ಉರ್ದು ಭಾಷೆಯ ಇತಿಹಾಸ ಮತ್ತು ರಾಜ್ಯ ಉರ್ದು ಭಾಷಿಕರ ಬೇಡಿಕೆ

0
249

✍️ ಬೋಡೆ ರಿಯಾಝ್ ಅಹ್ಮದ್ ತಿಮ್ಮಾಪುರಿ, ಕಲಬುರ್ಗಿ
ಸಾಹಿತಿ ಮತ್ತು ಲೇಖಕರು

ಉರ್ದು – ಉಗಮ, ಇತಿಹಾಸ

ಮೂಲತಃ ಟರ್ಕಿ ಪದವಾಗಿರುವ ಉರ್ದು, `ಸೈನಿಕ ಶಿಬಿರ’ ಎಂಬ ಅರ್ಥವನ್ನು ಹೊಂದಿರುವ ಭಾರತದಲ್ಲಿ ಉದಯವಾಗಿರುವ ಅಪ್ಪಟ ಭಾರತೀಯ ಭಾಷೆಯಾಗಿದೆ. ಹನ್ನೆರಡನೆಯ ಶತಮಾನದ ಆರಂಭದಲ್ಲಿ, ದೆಹಲಿಯು ಮುಸ್ಲಿಮ್ ಸಾಮ್ರಾಜ್ಯದ ಕೇಂದ್ರವಾದಾಗ, ಸುತ್ತಮುತ್ತಲಿನ ಸೌರಸೇನಿ, ಬ್ರಿಜ್ ಭಾಷಾ ಮುಂತಾದ ಭಾಷೆಗಳು ಪರ್ಷಿಯನ್ ಭಾಷೆಯ ಸಂಪರ್ಕಕ್ಕೆ ಬಂದು ಹೊಸ ಭಾಷೆಯೊಂದು ಹುಟ್ಟಿತು. ಆದರೆ, ದೇಸಿ ಭಾಷೆಯ ವ್ಯಾಕರಣ, ಚೌಕಟ್ಟು ಹಾಗೆಯೇ ಉಳಿದು, ಪದಭಂಡಾರವು ವಿಸ್ತೃತವಾಯಿತು. ಉತ್ತರ ಭಾರತದ ದೇಸಿ ಭಾಷೆಗಳ ಜೊತೆಗೆ ಅರೆಬಿಕ್, ಪರ್ಷಿಯನ್, ತುರ್ಕಿ ಮುಂತಾದ ವಿದೇಶಿ ಭಾಷೆಗಳ ಪದಭಂಡಾರದಿಂದ ಸಮೃದ್ಧವಾಗಿ ಈ ಮಿಶ್ರ ಭಾಷೆಯು ಜಬಾನ್-ಎ-ಹಿಂದ್, ಹಿಂದಿ, ಜಬಾನ್-ಎ-ದೆಹಲಿ, ರೇಖ್ತಾ, ಗುಜರಿ, ಜಬಾನ್-ಎ-ಉರ್ದು-ಎ-ಮೊಅಲ್ಲಾ, ಜಬಾನ್-ಎ-ಉರ್ದು ಮೊದಲಾದ ಹೆಸರುಗಳಿಂದ ಉರ್ದು ಭಾಷೆಯು ಕರೆಯಲ್ಪಟ್ಟಿತ್ತು.

