✒ ಮಿಷಲ್
ಅಕ್ಟೋಬರ್ 10 ಶನಿವಾರದಂದು ಜಂತರ್ ಮಂತರ್ ನಲ್ಲಿ ಎಸ್ಐಆರ್ ವಿರೋಧಿ ಮತ್ತು ಜ್ಞಾನೇಶ್ ಕುಮಾರ್ ರಾಜೀನಾಮೆಯನ್ನು ಆಗ್ರಹಿಸಿ ನಡೆಯಲಿರುವ ಪ್ರತಿಭಟನೆಯನ್ನು ತಡೆಯಲು ಕೇಂದ್ರ ಸರಕಾರ ಹತಾಶ ಯತ್ನಕ್ಕೆ ಇಳಿದಿದೆ. ಮುಸ್ಲಿಮರನ್ನು ಗುರಿಯಾಗಿರಿಸಿ ಬೆದರಿಸುವ ಹೆದರಿಸುವ ಮತ್ತು ಪ್ರತಿಭಟನೆಯಲ್ಲಿ ಸೇರದಂತೆ ತಡೆಯುವ ಅತಿಹೀನ ತಂತ್ರವನ್ನು ಪ್ರಯೋಗಿಸತೊಡಗಿದೆ. ಇದರ ಭಾಗವಾಗಿ ದೆಹಲಿಯ ಮಸೀದಿಗಳಿಗೆ ಪೊಲೀಸರು ತೆರಳಿದ್ದಾರೆ. ನಮಾಜ್ ಗಾಗಿ ಬಂದ ಭಕ್ತರ ಮುಂದೆ ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಆದೇಶ ರೂಪದ ಮನವಿ ಮಾಡಿದ್ದಾರೆ. ಮಸೀದಿಯ ಮೈಕ್ ಬಳಸಿ ಈ ಅಧಿಕಾರಿಗಳು ಮಾತಾಡಿದ್ದಾರೆ. ನೀವಾಗಲಿ ನಿಮ್ಮ ಸ್ನೇಹಿತರು ಕುಟುಂಬಸ್ಥರಾಗಲಿ ಅಥವಾ ಮಕ್ಕಳಾಗಲಿ ಅನಗತ್ಯವಾಗಿ ಪ್ರತಿಭಟನ ಗುಂಪು ಸೇರದಂತೆ ತಡೆಯಲು ವಿನಂತಿಸಿದ್ದಾರೆ. ಇವರಾರನ್ನೂ ಜಂತರ್ ಮಂತರ್ ಪ್ರತಿಭಟನೆಗೆ ಹೋಗಲು ಅನುಮತಿಸಬಾರದು ಎಂದು ಮುಸ್ಲಿಮರಿಗೆ ಸೂಚಿಸಿದ್ದಾರೆ. ಈ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹಂಚಿಕೆಯಾಗಿದೆ.
ವಿಶೇಷ ಏನಂದ್ರೆ ಎಸ್ಐಆರ್ ಪ್ರಕ್ರಿಯೆಯ ಮೂಲಕ ಮತದಾರರ ಪಟ್ಟಿಯಿಂದ ಮುಸ್ಲಿಮರ ಹೆಸರನ್ನು ಅತ್ಯಧಿಕವಾಗಿ ಕಿತ್ತು ಹಾಕಲಾಗಿದೆ ಎಂಬ ಅಭಿಪ್ರಾಯ ಇದೆ. ಪಶ್ಚಿಮ ಬಂಗಾಳದಲ್ಲಿ 90 ಲಕ್ಷ ಮಂದಿಯನ್ನು ಪಟ್ಟಿಯಿಂದ ಹೊರಹಾಕಲಾಗಿದೆ. ಇವರಲ್ಲಿ ದೊಡ್ಡ ಸಂಖ್ಯೆಯಲ್ಲಿ ಮುಸ್ಲಿಮರಿದ್ದಾರೆ. ಕರ್ನಾಟಕದಲ್ಲಿ ಮುಸ್ಲಿಮರ ಹೆಸರನ್ನು ಕಿತ್ತು ಹಾಕುವಂತೆ ಫಾರ್ಮ ಸೆವೆನ್ ಮೂಲಕ ಬಿಜೆಪಿ ಅರ್ಜಿ ಸಲ್ಲಿಸಿರುವುದು ಈಗಾಗಲೇ ವಿವಾದಕ್ಕೆ ಗುರಿಯಾಗಿದೆ. ಅನೇಕ ಬಿಜೆಪಿ ಕಾರ್ಯಕರ್ತರ ಮೇಲೆ ಎಫ್ ಐ ಆರ್ ದಾಖಲಾಗಿದೆ. ವಿಜಯಪುರದ ಶಾಸಕ ಬಸವನಗೌಡ ಯತ್ನಾಳ್ ಅವರು ಎಂಟು ಮಂದಿ ಮುಸ್ಲಿಮರ ಡೆತ್ ಸರ್ಟಿಫಿಕೇಟ್ ಪ್ರದರ್ಶಿಸಿ ಇವರ ಹೆಸರನ್ನು ಪಟ್ಟಿಯಿಂದ ಹೊರಹಾಕಬೇಕು ಎಂದು ಪತ್ರಿಕಾಗೋಷ್ಠಿ ಕರೆದು ಆಗ್ರಹಿಸಿದ್ದಾರೆ. ಆದರೆ ಆ ಎಂಟು ಮಂದಿ ತಾವು ಜೀವಂತ ಇದ್ದೇವೆ ಎಂಬುದನ್ನು ಜಿಲ್ಲಾಧಿಕಾರಿಗೆ ಮನವರಿಕೆ ಮಾಡಿದ್ದಾರೆ.
