ಕನ್ನಡ ಭಾಷೆಗೆ ಅಪಮಾನ ಆರೋಪ: ಸೋನು ನಿಗಮ್ ಬೆಂಗಳೂರು ಕಾರ್ಯಕ್ರಮಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ವಿರೋಧ

0
150

ಸನ್ಮಾರ್ಗ ವಾರ್ತೆ

ಬೆಂಗಳೂರು: ಅಕ್ಟೋಬರ್ 24 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಪ್ರಸಿದ್ಧ ಹಿನ್ನೆಲೆ ಗಾಯಕ ಸೋನು ನಿಗಮ್ ಅವರ ಸಂಗೀತ ಕಾರ್ಯಕ್ರಮಕ್ಕೆ ಅನುಮತಿ ನೀಡಬಾರದು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ರಂಗಕ್ಕಿಳಿದಿದೆ. ಈ ಸಂಬಂಧ ಸಂಘಟನೆಯು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದೆ. ಕನ್ನಡ ಭಾಷೆ ಮತ್ತು ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಜೋಡಿಸಿ ಸೋನು ನಿಗಮ್ ಅವರು ನೀಡಿದ್ದಾರೆ ಎನ್ನಲಾದ ಹೇಳಿಕೆಯ ಬೆನ್ನಲ್ಲೇ ಈ ಪ್ರತಿಭಟನೆ ಮತ್ತೆ ಭುಗಿಲೆದ್ದಿದೆ.

ಬಾಲಿವುಡ್ ಗಾಯಕನ ಹೇಳಿಕೆಯು ಕನ್ನಡಿಗರ ಭಾವನೆಗೆ ಧಕ್ಕೆ ತಂದಿದ್ದು, ನಗರದಲ್ಲಿ ಅವರ ಕಾರ್ಯಕ್ರಮವು ಜನರನ್ನು ಮತ್ತಷ್ಟು ಕೆರಳಿಸಲಿದೆ ಎಂದು ಕರವೇ ರಾಜ್ಯ ಅಧ್ಯಕ್ಷ ಟಿ.ಎ. ನಾರಾಯಣಗೌಡ ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ. ಸಂಗೀತ ಕಾರ್ಯಕ್ರಮ ಮುಂದುವರಿದರೆ ರಾಜ್ಯವ್ಯಾಪಿ ಪ್ರತಿಭಟನೆ ನಡೆಸುವುದಾಗಿ ಸಂಘಟನೆ ಎಚ್ಚರಿಕೆ ನೀಡಿದೆ.

‘ದಿ ರೆವಲ್ಯೂಷನ್ ಇಂಡಿಯಾ ಟೂರ್’ನ ಭಾಗವಾಗಿ ಸೋನು ನಿಗಮ್ ಪಾಲ್ಗೊಳ್ಳಬೇಕಿದ್ದ ಕಾರ್ಯಕ್ರಮಕ್ಕೂ ಮುನ್ನ ಈ ಹೊಸ ವಿವಾದ ಹುಟ್ಟಿಕೊಂಡಿದೆ. ಅಕ್ಟೋಬರ್ 24 ರಂದು ಸಂಜೆ 7 ಗಂಟೆಗೆ ಬೆಂಗಳೂರಿನ ತನಿಸಂದ್ರ ಮುಖ್ಯ ರಸ್ತೆಯಲ್ಲಿರುವ ಭಾರತೀಯ ಮಾಲ್‌ನಲ್ಲಿ ಸಂಗೀತ ಕಚೇರಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಐಟಿಡಬ್ಲ್ಯೂ ಪ್ಲೇವರ್ಕ್ಸ್ (ITW Playworks) ಆಯೋಜಿಸುತ್ತಿದೆ. ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸುವಂತೆ ಕೋರಿರುವ ಸಂಘಟನೆಯು, ಸಾರ್ವಜನಿಕ ಆಕ್ರೋಶ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಗಳನ್ನು ಪರಿಗಣಿಸಿ ಪೊಲೀಸರು ಇದನ್ನು ಹಿಂಪಡೆಯಬೇಕೆಂದು ಆಗ್ರಹಿಸಿದೆ.