ಆರಂಭದಲ್ಲಿ ಈ ಭಾಷೆಯು ಮುಸ್ಲಿಮ್ ರಾಜ-ಮನೆತನಗಳು ಹಾಗೂ ಸೈನಿಕರ ಭಾಷೆಯಾಗಿದ್ದರಿಂದ, ಅದಕ್ಕೆ ಪರ್ಷಿಯನ್ ಲಿಪಿಯ ಬಳಕೆ ರೂಢಿಗೆ ಬಂತು. ಆದರೆ ಹದಿನಾಲ್ಕನೆಯ ಶತಮಾನದಲ್ಲಿ ಈ ಭಾಷೆ ದಕ್ಷಿಣಕ್ಕೆ ಬಂದು, ಗುಜರಾತಿ, ಮರಾಠಿ, ಕನ್ನಡ, ತೆಲುಗು ಭಾಷೆಗಳೊಂದಿಗೆ ಬೆರೆತು ಅದಕ್ಕೆ ದಖ್ಖನಿ ಎಂಬ ಹೆಸರೂ ಸಹ ಬಂತು. ದಕ್ಷಿಣದ ರಾಜ್ಯಗಳಲ್ಲಿ ಇದು ಪರ್ಷಿಯನ್ ಭಾಷೆಯ ಬದಲಿಗೆ ಆಡಳಿತ ಭಾಷೆಯೂ ಆಯಿತು. ದಕ್ಷಿಣದಲ್ಲಿಯೇ ಇದರ ಕಾವ್ಯ-ಪರಂಪರೆಯ ಆರಂಭವೂ ಆಯಿತು. ಹೀಗಾಗಿ, ದಖ್ಖನಿ ಅಥವಾ ಉರ್ದು ಸಾಹಿತ್ಯದ ಉಗಮ ದಕ್ಷಿಣದಲ್ಲೇ ಎನ್ನುತ್ತದೆ ಒಂದು ಗುಂಪು. ಇಂಡೋ-ಆರ್ಯನ್ ಭಾಷಾ ಕುಟುಂಬದ ಸದಸ್ಯವಾದ ಉರ್ದುವನ್ನು ಜಗತ್ತಿನಾದ್ಯಂತ, ಅದರಲ್ಲೂ ವಿಶೇಷವಾಗಿ ಉಪಖಂಡದಲ್ಲಿ ಸುಮಾರು 70 ಮಿಲಿಯನ್ ಜನರು ಪ್ರಥಮ ಭಾಷೆಯಾಗಿ ಮತ್ತು 100 ಮಿಲಿಯನ್‌ಗಿಂತಲೂ ಅಧಿಕ ಜನರ ಎರಡನೇ ಭಾಷೆಯಾಗಿ ಮಾತನಾಡುತ್ತಾರೆ. ಉರ್ದು ಪಾಕಿಸ್ತಾನದ ರಾಜ್ಯ ಭಾಷೆಯಾಗಿದ್ದು, ಭಾರತದ ಸಂವಿಧಾನದಲ್ಲಿ ಅಧಿಕೃತವಾಗಿ ಗುರುತಿಸಲ್ಪಟ್ಟಿದೆ. ಗಮನಾರ್ಹವೆಂದರೆ ಉರ್ದು ಮತ್ತು ಹಿಂದಿ ಪರಸ್ಪರ ಅರ್ಥವಾಗಿ, ನಿಕಟವಾದ ಭಾಷಾ ಸಂಬಂಧವನ್ನು ಹೊಂದಿವೆ. ಆರಂಭದಲ್ಲಿ ದೆಹಲಿ, ಇಂಡೋ-ಗಂಗಾ ಪ್ರಸ್ಥ ಪ್ರದೇಶದಲ್ಲಿ ಈ ಹೊಸ ಭಾಷೆ ದೇವನಾಗರಿಯಲ್ಲೇ ಬರೆಯಲ್ಪಡುತ್ತಿತ್ತು. ಈ ಲಿಪಿಯ ಗೊಂದಲದ ಕಾರಣಕ್ಕಾಗಿ, ಉರ್ದು ಸಾಹಿತ್ಯದ ಮೊದಲ ಕವಿ ಅಮೀರ್ ಖುಸ್ರೌ (1253-1325) ಎಂಬ ತಪ್ಪುಕಲ್ಪನೆ ಇದೆ. ಹೀಗಾಗಿ ಕೆಲವು ಉರ್ದು ಸಾಹಿತ್ಯಕಾರರ ಪ್ರಕಾರ ದಖ್ಖನಿನ ವಲಿ ಔರಂಗಾಬಾದಿ (1688-1741) ಕವಿಯೇ ಉರ್ದು ಕಾವ್ಯದ ಆದಿಕವಿ. ಆದರೆ ಕಲಬುರ್ಗಿಯ ಸೂಫಿ ಸಂತರಾದ ಹಝ್ರತ್ ಖ್ವಾಜಾ ಬಂದಾ ನವಾಝ್ ಗೇಸುದರಾಜರು ದಖ್ಖನಿ ಭಾಷೆಯ ಪ್ರಥಮ ಗದ್ಯ ಲೇಖಕರಾಗಿದ್ದಾರೆ.