ಬಿಹಾರ ಮಹಾರಾಷ್ಟ್ರ ಉತ್ತರ ಪ್ರದೇಶ ಸಹಿತ ದೇಶದ ವಿವಿಧ ಭಾಗಗಳಲ್ಲಿ ಎಸ್ಐಆರ್ ಪ್ರಕ್ರಿಯೆ ಮೂಲಕ ಮುಸ್ಲಿಮರಿಗೆ ಆಗಿರುವ ತೊಂದರೆಯನ್ನು ಮಾಧ್ಯಮಗಳು ವರದಿ ಮಾಡುತ್ತಿವೆ.
ಹೀಗಿರುವಾಗ ಎಸ್ಐಆರ್ ವಿರೋಧಿ ಪ್ರತಿಭಟನೆಯಲ್ಲಿ ಮುಸ್ಲಿಮರು ಭಾಗವಹಿಸಬಾರದು ಎಂದು ಹೇಳಿದರೆ ಏನು ಅರ್ಥ ಇದೆ?
ಮುಸ್ಲಿಮರಿಗೆ ಪ್ರಭುತ್ವದಿಂದ ಅನ್ಯಾಯ ಆಗಿದೆ, ಚುನಾವಣಾ ಆಯೋಗ ಪಕ್ಷಪಾತಿಯಾಗಿ ವರ್ತಿಸಿದೆ, ಮುಸ್ಲಿಮರ ಹೆಸರನ್ನು ಮತದಾರರ ಪಟ್ಟಿಯಿಂದ ಉದ್ದೇಶಪೂರ್ವಕ ಕಿತ್ತು ಹಾಕಲಾಗುತ್ತಿದೆ ಎಂಬ ಆರೋಪ ಬಲವಾಗಿದೆ. ಇಂಥ ಸಮಯದಲ್ಲಿ ಮುಸ್ಲಿಮರು ಪ್ರತಿಭಟಿಸದಿದ್ದರೆ ಅದರ ಅರ್ಥ ಏನು? ಅವರನ್ನು ಪ್ರತಿಭಟನೆಯಿಂದ ತಡೆಯುವುದೆಂದರೆ ಅದರ ಅರ್ಥ ಏನು?
ಮಸೀದಿಗೆ ತೆರಳಿ ಪೊಲೀಸ್ ಅಧಿಕಾರಿಗಳು ಮುಸ್ಲಿಮರನ್ನು ಒಂದು ರೀತಿಯಲ್ಲಿ ಬೆದರಿಸುವ ತಂತ್ರವನ್ನು ಮಾಡುತ್ತಿದ್ದಾರೆ. ನಿಮಗೆ ಅನ್ಯಾಯ ಆಗಿದ್ದರೂ ನೀವು ಪ್ರತಿಭಟಿಸಬಾರದು ಎಂದು ಪರೋಕ್ಷವಾಗಿ ಸೂಚಿಸುತ್ತಿದ್ದಾರೆ. ಇದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ದೆಹಲಿಯ ಆಮ್ ಆದ್ಮಿ ಪಾರ್ಟಿ, ಪೊಲೀಸ್ ಅಧಿಕಾರಿಗಳ ಈ ವರ್ತನೆಗೆ ತೀವ್ರ ಅಕ್ರೋಶ ವ್ಯಕ್ತಪಡಿಸಿದೆ.












