ಸನ್ಮಾರ್ಗ ವಾರ್ತೆ
ಸಿಲಿಗುರಿ: ಉತ್ತರ ಬಂಗಾಳದ ಸಿಲಿಗುರಿಯಲ್ಲಿ ದುರ್ಗಾ ಪೂಜೆಯ ಮುಂಚಿತವಾಗಿ, ಕೇವಲ ಹಿಂದೂ ಒಡೆತನದ ಅಂಗಡಿಗಳಿಂದ ಮಾತ್ರ ಮಾಂಸ, ಬಿರಿಯಾನಿ ಮತ್ತು ಪೂಜಾ ಸಾಮಿಗಳನ್ನು ಖರೀದಿಸುವಂತೆ ಆಗ್ರಹಿಸುವ ಪೋಸ್ಟರ್ಗಳು ಕಾಣಿಸಿಕೊಂಡಿವೆ. ಇದು ಧರ್ಮ, ಆಹಾರ ಮತ್ತು ದಿನನಿತ್ಯದ ವ್ಯಾಪಾರದ ಕುರಿತು ರಾಜಕೀಯ ವಿವಾದಕ್ಕೆ ಕಾರಣವಾಗಿದೆ.
ಹಿಂದೂ ಜಾಗರಣ ಮಂಚ್ ಈ ಪೋಸ್ಟರ್ಗಳನ್ನು ಹಾಕಿದೆ. ಪಿಟಿಐ (PTI) ಈ ಗುಂಪನ್ನು ಆರ್ಎಸ್ಎಸ್ನ ಅಂಗಸಂಸ್ಥೆ ಎಂದು ಬಣ್ಣಿಸಿದೆ. ಒಂದು ಪೋಸ್ಟರ್ನಲ್ಲಿ, “ಹಿಂದೂ ಒಡೆತನದ ಅಂಗಡಿಗಳಿಂದ ಮಾಂಸವನ್ನು ಖರೀದಿಸಿ” ಎಂದು ಬರೆಯಲಾಗಿದೆ. ಮತ್ತೊಂದರಲ್ಲಿ ಬಿರಿಯಾನಿ ತಿನ್ನುವುದಕ್ಕೆ ಯಾವುದೇ ನಿಷೇಧವಿಲ್ಲ, ಆದರೂ ಖರೀದಿದಾರರು ಅದನ್ನು ಹಿಂದೂ ಒಡೆತನದ ಅಂಗಡಿಯಿಂದಲೇ ಖರೀದಿಸಬೇಕು ಎಂದು ಹೇಳಲಾಗಿದೆ. ಮೂರನೆಯದು ಹಿಂದೂ ಅಂಗಡಿಗಳಿಂದ ಪೂಜಾ ಸಾಮಗ್ರಿಗಳನ್ನು ಖರೀದಿಸುವಂತೆ ಜನರನ್ನು ಕೇಳುತ್ತದೆ.
ಭಾರತ್ ನಗರದಲ್ಲಿರುವ ತರುಣ್ ತೀರ್ಥ ಕ್ಲಬ್ ಪೂಜಾ ಮೈದಾನದ ಹತ್ತಿರದ ಪ್ರದೇಶ ಸೇರಿದಂತೆ ಹಲವು ಸ್ಥಳಗಳಲ್ಲಿ ಕಾರ್ಯಕರ್ತರು ಪೋಸ್ಟರ್ಗಳನ್ನು ಅಂಟಿಸಿದ್ದಾರೆ. ಈ ಸ್ಥಳವು ರಾಜ್ಯ ಪ್ರವಾಸೋದ್ಯಮ ಸಚಿವ ಮತ್ತು ಸಿಲಿಗುರಿ ಶಾಸಕ ಶಂಕರ್ ಘೋಷ್ ಅವರ ಮನೆಯ ಸಮೀಪದಲ್ಲಿದೆ.
