ಸನ್ಮಾರ್ಗ ವಾರ್ತೆ
ಹೊಸದೆಹಲಿ: ಗುಜರಾತ್ನ ಶಾಲೆಗಳಿಗೆ ಭೇಟಿ ನೀಡುವುದನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ವಿದ್ಯಾರ್ಥಿಗಳ ಪೋಷಕರು ಮತ್ತು ರಕ್ಷಕರು ಹಾಗೂ ಶಾಲೆಗಳು ಮತ್ತು ಅವುಗಳ ಸುತ್ತಮುತ್ತಲಿನ ಪ್ರದೇಶಗಳಿಗೆ ಭೇಟಿ ನೀಡುವ ಪ್ರತಿಯೊಬ್ಬರೂ ಮುಂಚಿತವಾಗಿ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಶಾಲೆಗಳ ಶೋಚನೀಯ ಸ್ಥಿತಿಯು ಹೊರಗಿನ ಜಗತ್ತಿಗೆ ತಿಳಿಯದಂತೆ ತಡೆಯಲು ಶಿಕ್ಷಣ ಇಲಾಖೆಯು ಈ ನಿರ್ದೇಶನವನ್ನು ನೀಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಅನುಮತಿಯಿಲ್ಲದೆ ಭೇಟಿ ನೀಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಮತ್ತು ಅನುಮತಿ ಪಡೆದರೂ ಶಾಲೆಗಳ ಯಾವುದೇ ಫೋಟೋಗಳು ಅಥವಾ ವೀಡಿಯೊಗಳನ್ನು ಸೆರೆಹಿಡಿಯುವಂತಿಲ್ಲ ಎಂದು ನಿರ್ದೇಶನದಲ್ಲಿ ತಿಳಿಸಲಾಗಿದೆ. ಈ ಮಾರ್ಗಸೂಚಿಗಳು ರಾಜ್ಯದ 46,000 ಪ್ರಾಥಮಿಕ, ಪ್ರೌಢ ಮತ್ತು ಉನ್ನತ ಪ್ರೌಢ ಶಾಲೆಗಳಿಗೆ ಅನ್ವಯಿಸುತ್ತವೆ.
ಬಿಜೆಪಿ ಆಡಳಿತವಿರುವ ಇತರ ರಾಜ್ಯಗಳ ಶಾಲೆಗಳಲ್ಲಿ ಸಾಮಾಜಿಕ ಪರಿಶೋಧನೆ (ಸೋಶಿಯಲ್ ಆಡಿಟ್) ನಡೆಸಲಾಗುವುದು ಎಂಬ ವಿರೋಧ ಪಕ್ಷಗಳ ಘೋಷಣೆಯ ಮುಂದುವರಿದ ಭಾಗವಾಗಿ ಈ ಸುತ್ತೋಲೆ ಹೊರಬಂದಿದೆ ಎಂದು ತೋರುತ್ತದೆ.
ಗುಜರಾತ್ ದಶಕಗಳಿಂದ ಬಿಜೆಪಿ ಆಡಳಿತದಲ್ಲಿರುವ ರಾಜ್ಯವಾಗಿದೆ. ಗುಜರಾತ್ನಲ್ಲಿ ಕೇವಲ ಒಬ್ಬೇ ಒಬ್ಬ ಶಿಕ್ಷಕರನ್ನು ಹೊಂದಿರುವ ನೂರಾರು ಶಾಲೆಗಳಿವೆ. ರಾಜ್ಯದಲ್ಲಿ 10,000 ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಅಂತಹ ಸಂಗತಿಗಳು ಹೊರಗಿನ ಜಗತ್ತಿಗೆ ತಿಳಿಯದಂತೆ ತಡೆಯಲು ಈ ಸುತ್ತೋಲೆಯನ್ನು ಹೊರಡಿಸಲಾಗಿದೆ. ಈ ಸುತ್ತೋಲೆಯನ್ನು ಕೂಡಲೇ ಹಿಂಪಡೆಯುವಂತೆ ವಿರೋಧ ಪಕ್ಷಗಳು ಒತ್ತಾಯಿಸಿವೆ.












