✍️ ಮುಜಾಹಿದುಲ್ ಇಸ್ಲಾಮ್
ಶಿಕ್ಷಣ ತಂತ್ರಜ್ಞಾನ ಪರಿಣಿತರು, ಅಜೀಂ ಪ್ರೇಮ್ ಜೀ ವಿಶ್ವವಿದ್ಯಾಲಯ, ಬೆಂಗಳೂರು
ಆಧುನಿಕ ಸೆಕ್ಯೂಲರ್ ಮತ್ತು ಸಾಂಪ್ರದಾಯಿಕ ಶಿಕ್ಷಣ ವ್ಯವಸ್ಥೆಯ ಬಗ್ಗೆ ಮೌಲಾನ ಮೌದೂದಿಯವರಿಗೆ ಇದ್ದ ಮುಖ್ಯ ಆಕ್ಷೇಪವೆಂದರೆ, ಅದನ್ನು ಧಾರ್ಮಿಕ(ದೀನಿ) ಮತ್ತು ಲೌಕಿಕ(ದುನಿಯವಿ) ಶಿಕ್ಷಣವಾಗಿ ವಿಭಜಿಸಿರುವುದು ಹಾಗೂ ಆಧುನಿಕ ಸೆಕ್ಯೂಲರ್ ಪಠ್ಯಕ್ರಮಕ್ಕೆ ಸಣ್ಣ ಸಣ್ಣ ಇಸ್ಲಾಮೀ ಕೋರ್ಸ್ಗಳನ್ನು ಸೇರಿಸುವ ಮೂಲಕ ಪರಿಸ್ಥಿತಿಯನ್ನು ಮತ್ತಷ್ಟು ಸಂಕೀರ್ಣಗೊಳಿಸಿರುವುದು.
ಮೌದೂದಿಯವರು ಪ್ರಬಲವಾಗಿ ವಿರೋಧಿಸಿದ ಪಾಶ್ಚಿಮಾತ್ಯ ಶಿಕ್ಷಣ ಮಾದರಿಯು ಲೌಕಿಕ-ಧಾರ್ಮಿಕ ಎಂಬ ಈ ದ್ವಂದ್ವವನ್ನು ಹುಟ್ಟುಹಾಕಿದೆ ಮತ್ತು ಸ್ವಾಭಾವಿಕವಾಗಿ ವಿರೋಧಾಭಾಸದಿಂದ ಕೂಡಿದ ಕಲಿಕಾ ಪದ್ಧತಿಯನ್ನು ಬಲವಂತವಾಗಿ ಹೇರಿದೆ. ಸ್ವತಃ ಸಾಮಾಜಿಕ ಜೀವಿಯಾಗಿರುವ ಮಾನವನ ಧರ್ಮವನ್ನು ಕೇವಲ ಆತನ ವೈಯಕ್ತಿಕ ಮಟ್ಟಕ್ಕೆ ಸೀಮಿತಗೊಳಿಸಿರುವುದೇ ಸೆಕ್ಯೂಲರ್ ಶಿಕ್ಷಣದ ನೆಲೆಗಟ್ಟಿನಲ್ಲಿರುವ ವಿರೋಧಾಭಾಸ. ಶಿಕ್ಷಣ ವ್ಯವಸ್ಥೆಯು ಈ ಆಂತರಿಕ ಒತ್ತಡದಲ್ಲೇ ಮುಂದುವರಿದರೆ, ಆ ಪರಿಣಾಮವಾಗಿ ಭೀಕರ ಗೊಂದಲಗಳು ಸೃಷ್ಟಿಯಾಗುತ್ತವೆ. ಇದರಿಂದಾಗಿ ತಾವು ಕಲಿತ ವಿದ್ಯೆಯನ್ನು ಜೀವನದ ಯಾವ ರಂಗದಲ್ಲಿ ಹೇಗೆ ಬಳಸಬೇಕು ಎಂಬ ಸ್ಪಷ್ಟತೆಯೇ ಇಲ್ಲದಂತಾಗುತ್ತದೆ. ಯಾವುದೇ ದೈವಿಕ ನಂಬಿಕೆಯಿಲ್ಲದ ಸೆಕ್ಯೂಲರ್ ಹಿನ್ನೆಲೆಯಲ್ಲಿ ವಿಜ್ಞಾನವನ್ನು ಓದಿದರೆ – ಈ ಜಗತ್ತೇ ಒಂದು ನಶ್ವರ ಹಾಗೂ ಅಪವಿತ್ರ ವಸ್ತು ಎಂದುಕೊಳ್ಳಲು ಆರಂಭಿಸುತ್ತೀರಿ – ಜಗತ್ತೇ ಆ ರೀತಿಯಿದ್ದ ಮೇಲೆ ಇನ್ನು ನೈತಿಕತೆಯ ಪ್ರಶ್ನೆಗೆ ಅಲ್ಲಿ ಅವಕಾಶವೇ ಎಲ್ಲಿರುತ್ತದೆ? ಹೀಗಾಗಿಯೇ ಇಡೀ ಮಾನವ ಕುಲವು ಇಂದು ಪ್ರಕೃತಿಯ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸುವ ಭರದಲ್ಲಿ, ತಾವಿರುವ ಈ ಸುಂದರ ಭೂಮಿಯನ್ನೇ ಅತ್ಯಂತ ಅನೈತಿಕವಾಗಿ ಶೋಷಿಸಿ ಅಪಮಾನಿಸುತ್ತಿದೆ. ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರಗಳು ಧರ್ಮದಿಂದ ಕಳಚಿಕೊಂಡಾಗಲೂ ಇದೇ ಅಧೋಗತಿ ಉಂಟಾಗುತ್ತದೆ. ಮೌಲಾನ ಮೌದೂದಿಯವರು ಇಸ್ಲಾಮ್ ಅನ್ನು ಸಮಗ್ರ ಜೀವನ ವ್ಯವಸ್ಥೆ ಎಂದು ಬಲವಾಗಿ ಪ್ರತಿಪಾದಿಸಿದ್ದಾರೆ; ಹೀಗಾಗಿ ಧರ್ಮವನ್ನು ರಾಜಕೀಯ, ಸಾಮಾಜಿಕ, ಆರ್ಥಿಕ ಹಾಗೂ ಸೆಕ್ಯೂಲರ್ ಶಿಕ್ಷಣ ಸಂಸ್ಥೆಗಳಲ್ಲಿ ನಾವು ಓದುವ ಇತರೆಲ್ಲಾ ವಿಷಯಗಳಿಂದ ಬೇರ್ಪಡಿಸಲು ಸಾಧ್ಯವಿಲ್ಲ. ಈ ಪರಿಕಲ್ಪನೆಯನ್ನು ಗ್ರಹಿಸುವುದು ಕಷ್ಟವೇನಲ್ಲ; ಆದರೆ ನಮ್ಮ ಮುಂದಿರುವ ದೊಡ್ಡ ಸಮಸ್ಯೆಯೆಂದರೆ, ಧರ್ಮ, ಆಧ್ಯಾತ್ಮಿಕತೆ ಮತ್ತು ನೈತಿಕತೆಯು ಪ್ರತಿಯೊಂದು ಶೈಕ್ಷಣಿಕ ವಿಭಾಗದೊಂದಿಗೆ ಹಾಗೂ ದೈನಂದಿನ ಬದುಕಿನೊಂದಿಗೆ ಆಳವಾಗಿ ಬೆಸೆದುಕೊಂಡಿರುವಂತಹ ಯಾವುದೇ ಆದರ್ಶ ಶಿಕ್ಷಣ ಮಾದರಿಯು ಇಂದು ಎಲ್ಲೂ ಕಾರ್ಯರೂಪದಲ್ಲಿ ಕಾಣಸಿಗುವುದಿಲ್ಲ.
