ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ 15ನೇ ದಿನಕ್ಕೆ: ಜಾಮಿಯಾ ವಿದ್ಯಾರ್ಥಿಗಳ ವಶ, ಕಾನೂನು ಕ್ರಮದ ಎಚ್ಚರಿಕೆ

0
288

ಸನ್ಮಾರ್ಗ ವಾರ್ತೆ

ನವದೆಹಲಿ: ಕ್ಯಾಂಪಸ್ ಸುತ್ತಲೂ ಭದ್ರತೆಯನ್ನು ಬಿಗಿಗೊಳಿಸಿದ್ದರಿಂದ ಸೋಮವಾರ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಹೊರಗೆ ಪೊಲೀಸರು ಹಲವು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದರು. ಮಾನ್ಯವಾದ ಗುರುತಿನ ಚೀಟಿ ಹೊಂದಿದ್ದ ವಿದ್ಯಾರ್ಥಿಗಳನ್ನು ವಿಶ್ವವಿದ್ಯಾಲಯ ಪ್ರವೇಶಿಸದಂತೆ ತಡೆದು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಗೇಟ್‌ನ ಹೊರಗೆ ಪ್ರತಿಭಟನೆ ನಡೆಸಿದವರನ್ನು ಪೊಲೀಸರು ತಳ್ಳಾಡಿದ್ದಾರೆ ಅಥವಾ ವಶಕ್ಕೆ ಪಡೆದಿದ್ದಾರೆ.

ಮುಖ್ಯ ಪ್ರಾಕ್ಟರ್ ಅವರು ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಅಂತಿಮ ನೋಟಿಸ್ ಜಾರಿ ಮಾಡಿದ್ದಾರೆ. ಗುಲಿಸ್ತಾನ್-ಎ-ಗಾಲಿಬ್ ಕಟ್ಟಡ ಮತ್ತು ಗಾಲಿಬ್ ಲಾನ್‌ ಅನ್ನು ತಕ್ಷಣವೇ ಖಾಲಿ ಮಾಡಬೇಕು, ಇಲ್ಲದಿದ್ದರೆ ಶಿಸ್ತು ಕ್ರಮ ಮತ್ತು ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಅದರಲ್ಲಿ ಆದೇಶಿಸಲಾಗಿದೆ. 15 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಎಬಿನ್, ಈ ನೋಟಿಸ್ ಸಂಜೆ ವಿದ್ಯಾರ್ಥಿಗಳಿಗೆ ತಲುಪಿದೆ ಎಂದು ವಿಡಿಯೊ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಪ್ರತಿಭಟನಾಕಾರರು ಬಂಧನ ಮತ್ತು ಕಸ್ಟಡಿಯ ಭೀತಿಯಲ್ಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಉಪವಾಸ ಸತ್ಯಾಗ್ರಹ ನಿತರಾಗಿದ್ದವರಿಗೆ ಬೆಂಬಲ ಸೂಚಿಸಿ ವಿದ್ಯಾರ್ಥಿನಿಯರು ಗೇಟ್ ಸಂಖ್ಯೆ 7 ರತ್ತ ಮೆರವಣಿಗೆ ನಡೆಸಿದರು. ಭಾನುವಾರ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಹೊರಡಿಸಿದ ಸೂಚನೆಯ ಹಿನ್ನೆಲೆಯಲ್ಲಿ ಈ ಮೆರವಣಿಗೆ ನಡೆಯಿತು. ಚುನಾಯಿತ ವಿದ್ಯಾರ್ಥಿ ಯೂನಿಯನ್ ಅನ್ನು ಮರುಸ್ಥಾಪಿಸುವ ತಮ್ಮ ಬೇಡಿಕೆಯನ್ನು ಅದು ಈಡೇರಿಸದ ಕಾರಣ ಪ್ರತಿಭಟನಾಕಾರರು ಈ ಸೂಚನೆಯನ್ನು ಕಣ್ಣೊರೆಸುವ ತಂತ್ರ ಎಂದು ತಳ್ಳಿಹಾಕಿದ್ದಾರೆ.

