ಜಾಮೀನು ನಿಬಂಧನೆಗಳಲ್ಲಿ ಸಡಿಲಿಕೆ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಪತ್ರಕರ್ತ ಸಿದ್ದಿಕ್ ಕಪ್ಪನ್

0
192

ಸನ್ಮಾರ್ಗ ವಾರ್ತೆ

ಪತ್ರಕರ್ತ ಸಿದ್ದಿಕ್ ಕಪ್ಪನ್ ಅವರು ತಮ್ಮ ಜಾಮೀನು ನಿಬಂಧನೆಗಳಲ್ಲಿ ಸಡಿಲಿಕೆ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಸೌದಿ ಅರೇಬಿಯಾಕ್ಕೆ ಉಮ್ರಾ ತೀರ್ಥಯಾತ್ರೆಗಾಗಿ ತಾತ್ಕಾಲಿಕವಾಗಿ ಪಾಸ್‌ಪೋರ್ಟ್ ಬಿಡುಗಡೆ ಮಾಡುವುದು, ತಮ್ಮ ವೇತನ ಹಾಗೂ ಭವಿಷ್ಯ ನಿಧಿ (ಪಿಎಫ್) ಖಾತೆಗಳಿಗೆ ಪ್ರವೇಶ ಕಲ್ಪಿಸುವುದು ಮತ್ತು ತನಿಖೆಯ ಸಂದರ್ಭದಲ್ಲಿ ವಶಪಡಿಸಿಕೊಂಡ ವೈಯಕ್ತಿಕ ಸಾಮಗ್ರಿಗಳನ್ನು ಹಿಂತಿರುಗಿಸುವಂತೆ ಅವರು ಕೋರಿದ್ದಾರೆ.

ಅವರ ಅರ್ಜಿಯು ಇಂದು, ಅಕ್ಟೋಬರ್ 12 ರ ಸೋಮವಾರದಂದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಪಟ್ಟಿಯಾಗಿದೆ ಎಂದು ಅವರ ವಕೀಲರು ತಿಳಿಸಿರುವುದಾಗಿ ವರದಿಯಾಗಿದೆ.

ಹತ್ರಾಸ್ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವರದಿ ಮಾಡಲು ಪ್ರಯಾಣಿಸುತ್ತಿದ್ದಾಗ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿ (ಯುಎಪಿಎ) ಬಂಧನಕ್ಕೊಳಗಾಗಿ ಉತ್ತರ ಪ್ರದೇಶದ ಜೈಲಿನಲ್ಲಿ ಎರಡು ವರ್ಷಗಳಿಗೂ ಹೆಚ್ಚು ಕಾಲ ಕಳೆದ ನಂತರ ಕಪ್ಪನ್ ಅವರು ಫೆಬ್ರವರಿ 2023 ರಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.

ಅವರ ಬಂಧನ ಮತ್ತು ದೀರ್ಘಕಾಲದ ಸೆರೆವಾಸವು ಪತ್ರಕರ್ತರು, ಪತ್ರಿಕಾ ಸ್ವಾತಂತ್ರ್ಯ ಸಂಘಟನೆಗಳು ಮತ್ತು ಮಾನವ ಹಕ್ಕುಗಳ ಗುಂಪುಗಳಿಂದ ವ್ಯಾಪಕ ಟೀಕೆಗಳಿಗೆ ಗುರಿಯಾಗಿತ್ತು. ಪತ್ರಿಕೋದ್ಯಮದ ಅಪರಾಧೀಕರಣ, ಪತ್ರಿಕಾ ಸ್ವಾತಂತ್ರ್ಯಕ್ಕೆ ಎದುರಾದ ಬೆದರಿಕೆಗಳು ಮತ್ತು ಮುಸ್ಲಿಂ ವಿರೋಧಿ ಪಕ್ಷಪಾತದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.