ಸಾಂಪ್ರದಾಯಿಕವಾಗಿ ಮದ್ರಸಾಗಳ ಹೆಸರಿನಲ್ಲಿ ಚಾಲ್ತಿಯಲ್ಲಿರುವ ಶಿಕ್ಷಣ ಪದ್ಧತಿಯಲ್ಲೂ ಮೌಲಾನ ಅವರು ದೋಷಗಳನ್ನು ಗುರುತಿಸಿದರು; ಏಕೆಂದರೆ ಇವು ಕೂಡ ಧಾರ್ಮಿಕ ಮತ್ತು ಲೌಕಿಕ ಶಿಕ್ಷಣಗಳು (ದೀನಿ ಮತ್ತು ದುನಿಯಾವಿ ಉಲೂಮ್) ವಿಭಿನ್ನ ಎಂಬ ತಪ್ಪು ನಂಬಿಕೆಯನ್ನು ಬೆಳೆಸಿಕೊಂಡಿವೆ.
ಈ ಮದ್ರಸಾಗಳು ಅನುಸರಿಸುತ್ತಿರುವ ಶಿಕ್ಷಣ ಪಠ್ಯಕ್ರಮವು ಚಲನಾಶೀಲತೆ ಕಳೆದೆಕೊಂಡು ಸ್ಥಬ್ಧವಾಗಿದೆ ಮತ್ತು ಆಧುನಿಕ ಪೂರ್ವ ಯುಗಕ್ಕಾಗಿ ಅಧಿಕಾರಿಗಳನ್ನು ಸೃಷ್ಟಿಸುವ ತನ್ನ ಉದ್ದೇಶದಲ್ಲಿಯೇ ಮುಂದುವರಿದಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದರು. ಆ ಪರಿಣಾಮವಾಗಿ ಈ ಮದ್ರಸಾಗಳ ಪದವೀಧರರು ಸಮಕಾಲೀನ ಸಾಮಾಜಿಕ, ಆರ್ಥಿಕ, ರಾಜಕೀಯ ಅಥವಾ ವೈಜ್ಞಾನಿಕ ಸವಾಲುಗಳನ್ನು ಎದುರಿಸಲು ಸಾಧ್ಯವಾಗುತ್ತಿಲ್ಲ. ನಾವು ಸೂಕ್ಷ್ಮವಾಗಿ ಗಮನಿಸಿದರೆ, ಹಿಂದಿನ ಸಾಂಪ್ರದಾಯಿಕ ಮದ್ರಸಾ ಪಠ್ಯಕ್ರಮದಲ್ಲಿ ಧರ್ಮ ಮತ್ತು ಲೌಕಿಕ ವಿದ್ಯೆ ಎಂಬ ವಿಭಜನೆ ಇರಲಿಲ್ಲ. ಕಾಲಕ್ರಮೇಣ ಪಠ್ಯದಿಂದ ಗಣಿತ, ಖಗೋಳಶಾಸ್ತ್ರ ಮತ್ತು ವೈದ್ಯಕೀಯದಂತಹ ವಿಷಯಗಳನ್ನು ಕೈಬಿಡಲಾಯಿತು. ನಂತರದ ದಿನಗಳಲ್ಲಿ ಸುಧಾರಣೆಯ ಹೆಸರಿನಲ್ಲಿ ಬಂದ ಅನೇಕ ಮದ್ರಸಾಗಳು ತರ್ಕ, ದೇವತಾಶಾಸ್ತ್ರ ಮತ್ತು ತತ್ವಶಾಸ್ತ್ರದಂತಹ ವೈಚಾರಿಕ ವಿಜ್ಞಾನಗಳ(Aqali sciences) ಮಹತ್ವವನ್ನೂ ಕಡಿಮೆ ಮಾಡಿದವು. ಅದಲ್ಲದೇ, ಸಮಕಾಲೀನ ಶಿಕ್ಷಣವು ಸಮಾಜ ವಿಜ್ಞಾನ, ವಿಜ್ಞಾನ, ಗಣಿತ ಅಥವಾ ತತ್ವಶಾಸ್ತ್ರದ ಹೆಸರಿನಲ್ಲಿ ಪರಿಚಯಿಸಿದ ಆಧುನಿಕ ಶಿಕ್ಷಣವು ಮೂಲತಃ ಪಾಶ್ಚಿಮಾತ್ಯ ಸೆಕ್ಯೂಲರ್ ವ್ಯವಸ್ಥೆಯಲ್ಲೇ ಆಳವಾಗಿ ಬೇರೂರಿದೆ.
ಮೌಲಾನ ಮೌದೂದಿ ಅವರ ಪ್ರಕಾರ, ಶಿಕ್ಷಣವು ಧಾರ್ಮಿಕ ಮತ್ತು ಲೌಕಿಕ ಎಂದು ಬೇರ್ಪಡಿಸಲಾಗದ ಒಂದು ಸಮಗ್ರ ರೂಪು ಹಾಗೂ ಶಿಕ್ಷಣದ ಅಂತಿಮ ಗುರಿಯು ದೈವಿಕ ಬದುಕಿನ ದಾರಿ ತೋರಬಲ್ಲ ನಾಯಕರನ್ನು ಸಿದ್ಧಪಡಿಸುವುದಾಗಿದೆ. ಈ ಮೂಲಭೂತ ತತ್ವದ ಬುನಾದಿಯಲ್ಲಿಯೇ ಮೌಲಾನ ರವರು ಅತ್ಯಂತ ವ್ಯವಸ್ಥಿತವಾಗಿ ಶಿಕ್ಷಣ ಮಾದರಿಯನ್ನು ಪ್ರಸ್ತುತಪಡಿಸಿದರು. ಈ ಶಿಕ್ಷಣ ಮಾದರಿಯನ್ನು ನಾವೊಮ್ಮೆ ಪುನರ್ಪರಿಶೀಲಿಸೋಣ. ತತ್ವ ಮತ್ತು ಆಚರಣೆಗಳೆರಡರಲ್ಲೂ ಮೌದೂದಿಯವರ ಚಿಂತನೆಗಳನ್ನು ಆಳವಾಗಿ ಮತ್ತು ಪ್ರಾಮಾಣಿಕವಾಗಿ ಗ್ರಹಿಸಲು ಬಯಸುವ ಪ್ರತಿಯೊಬ್ಬರಿಗೂ ಇದು ಸಹಕಾರಿಯಾಗಬಹುದು.
ತಮ್ಮ ವಿಚಾರಗಳು ಎಲ್ಲರಿಗೂ ಸುಲಭವಾಗಿ ಗ್ರಹಿಸಲು ಹಾಗೂ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲು, ತಾವು ರೂಪಿಸುತ್ತಿದ್ದ ಹೊಸ ಶೈಕ್ಷಣಿಕ ಚೌಕಟ್ಟಿನ ಅಡಿಯಲ್ಲಿ ಪ್ರಾಥಮಿಕ, ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸಂಪೂರ್ಣವಾಗಿ ಪುನರ್ರಚಿಸಬೇಕೆಂದು ಮೌಲಾನ ಪ್ರಥಮವಾಗಿ ಸೂಚಿಸಿದರು.