ಮಂಚ್ ನ ಅಭಿಷೇಕ್ ದಾಸ್ ಈ ಅಭಿಯಾನವನ್ನು ಸಮರ್ಥಿಸಿಕೊಂಡಿದ್ದಾರೆ. ಇದು ಕಡ್ಡಾಯ ಆದೇಶವಲ್ಲ, ಬದಲಿಗೆ ಹಿಂದೂ ಐಕ್ಯತೆ ಮತ್ತು ಸ್ಥಳೀಯ ಹಿಂದೂ ವ್ಯವಹಾರಗಳಿಗೆ ಬೆಂಬಲ ಕೋರುವ ಮನವಿ ಎಂದು ಕರೆದಿದ್ದಾರೆ. “ಇದು ಸ್ಥಳೀಯ ಆರ್ಥಿಕತೆಗೂ ಸಹಾಯ ಮಾಡುತ್ತದೆ” ಎಂದು ಅವರು ಹೇಳಿದರು.
ಟೀಕಾಕಾರರು ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಹಿರಿಯ ಸಿಪಿಐ(ಎಂ) ನಾಯಕ ಅಶೋಕ್ ಭಟ್ಟಾಚಾರ್ಯ ಅವರು ಪೋಸ್ಟರ್ಗಳನ್ನು ಕೋಮು ಅಭಿಯಾನ ಎಂದು ಕರೆದಿದ್ದಾರೆ. ಪೊಲೀಸ್ ಕ್ರಮ, ಪೋಸ್ಟರ್ಗಳ ತೆರವು ಮತ್ತು ಬಂಧನಕ್ಕೆ ಒತ್ತಾಯಿಸಿದರು. ಪಶ್ಚಿಮ ಬಂಗಾಳದಂತಹ ಜಾತ್ಯತೀತ ರಾಜ್ಯದಲ್ಲಿ ಈ ನಡೆ ದುರದೃಷ್ಟಕರ ಎಂದು ಸಿಲಿಗುರಿಯ ಮಾಜಿ ಮೇಯರ್ ಗೌತಮ್ ದೇವ್ ಬಣ್ಣಿಸಿದ್ದಾರೆ.
ಬಿಜೆಪಿ ನಾಯಕರು ಈ ಅಭಿಯಾನದಿಂದ ದೂರ ಸರಿದಿದ್ದಾರೆ. ತಮ್ಮ ಪಕ್ಷಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಸಚಿವ ಸುಕಾಂತ ಮಜುಂದಾರ್ ಹೇಳಿದ್ದಾರೆ. ಶಾಪಿಂಗ್ ಆಯ್ಕೆಗಳು ವೈಯಕ್ತಿಕವಾದವು ಎಂದು ಅವರು ಹೇಳಿದರು.
ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಅಡುಗೆಯವರ ಧರ್ಮವನ್ನು ಕೇಳದೆ ಜನರು ಬಿರಿಯಾನಿಯನ್ನು ಸವಿಯುತ್ತಾರೆ ಎಂದು ಅನೇಕರು ಬೆಟ್ಟು ಮಾಡಿದ್ದಾರೆ. ದುರ್ಗಾ ಪೂಜೆಯ ಅಲಂಕಾರದಲ್ಲಿ ಮುಸ್ಲಿಂ ಕುಶಲಕರ್ಮಿಗಳು ಪ್ರಮುಖ ಪಾತ್ರ ವಹಿಸುತ್ತಾರೆ ಎಂಬುದನ್ನೂ ಅವರು ಗಮನಸೆಳೆದಿದ್ದಾರೆ. ರಾಜ್ಯದ ಅತಿ ದೊಡ್ಡ ಹಬ್ಬವಾದ ಈ ಉತ್ಸವದ ಸಮಯದಲ್ಲಿ ಸಿಲಿಗುರಿಯು ಹಲವಾರು ಪೆಂಡಾಲ್ಗಳನ್ನು ಆಯೋಜಿಸುತ್ತದೆ. ಎಲ್ಲಾ ನಂಬಿಕೆಗಳ ಸಣ್ಣ ವ್ಯಾಪಾರಿಗಳು ಮತ್ತು ಕುಶಲಕರ್ಮಿಗಳ ಮೇಲಾಗುವ ಪರಿಣಾಮದ ಬಗ್ಗೆ ನಿವಾಸಿಗಳು ಆತಂಕಗೊಂಡಿದ್ದಾರೆ.