ಉರ್ದು ಭಾಷೆ ಮತ್ತು ಭಾಷಿಕರು: ಅಂಕಿ-ಅಂಶ

2011ರ ಗಣತಿಯ ಪ್ರಕಾರ, ಭಾರತದಲ್ಲಿ ಒಟ್ಟು ಉರ್ದು ಭಾಷೆ ಮಾತನಾಡುವವರ ಸಂಖ್ಯೆ 5.07 ಕೋಟಿ ಆಗಿದ್ದು, ಇದು ಭಾರತದ ಒಟ್ಟು ಜನಸಂಖ್ಯೆಯ 4.19% ಆಗಿದೆ. ಈಗ ಈ ಸಂಖ್ಯೆಯು ಗಣನೀಯವಾಗಿ ಹೆಚ್ಚಿದೆ. ಇದು 7ನೇ ಅತ್ಯಧಿಕ ಮಾತನಾಡುವ ಭಾಷೆಯಾಗಿದ್ದು, ಕಾಶ್ಮೀರ, ಉತ್ತರ ಪ್ರದೇಶ, ಬಿಹಾರ, ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ, ಜಾರ್ಖಂಡ್, ಪಶ್ಚಿಮ ಬಂಗಾಳ ಹಾಗೂ ದೆಹಲಿ ಎನ್.ಸಿ.ಆರ್. ಮುಂತಾದ ರಾಜ್ಯಗಳಲ್ಲಿ ಎರಡನೇ ಭಾಷೆಯಾಗಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಉರ್ದು ಅಧಿಕೃತ ಸಂಪರ್ಕ ಭಾಷೆಯಾಗಿದ್ದು, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದಲ್ಲಿ ಹೆಚ್ಚುವರಿ ಅಧಿಕೃತ ಭಾಷೆಯಾಗಿರುತ್ತದೆ. ತೆಲಂಗಾಣ, ಉತ್ತರ ಪ್ರದೇಶ ಹಾಗೂ ಬಿಹಾರದಲ್ಲಿ ರಾಜ್ಯದ ದ್ವಿತೀಯ ಅಧಿಕೃತ ಭಾಷೆಯಾಗಿರುತ್ತದೆ.

2011ರ ಗಣತಿಯ ಪ್ರಕಾರ ಕರ್ನಾಟಕದಲ್ಲಿ ಸುಮಾರು 11% ಉರ್ದು ಭಾಷಿಕರಿದ್ದು, ಇವರ ಜನಸಂಖ್ಯೆ 6.61 ಮಿಲಿಯನ್ (66 ಲಕ್ಷ) ಇರುತ್ತದೆ.

ಕರ್ನಾಟಕದಲ್ಲಿ ಉರ್ದು ಭಾಷಿಕರ ಸಂಖ್ಯೆ ಬೀದರ, ಕಲಬುರ್ಗಿ, ವಿಜಯಪುರ, ಧಾರವಾಡ ಜಿಲ್ಲೆಗಳಲ್ಲಿ 11 ರಿಂದ 20 ಪ್ರತಿಶತ ಇದೆ. ಉತ್ತರ ಕರ್ನಾಟಕದ ಕಲಬುರ್ಗಿ, ಬೀದರ, ರಾಯಚೂರ, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಬಹಮನಿ ಮತ್ತು ಆಸಿಫ್‌ಜಾಹಿ ಆಳ್ವಿಕೆಯಲ್ಲಿ ದಖನಿ/ಉರ್ದು ಭಾಷೆ ಅಧಿಕೃತ ಆಡಳಿತ ಭಾಷೆಯಾಗಿತ್ತು. ಹೀಗಾಗಿ ಪ್ರಸ್ತುತ ಕನ್ನಡ ಭಾಷೆಯ ಮೇಲೆ ಉರ್ದು ಭಾಷೆಯ ದಟ್ಟವಾದ ಪ್ರಭಾವವನ್ನು ಕಾಣಬಹುದಾಗಿದೆ. ಆಡಳಿತ ಕನ್ನಡ ಬಹುತೇಕ ಪದಕೋಶವು ಉರ್ದುವಿನ ಶಬ್ದ ಸಂಪತ್ತಿನಿಂದ ಸಹಜವಾಗಿದೆ. ಪ್ರಸಿದ್ಧ ಇತಿಹಾಸಕಾರರು ಹಾಗೂ ಸಂಶೋಧಕರೂ ಆದ ಡಾ. ಕೃಷ್ಣ ಕೋಲಾರ ಕುಲಕರ್ಣಿಯವರ ಪ್ರಕಾರ ಕನ್ನಡ ಭಾಷೆಯಲ್ಲಿ ಸುಮಾರು 35 ಪ್ರತಿಶತ ಉರ್ದು ಪಾರಿಭಾಷಿಕ ಶಬ್ದಗಳಿವೆ.

