ಫಾರ್ಮ್ 6 ರಲ್ಲಿ ಮಾಡಲಾದ ಬದಲಾವಣೆಗಳನ್ನು ಅಂಗೀಕರಿಸಲೂ ಇಲ್ಲ ಅಥವಾ ತಿರಸ್ಕರಿಸಲೂ ಇಲ್ಲ: ಸುಪ್ರೀಂ ಕೋರ್ಟ್ ಸ್ಪಷ್ಟನೆ

0
238

ಸನ್ಮಾರ್ಗ ವಾರ್ತೆ

ಹೊಸದೆಹಲಿ: ಮತದಾರರ ಪಟ್ಟಿಗೆ ಹೆಸರುಗಳನ್ನು ಸೇರಿಸಲು ಫಾರ್ಮ್ 6 ರಲ್ಲಿ ಮಾಡಲಾದ ಬದಲಾವಣೆಗಳನ್ನು ಸುಪ್ರೀಂ ಕೋರ್ಟ್ ಅನುಮೋದಿಸಿಯೂ ಇಲ್ಲ ಅಥವಾ ತಿರಸ್ಕರಿಸಿಯೂ ಇಲ್ಲ ಎಂದು ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ಪೀಠ ತಿಳಿಸಿದೆ. ಈ ವರ್ಷದ ಆರಂಭದಲ್ಲಿ ಬಿಹಾರದಲ್ಲಿ ಎಸ್‌ಐಆರ್ ವಿಷಯವನ್ನು ಪರಿಶೀಲಿಸಿದಾಗ ಇಂತಹ ಪರಿಷ್ಕೃತ ನಮೂನೆಯು ಅಸ್ತಿತ್ವದಲ್ಲಿರಲಿಲ್ಲ ಎಂದೂ ನ್ಯಾಯಾಲಯವು ಬೆಟ್ಟು ಮಾಡಿದೆ.

ಮತದಾರರ ಪಟ್ಟಿಯನ್ನು ನವೀಕರಿಸುವ ಎಸ್‌ಐಆರ್ ಪ್ರಕ್ರಿಯೆಗಾಗಿ ಫಾರ್ಮ್ 6 ಕ್ಕೆ ಸೇರಿಸಲಾದ ಹೊಸ ಅಫಿದಾವಿತ್ ಅನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ ಎಂಬ ಚುನಾವಣಾ ಆಯೋಗದ ವಾದದ ನಡುವೆಯೇ ನ್ಯಾಯಾಲಯದ ಈ ಸ್ಪಷ್ಟನೆ ಬಂದಿದೆ. ಪರಿಷ್ಕೃತ ನಮೂನೆಗೆ ತನ್ನ ಹಿಂದಿನ ಅವಲೋಕನಗಳನ್ನು ಅನುಮೋದನೆ ಅಥವಾ ನಿರಾಕರಣೆ ಎಂದು ವ್ಯಾಖ್ಯಾನಿಸಬಾರದು ಮತ್ತು ಈ ವಿಷಯವನ್ನು ವಿವರವಾಗಿ ಪರಿಶೀಲಿಸುವುದಾಗಿ ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ಅಂತಿಮ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳ್ಳಲು ಅರ್ಜಿದಾರರು ತಮ್ಮ ಪೂರ್ವಜರ ವಿವರಗಳನ್ನು ಅಥವಾ ಹಿಂದಿನ ಎಸ್‌ಐಆರ್ ವಿವರಗಳನ್ನು ಇಸಿಐನೆಟ್ ಪೋರ್ಟಲ್‌ನಲ್ಲಿ ಒದಗಿಸುವುದನ್ನು ಕಡ್ಡಾಯಗೊಳಿಸಿ ಚುನಾವಣಾ ಆಯೋಗವು ಜುಲೈನಲ್ಲಿ ಬದಲಾವಣೆಗಳನ್ನು ಜಾರಿಗೊಳಿಸಿತ್ತು. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠದ ಸದಸ್ಯರಾದ ನ್ಯಾಯಮೂರ್ತಿ ಜಾಯ್‌ಮಾಲ್ಯ ಬಾಗ್ಚಿ, ಬಿಹಾರ ಎಸ್‌ಐಆರ್ ಪ್ರಕರಣದ ವಿಚಾರಣೆ ನಡೆಸಿ ತೀರ್ಪು ನೀಡಿದ ಸಮಯದಲ್ಲಿ ಈ ಹೊಸ ಫಾರ್ಮ್ 6 ಅಸ್ತಿತ್ವದಲ್ಲಿರಲಿಲ್ಲ ಎಂದು ಅವಲೋಕಿಸಿದರು. ನ್ಯಾಯಾಲಯವು ಈ ಬದಲಾವಣೆಗಳನ್ನು ಅಂಗೀಕರಿಸಲೂ ಇಲ್ಲ ಅಥವಾ ತಿರಸ್ಕರಿಸಲೂ ಇಲ್ಲ ಮತ್ತು ಈ ವಿಷಯವನ್ನು ಸ್ಪಷ್ಟವಾಗಿ ಅಧ್ಯಯನ ಮಾಡಲಿದೆ ಎಂದು ಅವರು ಮೌಖಿಕವಾಗಿ ಹೇಳಿದರು.

