ಮತದಾರರ ಪಟ್ಟಿಯಲ್ಲಿ ಅಕ್ರಮ ; ಇಬ್ಬರು ಎಸ್‌ಡಿಎಂ ಸಸ್ಪೆಂಡ್

0
294

ಸನ್ಮಾರ್ಗ ವಾರ್ತೆ

ಉತ್ತರ ಪ್ರದೇಶ: ಪಿಲಿಬಿತ್ ಮತದಾರ ಪಟ್ಟಿಯಲ್ಲಿ ನಡೆದಿರುವ ಪ್ರಮಾದ ಹಿನ್ನೆಲೆಯಲ್ಲಿ ಇಬ್ಬರು ಎಸ್‌ಡಿಎಂ ರ‍್ಯಾಂಕಿನ ಅಧಿಕಾರಿಗಳನ್ನು ಅಮಾನತುಗೊಳಿಸಲಾಗುವುದು ಮುಖ್ಯ ಚುನಾವಣಾಧಿಕಾರಿ ನವದೀಪ್ ರಿಣ್ವ ಹೇಳಿದ್ದಾರೆ. ಫಿಲಿಬಿತ್ ಘಟನೆಯ ನಂತರ ರಾಜ್ಯದ ಎಲ್ಲ ಜಿಲ್ಲೆಗಳಿಂದ 48 ಗಂಟೆಗಳ ಒಳಗೆ ವರದಿಯನ್ನು ಕೇಳಲಾಗಿದೆ ಎಂದು ಅವರು ತಿಳಿಸಿದರು.

ತನಿಖೆಯ ವೇಳೆ, ಸಧರ್ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಅಗತ್ಯ ಅರ್ಜಿ (ಫಾರ್ಮ್-8) ಇಲ್ಲದೆ 10 ಸಾವಿರಕ್ಕೂ ಹೆಚ್ಚು ನಮೂದುಗಳಲ್ಲಿ ಬದಲಾವಣೆ ಮಾಡಲಾಗಿದೆ ಎಂಬುದು ತಿಳಿದುಬಂದಿದೆ. ಮತದಾರರು ಮತ್ತು ಅವರ ತಂದೆಯ ಹೆಸರುಗಳಲ್ಲಿ ಮನಸ್ಸಿಗೆ ಬಂದಂತೆ ಬದಲಾವಣೆ ಮಾಡಲಾಗಿತ್ತು.

ಈ ಪ್ರಕರಣದಲ್ಲಿ ಎಸ್‌ಡಿಎಂ ಶ್ರೇಣಿಯ ಇಬ್ಬರು ಅಧಿಕಾರಿಗಳು ಮಯಂಕ್ ಗೋಸ್ವಾಮಿ ಮತ್ತು ಹೇಮಂತ್ ಚೌಧರಿ ಹಾಗೂ ಒಬ್ಬ ಕಂಪ್ಯೂಟರ್ ಆಪರೇಟರ್ ಅನಿಲ್ ಕುಮಾರ್ ವಿರುದ್ಧ ಎಫ್‌ಐಆರ್ ದಾಖಲಿಸಿ, ಅವರನ್ನು ಅಮಾನತುಗೊಳಿಸಿ ಹುದ್ದೆಯಿಂದ ಬಿಡುಗಡೆ ಮಾಡಲಾಗಿದೆ. ಇವರ ವಿರುದ್ಧ ಪ್ರಜಾಪ್ರತಿನಿಧಿ ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್‌ಗಳ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವರದಿ ತಿಳಿಸಿದೆ.

ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಈ ವಿಷಯವನ್ನು ಗಟ್ಟಿಯಾಗಿ ಎತ್ತಿಹಿಡಿದು, ಸಾವಿರಾರು ಮತದಾರರ ದಾಖಲೆಗಳಲ್ಲಿ ದೊಡ್ಡ ಪ್ರಮಾಣದ ತಿರುಚುವಿಕೆ ಮಾಡಲಾಗಿದೆ ಎಂದು ಆರೋಪಿಸಿದ್ದವು. ಉತ್ತರ ಪ್ರದೇಶದ ಮುಖ್ಯ ಚುನಾವಣಾ ಅಧಿಕಾರಿ (CEC) ನವದೀಪ್ ರಿನ್ವಾ ಈ ಘಟನೆಯನ್ನು ‘ಅಪರಾಧಿಕ ಕೃತ್ಯ’ ಎಂದು ಬಣ್ಣಿಸಿದ್ದಾರೆ.

ಅಕ್ರಮದ ವಿಧಾನ: ಮತದಾರರ ಪಟ್ಟಿಯಲ್ಲಿ ಫಾರ್ಮ್-8 ( ಹೆಸರು/ವಿಳಾಸ/ವಿವರ ತಿದ್ದುಪಡಿ ಮಾಡುವ ಅರ್ಜಿ) ಇಲ್ಲದೆಯೇ ಲಾಗಿನ್ ಐಡಿಯನ್ನು ತಪ್ಪಾಗಿ ಬಳಸಿ ಈ ವಂಚನೆ ಮಾಡಲಾಗಿದೆ. ಮತದಾರರ ಹೆಸರು, ಅವರ ತಂದೆಯ ಹೆಸರು ಮತ್ತು ವಯಸ್ಸಿನಂತಹ ವಿವರಗಳಲ್ಲಿ ಭಾರೀ ವ್ಯತ್ಯಾಸಗಳನ್ನು ಮಾಡಲಾಗಿತ್ತು.
ವಿರೋಧ ಪಕ್ಷಗಳ ನಿಲುವು: ಸಮಾಜವಾದಿ ಪಕ್ಷ ಹಾಗೂ ಇತರೆ ವಿರೋಧ ಪಕ್ಷಗಳು, ಚುನಾವಣೆಯನ್ನು ಪ್ರಭಾವಿಸಲು ಮತ್ತು ಮತದಾರರನ್ನು ಮತದಾನದ ಹಕ್ಕಿನಿಂದ ವಂಚಿಸುವ ಉದ್ದೇಶದಿಂದಲೇ ಈ ಅಕ್ರಮವನ್ನು ನಡೆಸಲಾಗಿದೆ ಎಂದು ಆರೋಪಿಸಿವೆ.