ಸನ್ಮಾರ್ಗ ವಾರ್ತೆ
ಭೋಪಾಲ್: ಮಧ್ಯಪ್ರದೇಶದ ಉಜ್ಜೈನಿಯಲ್ಲಿ ಐತಿಹಾಸಿಕ ಶಾಹಿ ಮಸೀದಿಯ ಒಂದು ಭಾಗವನ್ನು ಕೆಡವಲು ಪುರಸಭೆಯು ಮುಂದಾಗಿರುವುದನ್ನು ಭಕ್ತರು ವಿರೋಧಿಸುತ್ತಿದ್ದಾರೆ. ನೂರಾರು ಸ್ಥಳೀಯ ಭಕ್ತರು ಮಸೀದಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಿಗೆ ಕಾವಲು ಕಾಯುತ್ತಿದ್ದಾರೆ.
2028 ರ ಸಿಂಹಸ್ಥ ಕುಂಭಮೇಳದ ಮೊದಲು ಜಾರಿಗೆ ತರಲಾಗುತ್ತಿರುವ ರಸ್ತೆ ಅಭಿವೃದ್ಧಿ ಯೋಜನೆಯ ಭಾಗವಾಗಿ ಮಸೀದಿಯ ಒಂದು ಭಾಗವನ್ನು ಕೆಡವುದಾಗಿ ಅಧಿಕಾರಿಗಳು ನೋಟಿಸ್ ಜಾರಿಗೆ ತಂದಿದ್ದಾರೆ.
ಧ್ವಂಸಗೊಳಿಸುವ ಕಾರ್ಯಕ್ಕಾಗಿ ಹೊರಗೆ ಬುಲ್ಡೋಜರ್ಗಳನ್ನು ನಿಲ್ಲಿಸಿದ್ದರಿಂದ ಭಾನುವಾರ ರಾತ್ರಿ ಮಸೀದಿ ಬಳಿ ದೊಡ್ಡ ಜನಸ್ತೋಮ ಸೇರಿತ್ತು. ಧ್ವಂಸಗೊಳಿಸುವ ಬೆದರಿಕೆಗಳ ನಂತರ ಕಳೆದ ಕೆಲವು ವಾರಗಳಿಂದ ಸ್ಥಳೀಯ ನಿವಾಸಿಗಳು ಮಸೀದಿಯ ಒಳಗೆ ಶಿಬಿರ ಹೂಡಿದ್ದಾರೆ. ತೀವ್ರ ಪ್ರತಿಭಟನೆಯ ಕಾರಣದಿಂದ ಧ್ವಂಸಗೊಳಿಸುವ ಕೆಲಸವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.
ಮಹಾಕಾಳೇಶ್ವರ ದೇವಸ್ಥಾನದ ಸಮೀಪವಿರುವ ಗಣೇಶ್ ಚೌಕದಿಂದ ಖಜುರ್ ವ್ಯಾಲಿ ಮಸೀದಿವರೆಗಿನ 730 ಮೀಟರ್ ರಸ್ತೆಯನ್ನು 15 ಮೀಟರ್ ಅಗಲಕ್ಕೆ ವಿಸ್ತರಿಸುವ ಯೋಜನೆಯಿದು.
ರಸ್ತೆಯನ್ನು ವಿಸ್ತರಿಸಿದಾಗ ಶಾಹಿ ಮಸೀದಿಯ ಪ್ರಾರ್ಥನಾ ಹಾಲಿನ ಒಂದು ಭಾಗ, 120 ಅಡಿ ಎತ್ತರದ ಮಿನಾರ್ ಮತ್ತು ಮಸೀದಿಯ ಮಜಾರ್ ಚೌಕಶಾಹಿ ಅನ್ನು ಕೆಡವಬೇಕಾಗುತ್ತದೆ ಎಂದು ಘೋಷಿಸಲಾಗಿದೆ. ಆದಾಗ್ಯೂ, ಇಂದೋರ್ನ ಪ್ರಮುಖ ವಿದ್ವಾಂಸ ಮುಫ್ತಿ ಜುನೈದ್, ಇಂತಹ ಏಕಪಕ್ಷೀಯ ಕ್ರಮಗಳು ಸ್ವೀಕಾರಾರ್ಹವಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಒಂದು ಧರ್ಮದ ಸಮುದಾಯದ ಅಗತ್ಯಗಳಿಗಾಗಿ ಮತ್ತೊಂದು ಧರ್ಮದ ಅಸ್ತಿತ್ವ ಮತ್ತು ಚಿಹ್ನೆಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು ತರ್ಕಹೀನ ಎಂದು ಅವರು ಆರೋಪಿಸಿದರು. ಈ ಯೋಜನೆಯಿಂದಾಗಿ ಈ ಪ್ರದೇಶದ ಇತರ ಹಲವು ಹಳೆಯ ಮಸೀದಿಗಳೂ ಅಪಾಯದಲ್ಲಿವೆ ಎಂದು ಅವರು ಹೇಳಿದರು. “ಈ ಮಸೀದಿಯನ್ನು ಕೆಡವಿದರೆ, ಅವರು ಇತರ 28 ಮಸೀದಿಗಳಿಗೆ ತೆರಳುತ್ತಾರೆ” ಎಂದು ಮುಫ್ತಿ ಜುನೈದ್ ಹೇಳಿದರು.
ಉಜ್ಜೈನ್ ಪುರಸಭೆಯು ನೀಡಿರುವ ಧ್ವಂಸ ನೋಟೀಸ್ಗಳನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಎರಡು ಅರ್ಜಿಗಳನ್ನು ಮಧ್ಯಪ್ರದೇಶ ಹೈಕೋರ್ಟ್ ಇತ್ತೀಚೆಗೆ ವಜಾಗೊಳಿಸಿದೆ. ಅಧಿಕಾರಿಗಳು ನೈಸರ್ಗಿಕ ನ್ಯಾಯದ ತತ್ವಗಳಿಗೆ ಅನುಗುಣವಾಗಿ ಕ್ರಮ ಕೈಗೊಂಡಿದ್ದಾರೆ ಮತ್ತು ಅದರಲ್ಲಿ ಯಾವುದೇ ಕಾನೂನುಬಾಹಿರತೆ ಇಲ್ಲ ಎಂದು ನ್ಯಾಯಮೂರ್ತಿ ಸಂದೀಪ್ ಎನ್. ಭಟ್ ಅವರು ಅರ್ಜಿಗಳನ್ನು ವಜಾಗೊಳಿಸಿದರು. ಈ ಮಧ್ಯೆ, ಅಸೋಸಿಯೇಶನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ (ಎಪಿಸಿಆರ್) ವಕೀಲರಾದ ಸೈಯದ್ ಪಠಾನ್, ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಯೋಜಿಸುತ್ತಿದ್ದೇವೆ ಎಂದು ಹೇಳಿದರು. ಈ ನಿಟ್ಟಿನಲ್ಲಿ ಪ್ರಕ್ರಿಯೆಯನ್ನು ಚುರುಕುಗೊಳಿಸಲಾಗಿದೆ.
ಮಸೀದಿ ಧ್ವಂಸವಾಗುವುದನ್ನು ತಡೆಯುವ ಉದ್ದೇಶದಿಂದ ಜನರು ಮಸೀದಿ ಒಳಗೆ ಕುಳಿತುಕೊಂಡು ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ.












