ನೀರಿನ ಜಗಳ: ಧಾಟಿ ಬದಲಿಸಿದ ಬಾಂಗ್ಲಾದೇಶ

0
127

ಸನ್ಮಾರ್ಗ ವಾರ್ತೆ

ಢಾಕ: ಭಾರತದೊಂದಿಗೆ ನೀರಿನ ಹಂಚಿಕೆಗೆ ಸಂಬಂಧಿಸಿದ ವಿಚಾರದಲ್ಲಿ ಬಾಂಗ್ಲಾದೇಶ ಧಾಟಿ ಬದಲಿಸಿದೆ. ಎರಡು ದೇಶಗಳ ನಡುವೆ ಇರುವ ನೀರಿನ ಸಮಸ್ಯೆಗಳಿಗೆ ಚರ್ಚೆಯ ಮೂಲಕ ರಾಜತಾಂತ್ರಿಕ ಪರಿಹಾರ ಕಂಡು ಕೊಳ್ಳಬೇಕು ಎಂದು ಬಾಂಗ್ಲಾದೇಶದ ವಿದೇಶಾಂಗ ರಾಜ್ಯ ಸಚಿವ ಹುಮಾಯೂನ್ ಕಬೀರ್ ಹೇಳಿದರು. ಇದಕ್ಕಾಗಿ ಎರಡು ದೇಶಗಳ ನಡುವೆ ರಾಜಕೀಯ ಇಚ್ಛಾಶಕ್ತಿ ಮತ್ತು ಪರಸ್ಪರ ಸಹಕಾರ ಅತ್ಯವಶ್ಯಕ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಎರಡೂ ದೇಶಗಳ ನಾಯಕರು ಪರಸ್ಪರ ಸಹಕರಿಸಿ ಮುಂದೆ ಸಾಗುವುದಾದರೆ ಅದಕ್ಕೆ ಬಲವಾದ ರಾಜಕೀಯ ಇಚ್ಛಾಶಕ್ತಿ ಮತ್ತು ಪ್ರಾಮಾಣಿಕತೆ ಇರಬೇಕಾಗುತ್ತದೆ. ಹೀಗೆ ಆದರೆ ಮಾತ್ರ ಚರ್ಚೆಯಲ್ಲಿ ಪ್ರಗತಿ ಕಾಣಬಹುದು ಎಂದರು.

ಭಾರತ ಮತ್ತು ಬಾಂಗ್ಲಾದೇಶಗಳಲ್ಲಿ ಹರಿಯುವ ನದಿಗಳು ಮತ್ತು ಗಂಗಾ ನದಿಯ ನೀರು ಹಂಚಿಕೆ ಒಪ್ಪಂದದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸುತ್ತ ಮೇಲಿನಂತೆ ಹೇಳಿದ್ದಾರೆ. ಭಾರತ ಮತ್ತು ಬಾಂಗ್ಲಾದೇಶಗಳ ನಡುವೆ ಸಂವಾದ ನಡೆಯುತ್ತಿದೆ. ಪ್ರಾದೇಶಿಕ ಸಹಕಾರವನ್ನು ಬಲಪಡಿಸುವ ನಿಟ್ಟಿನಲ್ಲಿ ಎರಡೂ ದೇಶಗಳ ಹಿರಿಯ ಅಧಿಕಾರಿಗಳು ಹಾಗೂ ನಾಯಕರ ಮಟ್ಟದಲ್ಲಿ ನದಿ ನೀರಿನ ಕುರಿತಂತೆ ಚರ್ಚೆಗಳು ನಡೆಯುತ್ತಿವೆ. ಅದರೆ ಚರ್ಚೆಯಲ್ಲಿ ಪ್ರಾಮಾಣಿಕತೆ ಮುಖ್ಯ. ಹೀಗೆ ನಡೆದರೆ ಸಕಾರಾತ್ಮಕ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಹುಮಾಯೂನ್ ಕಬೀರ್ ಹೇಳಿದರು.