ನಾಯಕರ ಹತ್ಯೆ ಅತಿಯಾಯಿತು. ಚರ್ಚಿಸುವುದಕ್ಕೆ ಇರಾನಿನಲ್ಲಿ ಸರಿಯಾದ ನಾಯಕರಿಲ್ಲ: ಡೊನಾಲ್ಡ್ ಟ್ರಂಪ್

0
251

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್: ಇರಾನ್‌ನ ಉನ್ನತ ರಾಜಕೀಯ ಮತ್ತು ಮಿಲಿಟರಿ ನಾಯಕತ್ವವನ್ನು ಗುರಿಯಾಗಿಸಿಕೊಂಡು ಅಮೆರಿಕ ನಡೆಸಿದ ದಾಳಿಗಳು ಮಿತಿಮೀರಿತು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಬಹುಶಃ ಇದು ಅತಿರೇಕ ಪರಿಸ್ಥಿತಿ, ಇಲ್ಲಿಯವರೆಗೆ ಹೋಗಬಾರದಿತ್ತು ಎಂದು ಒಹಾಯೊದ ಯಂಗ್ಸ್ಟೌನ್‌ನಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಹೇಳಿದ್ದಾರೆ.

ಅಮೆರಿಕದ ಸೈನಿಕ ಕಾರ್ಯಾಚರಣೆ ಇರಾನ್ ನಾಯಕರಲ್ಲಿ ತೀರ್ಮಾನ ತಳೆಯುವ ವ್ಯವಸ್ಥೆಯನ್ನು ಬುಡಮೇಲು ಗೊಳಿಸಿತು. ಸತ್ಯ ಹೇಳುವದಾದರೆ ನಾವು ಇರಾನಿನ ಮೇಲೆ ನಡೆಸಿದ ದಾಳಿ ಮಿತಿಮೀರಿದೆ. ಈಗ ಅಲ್ಲಿ ಯಾರೊಂದಿಗೆ ಚರ್ಚೆ ನಡೆಸುವುದೆಂದು ಹುಡುಕುವುದು ನಮಗೆ ದೊಡ್ಡ ಪ್ರಯಾಸ ಆಗುತ್ತಿದೆ. ಲೆವೆಲ್ ಒಂದಕ್ಕೆ ನಾವು ನಿಲ್ಲಿಸಬಹುದಾಗಿತ್ತು. ಆದರೆ ಲೆವೆಲ್ ಎರಡು ಎರಡೂವರೆ ವರೆಗೆ ಹೋದೆವು. ಇದು ಸ್ವಲ್ಪ ಹೆಚ್ಚಾಯಿತು ಎಂದು ಟ್ರಂಪ್ ಹೇಳಿದರು.

ಪ್ರಸ್ತುತ ಇರಾನ್‌ನಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವವರು ಯಾರು ಎಂಬ ಬಗ್ಗೆ ತೀವ್ರ ಅನಿಶ್ಚಿತತೆ ಇದೆ ಎಂದು ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವಾನ್ಸ್ ಕೂಡ ಹಿಂದೆ ರಾಯಿಟರ್ಸ್ ಸುದ್ದಿ ಸಂಸ್ಥೆಗೆ ಹೇಳಿದ್ದರು.

ದಿಗ್ಬಂಧದಲ್ಲಿ ಕಡಿತಗೊಳಿಸಲು ಮತ್ತು ರಾಜತಾಂತ್ರಿಕ ಪ್ರಗತಿಗೆ ಇರಾನ್ ಮೊದಲು ಅವರ ಯುರೇನಿಯಂ ಸಂಸ್ಕರಣೆ ಯೋಜನೆಯಲ್ಲಿ ಕಡಿತ ಮಾಡಬೇಕು ಎಂದೂ ಅಮೆರಿಕ ಹೇಳುತ್ತಿದೆ. ಆದರಂತೆ ಇರಾನಿನ ಪರಮಾಣು ಯೋಜನೆಯ ವಿರುದ್ಧ ಕಠಿಣ ನಿಲುವು ಟ್ರಂಪ್ ಪ್ರದರ್ಶಿಸಿದ್ದಾರೆ. ಇರಾನ್ ಭಯೋತ್ಪಾದನೆಯನ್ನು ಬೆಂಬಲಿಸುವ ಒಂದು ದೇಶ. ಯಾವ ಕಾಲದಲ್ಲಿಯೂ ಪರಮಾಣು ಅಸ್ತ್ರ ನಿರ್ಮಿಸಲು ನಾವು ಬಿಡುವುದಿಲ್ಲ ಮತ್ತು ಇರಾನ್ ನೌಕಾಪಡೆ ಮತ್ತು ವಾಯುಪಡೆಗೆ ಭಾರೀ ಪ್ರಮಾಣದ ಹಾನಿಯಾಗಿದೆ ಮತ್ತು ಅವುಗಳ ನೌಕೆಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ. ಸಮುದ್ರ ಸಂಚಾರ ಮುಚ್ಚಿದ್ದರಿಂದ ಇರಾನಿನ 159 ಹಡಗುಗಳು ವಿಶ್ರಾಂತಿ ಪಡೆಯುತ್ತಿದೆ ಎಂದೂ ಹೇಳಿದರು. ಆದರೆ ಇದನ್ನು ದೃಢಪಡಿಸುವ ಅಧಿಕೃತ ವರದಿಗಳು ಪೆಂಟಗಾನ್ ನಿಂದ ಬಂದಿಲ್ಲ.