ಸನ್ಮಾರ್ಗ ವಾರ್ತೆ
ಹೊಸ ದೆಹಲಿ: 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಸಾಮಾಜಿಕ ಮಾಧ್ಯಮ ಖಾತೆಗಳನ್ನು ತೆರೆಯುವುದನ್ನು ತಡೆಯಲು ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿಸಂಹಿತೆ) ನಿಯಮಗಳಿಗೆ ತಿದ್ದುಪಡಿ ಮಾಡುವುದಾಗಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ಗೆ ತಿಳಿಸಿದೆ. ಅಂತಹ ನೋಂದಣಿಗಳನ್ನು ನಿರ್ಬಂಧಿಸುವುದನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಕಾನೂನುಬದ್ಧ ಜವಾಬ್ದಾರಿಯನ್ನಾಗಿ ಮಾಡುವುದಾಗಿಯೂ ಕೇಂದ್ರವು ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿ ಜಾಯ್ಮಾಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನಾ ಅವರನ್ನೊಳಗೊಂಡ ನ್ಯಾಯಪೀಠದ ಮುಂದೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸೋಮವಾರ ಈ ಭರವಸೆ ನೀಡಿದರು. ಪೋಷಕರ ಒಪ್ಪಿಗೆಯೊಂದಿಗೆ ಶೈಕ್ಷಣಿಕ ವೆಬ್ಸೈಟ್ಗಳ ಸದಸ್ಯತ್ವವು ಮುಂದುವರಿಯಬಹುದು ಎಂದು ಮೆಹ್ತಾ ಸೇರಿಸಿದರು. ಅಸ್ತಿತ್ವದಲ್ಲಿರುವ ಮಾರ್ಗಸೂಚಿಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಕಾನೂನು ಬೆಂಬಲದ ಅಗತ್ಯವಿದೆ ಮತ್ತು ಮಾರ್ಗಸೂಚಿಗಳು ಜಾರಿಯಲ್ಲಿದ್ದರೂ ಅವುಗಳನ್ನು ಅನುಷ್ಠಾನಗೊಳಿಸಲಾಗುತ್ತಿಲ್ಲ ಎಂದು ಅವರು ಬೊಟ್ಟು ಮಾಡಿದರು.
ಕೇವಲ ಮಾರ್ಗಸೂಚಿಗಳ ಬದಲಿಗೆ ಅದನ್ನು ಕಾನೂನು ರೂಪಕ್ಕೆ ತರುವುದನ್ನು ಪರಿಗಣಿಸುವಂತೆ ಮತ್ತು ತನ್ನ ಪ್ರತಿಕ್ರಿಯೆಯನ್ನು ತಿಳಿಸುವಂತೆ ನ್ಯಾಯಾಲಯವು ಕೇಂದ್ರಕ್ಕೆ ಸೂಚಿಸಿತು. ಪ್ಲಾಟ್ಫಾರ್ಮ್ಗಳ ಸಾಫ್ಟ್ವೇರ್ ಭಾರತೀಯ ಕಾನೂನುಗಳಿಗೆ ಅನುಗುಣವಾಗಿರಬೇಕು ಎಂದು ಸೂಚಿಸಿದ ನ್ಯಾಯಮೂರ್ತಿ ಜಾಯ್ಮಾಲ್ಯ ಬಾಗ್ಚಿ, ಭಾರತದ ವಯಸ್ಸಿನ ಅವಶ್ಯಕತೆಗಳನ್ನು ಪಾಲಿಸಲು ಸಾಮಾಜಿಕ ಮಾಧ್ಯಮ ಕಂಪನಿಗಳು ತಮ್ಮ ವ್ಯವಸ್ಥೆಗಳನ್ನು ಮರುರೂಪಿಸಬೇಕಾಗುತ್ತದೆ ಎಂದು ಹೇಳಿದರು.
18 ವರ್ಷ ವಯಸ್ಸಿನ ಮಿತಿಯು ಉಲ್ಲಂಘನೆಯಾಗದಂತೆ ನೋಡಿಕೊಳ್ಳಲು ಸಾಮಾಜಿಕ ಮಾಧ್ಯಮ ವೇದಿಕೆಗಳು ತಮ್ಮ ಸದಸ್ಯತ್ವ ವ್ಯವಸ್ಥೆಗಳನ್ನು ಗರಿಷ್ಠ ನಿಖರತೆಯೊಂದಿಗೆ ಸರಿಹೊಂದಿಸಬೇಕು ಎಂದೂ ಸುಪ್ರೀಂ ಕೋರ್ಟ್ ನ್ಯಾಯಪೀಠವು ಗಮನಿಸಿದೆ. ‘ಜಸ್ಟ್ ರೈಟ್ಸ್ ಫಾರ್ ಚಿಲ್ಡ್ರನ್ ಅಲೈಯನ್ಸ್’ ಎಂಬ ಎನ್ಜಿಒ ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯವು ಪರಿಗಣಿಸುತ್ತಿತ್ತು. ಸಂಸ್ಥೆಯ ಪರವಾಗಿ ಹಿರಿಯ ವಕೀಲ ಹೆಚ್.ಎಸ್.ಫೂಲ್ಕಾ ಹಾಜರಾಗಿದ್ದರು.
