ಸನ್ಮಾರ್ಗ ವಾರ್ತೆ
ಹೊಸದೆಹಲಿ: ಜುಲೈ ತಿಂಗಳಲ್ಲಿ ಯುವಕರ ಪ್ರತಿಭಟನೆಯ ವೇಳೆ ವಿದ್ಯಾರ್ಥಿ ಕಾರ್ಯಕರ್ತೆಯೊಬ್ಬರ ತಂದೆಯ ಮೇಲೆ ಹಲ್ಲೆ ನಡೆಸಿದ ಆರೋಪಿ ಹಿಂದುತ್ವ ಇನ್ಫ್ಲೂಯೆನ್ಸರ್ಗೆ ದೆಹಲಿ ನ್ಯಾಯಾಲಯವು ಮಂಗಳವಾರ ಜಾಮೀನು ಮಂಜೂರು ಮಾಡಿದೆ ಎಂದು ‘ಲೈವ್ ಲಾ’ ವರದಿ ಮಾಡಿದೆ.
ಸೆಪ್ಟೆಂಬರ್ 15 ರಂದು ಸ್ವತಂತ್ರ ಭಾರದ್ವಾಜ್ ಅವರಿಗೆ ಮೂರು ವಾರಗಳ ಮಧ್ಯಂತರ ಜಾಮೀನು ನೀಡಲಾಗಿತ್ತು. ಅವರ ಅರ್ಜಿಯ ವಿಚಾರಣೆ ನಡೆಸುವ ವೇಳೆ, ದೆಹಲಿ ಪೊಲೀಸರ ತನಿಖೆಯಲ್ಲಿ ಲೋಪಗಳಿವೆ ಎಂದು ನ್ಯಾಯಾಲಯವು ಗಮನಿಸಿತ್ತು ಮತ್ತು ತನಿಖಾ ಅಧಿಕಾರಿಗೆ ಸ್ಥಿತಿ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿತ್ತು.
ಜುಲೈ 23 ರಂದು ಸ್ಪರ್ಧಾತ್ಮಕ ಪರೀಕ್ಷೆಗಳ ಅಕ್ರಮಗಳ ವಿರುದ್ಧ ಜಂತರ್ ಮಂತರ್ನಲ್ಲಿ ನಡೆದ ಪ್ರತಿಭಟನೆಯ ವೇಳೆ ವಿದ್ಯಾರ್ಥಿ ಕಾರ್ಯಕರ್ತೆ ನಿಶು ಆಜಾದ್ ಅವರ ತಂದೆ ಸಂಜಯ್ ಕುಮಾರ್ ಅವರ ಮೇಲೆ ಹಲ್ಲೆ ನಡೆಸಲಾಗಿತ್ತು.
ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಸಚಿವ ಕಪಿಲ್ ಮಿಶ್ರಾ ಅವರ ದೂರವಾಣಿ ಕರೆಯಿಂದಾಗಿ ತಾನು ಬಂಧನದಿಂದ ತಪ್ಪಿಸಿಕೊಂಡಿರುವುದಾಗಿ ಹೇಳಿಕೊಂಡಿರುವ ವಿಡಿಯೋ ವೈರಲ್ ಆದ ಬಳಿಕ ಸೆಪ್ಟೆಂಬರ್ 4 ರಂದು ಸ್ವತಂತ್ರ ಭಾರದ್ವಾಜ್ ಅವರನ್ನು ವಶಕ್ಕೆ ಪಡೆಯಲಾಗಿತ್ತು.
ಸಂಜಯ್ ಕುಮಾರ್ ಅವರ “ತಲೆಯನ್ನು ಒಡೆದಿದ್ದರೂ” ತಾನು ಜೈಲಿಗೆ ಹೋಗಿಲ್ಲ ಎಂದು ಹೇಳಿಕೊಳ್ಳುವುದನ್ನು ಆ ವೈರಲ್ ವಿಡಿಯೋ ತೋರಿಸಿದೆ. ಇದು ವ್ಯಾಪಕವಾಗಿ ಹಂಚಿಕೆಯಾದ ಬಳಿಕ, ಭಾರದ್ವಾಜ್ ವಿರುದ್ಧ ಪ್ರಕರಣ ದಾಖಲಿಸಲಾಯಿತು.
ಪ್ರಥಮ ಮಾಹಿತಿ ವರದಿಯಲ್ಲಿ (ಎಫ್ಐಆರ್) ಕೊಲೆ ಯತ್ನಕ್ಕೆ ಸಂಬಂಧಿಸಿದ ನಿಬಂಧನೆಗಳ ಅಡಿಯಲ್ಲಿ ಆರೋಪಗಳನ್ನು ಸೇರಿಸಬೇಕೆಂದು ಒತ್ತಾಯಿಸಿ ‘ಕಾಕ್ರೋಚ್ ಜನತಾ ಪಾರ್ಟಿ’ ರಾಜಕೀಯ ಅಭಿಯಾನದ ಸದಸ್ಯರು ಸೆಪ್ಟೆಂಬರ್ 4 ರಂದು ದೆಹಲಿಯ ಸಂಸತ್ ರಸ್ತೆ ಪೊಲೀಸ್ ಠಾಣೆಯ ಹೊರಗೆ ಪ್ರತಿಭಟನೆ ನಡೆಸಿದರು.
ಆ ಬೆನ್ನಲ್ಲೇ, ಪೊಲೀಸರು ಭಾರದ್ವಾಜ್ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯಗಳ ತಡೆ) ಕಾಯ್ದೆಯ ವಿಭಾಗಗಳು ಹಾಗೂ ಕ್ರಿಮಿನಲ್ ಬೆದರಿಕೆ ಹಾಕಿದ ಆರೋಪದ ಅಡಿಯಲ್ಲಿ ಪ್ರಕರಣ ದಾಖಲಿಸಿದರು.
ತಾನು ಆತ್ಮರಕ್ಷಣೆಗಾಗಿ ವರ್ತಿಸಿದ್ದೆಂದೂ, ಹಾಗೆ ಮಾಡದಿದ್ದರೆ “ಗುಂಪಿನಿಂದ ಹತ್ಯೆಗೀಡಾಗುತ್ತಿದ್ದೆ ಅಥವಾ ಕೊಲ್ಲಲ್ಪಡುತ್ತಿದ್ದೆ” ಎಂದೂ ಭಾರದ್ವಾಜ್ ವಾದ ಮಾಡಿದ್ದಾರೆ.












