ಎಲ್ಲಾ ದಾಸ್ಯಗಳಿಗೂ ಅಂತ್ಯ ಹಾಡುವ ಸಂಪೂರ್ಣ ಸಮರ್ಪಣೆ

0
184

✍️ ಶೇಖ್ ಮುಹಮ್ಮದ್ ಕಾರಕುನ್ನು
ಇಸ್ಲಾಮೀ ಚಿಂತಕರು ಮತ್ತು ಬರಹಗಾರರು

ಸಾಷ್ಟಾಂಗ ನಮಸ್ಕಾರ (ಸುಜೂದ್) ಒಂದನ್ನು ಮಾಡುವುದು ನಿನಗೆ ಭಾರ ಅಥವಾ ಕಷ್ಟವೆಂದು ಅನಿಸುತ್ತದೆಯೋ,

ಆ ಒಂದೇ ಒಂದು ಸಾಷ್ಟಾಂಗವು ಮನುಷ್ಯನನ್ನು ಇತರ ಸಾವಿರಾರು ಜನರ ಮುಂದೆ ತಲೆಬಾಗಿಸುವುದರಿಂದ (ದಾಸ್ಯದಿಂದ) ಮುಕ್ತಿಗೊಳಿಸುತ್ತದೆ!

ಪರಮವಾದ ಪ್ರೀತಿ, ಮಿತಿಯಿಲ್ಲದ ಅನುಸರಣೆ, ಸಂಪೂರ್ಣವಾದ ಸಮರ್ಪಣೆ; ಒಬ್ಬನು ಯಾವುದಕ್ಕೆ ಇವನ್ನೆಲ್ಲಾ ಸಮರ್ಪಿಸುತ್ತಾನೆಯೋ ಅವನು ಅದರ ದಾಸನಾಗಿರುತ್ತಾನೆ.

ಒಬ್ಬನು ಸಂಪತ್ತಿನ ಬಗ್ಗೆ ಅತಿಯಾದ ದುರಾಶೆಯನ್ನು ತೋರುತ್ತಾನೆ. ಅದಕ್ಕಾಗಿ ಜೀವನವನ್ನು ಸಮರ್ಪಿಸುತ್ತಾನೆ. ಸಂಪಾದಿಸುವುದಕ್ಕಾಗಿ ಏನೇ ಮಾಡಲು ಸಿದ್ಧನಾಗುತ್ತಾನೆ. ಅನುಮತಿಸಲ್ಪಟ್ಟದ್ದೇ ಅಥವಾ ನಿಷೇಧಿಸಲ್ಪಟ್ಟದ್ದೇ ಎಂದೆಲ್ಲಾ ನೋಡದೆ ಕಣ್ಣಿಗೆ ಕಾಣುವುದೆಲ್ಲವನ್ನೂ ಪಡೆಯಬೇಕೆಂದು ಹಂಬಲಿಸುತ್ತಾನೆ. ಹೇಗಾದರೂ ಮಾಡಿ ದೋಚಿಕೊಳ್ಳುತ್ತಾನೆ. ಸಿಕ್ಕಿದ್ದನ್ನೆಲ್ಲಾ ಬಾಚಿಕೊಳ್ಳುತ್ತಾನೆ. ಸಂಪತ್ತಿಗಾಗಿ ಯಾವಾಗಲೂ ಬಲಿಕೊಡಲು ಸಿದ್ಧನಾಗುತ್ತಾನೆ.