ಭಾರತೀಯ ಕಾನೂನಿನ ಪ್ರಕಾರ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಅಪ್ರಾಪ್ತ ವಯಸ್ಕರು. ಸ್ವಂತವಾಗಿ ಯಾವುದೇ ಒಪ್ಪಂದಕ್ಕೆ ಕಾನೂನುಬದ್ಧವಾಗಿ ಸಹಿ ಮಾಡುವ ಅಥವಾ ಪಕ್ಷಕಾರರಾಗುವ ಹಕ್ಕು ಅವರಿಗೆ ಇಲ್ಲ. ಆದಾಗ್ಯೂ, ಈ ಕಾನೂನಿಗೆ ವಿರುದ್ಧವಾಗಿ ಫೇಸ್ಬುಕ್ ಮತ್ತು ಸ್ನಾಪ್ಚಾಟ್ ನಂತಹ ಪ್ಲಾಟ್ಫಾರ್ಮ್ಗಳು ಮಕ್ಕಳಿಗೆ 13 ವರ್ಷ ವಯಸ್ಸಿನಿಂದಲೇ ಖಾತೆಗಳನ್ನು ತೆರೆಯಲು ಅನುಮತಿಸುತ್ತವೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಮಕ್ಕಳಿಗಾಗಿ ಇಂಟರ್ನೆಟ್ ಅನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಅರ್ಜಿಯು ಕೋರಿಲ್ಲ. ಬದಲಿಗೆ, ಖಾತೆಗಳನ್ನು ತೆರೆಯಲು ಪೋಷಕರು ಅಥವಾ ಪಾಲಕರ ಕಡ್ಡಾಯ ಒಪ್ಪಿಗೆ ಮತ್ತು ಸರಿಯಾದ ತಾಂತ್ರಿಕ ಭದ್ರತಾ ಕ್ರಮಗಳನ್ನು ಇದು ಕೋರುತ್ತದೆ. ವಯಸ್ಸಿನ ಪರಿಶೀಲನೆಯಲ್ಲಿ ಅಸ್ತಿತ್ವದಲ್ಲಿರುವ ಲೋಪಗಳಿಂದಾಗಿ, ಮಕ್ಕಳು ಆನ್ಲೈನ್ ಗ್ರೂಮಿಂಗ್, ಸೆಕ್ಸ್ಟಾರ್ಷನ್, ಸೈಬರ್ಬುಲ್ಲಿಂಗ್, ಲೈಂಗಿಕ ಶೋಷಣೆ ಮತ್ತು ವೈಯಕ್ತಿಕ ಮಾಹಿತಿಯ ದುರುಪಯೋಗಕ್ಕೆ ಗುರಿಯಾಗುತ್ತಿದ್ದಾರೆ ಎಂದೂ ಅರ್ಜಿಯು ಸೂಚಿಸುತ್ತದೆ.
ಈ ವಿಷಯವು ಮೇಲ್ನೋಟಕ್ಕೆ ಡಿಜಿಟಲ್ ವೈಯಕ್ತಿಕ ಡೇಟಾ ರಕ್ಷಣಾ ಕಾಯ್ದೆಯ ವ್ಯಾಪ್ತಿಗೆ ಬರುವಂತೆ ತೋರುತ್ತಿದೆ ಎಂದು ಮೆಹ್ತಾ ಹೇಳಿದರು. ಈ ಕಾಯ್ದೆಯು ಇನ್ನೂ ಜಾರಿಗೆ ಬಂದಿಲ್ಲ ಮತ್ತು 2027 ರಿಂದ ಮಾತ್ರ ಅನ್ವಯವಾಗುತ್ತದೆ ಎಂದು ಫೂಲ್ಕಾ ವಾದಿಸಿದರು. ಅದಕ್ಕಾಗಿಯೇ ಅರ್ಜಿದಾರರು ಈಗಲೇ ಜಾರಿಗೆ ತರಬಹುದಾದ ಕಾನೂನುಗಳನ್ನು ಒತ್ತಾಯಿಸುತ್ತಿದ್ದಾರೆ.
ತಿದ್ದುಪಡಿಯನ್ನು ಯಾವಾಗ ಸೂಚಿಸಲಾಗುತ್ತದೆ, ಪ್ಲಾಟ್ಫಾರ್ಮ್ಗಳ ವಯಸ್ಸನ್ನು ಹೇಗೆ ಪರಿಶೀಲಿಸಲಾಗುತ್ತದೆ ಅಥವಾ ಅನುಸರಿಸದಿದ್ದಕ್ಕಾಗಿ ಯಾವ ದಂಡವನ್ನು ವಿಧಿಸಲಾಗುತ್ತದೆ ಎಂಬುದನ್ನು ಕೇಂದ್ರವು ನಿರ್ದಿಷ್ಟಪಡಿಸಿಲ್ಲ. ಮಕ್ಕಳ ಸಾಮಾಜಿಕ ಮಾಧ್ಯಮ ಬಳಕೆಯ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ.












