‘ವ್ಯಾಪಾರ ರಹಸ್ಯ’; ಎಸ್‌ಐಆರ್ ಮತದಾರರ ಪಟ್ಟಿ ಪರಿಶೀಲನೆಗೆ ಬಳಸಿದ ಸಾಫ್ಟ್‌ವೇರ್ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದ ಚುನಾವಣಾ ಆಯೋಗ

0
207

ಸನ್ಮಾರ್ಗ ವಾರ್ತೆ

ಹೊಸದೆಹಲಿ: ಮತದಾರರ ಪಟ್ಟಿಯಲ್ಲಿನ ದೋಷಗಳು ಮತ್ತು ವ್ಯತ್ಯಾಸಗಳನ್ನು ಪತ್ತೆಹಚ್ಚಲು ವಿಶೇಷ ತೀವ್ರ ಪರಿಶೀಲನೆ (ಎಸ್‌ಐಆರ್) ಪ್ರಕ್ರಿಯೆಯ ಸಮಯದಲ್ಲಿ ಬಳಸಲಾದ ಸಾಫ್ಟ್‌ವೇರ್‌ನ ಹೆಸರು ಮತ್ತು ಆವೃತ್ತಿಯನ್ನು (ವರ್ಷನ್) ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಚುನಾವಣಾ ಆಯೋಗ ತಿಳಿಸಿದೆ. ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಲಾದ ಅರ್ಜಿಗೆ ಸ್ಪಷ್ಟನೆ ನೀಡಿದ ಆಯೋಗವು, ಇವು ವಾಣಿಜ್ಯ ರಹಸ್ಯಗಳು, ವ್ಯಾಪಾರ ರಹಸ್ಯಗಳು ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿರುವುದರಿಂದ ಇವುಗಳನ್ನು ಬಹಿರಂಗಪಡಿಸುವುದರಿಂದ ವಿನಾಯಿತಿ ನೀಡಲಾಗಿದೆ ಎಂದು ತಿಳಿಸಿದೆ.

ತೆಲಂಗಾಣದ ಕರೀಂನಗರ ಮೂಲದ ಸಾಮಾಜಿಕ ಕಾರ್ಯಕರ್ತ ಎಂ.ಎ. ಮುಜೀಬ್ ಅಯ್ಯೂಬ್ ಜುಲೈ 27 ರಂದು ಈ ಕುರಿತು ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರು. ಎಸ್‌ಐಆರ್‌ನ ಭಾಗವಾಗಿ ಮತದಾರರ ಪಟ್ಟಿಯಲ್ಲಿನ ದೋಷಗಳು, ಅಕ್ರಮಗಳು ಮತ್ತು ವ್ಯತ್ಯಾಸಗಳನ್ನು ಪತ್ತೆಹಚ್ಚಲು ಬಳಸಲಾದ ಸಾಫ್ಟ್‌ವೇರ್, ಅಪ್ಲಿಕೇಶನ್, ಅಲ್ಗಾರಿದಮ್ ಮತ್ತು ಕೃತಕ ಬುದ್ಧಿಮತ್ತೆ (ಎಐ) ವೇದಿಕೆಯ ವಿವರಗಳನ್ನು ಅವರು ಕೋರಿದ್ದರು.

ಅಕ್ಟೋಬರ್ 16 ರಂದು ನೀಡಿರುವ ಉತ್ತರದಲ್ಲಿ, ಎಸ್‌ಐಆರ್ ಪ್ರಕ್ರಿಯೆಗಾಗಿ ಯಾವುದೇ ಹೊಸ ಸಾಫ್ಟ್‌ವೇರ್ ಅನ್ನು ಅಭಿವೃದ್ಧಿಪಡಿಸಿಲ್ಲ ಅಥವಾ ಖರೀದಿಸಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ಮತದಾರರನ್ನು ಪಟ್ಟಿಯಲ್ಲಿ ಸೇರಿಸಬೇಕೇ ಅಥವಾ ಹೊರಗಿಡಬೇಕೇ ಎಂಬ ನಿರ್ಧಾರವನ್ನು ಮತದಾರರ ನೋಂದಣಿ ಅಧಿಕಾರಿಗಳು ತೆಗೆದುಕೊಳ್ಳುತ್ತಾರೆ ಎಂದೂ ಆಯೋಗ ತಿಳಿಸಿದೆ.