ದುಡಿಮೆಯು ಕೇವಲ ಹಣಕ್ಕಾಗಿ ಮಾತ್ರವಾಗುತ್ತದೆ. ಅದರ ಹೆಸರಿನಲ್ಲಿ ಪೋಷಕರೊಂದಿಗೂ ದೂರವಾಗುತ್ತಾನೆ. ಹೆಂಡತಿಯನ್ನು ಮಕ್ಕಳನ್ನು ಕಡೆಗಣಿಸಲು ಕೂಡ ಸಿದ್ಧನಾಗುತ್ತಾನೆ. ಹೀಗೆ ಜೀವಿಸುವುದೂ ಸಾಯುವುದೂ ಸಂಪತ್ತಿಗಾಗಿದ್ದರೆ ಅವನು ಅದರ ದಾಸನಾಗಿರುತ್ತಾನೆ. ಸಂಪತ್ತು ಯಜಮಾನನೂ ಆಗುತ್ತದೆ. ಅದಕ್ಕಾಗಿಯೇ ಪ್ರವಾದಿಯವರು ಹೀಗೆ ಹೇಳಿದರು: ದಿನಾರ್ ಮತ್ತು ದಿರ್ಹಮ್‌ಗಳ (ಚಿನ್ನ ಮತ್ತು ಬೆಳ್ಳಿಯ ನಾಣ್ಯಗಳ) ದಾಸನು ವಿನಾಶಕ್ಕೀಡಾದನು! ಅವನಿಗೆ ನೀಡಿದರೆ ಅವನು ತೃಪ್ತನಾಗುತ್ತಾನೆ, ನೀಡದಿದ್ದರೆ ಅತೃಪ್ತನಾಗುತ್ತಾನೆ” (ಬುಖಾರಿ).

ಸಂಪತ್ತನ್ನೇ ಸರ್ವಪ್ರಧಾನವಾಗಿ ಕಂಡು ಅದನ್ನು ಯಜಮಾನನಾಗಿ ಸ್ವೀಕರಿಸಿ ಅದರ ದಾಸನಾಗಿ ಮಾರ್ಪಟ್ಟಿರುವುದರಿಂದ ಭೂಮಿಯಲ್ಲಿಯೇ ಅತ್ಯಂತ ಕಠಿಣ ವಿಪತ್ತುಗಳನ್ನು ಎದುರಿಸಬೇಕಾಗಿ ಬಂದ ಮೂರು ಘಟನೆಗಳು ಪವಿತ್ರ ಕುರ್‌ಆನ್‌ನಲ್ಲಿವೆ (ಅಲ್-ಕಹ್ಫ್: 32-42, ಅಲ್-ಖಸಸ್: 76-81, ಅಲ್-ಕಲಮ್: 17-29).

ಸಂಪತ್ತಿನ ದಾಸರ ಕುರಿತು ಪ್ರವಾದಿಯವರು ಹೇಳಿದರು: “ಖಂಡಿತವಾಗಿಯೂ ಜನರು ಒಂದು ಕಾಲಘಟ್ಟವನ್ನು ಎದುರಿಸಲಿದ್ದಾರೆ. ಅಂದು ಸಂಪತ್ತು ಸಂಪಾದನೆಯು ಅನುಮತಿಸಲ್ಪಟ್ಟ (ಹಲಾಲ್) ಮಾರ್ಗದಿಂದ ಬಂದದ್ದೋ ಅಥವಾ ನಿಷೇಧಿಸಲ್ಪಟ್ಟ (ಹರಾಮ್) ಮಾರ್ಗದಿಂದ ಬಂದದ್ದೋ ಎಂದು ಅವರು ನೋಡುವುದಿಲ್ಲ” (ಬುಖಾರಿ).