ಪ್ರಾಥಮಿಕ ಮಟ್ಟದಲ್ಲಿ (ವಯಸ್ಸು 6-14 / ಮೊದಲ 8-10 ವರ್ಷಗಳು) ನೈತಿಕ ಚಾರಿತ್ರ್ಯವನ್ನು ನಿರ್ಮಿಸುವುದು, ವಿಶ್ವದ ಕುರಿತಾಗಿ ಇಸ್ಲಾಮಿನ ದೃಷ್ಟಿಕೋನವನ್ನು ಮೂಡಿಸುವುದು ಮತ್ತು ಮೂಲಭೂತ ಶೈಕ್ಷಣಿಕ ಹಾಗೂ ಪ್ರಾಯೋಗಿಕ ಕೌಶಲ್ಯಗಳನ್ನು ಕಲಿಸುವುದು ಇದರ ಗುರಿಯಾಗಿದೆ.
ಈ ಹಂತದಲ್ಲಿ ಮೌಲಾನ ಅವರ ಪಠ್ಯಕ್ರಮವು ಕೇವಲ ಸೆಕ್ಯೂಲರ್ ವಿಷಯಗಳಿಗೆ ಮೇಲ್ಮೈಯಾಗಿ ಧರ್ಮದ ಬಣ್ಣ ಬಳಿಯುವುದಿಲ್ಲ. ಬದಲಿಗೆ, ಮಗು ಕಲಿಯುವ ಪ್ರತಿಯೊಂದು ವಿಷಯದ ಅಡಿಪಾಯವನ್ನೇ ಹೊಸದಾಗಿ ರೂಪಿಸುವುದು. ಸೆಕ್ಯೂಲರ್ ಶಾಲೆಗಳು ಪ್ರಾಕೃತಿಕ ವಿದ್ಯಮಾನಗಳನ್ನು ಸೃಷ್ಟಿಕರ್ತನ ಯಾವುದೇ ಹಸ್ತಕ್ಷೇಪವಿಲ್ಲದ ಕೇವಲ ಸ್ವಯಂಚಾಲಿತ ಭೌತಿಕ ನಿಯಮಗಳೆಂದು ಬೋಧಿಸಿದರೆ, ಮೌಲಾನ ಅವರು ಜೀವಶಾಸ್ತ್ರ, ಭೌತಶಾಸ್ತ್ರ, ರಸಾಯನಶಾಸ್ತ್ರ, ಖಗೋಳಶಾಸ್ತ್ರ, ಭೂವಿಜ್ಞಾನ ಮತ್ತು ನೈರ್ಮಲ್ಯದಂತಹ ವಿಜ್ಞಾನಗಳನ್ನು ಈ ಸಕಲ ನಿಯಮಗಳ ಹಿಂದೆ ದೈವಿಕ ಶಕ್ತಿಯಿದೆ ಎಂಬ ದೃಷ್ಟಿಕೋನದಲ್ಲಿ ಕಲಿಸಬೇಕೆಂದು ಬಯಸಿದರು. ಅಂದರೆ, ಈ ವಿಶ್ವವು ಯಾವುದೇ ಯಾದೃಚ್ಛಿಕ ಆಕಸ್ಮಿಕವಲ್ಲ, ಬದಲಿಗೆ ಅಲ್ಲಾಹನಿಂದ ನಿಖರವಾಗಿ ಸೃಷ್ಟಿಸಲ್ಪಟ್ಟು ನಿಯಂತ್ರಿಸಲ್ಪಡುವ ಅದ್ಭುತ ವ್ಯವಸ್ಥೆ. ನೈತಿಕ ಮೌಲ್ಯಗಳನ್ನು ಪಠ್ಯಕ್ರಮದ ಒಂದು ಮೂಲೆಯಲ್ಲಿ ಸೇರಿಸಿರುವ ಒಂದು ಸಾಮಾನ್ಯ ಪಾಠವಾಗಿ ಮಾಡಿಬಿಡುವುದಲ್ಲ; ಬದಲಿಗೆ ಪ್ರಾಮಾಣಿಕತೆ, ಸತ್ಯ, ಸಹಾನುಭೂತಿ ಮತ್ತು ನ್ಯಾಯವನ್ನು ಪ್ರತಿಯೊಂದು ವಿಷಯದ ಜೊತೆಗೂ ಬೆಸೆಯುವುದು. ಅಲ್ಲದೇ ಸುಳ್ಳು ಹೇಳುವುದು, ಬಡ್ಡಿ, ಜೂಜು ಮತ್ತು ಸ್ವಾರ್ಥದಂತಹ ಕೆಟ್ಟ ಗುಣಗಳ ಬಗ್ಗೆಯೂ ಸ್ಪಷ್ಟ ಎಚ್ಚರಿಕೆ ನೀಡುವುದು. ಇದರಿಂದಾಗಿ ಪ್ರತ್ಯೇಕ ಒಂದು ಮೋರಲ್ ಸಯನ್ಸ್ ಪೀರೆಡ್ಗೆ ಅವಲಂಭಿಸದೇ, ಇಡೀ ಕಲಿಕೆಯ ಪ್ರಕ್ರಿಯೆಯ ಮೂಲಕವೇ ಮಗುವಿನಲ್ಲಿ ಒಳ್ಳೆಯ ಚಾರಿತ್ರ್ಯ ರೂಪುಗೊಳ್ಳುತ್ತದೆ.