ಮತದಾರರ ಪಟ್ಟಿಯಲ್ಲಿರುವ ಮಾಹಿತಿಯನ್ನು ಪರಿಶೀಲಿಸಲು ಬಳಸಲಾದ ತಾಂತ್ರಿಕ ವ್ಯವಸ್ಥೆಗಳ ಬಗ್ಗೆ ಅರ್ಜಿದಾರರು ಹೆಚ್ಚಿನ ವಿವರಗಳನ್ನು ಕೋರಿದ್ದರು. ಸಾಫ್ಟ್‌ವೇರ್ ಅಥವಾ ಎಐ ವ್ಯವಸ್ಥೆಯು ಸ್ವಯಂಚಾಲಿತವಾಗಿ ದೋಷಗಳನ್ನು ಪತ್ತೆಹಚ್ಚುತ್ತದೆಯೇ ಮತ್ತು ಪರಿಶೀಲನೆ, ತಿದ್ದುಪಡಿ ಅಥವಾ ಹೆಸರುಗಳನ್ನು ತೆಗೆದುಹಾಕಲು ಸಲಹೆಗಳನ್ನು ನೀಡುತ್ತದೆಯೇ ಎಂದೂ ಅವರು ಪ್ರಶ್ನಿಸಿದ್ದರು.

ಅಂತಹ ಮಾಹಿತಿ ಕಂಡುಬಂದರೆ ಮುಂದಿನ ಕ್ರಮವನ್ನು ಹೇಗೆ ತೆಗೆದುಕೊಳ್ಳಲಾಗುತ್ತದೆ ಮತ್ತು ಅದರ ವಿವರವಾದ ಪ್ರಕ್ರಿಯೆ ಏನು ಎಂಬುದರ ಕುರಿತೂ ಅರ್ಜಿ ಸ್ಪಷ್ಟನೆ ಕೋರಿತ್ತು. ಎಸ್‌ಐಆರ್‌ನ ಯಾವುದೇ ಹಂತದಲ್ಲಿ ಎಐ, ಮೆಷಿನ್ ಲರ್ನಿಂಗ್, ಪ್ರಿಡಿಕ್ಟಿವ್ ಅನಾಲಿಟಿಕ್ಸ್ ಮತ್ತು ಆಟೋಮೇಟೆಡ್ ನಿರ್ಧಾರ ಬೆಂಬಲ ವ್ಯವಸ್ಥೆಗಳನ್ನು ಬಳಸಲಾಗಿದೆಯೇ ಎಂದೂ ಅಯ್ಯೂಬ್ ಕೇಳಿದ್ದರು.

ಆದಾಗ್ಯೂ, ಕೋರಲಾದ ಸ್ಪಷ್ಟನೆಯು ಮಾಹಿತಿ ಹಕ್ಕು ಕಾಯ್ದೆಯ ಸೆಕ್ಷನ್ 2, ಸಬ್-ಸೆಕ್ಷನ್ 2(f) ರ ಅಡಿಯಲ್ಲಿ ವ್ಯಾಖ್ಯಾನಿಸಲಾದ ‘ಮಾಹಿತಿ’ಯ ವ್ಯಾಪ್ತಿಗೆ ಬರುವುದಿಲ್ಲ ಎಂಬುದು ಆಯೋಗದ ಉತ್ತರವಾಗಿತ್ತು. ಸಾಫ್ಟ್‌ವೇರ್ ಮತ್ತು ಅಲ್ಗಾರಿದಮ್‌ಗಳ ಮಾಹಿತಿಯನ್ನು ಸಾಮಾನ್ಯವಾಗಿ ಇಂತಹ ಅರ್ಜಿಗಳಲ್ಲಿ ಬಹಿರಂಗಪಡಿಸುವುದಿಲ್ಲ ಎಂದು ಚುನಾವಣಾ ಆಯೋಗದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ತಯಾರಿಸುವ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಮತ್ತು ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್‌ನಂತಹ ಕಂಪನಿಗಳು ಆರ್‌ಟಿಐ ಅರ್ಜಿಗಳಿಗೆ ಉತ್ತರಿಸುವಾಗ ಈ ಹಿಂದೆ ಇವಿಎಂ (EVM) ಗಳ ಸೋರ್ಸ್ ಕೋಡ್‌ಗಳನ್ನು ಬಹಿರಂಗಪಡಿಸಲು ನಿರಾಕರಿಸಿದ್ದವು ಎಂದೂ ವರದಿ ತಿಳಿಸಿದೆ.