ತಮ್ಮ ಇತ್ತೀಚಿನ ಅರ್ಜಿಯಲ್ಲಿ, ಕಪ್ಪನ್ ಅವರು ನವೀಕರಣಕ್ಕಾಗಿ ತಮ್ಮ ಪಾಸ್‌ಪೋರ್ಟ್ ಅನ್ನು ತಾತ್ಕಾಲಿಕವಾಗಿ ಬಿಡುಗಡೆ ಮಾಡಲು ಮತ್ತು ಸೌದಿ ಅರೇಬಿಯಾದ ಮಕ್ಕಾ ಹಾಗೂ ಮದೀನಾಕ್ಕೆ ಎರಡು ವಾರಗಳ ಉಮ್ರಾ ತೀರ್ಥಯಾತ್ರೆ ಕೈಗೊಳ್ಳಲು ಅನುಮತಿ ಕೋರಿದ್ದಾರೆ. ಮರಳಿದ ನಂತರ ಪಾಸ್‌ಪೋರ್ಟ್ ಅನ್ನು ಮರುಠೇವಣಿ ಮಾಡುವುದಾಗಿ ಅವರು ತಿಳಿಸಿದ್ದಾರೆ.

ತಮ್ಮ ವೇತನ ಖಾತೆ ಹಾಗೂ ಭವಿಷ್ಯ ನಿಧಿ ಮತ್ತು ನೌಕರರ ಭವಿಷ್ಯ ನಿಧಿ ಸಂಘಟನೆಗೆ (ಇಪಿಎಫ್‌ಒ) ಸಂಬಂಧಿಸಿದ ಸೌಲಭ್ಯಗಳ ಖಾತೆ ಸೇರಿದಂತೆ ಎರಡು ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡುವುದರಿಂದ ಮುಕ್ತಗೊಳಿಸುವಂತೆ ಅವರು ಕೋರಿದ್ದಾರೆ.

ಅರ್ಜಿಯ ಪ್ರಕಾರ, ಈ ಖಾತೆಗಳನ್ನು ಫ್ರೀಝ್‌ ಮಾಡಿರುವುದು ಕಪ್ಪನ್ ಮತ್ತು ಅವರ ಕುಟುಂಬಕ್ಕೆ ಅವರ ಶೇಖರಣೆಗೊಂಡ ಗಳಿಕೆ ಮತ್ತು ಉದ್ಯೋಗದ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗದಂತೆ ಮಾಡಿದ್ದು, ಆರ್ಥಿಕ ತೊಂದರೆಗೆ ಕಾರಣವಾಗಿದೆ.

ತನಿಖೆಯ ಸಮಯದಲ್ಲಿ ವಶಪಡಿಸಿಕೊಂಡ ತಮ್ಮ ಗುರುತಿನ ದಾಖಲೆಗಳು, ವೈಯಕ್ತಿಕ ಸಾಮಗ್ರಿಗಳು ಮತ್ತು ವೃತ್ತಿಪರ ವಸ್ತುಗಳನ್ನು ಹಿಂತಿರುಗಿಸುವಂತೆಯೂ ಕಪ್ಪನ್ ಕೋರಿದ್ದಾರೆ.

ತಮ್ಮ ಅರ್ಜಿಯಲ್ಲಿ, ತಾವು ಮೂರು ವರ್ಷಗಳಿಗಿಂತ ಹೆಚ್ಚು ಕಾಲದಿಂದ ಜಾಮೀನಿನ ಮೇಲೆ ಹೊರಗಿದ್ದೇವೆ ಮತ್ತು ಸುಪ್ರೀಂ ಕೋರ್ಟ್ ವಿಧಿಸಿರುವ ನಿಬಂಧನೆಗಳನ್ನು ಪಾಲಿಸಿದ್ದೇವೆ ಎಂದು ಪತ್ರಕರ್ತರು ಬೆಟ್ಟು ಮಾಡಿ ತೋರಿಸಿದ್ದಾರೆ.