ಸಾಮರಸ್ಯ – ಸೌಹಾರ್ದತೆಯ ಭಾಷೆ: ಉರ್ದು 

ಉರ್ದು ಭಾಷೆಯು ಬಹುಸಂಖ್ಯಾತ ಮುಸ್ಲಿಮರ ಆಡು ಭಾಷೆಯಾಗಿದ್ದರೂ, ಹತ್ತೊಂಬತ್ತು ಮತ್ತು ಇಪ್ಪತ್ತನೆಯ ಶತಮಾನದಲ್ಲಿ ಹಿಂದೂ-ಮುಸ್ಲಿಮರೆಲ್ಲರೂ ಭಾರತದಾದ್ಯಂತ ಸಹಜವಾಗಿ ಈ ಭಾಷೆಯನ್ನು ಬಳಸುತ್ತಿದ್ದರು. ಮಹಾತ್ಮಾ ಗಾಂಧಿಯವರ ಪತ್ರ-ವ್ಯವಹಾರ, ಜವಾಹರ್ ಲಾಲ್ ನೆಹರೂ ಅವರ ವಿವಾಹದ ಆಮಂತ್ರಣ ಪತ್ರಿಕೆ, ಭಗತ್ ಸಿಂಗ್‌ರವರ ಪತ್ರ-ವ್ಯವಹಾರ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಮುಂತಾದವರು ಉರ್ದುವಿನಲ್ಲಿ ಪತ್ರ-ವ್ಯವಹಾರ ಮಾಡಿದ್ದು ದಾಖಲೆಗಳಿಂದ ಕಾಣಬಹುದಾಗಿದೆ.

