ಸನ್ಮಾರ್ಗ ವಾರ್ತೆ
ಮೆಟಾ ಒಡೆತನದ ಪ್ಲಾಟ್ಫಾರ್ಮ್ಗೆ ಸರ್ಕಾರದಿಂದ ಕಾನೂನುಬದ್ಧ ವಿನಂತಿ ಬಂದ ನಂತರ, ರಾಜಕೀಯ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ಅವರ ಇನ್ಸ್ಟಾಗ್ರಾಮ್ ಖಾತೆಯನ್ನು ಭಾರತದಲ್ಲಿ ನಿರ್ಬಂಧಿಸಲಾಗಿದೆ.
ಬಳಕೆದಾರರು ಖಾತೆಯನ್ನು ಪ್ರವೇಶಿಸಲು ಪ್ರಯತ್ನಿಸಿದಾಗ ಪ್ಲಾಟ್ಫಾರ್ಮ್ ಪ್ರದರ್ಶಿಸುವ ಸಂದೇಶವು ಹೀಗಿದೆ: “ನಮ್ಮ ಮಾರ್ಗಸೂಚಿಗಳ ಅನ್ವಯ ಇದನ್ನು ಪರಿಶೀಲಿಸಿ, ಕಾನೂನು ಹಾಗೂ ಮಾನವ ಹಕ್ಕುಗಳ ಸಮಗ್ರ ಪರಾಮರ್ಶೆಯನ್ನು ಕೈಗೊಳ್ಳಲಾಗಿದೆ. ಇದರ ಆಧಾರದ ಮೇಲೆ, ಸ್ಥಳೀಯ ಕಾನೂನುಗಳಿಗೆ ವಿರುದ್ಧವಿರುವ ಪ್ರದೇಶಗಳಲ್ಲಿ ಮಾತ್ರ ಈ ಕಂಟೆಂಟ್ಗೆ (ವಿಷಯಕ್ಕೆ) ಪ್ರವೇಶವನ್ನು ನಿರ್ಬಂಧಿಸಲಾಗಿದೆ.”
ಮತ್ತೊಬ್ಬ ರಾಜಕೀಯ ವ್ಯಂಗ್ಯಚಿತ್ರಕಾರ ಮಂಜುಲ್ ಅವರು ಸಹ, “ಭಾರತ ಸರ್ಕಾರ / ಕಾನೂನು ಜಾರಿ ಸಂಸ್ಥೆಯಿಂದ ಬಂದ ನೋಟೀಸಿನ ಮೇರೆಗೆ” ಚುನಾವಣಾ ಆಯೋಗದ ಕುರಿತಾದ ತಮ್ಮ ಕೃತಿಯೊಂದನ್ನು ಇನ್ಸ್ಟಾಗ್ರಾಮ್ ಭಾರತದಲ್ಲಿರುವ ಬಳಕೆದಾರರಿಗೆ ನಿರ್ಬಂಧಿಸಿದೆ ಎಂದು ತಿಳಿಸಿದ್ದಾರೆ.
ಸರ್ಕಾರ ಅಥವಾ ನ್ಯಾಯಾಲಯದಿಂದ ನಿರ್ದೇಶನಗಳನ್ನು ಸ್ವೀಕರಿಸಿದ ಮೂರು ಗಂಟೆಗಳ ಒಳಗೆ ” ಕಾನೂನುಬಾಹಿರ ವಿಷಯವನ್ನು” ತೆಗೆದುಹಾಕುವಂತೆ ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಅಗತ್ಯವಿರುವ 2021 ರ ಮಾಹಿತಿ ತಂತ್ರಜ್ಞಾನ ನಿಯಮಗಳ ಅಡಿಯಲ್ಲಿ ಸತೀಶ್ ಆಚಾರ್ಯ ಅವರ ಖಾತೆಯನ್ನು ನಿರ್ಬಂಧಿಸಲಾಗಿದೆ.
ಸೋಮವಾರ ಈ ಬೆಳವಣಿಗೆಗೆ ಪ್ರತಿಕ್ರಿಯಿಸಿದ ಸತೀಶ್ ಆಚಾರ್ಯ, “ವ್ಯಂಗ್ಯಚಿತ್ರಗಳಿಗೆ ಇಷ್ಟು ಹೆದರುವ” ಸರ್ಕಾರವನ್ನು ತಾನು ಎಂದಿಗೂ ನೋಡಿಲ್ಲ ಎಂದು ಎಕ್ಸ್ನಲ್ಲಿ ತಿಳಿಸಿದ್ದಾರೆ.
ವ್ಯಂಗ್ಯಚಿತ್ರಗಳು ನೋಯಿಸುವುದಿಲ್ಲ, ಆದರೆ “ಗುಣಪಡಿಸುವ ಶಕ್ತಿಯನ್ನು” ಹೊಂದಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದ 2018 ರ ಸುದ್ದಿ ವರದಿಯನ್ನೂ ಸತೀಶ್ ಆಚಾರ್ಯ ಹಂಚಿಕೊಂಡಿದ್ದಾರೆ. ಮಾನವೀಯತೆಯ ಲಕ್ಷಣಗಳನ್ನು ಸೂಕ್ಷ್ಮವಾಗಿ ಗಮನಿಸಬಲ್ಲವರಾಗಿರುವುದರಿಂದ ವ್ಯಂಗ್ಯಚಿತ್ರಕಾರರು “ದೇವರಿಗೆ ಹತ್ತಿರದವರು” ಎಂದು ಮೋದಿ ಆ ಸಮಯದಲ್ಲಿ ಹೇಳಿದ್ದರು.
ಅವರು ಕೇಂದ್ರದಲ್ಲಿರುವ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಸರ್ಕಾರವನ್ನು “ಬ್ಲಾಕ್ ಸಾರ್ಕಾರ್” ಎಂದು ಬಣ್ಣಿಸಿದ್ದಾರೆ.
ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯ ಕುರಿತು ಚುನಾವಣಾ ಸಮಿತಿಯ ನಿರ್ಧಾರಗಳಿಗೆ 10 ತಿಂಗಳುಗಳಲ್ಲಿ 14 ಬಾರಿ ಔಪಚಾರಿಕವಾಗಿ ಆಕ್ಷೇಪಣೆಗಳನ್ನು ವ್ಯಕ್ತಪಡಿಸಿದ್ದಾರೆ ಮತ್ತು ಕೆಲವು ನಿರ್ಧಾರಗಳನ್ನು ತಮ್ಮ ಗಮನಕ್ಕೆ ತಾರದೆ ತೆಗೆದುಕೊಳ್ಳಲಾಗಿದೆ ಎಂದು ಸೆಪ್ಟೆಂಬರ್ 23 ರ ದಿ ಇಂಡಿಯನ್ ಎಕ್ಸ್ಪ್ರೆಸ್ ತನಿಖೆಯು ಬಹಿರಂಗಪಡಿಸಿದೆ ಎಂಬ ವರದಿಗಳ ಕುರಿತಾದ ವ್ಯಂಗ್ಯಚಿತ್ರಗಳು ಸತೀಶ್ ಆಚಾರ್ಯ ಅವರ ಇತ್ತೀಚಿನ ರಚನೆಗಳಲ್ಲಿ ಸೇರಿವೆ.












