ಸನ್ಮಾರ್ಗ ವಾರ್ತೆ
ಪಕ್ಕಲಡ್ಕ: ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ ಕರ್ನಾಟಕ (BIE) ಪಕ್ಕಲಡ್ಕ ಸೆಂಟರ್ ವತಿಯಿಂದ ಪ್ರತಿಭಾ ಪುರಸ್ಕಾರ ಮತ್ತು ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮವು ಮರ್ಹೂಮ್ ಇಬ್ರಾಹಿಂ ಸಈದ್ ಸಭಾಂಗಣ, ಸ್ನೇಹ ಸದನ ಪಕ್ಕಲಡ್ಕದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ BIE ದಕ್ಷಿಣ ಕನ್ನಡ ಜಿಲ್ಲಾ ಸಂಚಾಲಕರಾದ ಜ. ಹನೀಫ್ ಮಾಸ್ಟರ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಧಾರ್ಮಿಕ ಹಾಗೂ ನೈತಿಕ ಮೌಲ್ಯಗಳನ್ನು ಬೆಳೆಸುವುದರ ಜೊತೆಗೆ ಅವರ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಗುರುತಿಸಿ ಪ್ರೋತ್ಸಾಹಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದರು. ಶಿಕ್ಷಣವು ಕೇವಲ ಅಂಕಗಳಿಗೆ ಸೀಮಿತವಾಗದೆ, ಉತ್ತಮ ವ್ಯಕ್ತಿತ್ವ ಮತ್ತು ಜವಾಬ್ದಾರಿಯುತ ನಾಗರಿಕರನ್ನು ರೂಪಿಸುವಂತಿರಬೇಕು. ಮಕ್ಕಳ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಸನ್ಮಾನಿಸುವ ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಮತ್ತಷ್ಟು ಸಾಧನೆ ಮಾಡುವ ಪ್ರೇರಣೆಯನ್ನು ನೀಡುತ್ತವೆ ಎಂದರು. ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ, ಶಿಸ್ತು ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವಲ್ಲಿ ಶಿಕ್ಷಕರು ಹಾಗೂ ಪೋಷಕರು ಪ್ರಮುಖ ಪಾತ್ರ ವಹಿಸಬೇಕು ಎಂದು ತಿಳಿಸಿದರು.
ಹ್ಯೂಮನ್ ವೆಲ್ಫೇರ್ ಟ್ರಸ್ಟ್ ಪಕ್ಕಲಡ್ಕದ ಅಧ್ಯಕ್ಷರಾದ ಜ. ಅಬ್ದುಲ್ ಗಫೂರ್ ಕುಲಾಯಿ ಸಮಾರೋಪ ನುಡಿಗಳನ್ನಾಡಿ, “ವಿದ್ಯಾರ್ಥಿಗಳಲ್ಲಿ ಮೌಲ್ಯಾಧಾರಿತ ಶಿಕ್ಷಣದ ಮಹತ್ವವನ್ನು ವಿವರಿಸಿದರು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಜ್ಞಾನ ಮತ್ತು ಕೌಶಲ್ಯದ ಜೊತೆಗೆ ನೈತಿಕತೆ, ಪ್ರಾಮಾಣಿಕತೆ ಹಾಗೂ ಉತ್ತಮ ಗುಣನಡತೆಯೂ ಅಗತ್ಯವಾಗಿದೆ ಎಂದು ಹೇಳಿದರು”
ಸ್ನೇಹ ಪಬ್ಲಿಕ್ ಸ್ಕೂಲ್ನ ವ್ಯಾಲ್ಯೂ ಎಜುಕೇಶನ್ ವಿಭಾಗದ HOD ಶಿಕ್ಷಕಿ ಆಬಿದಾ ಮರಿಯಮ್, ಸ್ನೇಹ ಪಬ್ಲಿಕ್ ಸ್ಕೂಲ್ನ ಮುಖ್ಯೋಪಾಧ್ಯಾಯಿನಿ ಶ್ರೀಮತಿ ನಾಗರತ್ನ, ಸೋಷಿಯಲ್ ಸರ್ವೀಸ್ ಯುನಿಟ್ ಮಂಗಳೂರು ದಕ್ಷಿಣ ಇದರ ಸಂಚಾಲಕ ಸಲಾಂ ಪಕ್ಕಲಡ್ಕ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ BIE ಪಕ್ಕಲಡ್ಕ ಘಟಕದ ಸಂಚಾಲಕ ಶಿಕ್ಷಕ ಅಶೀರುದ್ದೀನ್ ಆಲಿಯಾ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಶಿಕ್ಷಕಿ ಸಂಹಾ ಜುವೈರಿಯಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಝೈನಬಾ ಮಿಝಾಜ್ ಪ್ರಮಾಣ ಪತ್ರ ಪಟ್ಟಿ ವಾಚಿಸಿದರು. ಶಾಹಿದ್ ಕಿರಾಅತ್ ನೆರವೇರಿಸಿದರು. ಸ್ನೇಹ ಪಬ್ಲಿಕ್ ಸ್ಕೂಲ್ನ ಕರೆಸ್ಪೋಂಡೆಂಟ್ ಯೂಸುಫ್ ಪಕ್ಕಲಡ್ಕ ಧನ್ಯವಾದ ಅರ್ಪಿಸಿದರು.