ಧರ್ಮದ ಶಿಕ್ಷಣವು ಕೇವಲ ಒಣ ಧರ್ಮಶಾಸ್ತ್ರವಾಗಿ ಅಥವಾ ಅರ್ಥವಿಲ್ಲದ ಕಂಠಪಾಠವಾಗಿ ಉಳಿಯದಂತೆ ಮುಕ್ತಿ ನೀಡಬೇಕಿದೆ – ಬದಲಿಗೆ ಮಗುವಿಗೆ ತೌಹಿದ್ (ಏಕದೇವೋಪಾಸನೆ), ಪ್ರವಾದಿತ್ವ ಮತ್ತು ಅಂತಿಮ ತೀರ್ಪಿನ ದಿನದ ನಂಬಿಕೆಯನ್ನು ತಾರ್ಕಿಕವಾಗಿ ಕಲಿಸಬೇಕಿದೆ. ಜೊತೆಗೆ ಮಗು ದೈನಂದಿನ ಜೀವನದಲ್ಲಿ ಪಾಲಿಸಬೇಕಾದ ಸ್ವಚ್ಛತೆ, ಅಂಗಶುದ್ಧಿ, ನಮಾಝ್ ಮತ್ತು ಉಪವಾಸದಂತಹ ಪ್ರಾಯೋಗಿಕ ಶರೀಅತ್ ನಿಯಮಗಳನ್ನು ಕಲಿಸುವುದು. ಭಾಷೆಯ ವಿಷಯಕ್ಕೆ ಬಂದರೆ – ರೂಢಿಯಲ್ಲಿರುವ ಮಾತೃಭಾಷೆ ಮತ್ತು ವಸಾಹತುಶಾಹಿ ಭಾಷಾ ಮಾದರಿಯನ್ನು ಬದಲಿಸಿ, ಮಕ್ಕಳು ಉರ್ದುವಿನಲ್ಲಿ ಗಟ್ಟಿಯಾದ ಬೇರು ಬಿಡಬೇಕು, ‘ಗುಲಿಸ್ತಾನ್’ ಮತ್ತು ‘ಬೋಸ್ತಾನ್’ನಂತಹ ಶ್ರೇಷ್ಠ ನೈತಿಕ ಸಾಹಿತ್ಯದ ಮೂಲಕ ಪರ್ಷಿಯನ್ ಪರಿಚಯವಾಗಬೇಕು, ಅನುವಾದಕ್ಕಾಗಿ ಪ್ರಾಥಮಿಕ ಇಂಗ್ಲಿಷ್ ಕಲಿಯಬೇಕು ಮತ್ತು ಕುರ್ಆನ್ ಅನ್ನು ಅನುವಾದದ ಹಂಗಿಲ್ಲದೆ ನೇರವಾಗಿ ಓದಿ ಅರ್ಥೈಸಿಕೊಳ್ಳಲು ಅನುಕೂಲವಾಗುವಂತೆ ಪ್ರಾಥಮಿಕ ಅರೇಬಿಕ್ ಭಾಷೆಯನ್ನು ಕರಗತ ಮಾಡಿಕೊಳ್ಳಬೇಕು ಎಂದು ಅವರು ಅಪೇಕ್ಷಿಸಿದರು. ಸೆಕ್ಯೂಲರ್ ಶಾಲೆಗಳಲ್ಲಿ ಪ್ರಾಯೋಗಿಕ ಹಾಗೂ ವೃತ್ತಿಪರ ತರಬೇತಿಯು ಸಂಪೂರ್ಣವಾಗಿ ನಿರ್ಲಕ್ಷಿಸಲ್ಪಟ್ಟಿರುತ್ತದೆ ಅಥವಾ ಕೇವಲ ಕಾಗದದ ಮೇಲೆ ಮಾತ್ರ ಇರುತ್ತದೆ; ಆದರೆ ಮೌಲಾನ ಅವರ ಮಾದರಿಯು ನಿಜ ಜೀವನದ ಕೌಶಲ್ಯಗಳಿಗೆ ಅತ್ಯಂತ ಹೆಚ್ಚಿನ ಪ್ರಾಮುಖ್ಯತೆ ನೀಡಿತು – ಸಲಿಕೆ, ಸುತ್ತಿಗೆ ಮತ್ತು ಗರಗಸದ ಬಳಕೆ, ಪ್ರಥಮ ಚಿಕಿತ್ಸೆ, ಹಾಸ್ಟೆಲ್ ನಿರ್ವಹಣೆ, ಕಾರ್ಯಕ್ರಮಗಳ ಸಂಘಟನೆ, ವಾಣಿಜ್ಯ ಪತ್ರವ್ಯವಹಾರ, ಸಾರ್ವಜನಿಕ ಭಾಷಣ, ಗೃಹ ವಿಜ್ಞಾನ ಮತ್ತು ನಕ್ಷೆ ಓದುವಿಕೆ ಮುಂತಾದವುಗಳನ್ನು ಒತ್ತಾಯಿಸಿತು. ಇದರಿಂದಾಗಿ ಶೈಕ್ಷಣಿಕ ವ್ಯವಸ್ಥೆಯು ಕೇವಲ ಪರೀಕ್ಷೆ ಗೆಲ್ಲುವರನ್ನು ತಯಾರು ಮಾಡುವ ಬದಲಾಗಿ, ಬದುಕನ್ನು ಸಮರ್ಥವಾಗಿ ಎದುರಿಸಬಲ್ಲ ವ್ಯಕ್ತಿತ್ವಗಳನ್ನು ರೂಪಿಸುತ್ತದೆ.
ಮಾಧ್ಯಮಿಕ ಹಂತ ತಲುಪುತ್ತಿದ್ದಂತೆ ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಪ್ರೌಢಾವಸ್ಥೆಯನ್ನು ಪ್ರವೇಶಿಸುತ್ತಾರೆ. ಈ ಹಂತದಲ್ಲಿ ಅರೇಬಿಕ್ ಭಾಷೆಯಲ್ಲಿ ನೈಪುಣ್ಯ ಗಳಿಸುವುದು, ಕುರ್ಆನ್ ಗ್ರಂಥವನ್ನು ನೇರವಾಗಿ ಅಧ್ಯಯನ ಮಾಡುವುದು, ಅಚಲವಾದ ನೈತಿಕ ನೆಲೆಗಟ್ಟನ್ನು ರೂಪಿಸಿಕೊಳ್ಳುವುದು ಮತ್ತು ಮುಂದಿನ ಉನ್ನತ ಶಿಕ್ಷಣ ಕ್ಷೇತ್ರಗಳಿಗೆ ಬೇಕಾದ ವಿಶೇಷ ಸಿದ್ಧತೆಗಳನ್ನು ಮಾಡುವುದೇ ಬೋಧನೆಯ ಮುಖ್ಯ ಗುರಿಯಾಗಿರುತ್ತದೆ.