ಕ್ಯಾಂಪಸ್‌ನಲ್ಲಿ ಮೂಲಭೂತ ಸೌಕರ್ಯಗಳು ವ್ಯತ್ಯಯಗೊಂಡಿವೆ ಎಂದೂ ವಿದ್ಯಾರ್ಥಿಗಳು ವರದಿ ಮಾಡಿದ್ದಾರೆ. ವಿದ್ಯುತ್ ಮತ್ತು ಬೆಳಕಿನ ವ್ಯವಸ್ಥೆಯಿಲ್ಲ ಹಾಗೂ ಕುಡಿಯುವ ನೀರಿನ ಪೂರೈಕೆ ತಡವಾಗಿ ತಲುಪಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. ಈ ಪರಿಸ್ಥಿತಿಯನ್ನು ವಿದ್ಯಾರ್ಥಿ ವಿರೋಧಿ ಎಂದು ಕರೆದಿದ್ದಾರೆ.

ಸೋಮವಾರ ನೀಡಿದ ಹೇಳಿಕೆಯಲ್ಲಿ, ರಿಜಿಸ್ಟ್ರಾರ್ ಹೊರಡಿಸಿದ ಸೂಚನೆಯು ವಿದ್ಯಾರ್ಥಿ ಯೂನಿಯನ್ ಸಂವಿಧಾನವನ್ನು ಸಿದ್ಧಪಡಿಸಲು ಮತ್ತು ಅನುಮೋದಿಸಲು ಯಾವುದೇ ಕಡ್ಡಾಯ ಸಮಯಮಿತಿಯನ್ನು ನಿಗದಿಪಡಿಸಿಲ್ಲ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ. 2026 ರ ಡಿಸೆಂಬರ್ 20 ರೊಳಗೆ ಸಂವಿಧಾನಕ್ಕೆ ಅನುಮೋದನೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ. ಅನುಮೋದನೆ ದೊರೆತ 15 ದಿನಗಳಲ್ಲಿ ಚುನಾವಣಾ ದಿನಾಂಕವನ್ನು ಘೋಷಿಸಬೇಕು ಎಂದು ಅವರು ಬಯಸಿದ್ದಾರೆ.

ಪ್ರತಿಭಟನೆಗೆ ಸಂಬಂಧಿಸಿದ ಎಲ್ಲಾ ಶಿಸ್ತು ಕ್ರಮಗಳನ್ನು ಹಿಂಪಡೆಯಬೇಕು ಎಂದೂ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ. ಇದರಲ್ಲಿ ಶೋಕಾಸ್‌ ನೋಟಿಸ್‌ಗಳು, ಅಮಾನತುಗಳು, ಕ್ಯಾಂಪಸ್ ಪ್ರವೇಶ ನಿಷೇಧ ಮತ್ತು ಉಚ್ಚಾಟನೆ (rustication) ಆದೇಶಗಳು ಸೇರಿವೆ. ಮುಖ್ಯ ಭದ್ರತಾ ಸಲಹೆಗಾರರ ರಾಜೀನಾಮೆಗೆ ಅವರು ಆಗ್ರಹಿಸಿದ್ದಾರೆ. ಶಾಂತಿಯುತ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಕ್ಕಾಗಿ ಯಾವ ವಿದ್ಯಾರ್ಥಿಯೂ ಕ್ಷಮೆಯಾಚಿಸಬಾರದು ಎಂದು ಅವರು ಹೇಳಿದ್ದಾರೆ.

ಆಯ್ದು ಮಾಡಿದ ಪರಿಹಾರವನ್ನು ಹೇಳಿಕೆಯು ಟೀಕಿಸಿದೆ. ಕೆಲವು ಶೋಕಾಸ್‌ ನೋಟಿಸ್‌ಗಳು ಮತ್ತು ಅಮಾನತು ಆದೇಶಗಳನ್ನು ರದ್ದುಗೊಳಿಸಲಾಗಿದೆ. ಆದರೆ ಉಪವಾಸ ಸತ್ಯಾಗ್ರಹ ನಡೆಸಿದ ವಿದ್ಯಾರ್ಥಿಗಳು ಇನ್ನೂ ಶೈಕ್ಷಣಿಕ ದಂಡನೆಗಳನ್ನು ಮತ್ತು ಕ್ಯಾಂಪಸ್ ಪ್ರವೇಶದ ಮೇಲಿನ ನಿರ್ಬಂಧಗಳನ್ನು ಎದುರಿಸುತ್ತಿದ್ದಾರೆ.