ದೇಹೇಚ್ಛೆಗಳ ದಾಸರಾದವರು ಮನಸ್ಸಿಗೆ ಬಂದದ್ದನ್ನೆಲ್ಲಾ ಆಡುವವರೂ ಮತ್ತು ವರ್ತಿಸುವವರೂ ಆಗಿರುತ್ತಾರೆ. “ನನ್ನ ದೇಹವೂ ನನ್ನ ಜೀವನವೂ ನನ್ನದೇ ಆಗಿದೆ. ಅದನ್ನು ಹೇಗೆ ಬಳಸಬೇಕೆಂಬುದನ್ನೂ ಹೇಗೆ ಜೀವಿಸಬೇಕೆಂಬುದನ್ನೂ ನಿರ್ಧರಿಸುವವನು ನಾನೇ. ಅದರಲ್ಲಿ ಯಾರೂ ಹಸ್ತಕ್ಷೇಪ ಮಾಡಬೇಕಿಲ್ಲ. ನನ್ನನ್ನು ನಿಯಂತ್ರಿಸಲು ಧರ್ಮವಾಗಲಿ, ದೇವನಾಗಲಿ, ಸಮಾಜವಾಗಲಿ ಬರಬೇಕಿಲ್ಲ.” ಹೀಗೆ ತನ್ನ ಸ್ವಾರ್ಥವನ್ನೇ ದೇವನನ್ನಾಗಿ ಹಾಗೂ ಯಜಮಾನನನ್ನಾಗಿ ಮಾಡಿಕೊಂಡು ಅದರ ದಾಸರಾಗಿ ಮಾರ್ಪಟ್ಟವರ ಕುರಿತು ಪವಿತ್ರ ಕುರ್‌ಆನ್ ಹೇಳಿದೆ:

“ತನ್ನ ಚಿತ್ತಾಕಾಂಕ್ಷೆಯನ್ನು ತನ್ನ ದೇವನಾಗಿ ಮಾಡಿಕೊಂಡಿರುವಾತನ ಸ್ಥಿತಿಯ ಬಗ್ಗೆ ನೀವೆಂದಾದರೂ ವಿವೇಚಿಸಿದಿರಾ? ನೀವು ಇಂತಹವರನ್ನು ಸರಿದಾರಿಗೆ ತರುವ ಹೊಣೆಯನ್ನು ವಹಿಸಿಕೊಳ್ಳಬಲ್ಲಿರಾ?” (ಅಲ್-ಫುರ್ಖಾನ್: 43, ಅಲ್-ಜಾಸಿಯಾ: 23).

ದೇಶವನ್ನೇ ಯಜಮಾನನನ್ನಾಗಿಯೂ ದೇವನನ್ನಾಗಿಯೂ ಮಾಡಿಕೊಂಡವರು ಅದರ ದಾಸರಾಗಿದ್ದಾರೆ. ಅವರು ಬೇರಾವುದಕ್ಕಿಂತಲೂ ದೇಶಕ್ಕೆ ಪ್ರಾಮುಖ್ಯತೆಯನ್ನು ಕಲ್ಪಿಸುತ್ತಾರೆ. ಅದಕ್ಕಾಗಿ ಜೀವಿಸುತ್ತಾರೆ ಮತ್ತು ಸಾಯುತ್ತಾರೆ. ಇತರರನ್ನು ಕೊಲ್ಲುತ್ತಾರೆ ಮತ್ತು ಕೊಳ್ಳೆಹೊಡೆಯುತ್ತಾರೆ. ಯುದ್ಧ ಮಾಡುತ್ತಾರೆ ಮತ್ತು ಅಸಂಖ್ಯಾತ ಜನರನ್ನು ಸಾಮೂಹಿಕ ಹತ್ಯೆಗೈಯುತ್ತಾರೆ. ವಂಶಾಭಿಮಾನಿಗಳು ತಮ್ಮ ವಂಶವನ್ನೇ ದೇವನನ್ನಾಗಿ ಮಾಡಿ ಅದರ ದಾಸರಾಗಿ ಮಾರ್ಪಡುವವರಾಗಿದ್ದಾರೆ. ಅಂತಹವರು ಮಾನವತೆಯ ಸಮಸ್ತ ಮಾನವೀಯ ಮೌಲ್ಯಗಳನ್ನೂ ಬಲಿಕೊಡುತ್ತಾರೆ.