ಭಾಷೆಯನ್ನು ಕಲಿಯುವ ಸೆಕ್ಯೂಲರ್ ಪರಂಪರೆಯ ವಿಧಾನದಲ್ಲಿ ಒಂದೋ ಆಧುನಿಕ ವಿದೇಶಿ ಭಾಷೆಗಳನ್ನು ಕಲಿಸಲಾಗುತ್ತದೆ ಅಥವಾ ಯಾವುದೇ ನಿರ್ದಿಷ್ಟ ಉದ್ದೇಶವಿಲ್ಲದೆ ಕೇವಲ ಶಾಸ್ತ್ರೀಯ ಅರೇಬಿಕ್ ವ್ಯಾಕರಣವನ್ನು ಕಲಿಸಲಾಗುತ್ತದೆ. ಆದರೆ ಮೌಲಾನ ಅವರು ಅರೇಬಿಕ್ ಭಾಷೆಯನ್ನು ಕಡ್ಡಾಯಗೊಳಿಸಿ, ಅದನ್ನು ನೇರವಾಗಿ ಕುರ್ಆನ್ ಗ್ರಂಥದ ಮೂಲಕವೇ ಕಲಿಸಬೇಕೆಂದು ಸೂಚಿಸಿದರು. ಹೀಗಾದಾಗ ವಿದ್ಯಾರ್ಥಿಯು ಸದಾ ಅನುವಾದಗಳನ್ನೇ ನೆಚ್ಚಿಕೊಳ್ಳಬೇಕಾಗುವುದಿಲ್ಲ. ಕುರ್ಆನನ್ನು ಓದಲು ಮತ್ತು ಅರ್ಥಮಾಡಿಕೊಳ್ಳಲು ಕಲಿಯುವುದರ ಜೊತೆಗೆ ಈ ಹಂತದಲ್ಲಿ ಕುರ್ಆನಿನ ಮೂವತ್ತು ಭಾಗಗಳಲ್ಲಿ ಕನಿಷ್ಠ ಎರಡು ಭಾಗಗಳ ವಿವರವಾದ ಅಧ್ಯಯನ ನಡೆಯಬೇಕಿದೆ. ಇನ್ನು ಧಾರ್ಮಿಕ ವಿಧಿಗಳು ಮತ್ತು ಫಿಕ್ಹ್ ವಿಷಯಕ್ಕೆ ಬಂದರೆ, ಪ್ರಬುದ್ಧ ಮುಸ್ಲಿಮನ ನಿಜ ಜೀವನಕ್ಕೂ ಯಾವುದೇ ಸಂಬಂಧವಿಲ್ಲದ ಸಣ್ಣಪುಟ್ಟ ಕಾನೂನು ವಿವಾದಗಳನ್ನು – ಅಂದರೆ ಬಾವಿ ಶುದ್ಧ ಮಾಡಲು ಎಷ್ಟು ಕೊಡ ನೀರು ತೆಗೆಯಬೇಕು ಎಂಬಂತಹ ಅನಗತ್ಯ ಸಂಗತಿಗಳನ್ನು – ಕಂಠಪಾಠ ಮಾಡಿಸುವುದನ್ನು ಅವರು ವಿರೋಧಿಸಿದರು. ಬದಲಿಗೆ ಅವರಿಗೆ ಪ್ರಾಯೋಗಿಕ ಶರೀಅತ್ ಬೇಕಿತ್ತು: ಅಂದರೆ ವೈಯಕ್ತಿಕ, ಕೌಟುಂಬಿಕ ಮತ್ತು ಸಾಮಾಜಿಕ ಜೀವನವನ್ನು ನಡೆಸಲು ಬೇಕಾದ ಮಾರ್ಗದರ್ಶನ ಹಾಗೂ ಅದರೊಂದಿಗೆ ಸಾಮೂಹಿ ನಮಾಝಿನ ದೈನಂದಿನ ಶಿಸ್ತು. ಇಸ್ಲಾಮಿನ ವಿಶ್ವಾಸ ಹಾಗೂ ನೈತಿಕತೆಯು ಕೂಡ ಕೇವಲ ಕುರುಡು ನಂಬಿಕೆಯಿಂದ ಆನುವಂಶಿಕವಾಗಿ ಬಂದ ಸಿದ್ಧಾಂತಗಳೆಂಬಂತೆ ಆಗದೇ, ತಾರ್ಕಿಕ ಅಡಿಪಾಯದ ಮೇಲೆ ನಿಲ್ಲಬೇಕು ಎಂದು ಅವರು ಬಯಸಿದರು.
ನೈತಿಕತೆಯನ್ನು ಕೇವಲ ಸಿದ್ಧಾಂತದ ರೂಪದಲ್ಲಿ ಕಲಿಸದೆ, ಪ್ರವಾದಿ(ಸ), ಅವರ ಸಂಗಾತಿಗಳು ಮತ್ತು ಹಿಂದಿನ ಪ್ರವಾದಿಗಳ ಬದುಕಿನ ನೈಜ ಇತಿಹಾಸದ ಮೂಲಕ ಜೀವಂತ ಉದಾಹರಣೆಯಾಗಿ ಕಲಿಸಬೇಕು ಎಂದರು. ಇತಿಹಾಸವು ಕೇವಲ ಸಾಮಾನ್ಯ ರಾಜಕೀಯ ಅಥವಾ ವಸಾಹತುಶಾಹಿ ಕಥೆಯಾಗಿ ಉಳಿಯದೆ, ಇಸ್ಲಾಮಿಕ್ ಹಾಗೂ ವಿಶ್ವ ಇತಿಹಾಸದ ಒಟ್ಟು ಅಧ್ಯಯನವಾಗಬೇಕು: ಪ್ರವಾದಿಯವರ ಜೀವನ, ಖಲೀಫರ ಆಡಳಿತ ಮತ್ತು ಮುಸ್ಲಿಂ ಇತಿಹಾಸದ ಆರಂಭದಿಂದ ಇಂದಿನವರೆಗಿನ ಬೆಳವಣಿಗೆಯು ಒಂದು ಮುಗಿದ ಅಧ್ಯಾಯದಂತೆ ಕಾಣದೆ, ಮುಂದುವರಿಯುತ್ತಿರುವ ಜಾಗತಿಕ ಆಂದೋಲನದಂತೆ ರೂಪುಗೊಳ್ಳಬೇಕು. ಸೆಕ್ಯೂಲರ್ ಶಾಲೆಗಳಲ್ಲಿರುವಂತೆ ಮಾನವಿಕಶಾಸ್ತ್ರ ಮತ್ತು ವಿಜ್ಞಾನ ಎಂಬ ಪ್ರತ್ಯೇಕ ವಿಭಾಗಗಳ ಬದಲಿಗೆ, ಮೌಲಾನ ಅವರು ನೇರವಾಗಿ ವಿಶ್ವವಿದ್ಯಾನಿಲಯದ ವಿಭಾಗಗಳಿಗೆ ತಕ್ಕಂತೆ ವಿಶೇಷ ವಿಷಯಗಳ ಗುಂಪುಗಳನ್ನು ಪ್ರಸ್ತಾಪಿಸಿದರು – ತರ್ಕಶಾಸ್ತ್ರ, ಪ್ರಾಚೀನ ಹಾಗೂ ಆಧುನಿಕ ತತ್ವಶಾಸ್ತ್ರದ ಮೂಲಭೂತ ಅಂಶಗಳೊಂದಿಗೆ ಮನೋವಿಜ್ಞಾನ, ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರವನ್ನು ಒಳಗೊಂಡಿರುವ ತತ್ವಶಾಸ್ತ್ರ ವಿಭಾಗ; ಸಮಾಜಶಾಸ್ತ್ರ ಮತ್ತು ರಾಜಕೀಯ ವಿಜ್ಞಾನದ ಇತಿಹಾಸವನ್ನು ಒಳಗೊಂಡ ಇತಿಹಾಸ ವಿಭಾಗ; ಅರ್ಥಶಾಸ್ತ್ರ, ಹಣಕಾಸು, ಬ್ಯಾಂಕಿಂಗ್ ಮತ್ತು ವ್ಯವಹಾರ ವಹಿವಾಟುಗಳ ತತ್ವಗಳ ಮೇಲೆ ನಿಂತ ಅರ್ಥಶಾಸ್ತ್ರ ವಿಭಾಗ; ಹಾಗೂ ಸುಧಾರಿತ ಅರೇಬಿಕ್, ತುಲನಾತ್ಮಕ ಧರ್ಮ ಮತ್ತು ಫಿಕ್ಹ್ ಇತಿಹಾಸದ ಆಧಾರದ ಮೇಲೆ ರೂಪುಗೊಂಡ ಇಸ್ಲಾಮಿಕ್ ಅಧ್ಯಯನ ವಿಭಾಗ.