ಸ್ವಾತಂತ್ರ್ಯ ಚಳುವಳಿಯಲ್ಲಿ ಉರ್ದು ಭಾಷೆ ಅತ್ಯಂತ ಪ್ರಮುಖ ಪಾತ್ರ ನಿರ್ವಹಿಸಿದೆ. ರಾಮ್ ಪ್ರಸಾದ್ ಬಿಸ್ಮಿಲ್‌ರ ʻಸರ್ಫರೋಶಿ ಕೀ ತಮನ್ನಾ ಅಬ್ ಹಮಾರೇ ದಿಲ್ ಮೇ ಹೈʼ ಗಝಲ್ ಅಜರಾಮರ ಉರ್ದು ಕ್ರಾಂತಿ ಗೀತೆಯಾಗಿದೆ. ಅದಲ್ಲದೆ ಪ್ರೇಮ್ ಚಂದ್, ಕೃಷ್ಣನ್ ಚಂದರ್, ರಾಜೇಂದರ್ ಸಿಂಗ್ ಬೇದಿ, ಜೋಗಿಂದರ್ ಪಾಲ್, ಗುಲ್ಝಾರ್, ರಮಾನಂದ ಸಾಗರ್, ಕನ್ಹಯಾ ಲಾಲ್ ಕಪೂರ್, ಜಗನ್ನಾಥ್ ಆಝಾದ್, ದಯಾ ಶಂಕರ್ ನಸೀಮ್, ಕೃಷ್ಣ ಕುಮಾರ್ ತೂರ್, ಚಂದ್ರಭಾನ್ ಖಯಾಲ್, ಆನಂದ್ ಮೋಹನ್, ಗುಲ್ಝಾರ್ ದೆಹಲವಿ, ರಘುಪತ್ ಸಹಾಯ್ ಫಿರಾಖ್ ಗೋರಖ್‌ಪುರಿ, ರಾಮಲಾಲ್ ಇತ್ಯಾದಿಗಳ ಮುಸ್ಲಿಮೇತರ ಕವಿಗಳು, ಸಾಹಿತಿಗಳ ಅತಿ ದೊಡ್ಡ ಪಟ್ಟಿ ಇದೆ. ಉರ್ದು ಭಾಷೆಗೆ ದೊರೆತ ಐದು ಜ್ಞಾನಪೀಠ ಪ್ರಶಸ್ತಿಗಳಲ್ಲಿ, ಎರಡು ಪ್ರಶಸ್ತಿಗಳು, ರಘುಪತ್ ಸಹಾಯ್ ಫಿರಾಖ್ ಗೋರಖ್‌ಪುರಿ ಮತ್ತು ಸಮರಸಿಂಗ್ ಕಾರ್ಲಾ ಇವರಿಗೆ ಕ್ರಮವಾಗಿ 1969 ಮತ್ತು 2023ರಲ್ಲಿ ಸಿಕ್ಕಿರುತ್ತದೆ. ಹೀಗಾಗಿ ಉರ್ದು ಭಾಷೆಯು ಕೇವಲ ಮುಸ್ಲಿಮರದ್ದು ಆಗದೆ, ಮುಸ್ಲಿಮೇತರ ಭಾಷೆಯೂ ಆಗಿದ್ದು ಇದರಿಂದ ವೇದ್ಯವಾಗುತ್ತದೆ. ಕರ್ನಾಟಕದಲ್ಲಿ ರಾಘವೇಂದ್ರ ಜಬ್ಬ್ ಆಲಂಪೂರಿ, ಸಿದ್ದಯ್ಯಾ ಪುರಾಣಿಕ್ ಕಾವ್ಯಾನಂದ, ಡಾ. ಮುದ್ದಣ್ಣ ಮಂಜರ್, ಅನಿಲ್ ಠಕ್ಕರ್, ಶಾಂತರಸ ಮುಂತಾದವರು ಉರ್ದು ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ.

ಉರ್ದು ಮತ್ತು ಹಿಂದಿ ಚಿತ್ರರಂಗ

ಹಿಂದಿ ಚಿತ್ರರಂಗವೆನಿಸುವ ಭಾರತದ ಚಿತ್ರರಂಗವು ಮೂಲತಃ ಉರ್ದು ಚಿತ್ರರಂಗವಾಗಿದೆ. ಆಧುನಿಕ ಬಾಲಿವುಡ್‌ಗೆ ಹಿಂದಿ-ಉರ್ದು ಮಿಶ್ರಿತ ʻಹಿಂದೂಸ್ತಾನಿʼ ಎನ್ನುವ ಸಂಸ್ಕೃತಿ ನೀಡಿರುವ ಕೊಡುಗೆ ಸಂಕೀರ್ಣವಾದುದ್ದು. ಉರ್ದು ಗಝಲ್‌ಗಳು, ಸೂಫಿ ಗಝಲ್‌ಗಳು, ಉರ್ದು ಗಾದೆಗಳು ಬಾಲಿವುಡ್‌ನ ಜನಪ್ರಿಯತೆಗೆ ಅತ್ಯಂತ ಆವಶ್ಯಕವೆನಿಸಿವೆ. ಉರ್ದುವಿನ ಪದಗಳಾದ ಇಷ್ಕ್, ಮೊಹಬ್ಬತ್, ವಫಾ, ಬೇವಫಾಯಿ, ಖ್ವಾಬ್, ಜುನೂನ್, ದಿಲ್ ಇತ್ಯಾದಿಗಳು ಹಿಂದಿ ಸಿನಿಮಾದ ಆಕರ್ಷಕ ಶೀರ್ಷಿಕೆಗಳಾಗಿವೆ.