ಕುಲಪತಿಗಳಿಗೆ ಬರೆದ ಪತ್ರದಲ್ಲಿ ವಿದ್ಯಾರ್ಥಿಗಳು ತಮ್ಮ ಬೇಡಿಕೆಗಳನ್ನು ಪುನರುಚ್ಚರಿಸಿದ್ದಾರೆ. ಅರ್ಧಂಬರ್ಧ ಕ್ರಮಗಳನ್ನು ಮತ್ತು ಅನನಿರ್ದಿಷ್ಟ ಭರವಸೆಗಳನ್ನು ತಿರಸ್ಕರಿಸಿದ್ದಾರೆ. ಪಾರದರ್ಶಕ ಸಂವಾದ ನಡೆಸಿ ಸಮಯಬದ್ಧ ಯೋಜನೆಯನ್ನು ಒದಗಿಸುವಂತೆ ಆಡಳಿತ ಮಂಡಳಿಯನ್ನು ಒತ್ತಾಯಿಸಿದ್ದಾರೆ.

ವಿದ್ಯಾರ್ಥಿಗಳಾದ ಝಹ್ವಾ ಮತ್ತು ಸನಾ, “ನಾವು ಅಪರಾಧಿಗಳಲ್ಲ. ಅವರು ವಿದ್ಯಾರ್ಥಿಗಳನ್ನು ಏಕೆ ಬಂಧಿಸುತ್ತಿದ್ದಾರೆ?” ಎಂದು ಪ್ರಶ್ನಿಸಿದ್ದಾರೆ. ಮನವಿ ಪತ್ರಕ್ಕೆ ಸಹಿ ಹಾಕುವಾಗ ವಿದ್ಯಾರ್ಥಿ ನಿಯೋಗದ ಎಲ್ಲಾ ಸದಸ್ಯರು ಉಪಸ್ಥಿತರಿರಲಿಲ್ಲ ಎಂದು ಝಹ್ವಾ ಆರೋಪಿಸಿದ್ದಾರೆ. ಆ ದಾಖಲೆಯು ಯಾವುದೇ ಉಲ್ಲೇಖ ಸಂಖ್ಯೆಯನ್ನು (reference number) ಹೊಂದಿಲ್ಲ ಮತ್ತು ಅಸ್ಪಷ್ಟ ಭರವಸೆಗಳನ್ನು ನೀಡುತ್ತದೆ ಎಂದು ಅವರು ಹೇಳಿದ್ದಾರೆ.

ಪ್ರಾಕ್ಟೋರಿಯಲ್ ತಂಡದ ಸದಸ್ಯರು ದೀರ್ಘಕಾಲದಿಂದ ತಮ್ಮ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ ಎಂದೂ ವಿದ್ಯಾರ್ಥಿಗಳು ಆರೋಪಿಸಿ ಉತ್ತರದಾಯಿತ್ವಕ್ಕೆ ಆಗ್ರಹಿಸಿದ್ದಾರೆ. “ಹುದ್ದೆಯಲ್ಲಿ ಆಡಳಿತಾಧಿಕಾರಿ, ಕ್ರಿಯೆಯಲ್ಲಿ ಕೊಲೆಗಾರ” (Admin by title, killer by action) ಎಂದು ಬರೆದ ಪೋಸ್ಟರ್ ಮತ್ತು ನಕಲಿ ಹೆಣಗಳೊಂದಿಗೆ ಸಾಂಕೇತಿಕ ಪ್ರತಿಭಟನೆ ನಡೆಸಿದರು. ಆಡಳಿತ ಮಂಡಳಿಯು ಚುನಾಯಿತ ವಿದ್ಯಾರ್ಥಿ ಯೂನಿಯನ್ ಅನ್ನು ಮರುಸ್ಥಾಪಿಸುವವರೆಗೆ ತಮ್ಮ ಹೋರಾಟ ಮುಂದುವರಿಯಲಿದೆ ಎಂದು ಪ್ರತಿಭಟನಾಕಾರರು ಪ್ರತಿಜ್ಞೆ ಮಾಡಿದ್ದಾರೆ.