ಉನ್ನತ ಶಿಕ್ಷಣದ ಹಂತದಲ್ಲಿ, ಪ್ರತ್ಯೇಕವಾಗಿ ನೀಡಲಾಗುವ ಧರ್ಮಶಾಸ್ತ್ರದ ಡಿಗ್ರಿಗಳನ್ನು (ಬ್ಯಾಚುಲರ್ ಅಥವಾ ಮಾಸ್ಟರ್ ಆಫ್ ಥಿಯಾಲಜಿಯಂತಹ ಪದವಿಗಳನ್ನು) ಸಂಪೂರ್ಣವಾಗಿ ರದ್ದುಗೊಳಿಸಬೇಕು ಎಂದು ಮೌಲಾನ ಸೂಚಿಸಿದರು. ಬದಲಿಗೆ, ಉನ್ನತ ಮಟ್ಟದ ಇಸ್ಲಾಮಿಕ್ ಪಾಂಡಿತ್ಯವನ್ನು ಅದಕ್ಕೆ ಸಂಬಂಧಿಸಿದ ಆಧುನಿಕ ಶಿಕ್ಷಣ ವಿಭಾಗಗಳಲ್ಲೇ ನೇರವಾಗಿ ಬೆರೆಸಬೇಕು ಎಂದರು.
ವಿದ್ಯಾರ್ಥಿ ತಾನು ಯಾವ ವಿಷಯ ಅಥವಾ ವಿಭಾಗದಲ್ಲೇ ಓದುತ್ತಿರಲಿ, ಎಲ್ಲರಿಗೂ ಕಡ್ಡಾಯವಾಗಿ ಕೆಲವು ಕೋರ್ಸ್ಗಳು ಇರುತ್ತವೆ: ಇಡೀ ಕುರ್ಆನಿನ ಸಂಪೂರ್ಣ ಎರಡು ವರ್ಷಗಳ ಅಧ್ಯಯನ, ಮೂಲ ಅರೇಬಿಕ್ನಲ್ಲಿ ಆಯ್ದ ಹದೀಸ್ಗಳ ಕಲಿಕೆ, ಹಾಗೂ ಇಸ್ಲಾಮಿನ ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಕಾನೂನು ವ್ಯವಸ್ಥೆಗಳ ಬಗ್ಗೆ ಉನ್ನತ ಮಟ್ಟದ ಅಧ್ಯಯನ. ವಿಶ್ವವಿದ್ಯಾಲಯದಿಂದ ಹೊರಡುವ ಯಾವುದೇ ವಿದ್ಯಾರ್ಥಿಯು ಈ ಮೂಲ ಅಡಿಪಾಯ ಕಳೆದುಕೊಳ್ಳಬಾರದು. ತತ್ವಶಾಸ್ತ್ರ ಮತ್ತು ಮನೋವಿಜ್ಞಾನದಲ್ಲಿ, ಕೇವಲ ಊಹಾಪೋಹದ ಮೆಟಾಫಿಸಿಕ್ಸ್ ಅಥವಾ ಸೆಕ್ಯೂಲರ್ ತರ್ಕ ಅಥವಾ ನಾಸ್ತಿಕ ವಾದಗಳ ಬದಲಿಗೆ, ಕುರ್ಆನಿನ ಜ್ಞಾನಶಾಸ್ತ್ರವನ್ನು ಅಡಿಪಾಯವಾಗಿಸುವುದು. ಇದು ಮಾನವ ಬುದ್ಧಿಯ ಸರಿಯಾದ ಮಿತಿಗಳನ್ನು ತಿಳಿಸುತ್ತದೆ. ಅದೇ ಸಮಯದಲ್ಲಿ, ತತ್ವಶಾಸ್ತ್ರ ಎಲ್ಲಿ ದಾರಿ ತಪ್ಪಿತು ಎಂಬುದನ್ನು ವಿಮರ್ಶಿಸಲು ಗ್ರೀಕ್, ಹಿಂದೂ, ಯುರೋಪಿಯನ್ ಹಾಗೂ ಮುಸ್ಲಿಂ ಚಿಂತನೆಗಳ ಜೊತೆಗೆ ತುಲನಾತ್ಮಕ ಧರ್ಮ, ತರ್ಕ ಮತ್ತು ನೈತಿಕತೆಯನ್ನು ಅಧ್ಯಯನ ಮಾಡುವುದು.
ಇತಿಹಾಸ ಮತ್ತು ಸಮಾಜಶಾಸ್ತ್ರವನ್ನು ಕೇವಲ ಭೌತಿಕ ದೃಷ್ಟಿಕೋನದಿಂದ ನೋಡದೆ, ಕುರ್ಆನಿನ ಇತಿಹಾಸದ ತತ್ವದ ಮೂಲಕ ನೋಡುವುದು. ಇದು ದೈವಿಕ ನೈತಿಕ ತತ್ವಗಳ ಆಧಾರದ ಮೇಲೆ ರಾಷ್ಟ್ರಗಳ ಉತ್ಥಾನ ಮತ್ತು ಪತನವನ್ನು ಮೌಲ್ಯಮಾಪನ ಮಾಡುತ್ತದೆ ಹಾಗೂ ಇಸ್ಲಾಮಿಕ್ ತತ್ವಗಳು ಸಮಾಜವನ್ನು ಹೇಗೆ ಬದಲಾಯಿಸಿದವು ಎಂಬುದನ್ನು ಹಾಗೂ ಪಶ್ಚಿಮದ ವಸಾಹತುಶಾಹಿಯ ಪ್ರಭಾವವನ್ನು ವಿಮರ್ಶಿಸುತ್ತದೆ. ಅರ್ಥಶಾಸ್ತ್ರ ಮತ್ತು ಹಣಕಾಸು ವಿಷಯಗಳು ಕೇವಲ ಸೆಕ್ಯೂಲರ್ ಸ್ವಾರ್ಥದ ಮೇಲಿರುವ ಬಂಡವಾಳಶಾಹಿ ಅಥವಾ ಸಮಾಜವಾದಿ ಸಿದ್ಧಾಂತಗಳಿಂದ ಹೊರಬಂದು, ಕುರ್ಆನ್, ಹದೀಸ್ ಮತ್ತು ಇಸ್ಲಾಮಿಕ್ ನ್ಯಾಯಶಾಸ್ತ್ರದ ಆರ್ಥಿಕ ತತ್ವಗಳೊಂದಿಗೆ ಆಧುನಿಕ ಬ್ಯಾಂಕಿಂಗ್ ಮತ್ತು ವಾಣಿಜ್ಯ ಹಣಕಾಸನ್ನು ವಿಲೀನಗೊಳಿಸುವ ಇಸ್ಲಾಮಿಕ್ ರಾಜಕೀಯ ಅರ್ಥಶಾಸ್ತ್ರದ ಕಡೆಗೆ ಸಾಗುವುದು.