ಈ ಘಟನೆ ಕಳೆದ ವರ್ಷದ ಮೇ ತಿಂಗಳಿನಲ್ಲಿ ನಡೆದಿತ್ತು. ಕಾಲೇಜೊಂದರಲ್ಲಿ ನಡೆದ ಸಂಗೀತ ಕಚೇರಿಯ ಸಂದರ್ಭದಲ್ಲಿ ಪ್ರೇಕ್ಷಕರೊಬ್ಬರು ಕನ್ನಡ ಹಾಡು ಹಾಡುವಂತೆ ಕೇಳಿಕೊಂಡ ನಂತರ ಸೋನು ನಿಗಮ್ ನೀಡಿದ ಹೇಳಿಕೆಯಿಂದ ವಿವಾದ ಉಂಟಾಗಿತ್ತು. ‘ನನಗೆ ಕನ್ನಡ ಹಾಡುಗಳನ್ನು ಹಾಡುವುದೆಂದರೆ ತುಂಬಾ ಇಷ್ಟ. ನಾನು ಕರ್ನಾಟಕದ ಜನರನ್ನು ಗೌರವಿಸುತ್ತೇನೆ. ನಾನು ಎಲ್ಲಾ ಭಾಷೆಗಳಲ್ಲೂ ಹಾಡುಗಳನ್ನು ಹಾಡಿದ್ದೇನೆ. ಆದರೆ ನನ್ನ ಜೀವನದಲ್ಲಿ ನಾನು ಹಾಡಿದ ಅತ್ಯುತ್ತಮ ಹಾಡುಗಳೆಂದರೆ ಕನ್ನಡ ಹಾಡುಗಳು. ನಾನು ನಿಮ್ಮ ಬಳಿಗೆ ಅಪಾರ ಪ್ರೀತಿಯಿಂದ ಬಂದಿದ್ದೇನೆ. ಆದರೆ ಒಬ್ಬ ಹುಡುಗ, ಅವನಿಗೆ ಎಷ್ಟು ವಯಸ್ಸಾಗಿದೆಯೋ ನನಗೆ ಗೊತ್ತಿಲ್ಲ. ಅವನು ಹುಟ್ಟುವ ಮುನ್ನವೇ ನಾನು ಕನ್ನಡ ಹಾಡುಗಳನ್ನು ಹಾಡಲು ಪ್ರಾರಂಭಿಸಿದೆ. ಅವನು ಮಾಡಿದ್ದು ನನಗಿಷ್ಟವಾಗಲಿಲ್ಲ. ಅವನು ನನಗೆ ಬೆದರಿಕೆ ಹಾಕುತ್ತಿದ್ದ. ‘ಕನ್ನಡ, ಕನ್ನಡ’ ಎಂದು ಕೂಗುತ್ತಿದ್ದ.’

“ಪಹಲ್ಗಾಮ್‌ನಲ್ಲಿ ಏನಾಯಿತು ಎಂಬುದು ನಿಮಗೆ ಗೊತ್ತೇ? ಇದಕ್ಕೆ ಇದೇ ಕಾರಣ. ಈಗ ನೀವು ಏನು ಮಾಡಿದ್ದೀರಿ? ಮೊದಲು ನಿಮ್ಮ ಮುಂದೆ ಯಾರು ನಿಂತಿದ್ದಾರೆ ಎಂಬುದನ್ನು ನೋಡಿ. ನಾನು ನಿಮ್ಮನ್ನು ಪ್ರೀತಿಸುತ್ತೇನೆ. ನಾನು ಜಗತ್ತಿನ ಎಲ್ಲೇ ಹೋದರೂ, 14,000 ಪ್ರೇಕ್ಷಕರಿದ್ದರೂ ಅಲ್ಲಿ ಕನಿಷ್ಠ ಒಬ್ಬರಾದರೂ ಕರ್ನಾಟಕದವರು ಇರುತ್ತಾರೆ ಎಂದು ಎಲ್ಲರಿಗೂ ಹೇಳುತ್ತೇನೆ. ನಾನಿಲ್ಲಿ ಅವರಿಗಾಗಿ ಕನ್ನಡ ಹಾಡನ್ನು ಹಾಡುತ್ತೇನೆ. ಏಕೆಂದರೆ ನಾನು ನಿಮ್ಮನ್ನು ತುಂಬಾ ಗೌರವಿಸುತ್ತೇನೆ ಮತ್ತು ಪ್ರೀತಿಸುತ್ತೇನೆ. ಆದ್ದರಿಂದ ಜಾಗರೂಕರಾಗಿರಿ, ನೀವು ಹೀಗೆ ಮಾಡಬಾರದು,” ಎಂಬುದು ಸೋನು ನಿಗಮ್ ಅವರ ಪ್ರತಿಕ್ರಿಯೆಯಾಗಿತ್ತು.

ಈ ಹೇಳಿಕೆ ವಿವಾದಕ್ಕೀಡಾದ ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು ಮತ್ತು ಸೋನು ನಿಗಮ್ ಕ್ಷಮೆಯಾಚಿಸಿದ್ದರು. ‘ಕುಲದಲ್ಲಿ ಕೀಳ್ಯಾವುದೋ’ ಎಂಬ ಕನ್ನಡ ಚಿತ್ರದಲ್ಲಿ ಸೋನು ಹಾಡಿದ್ದ ಹಾಡನ್ನು ಚಿತ್ರತಂಡದವರು ತೆಗೆದುಹಾಕಿದ್ದರು.