ಆದರೆ, ಒಬ್ಬನು ಅಲ್ಲಾಹನ ಮಾತ್ರವೇ ನೈಜ ದಾಸನಾಗುವುದರೊಂದಿಗೆ ಇತರ ಎಲ್ಲಾ ದಾಸ್ಯಗಳನ್ನೂ ನಿರಾಕರಿಸುತ್ತಾನೆ. ಅವೆಲ್ಲವುಗಳಿಂದ ಸಂಪೂರ್ಣವಾಗಿ ಮುಕ್ತಿ ಪಡೆಯುತ್ತಾನೆ. ಹಣ, ಪದವಿ, ಚಿನ್ನ, ಸ್ತ್ರೀ, ಕೀರ್ತಿ, ಪ್ರಶಂಸೆ, ಹುದ್ದೆಗಳು, ದೇಶಭಕ್ತಿ, ದೇಶ, ಭಾಷೆ, ವಂಶ, ವರ್ಗ, ಪುರೋಹಿತರು, ಏಕಾಧಿಪತಿ, ಸರ್ವಾಧಿಕಾರಿ ಮುಂತಾದ ಎಲ್ಲಾ ರೀತಿಯ ದಾಸ್ಯಗಳನ್ನೂ ಅದು ಬಡಿದಟ್ಟುತ್ತದೆ. ಹಾಗೆ ಸಂಪೂರ್ಣ ವಿಮೋಚನೆಯನ್ನು ಪಡೆಯುತ್ತದೆ. ಸಂಪೂರ್ಣ ಸ್ವಾತಂತ್ರ್ಯವನ್ನು ಘೋಷಿಸುತ್ತದೆ.

ಆಗ ಪರಮವಾದ ಪ್ರೀತಿಯು ಅಲ್ಲಾಹನಿಗೆ ಮೀಸಲಾಗಿರುತ್ತದೆ. “ಸತ್ಯವಿಶ್ವಾಸಿಗಳು ಅತ್ಯಂತ ಹೆಚ್ಚಾಗಿ ಪ್ರೀತಿಸುವುದು ಅಲ್ಲಾಹನನ್ನೇ ಆಗಿದೆ” (ಅಲ್-ಬಕರಾ: 165).

ಅವರು ತಮ್ಮನ್ನು ಸೃಷ್ಟಿಕರ್ತನೂ ಸಂರಕ್ಷಕನೂ ಆದ ಏಕ ದೇವನಿಗೆ ಸಂಪೂರ್ಣವಾಗಿ ಸಮರ್ಪಿಸಿಕೊಳ್ಳುತ್ತಾರೆ. ಜೀವನದ ಸಮಸ್ತ ಕ್ಷೇತ್ರಗಳ ನಿಯಂತ್ರಣಾಧಿಕಾರವನ್ನು ಆವನಿಗೆ ಮಾತ್ರ ನೀಡುತ್ತಾರೆ. ಆಗ ಹೇಳುವ ಪ್ರತಿಯೊಂದು ಮಾತೂ ಮಾಡುವ ಪ್ರತಿಯೊಂದು ಕೃತಿಯೂ ಅಲ್ಲಾಹನ ಕಾನೂನು-ನಿರ್ದೇಶನಗಳಿಗೆ ಒಳಪಟ್ಟಿರುತ್ತದೆ. ಅವರು ಪರಿಪೂರ್ಣ ಮನಸ್ಸಿನಿಂದ ಘೋಷಿಸುತ್ತಾರೆ:

“ಖಂಡಿತವಾಗಿಯೂ ನನ್ನ ನಮಾಝ್, ನನ್ನ ಸರ್ವ ಉಪಾಸನಾವಿಧಿಗಳು, ನನ್ನ ಜೀವನ ಮತ್ತು ನನ್ನ ಮರಣ ಎಲ್ಲವೂ ಯಾವ ಸಹಭಾಗಿಯೂ ಇಲ್ಲದ ಸರ್ವಲೋಕ ಪಾಲಕನಿಗಾಗಿದೆ” (ಅಲ್-ಅನ್ಆಮ್: 162)