ಕಾನೂನು ಮತ್ತು ನ್ಯಾಯಶಾಸ್ತ್ರವು ಪಶ್ಚಿಮ ಅಥವಾ ರೋಮನ್ ಸಿವಿಲ್ ಕೋಡ್ಗಳ ಮೇಲೆ ನಿಲ್ಲದೆ, ಇಂದಿನ ಕಾನೂನು ಸಮಸ್ಯೆಗಳನ್ನು ಪರಿಹರಿಸಲು ಇಜ್ತಿಹಾದ್ ಮಾಡುವ ಗುರಿಯೊಂದಿಗೆ ಕುರ್ಆನ್, ಸುನ್ನಾ ಹಾಗೂ ಪಾರಂಪರಿಕ ನ್ಯಾಯಶಾಸ್ತ್ರದ ಆಳವಾದ ಸಂಶೋಧನೆಯನ್ನು ಆಧುನಿಕ ಕಾನೂನು ಇತಿಹಾಸ ಮತ್ತು ತುಲನಾತ್ಮಕ ಕಾನೂನಿನೊಂದಿಗೆ (ರೋಮನ್, ಯಹೂದಿ, ಇರಾನಿಯನ್, ಪಶ್ಚಿಮ) ಸಂಯೋಜಿಸುವ ನವೀಕೃತ ಕಾನೂನು ಅಧ್ಯಯನ ಆಗಬೇಕು. ರಾಜಕೀಯ ವಿಜ್ಞಾನವು ಪಶ್ಚಿಮದ ಪ್ರಜಾಪ್ರಭುತ್ವ, ಸಮಾಜವಾದ ಅಥವಾ ಫ್ಯಾಸಿಸಮ್ನಂತಹ ಸೆಕ್ಯೂಲರ್ ಸಿದ್ಧಾಂತಗಳಿಗೆ ಸೀಮಿತವಾಗದೆ, ದೈವಿಕ ಸಾರ್ವಭೌಮತ್ವ ಅಂದರೆ ‘ಹಾಕಿಮಿಯ್ಯತ್’ ಎಂಬ ಕುರ್ಆನಿನ ಚೌಕಟ್ಟಿನ ಅಡಿಯಲ್ಲಿ ಪ್ರತಿಯೊಂದು ಜಾಗತಿಕ ವ್ಯವಸ್ಥೆಯನ್ನು ಹಾಗೂ ವ್ಯಕ್ತಿ ಮತ್ತು ಸರ್ಕಾರದ ಹಕ್ಕು-ಕರ್ತವ್ಯಗಳನ್ನು ಮೌಲ್ಯಮಾಪನ ಮಾಡುವ ಇಸ್ಲಾಮಿಕ್ ರಾಜ್ಯಶಾಸ್ತ್ರವಾಗಬೇಕು. ಇನ್ನು ಪ್ರಾಕೃತಿಕ ವಿಜ್ಞಾನಗಳು ವಿಜ್ಞಾನವು ಸ್ಥಾಪಿಸಿದ ಪ್ರತಿಯೊಂದು ಸತ್ಯವನ್ನು ಒಪ್ಪಿಕೊಳ್ಳುತ್ತವೆಯಾದರೂ, ವಸ್ತುವು ಆಕಸ್ಮಿಕವಾಗಿ ಹುಟ್ಟಿದೆ ಎಂಬ ಭೌತಕ ತತ್ವದ ಬದಲಿಗೆ ದೈವಿಕ ಪ್ರಜ್ಞೆಯ ಚೌಕಟ್ಟಿನಲ್ಲಿ ಮರು ವ್ಯಾಖ್ಯಾನಿಸಲ್ಪಡಬೇಕು. ಉದಾಹರಣೆಗೆ, ನೀರು ಹೆಪ್ಪುಗಟ್ಟಿದಾಗ ವಿಸ್ತರಿಸುತ್ತದೆ ಎಂಬುದು ವಸ್ತುವಿನ ಯಾದೃಚ್ಛಿಕ ಗುಣವಲ್ಲ, ಬದಲಿಗೆ ಜಲಚರಗಳ ಜೀವವನ್ನು ರಕ್ಷಿಸಲು ದೈವಿಕವಾಗಿ ರೂಪಿಸಲ್ಪಟ್ಟ ಯುಕ್ತಿ ಎಂದು ಕಲಿಸಬೇಕಿದೆ.
ಮೌಲಾನ ಮೌದೂದಿಯವರು ಮತ್ತೊಂದು ವಿಷಯವನ್ನು ಬಲವಾಗಿ ಒತ್ತಿ ಹೇಳಿದರು: ನೈತಿಕ ಮೌಲ್ಯಗಳನ್ನು ಬೆಳೆಸಿಕೊಳ್ಳದೆ ಬರೀ ಸೈದ್ಧಾಂತಿಕ ಜ್ಞಾನವನ್ನು ಮಾತ್ರ ಕಲಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಒಂದು ಶಿಕ್ಷಣ ವ್ಯವಸ್ಥೆಯು ಯಶಸ್ವಿಯಾಗಬೇಕಾದರೆ ಅಲ್ಲಿರುವ ಶಿಕ್ಷಕರ ನೈತಿಕತೆಯು ಅತ್ಯಂತ ಮುಖ್ಯವಾಗಿದೆ. ಇಸ್ಲಾಮೀ ಮೌಲ್ಯಗಳ ಬಗ್ಗೆ ಜನರ ಮನಸ್ಸಿನಲ್ಲಿ ಅನುಮಾನ ಹುಟ್ಟಿಸುವಂತಹ ಶಿಕ್ಷಕರನ್ನು ಶೈಕ್ಷಣಿಕ ಸಂಸ್ಥೆಗಳಿಂದ ಸಂಪೂರ್ಣವಾಗಿ ಹೊರಹಾಕಬೇಕು ಎಂದು ಅವರು ವಾದಿಸಿದರು. ನಿಜವಾದ ಇಸ್ಲಾಮೀ ವಾತಾವರಣವನ್ನು ಸೃಷ್ಟಿಸಲು, ಶಿಕ್ಷಕರನ್ನು ಕೇವಲ ವೃತ್ತಿಪರ ನೈಪುಣ್ಯತೆಯ ಆಧಾರದ ಮೇಲೆ ಮಾತ್ರವಲ್ಲದೆ, ಅವರ ಅಸಾಧಾರಣ ನೈತಿಕ ಗುಣಗಳ ಆಧಾರದ ಮೇಲೆಯೂ ಆಯ್ಕೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಮೌಲಾನ ಅವರು ಪಾಶ್ಚಿಮಾತ್ಯ ಸೆಕ್ಯೂಲರ್ ಶಿಕ್ಷಣದ ಪದ್ಧತಿಯನ್ನು ಯಾವ ಹಿನ್ನೆಲೆಯಲ್ಲಿ ಟೀಕಿಸುತ್ತಿದ್ದರೋ, ಆ ಪದ್ಧತಿಯ ರಚನೆ, ಬೋಧನಾ ಕ್ರಮ ಹಾಗೂ ಕಲಿಕಾ ವಿಧಾನ ಹೇಗಿರಬೇಕು ಎಂಬುದರ ಬಗ್ಗೆ ಅವರು ನೇರವಾಗಿ ವಿವರವಾಗಿ ಮಾತನಾಡಿರಲಿಲ್ಲ; ಆದರೆ ಆ ಬಗ್ಗೆಯೂ ಗಂಭೀರವಾಗಿ ಆಲೋಚಿಸುವ ಅಗತ್ಯವಿದೆ. ಆದರೆ ದುರದೃಷ್ಟದ ಸಂಗತಿಯೆಂದರೆ, ಹಳೆಯ ಮದ್ರಸಾಗಳು ಅನುಸರಿಸಿಕೊಂಡು ಬಂದಿದ್ದ ವಸಾಹತುಶಾಹಿ ‘ಕಾರ್ಖಾನೆ ಮಾದರಿಯ’ ಶಿಕ್ಷಣವನ್ನು ಮೌಲಾನ ಅವರ ಉತ್ತರಾಧಿಕಾರಿಗಳು ಯಾವುದೇ ಪ್ರಶ್ನೆಯಿಲ್ಲದೆ ಕುರುಡಾಗಿ ಅನುಕರಿಸಿದರು. ಶೈಕ್ಷಣಿಕ ವಿಷಯದ (ಕಂಟೆಂಟ್) ವಿಚಾರದಲ್ಲಿ ಕೆಲವು ಪ್ರಾಮಾಣಿಕ ಪ್ರಯತ್ನಗಳು ನಡೆದಿದ್ದರೂ, ಈ ದೋಷಪೂರಿತ ವ್ಯವಸ್ಥೆಯನ್ನು ಹಾಗೆಯೇ ಮುಂದುವರಿಸಿದರು. ಅದಕ್ಕಾಗಿಯೇ ಇಂದಿಗೂ ಅವರ ಶಿಕ್ಷಣ ಸಂಸ್ಥೆಗಳಲ್ಲಿ ಸಾಲಾಗಿ ಜೋಡಿಸಲಾಗಿರುವ ತರಗತಿಗಳು, ಪರೀಕ್ಷೆಗಳು ಮತ್ತು ಪೈಪೋಟಿ ಕೇಂದ್ರಿತ ಕಲಿಕಾ ಪದ್ಧತಿಯೇ ಮುಂದುವರಿದಿರುವುದನ್ನು ನಾವು ಕಾಣುತ್ತೇವೆ. ಮೌಲಾನ ಅವರ ಆಲೋಚನೆಗಳ ಆಧಾರದ ಮೇಲೆ ಆರಂಭದಲ್ಲಿ ನಡೆದಿದ್ದ ಒಳ್ಳೆಯ ಕೆಲಸಗಳೆಲ್ಲವೂ ಕಾಲಕ್ರಮೇಣ ಅವರು ವಿರೋಧಿಸಿದ ರೀತಿಯಲ್ಲೇ ಚಲನಶೀಲತೆ ಕಳೆದುಕೊಂಡು ಸ್ಥಬ್ಧವಾದವು ಅಥವಾ ಕೊನೆಗೆ ಅದೇ ಹಳೆಯ ಸೆಕ್ಯೂಲರ್ ಶಿಕ್ಷಣ ಮಾದರಿಗೆ ಜೋತು ಬಿದ್ದವು.
