ಸನ್ಮಾರ್ಗ ವಾರ್ತೆ
ಮಂಗಳೂರು: ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವ ಉದ್ದೇಶದಿಂದ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಲು ರೂಪಿಸಲಾಗಿದ್ದ ಸಂಚನ್ನು ಬಜಪೆ ಪೊಲೀಸರು ಬಯಲಿಗೆಳೆದಿದ್ದಾರೆ. ಈ ಸಂಬಂಧ ಉಡುಪಿಯ ಸುದೀಪ್ ಸೇರಿದಂತೆ ಇತರ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಎಫ್ಐಆರ್ನಲ್ಲಿ ಉಲ್ಲೇಖಿಸಿರುವ ವಿವರಗಳ ಪ್ರಕಾರ, ಉಡುಪಿಯ ಸುದೀಪ್ ಹಾಗೂ ಮಹೇಶ್ ಎಂಬವರು ಕೊಲೆ ಸಂಚಿನ ರೂವಾರಿಗಳಾಗಿದ್ದು, ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರವಾಗಿ ಮುಸ್ಲಿಂ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಲು ಯುವಕರನ್ನು ಪ್ರಚೋದಿಸಿದ್ದರು ಎನ್ನಲಾಗಿದೆ.
ಕೊಲೆ ಕೃತ್ಯಕ್ಕೆ ಬರೋಬ್ಬರಿ ₹24 ಲಕ್ಷ ಸುಪಾರಿ ಹಣ, ಆರೋಪಿಗಳು ಜೈಲು ಪಾಲಾದಲ್ಲಿ ಅವರ ಕುಟುಂಬಕ್ಕೆ ತಿಂಗಳಿಗೆ ₹5,000 ಮೌಲ್ಯದ ದಿನಸಿ ಹಾಗೂ ₹15,000 ಮನೆ ಖರ್ಚು ನೀಡುವುದಾಗಿ ಆಮಿಷವೊಡ್ಡಲಾಗಿತ್ತು ಎಂದು ಎಫ್ಐಆರ್ನಲ್ಲಿ ತಿಳಿಸಲಾಗಿದೆ.
ದೂರುದಾರ ಅಭಿಷೇಕ್ ಹಾಗೂ ಆತನ ಸ್ನೇಹಿತ ಕೀರ್ತನ್ ಸ್ಕಾರ್ಪಿಯೋ ಕಾರಿನಲ್ಲಿ ತೆರಳಿ ಉಡುಪಿಯ ತ್ರಿವೇಣಿ ಹೋಟೆಲ್ ಹಾಗೂ ಕಾರ್ಕಳದ ಅತೂರು ಚರ್ಚ್ ಬಳಿ ಸಂಚಿನ ಕುರಿತು ಸಭೆ ನಡೆಸಿದ್ದರು ಎನ್ನಲಾಗಿದೆ. ಸುದೀಪ್ ವಾಟ್ಸಾಪ್ ಮೂಲಕ ಕಳುಹಿಸಿದ್ದ ಮಂಗಳೂರಿನ ಬಜಪೆ ಕಿನ್ನಿಪದವಿನ ವ್ಯಕ್ತಿಯ ಫೋಟೋ ಆಧರಿಸಿ, ಆತನ ಚಲನವಲನದ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿತ್ತು ಎಂದು ಪೊಲೀಸರು ದಾಖಲಿಸಿರುವ ದೂರಿನಲ್ಲಿ ತಿಳಿಸಲಾಗಿದೆ.
ಕೊಲೆ ಕೃತ್ಯಕ್ಕೆ ಸುಳ್ಯದ ಚಿಂತನ್ ಎಂಬಾತನನ್ನೂ ಸಂಪರ್ಕಿಸಲಾಗಿದ್ದು, ಮನೆಯಲ್ಲಿದ್ದ ಎರಡು ತಲವಾರುಗಳನ್ನು ಸಿದ್ಧಪಡಿಸಿಟ್ಟುಕೊಳ್ಳಲಾಗಿತ್ತು ಎನ್ನಲಾಗಿದೆ.
ಸಂಚು ಅಂತಿಮ ಹಂತಕ್ಕೆ ತಲುಪಿದ್ದ ಸಂದರ್ಭದಲ್ಲಿ ದೂರುದಾರ ಅಭಿಷೇಕ್ ಅವರ ಪತ್ನಿಗೆ ಮಗು ಜನಿಸಿದ ಹಿನ್ನೆಲೆಯಲ್ಲಿ ಮನಃಪರಿವರ್ತನೆಯಾಗಿ ಕೃತ್ಯದಿಂದ ಹಿಂದೆ ಸರಿದಿದ್ದರು ಎಂದು ತಿಳಿದುಬಂದಿದೆ. ಅಪರಾಧ ಎಸಗಿದರೆ ಜೈಲು ಪಾಲಾಗಬೇಕಾಗುತ್ತದೆ ಎಂಬ ಭಯದಿಂದ ಕೊಲೆ ಕೃತ್ಯ ನಡೆಸದಿರಲು ನಿರ್ಧರಿಸಿದ್ದರು ಎನ್ನಲಾಗಿದೆ.
ಆದರೆ ಸುದೀಪ್ ಹಾಗೂ ಮಹೇಶ್ ನಿರಂತರವಾಗಿ ವಾಟ್ಸಾಪ್ ಮೂಲಕ ಕೃತ್ಯ ಎಸಗುವಂತೆ ಒತ್ತಡ ಹೇರುತ್ತಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಇದರಿಂದ ಭಯಗೊಂಡ ಅಭಿಷೇಕ್ ಬಜಪೆ ಪೊಲೀಸ್ ಠಾಣೆಗೆ ತೆರಳಿ ಸುದೀಪ್ ಸೇರಿದಂತೆ ಇತರರ ವಿರುದ್ಧ ದೂರು ನೀಡಿದ್ದಾರೆ.
ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಬಜಪೆ ಪೊಲೀಸರು, ವಾಟ್ಸಾಪ್ ಚಾಟ್ಗಳು, ಸ್ಕ್ರೀನ್ಶಾಟ್ಗಳು ಸೇರಿದಂತೆ ಲಭ್ಯವಿರುವ ಸಾಕ್ಷ್ಯಗಳನ್ನು ಸಂಗ್ರಹಿಸಿ ತನಿಖೆ ಚುರುಕುಗೊಳಿಸಿದ್ದಾರೆ.