ಹಿಂದಿ-ಚಲನಚಿತ್ರ ರಂಗಕ್ಕೆ ಉರ್ದು ಕವಿ-ಸಾಹಿತಿಗಳ ಕೊಡುಗೆ ಅನುಪಮವಾದದ್ದು. ಉರ್ದು ಗಝಲ್ ಮತ್ತು ಗೀತೆಗಳ ರೂಪಕಗಳು, ಕಲ್ಪನೆಗಳು ಜನಪ್ರಿಯವಾಗಿ, ಸಿನಿಮಾದಲ್ಲಿ ಚೆಲವು, ದುಃಖ, ಅಸಹಾಯಕತೆ, ಪ್ರೇಮ, ವಿರಹ, ಮಾಧುರ್ಯವನ್ನು ಸಮರ್ಥವಾಗಿ ಚಿತ್ರಿಸಿ, ಜನಮಾನಸದ ಭಾವನೆಗಳನ್ನು ಅಭಿವ್ಯಕ್ತಿಗೊಳಿಸಿ ಚಿರಂತನವಾಗಿವೆ. ಉರ್ದು ಭಾಷೆಯು ಜನಸಾಮಾನ್ಯರ ಭಾಷೆಯಾಗಿ, ಹಿಂದಿ ಚಿತ್ರರಂಗವನ್ನು ಇನ್ನೂ ಜನರ ಸಮೀಪಕ್ಕೆ ತರಲು ತನ್ನದೇ ವಿಶಿಷ್ಟ ಕೊಡುಗೆಯನ್ನು ನೀಡಿದೆ. ಹೀಗಾಗಿ ಸಾಹಿರ್ ಲುಧಿಯಾನ್ವಿ, ಕೈಫಿ ಆಜ್ಮಿ, ಶಕೀಲ್ ಬದಾಯೂನಿ, ಮಜ್ರೂಹ್ ಸುಲ್ತಾನ್‌ಪುರಿ, ಮಜೂಹ್, ಜಾವೇದ್ ಅಖ್ತರ್, ರಾಹಿ ಮಾಸೂಮ್ ರಝಾ ಇವರುಗಳ ಉರ್ದು ಕಾವ್ಯ, ಗದ್ಯ, ಸಂಭಾಷಣೆ ಚಿತ್ರರಂಗಕ್ಕೆ ತನ್ನದೇ ಶ್ರೀಮಂತಿಕೆಯನ್ನು ನೀಡಿದೆ.

ಇಂತಹ ಕೋಮಲ, ಸುಂದರ ಹಾಗೂ ಅತ್ಯಂತ ಕಾವ್ಯಮಯ ಅಪ್ಪಟ ಭಾರತೀಯ ಭಾಷೆ ದಿನದಿಂದ ದಿನಕ್ಕೆ ಸೊರಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಅದಕ್ಕೆ ಸರ್ಕಾರದಿಂದ ಸಿಗಬೇಕಾದಂತಹ ಪ್ರೋತ್ಸಾಹ ದೊರೆಯುತ್ತಿಲ್ಲ. ಉರ್ದು ಶಾಲೆಗಳ ಸ್ಥಿತಿ, ಶಿಕ್ಷಕರು ಮತ್ತು ಸಂಪನ್ಮೂಲದ ತೀವ್ರ ಕೊರತೆಯಿಂದ ಉರ್ದು ಭಾಷೆಯ ಸ್ಥಿತಿ ಅತ್ಯಂತ ಶೋಚನೀಯವಾಗಿದೆ. ಹೀಗಾಗಿ ಉರ್ದು ಶಾಲೆಗಳ ಅಭಿವೃದ್ಧಿ ಹಾಗೂ ಉರ್ದು ಭಾಷೆಯ ಸುಧಾರಣೆಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದು, ಸರಕಾರ ಮತ್ತು ಉರ್ದು ಭಾಷಿಕರ ಇಂದಿನ ಗುರುತರ ಜವಾಬ್ದಾರಿಯಾಗಿದೆ. ಉರ್ದು ಭಾಷೆಯನ್ನು ಕರ್ನಾಟಕದಲ್ಲಿ ಎರಡನೇ ಭಾಷೆಯಾಗಿ ಘೋಷಿಸಿ, ಅದರ ಸರ್ವತೋರ್ಮುಖ ಅಭಿವೃದ್ಧಿಗೆ ಪ್ರಯತ್ನಿಸುವುದು ಅತೀವ ಆವಶ್ಯಕವಾಗಿದೆ.