ಆ ಪರಿಣಾಮವಾಗಿ, ಮೌಲಾನ ರವರು ‘ಖತ್ಲ್ಗಾಹ್’ ಅಂದರೆ ‘ವಧಾಸ್ಥಳ’ ಎಂದು ಕರೆದ ಶಿಕ್ಷಣ ವ್ಯವಸ್ಥೆಗೆ ತಮ್ಮ ಮಕ್ಕಳನ್ನು ಕಳುಹಿಸಲು ಅವರಿಗೆ ಯಾವುದೇ ಸಂಕೋಚವಿಲ್ಲ, ಬದಲಿಗೆ ಅದರಲ್ಲಿ ಸಂತೋಷಪಡುತ್ತಿದ್ದಾರೆ. ಇಂದಿನ ದಿನಗಳಲ್ಲಿ ‘ಇಸ್ಲಾಮಿಕ್ ಶಾಲೆಗಳು’ ಮತ್ತು ‘ಇಸ್ಲಾಮಿಕ್ ಶಿಕ್ಷಣ’ ಎಂಬ ನಾಮಫಲಕಗಳು ಹಾಗೂ ಜಾಹೀರಾತುಗಳಿಗೆ ನಾವು ಹೆಚ್ಚು ಮೋಸ ಹೋಗುತ್ತಿದ್ದೇವೆ. ಈ ಶಾಲೆಗಳು ಮುಸ್ಲಿಂ ಸಮಾಜದಲ್ಲಿ ಆಳವಾಗಿ ಬೇರೂರಿರುವ ಸಾಂಸ್ಕೃತಿಕ ಅಹಂಕಾರದ ಅಭದ್ರತೆಯನ್ನು ಸಮಾಧಾನಪಡಿಸುತ್ತಿರಬಹುದು; ಇದನ್ನು ಜನರು ಧರ್ಮಪರತೆ ಎಂದುಕೊಳ್ಳುತ್ತಿದ್ದಾರೆ. ಆದರೆ ವಾಸ್ತವವಾಗಿ ಇದಕ್ಕೂ ಸಮಗ್ರ ಇಸ್ಲಾಮೀ ಜೀವನ ವಿಧಾನಕ್ಕೂ ಯಾವುದೇ ಸಂಬಂಧವಿಲ್ಲ. ಇದು ಮುಸ್ಲಿಂ ‘ಕೌಮಿಯತ್’ಗೆ ಹತ್ತಿರವಾಗಿದೆ. ಇದೇ ಅಸ್ಮಿತೆಯನ್ನು ಮೌಲಾನ ಅವರು ತೀವ್ರವಾಗಿ ಟೀಕಿಸಿದ್ದರು. ಇದು ನಮ್ಮನ್ನು ಪಾಶ್ಚಿಮಾತ್ಯ ವಸಾಹತುಶಾಹಿ ಯಜಮಾನರು ಹೇಳಿಕೊಟ್ಟಿದ್ದನ್ನೆಲ್ಲಾ ಕುರುಡಾಗಿ ಅನುಸರಿಸುವ ಕುರಿಗಳ ಹಿಂಡಿನಂತೆ ಮಾಡುತ್ತದೆ. ಆದರೆ ಇದು ಇಸ್ಲಾಮೀ ಶಿಕ್ಷಣದ ನಿಜವಾದ ಮಾನದಂಡವನ್ನು ಈಡೇರಿಸಲಾರದು. ಇಸ್ಲಾಮಿಕ್ ಶಿಕ್ಷಣದ ಒಂದು ಮುಖ್ಯ ಉದ್ದೇಶವೆಂದರೆ, ಜಗತ್ತಿನ ನಾಯಕತ್ವವನ್ನು ವಹಿಸಿಕೊಳ್ಳಬಲ್ಲ ಅತ್ಯಂತ ಸಮರ್ಥ ಪರಿಣಿತರನ್ನು ಸಿದ್ಧಪಡಿಸುವುದು ಎಂದು ಮೌಲಾನ ಒತ್ತಿಹೇಳಿದ್ದಾರೆ.
ಮುಸ್ಲಿಂ ಸಮುದಾಯವು ಇಂದಿಗೂ ಒಪ್ಪಿಕೊಂಡಿರುವ ಮಾನಸಿಕ ಗುಲಾಮಗಿರಿಯಿಂದ ಹೊರಬರಲು ಮೌಲಾನ ಅವರು ನೀಡಿದ ತಜ್ದೀದ್ ವಿಚಾರಗಳನ್ನು ನಾವು ಈಗಲಾದರೂ ಗಂಭೀರವಾಗಿ ಮರುಪರಿಶೀಲಿಸಬೇಕಿದೆ. ಈ ವಿಚಾರಗಳನ್ನು ಪ್ರಾಮಾಣಿಕವಾಗಿ ಹಾಗೂ ಆಳವಾಗಿ ಅರ್ಥಮಾಡಿಕೊಂಡರೆ, ನಮ್ಮ ಶಿಕ್ಷಣ ಪದ್ಧತಿಯು ನಮ್ಮ ಫಿತ್ರಾಗೆ ತಕ್ಕಂತೆ ಸಂಪೂರ್ಣವಾಗಿ ಬದಲಾಯಿಸಲು ಸಾಧ್ಯವಿದೆ.