ವಿವಿಧ ರಾಜ್ಯಗಳಲ್ಲಿ ನಡೆಯುತ್ತಿರುವ ಎಸ್‌ಐಆರ್ ಪ್ರಕ್ರಿಯೆಗಳ ಸಮಯದಲ್ಲಿ ಕೇಂದ್ರ ಸರ್ಕಾರವು ಫಾರ್ಮ್ 6 ರಲ್ಲಿ ಮಾಡಿರುವ ಬದಲಾವಣೆಗಳನ್ನು ಪ್ರಶ್ನಿಸಿ ಪ್ರಿಯಾ ಮಿಶ್ರಾ ಸಲ್ಲಿಸಿದ ಅರ್ಜಿಯನ್ನು ಪರಿಗಣಿಸುವ ಸಂದರ್ಭದಲ್ಲಿ ನ್ಯಾಯಾಲಯದ ಈ ಟಿಪ್ಪಣಿಗಳು ಬಂದಿವೆ. ಫಾರ್ಮ್ 6 ರಲ್ಲಿನ ಬದಲಾವಣೆಗಳನ್ನು ಸುಪ್ರೀಂ ಕೋರ್ಟ್ ಅನುಮೋದಿಸಿಲ್ಲ ಎಂದು ಮುಖ್ಯ ನ್ಯಾಯಮೂರ್ತಿಗಳು ಅಕ್ಟೋಬರ್ 5 ರಂದು ಮೌಖಿಕವಾಗಿ ಸ್ಪಷ್ಟಪಡಿಸಿದ್ದರೂ, ಸುಪ್ರೀಂ ಕೋರ್ಟ್ ಅನುಮೋದಿಸಿದಂತೆ ಚುನಾವಣಾ ಆಯೋಗವು ಇನ್ನೂ ಅದನ್ನು ಸಮರ್ಥಿಸಿಕೊಳ್ಳುತ್ತಿದೆ ಎಂದು ಅರ್ಜಿದಾರರ ವಕೀಲರು ಬೆಟ್ಟು ಮಾಡಿದರು. 1960 ರ ಮತದಾರರ ನೋಂದಣಿ ನಿಯಮಗಳ ಪ್ರಕಾರ, ಫಾರ್ಮ್ 6 ರಲ್ಲಿನ ಬದಲಾವಣೆಗಳನ್ನು ಶಾಸಕಾಂಗ ಪ್ರಕ್ರಿಯೆಯ ಮೂಲಕವೇ ಮಾಡಬೇಕೇ ಹೊರತು ಆಡಳಿತಾತ್ಮಕ ನಿರ್ಧಾರಗಳ ಮೂಲಕ ಏಕಪಕ್ಷೀಯವಾಗಿ ಮಾಡಲು ಸಾಧ್ಯವಿಲ್ಲ ಎಂಬುದು ಅರ್ಜಿಯಲ್ಲಿರುವ ಮುಖ್ಯ ವಾದವಾಗಿದೆ.

ಹೊಸ ಬದಲಾವಣೆಗಳ ಪ್ರಕಾರ ಹೊಸ ಅರ್ಜಿದಾರರು ತಾವು, ತಮ್ಮ ಪೋಷಕರು ಅಥವಾ ಅಜ್ಜ-ಅಜ್ಜಿಯರು ಹಿಂದಿನ ಎಸ್‌ಐಆರ್ ಮತದಾರರ ಪಟ್ಟಿಯಲ್ಲಿ ಸೇರಿದ್ದೀರಾ ಎಂಬುದನ್ನು ಘೋಷಿಸಬೇಕಾಗುತ್ತದೆ. ಈ ಪ್ರಶ್ನೆಗಳಿಗೆ ಉತ್ತರಿಸಿದ ನಂತರವೇ ಫಾರ್ಮ್ 6 ಅರ್ಜಿಗಳನ್ನು ಪೋರ್ಟಲ್‌ನಲ್ಲಿ ಸಲ್ಲಿಸುವುದನ್ನು ಇದು ಕಡ್ಡಾಯಗೊಳಿಸುತ್ತದೆ. ಎಸ್‌ಐಆರ್‌ಗೆ ಸಂಬಂಧಿಸಿದ ಇತರ ಅರ್ಜಿಗಳೊಂದಿಗೆ ಅಕ್ಟೋಬರ್ 27 ರಂದು ಈ ಪ್ರಕರಣದ ಮರು ವಿಚಾರಣೆ ನಡೆಯಲಿದೆ ಎಂದು ಪೀಠ ತಿಳಿಸಿದೆ.