳಲ್ಲಿ ಅನೇಕ ಜನರು ತನ್ನನ್ನು ಹಿಂಬಾಲಿಸಲು ಪ್ರಯತ್ನಿಸಿದರು ಎಂದು ಯುವಕ ಹೇಳುತ್ತಾನೆ. ಆತನ ಸ್ನೇಹಿತರು ವೀಡಿಯೊವನ್ನು ರೆಕಾರ್ಡ್ ಮಾಡುತ್ತಿದ್ದಾರೆ ಎಂದು ಅರಿತುಕೊಂಡಾಗ ಅವರಲ್ಲಿ ಕೆಲವರು ವಾಪಸ್ ಹೋದರು. ಭಾರತದ ರಾಜಧಾನಿಯಲ್ಲಿ ಮಹಿಳೆಯರು ಎಷ್ಟರ ಮಟ್ಟಿಗೆ ಅಸುರಕ್ಷರಾಗಿದ್ದಾರೆ ಎಂಬುವುದನ್ನು ವೀಡಿಯೊ ಸ್ಪಷ್ಟವಾಗಿ ತೋರಿಸುತ್ತದೆ. ವೀಡಿಯೊ ಕೆಳಗೆ ಅನೇಕ ಜನರು ಪ್ರತಿಕ್ರಿಯಿಸಿದ್ದಾರೆ.