ಎಪಿಸ್ಟೀನ್ ವಿವಾದದ ನಡುವೆಯೂ ಹರ್ದೀಪ್ ಸಿಂಗ್ ಪುರಿಗೆ ಬಿಜೆಪಿ ರಕ್ಷಣೆ; ಮಧ್ಯಪ್ರದೇಶದಿಂದ ರಾಜ್ಯಸಭೆಗೆ ಮರು ಆಯ್ಕೆ ಸಾಧ್ಯತೆ

0
144

ಸನ್ಮಾರ್ಗ ವಾರ್ತೆ

ನವದೆಹಲಿ: ಅಮೆರಿಕದ ಲೈಂಗಿಕ ಅಪರಾಧಿ ಜೆಫ್ರಿ ಎಪಿಸ್ಟೀನ್ ಸುತ್ತಲಿನ ವಿವಾದದ ನಡುವೆಯೂ, ಬಿಜೆಪಿ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ರಕ್ಷಣಾ ಕವಚ ವಿಸ್ತರಿಸಿದ್ದು, ಮಧ್ಯಪ್ರದೇಶದಿಂದ ರಾಜ್ಯಸಭೆ ಉಪಚುನಾವಣೆಗೆ ಅಭ್ಯರ್ಥಿಯಾಗಿ ನಾಮನಿರ್ದೇಶನ ಮಾಡಿದೆ.

ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ರಾಜ್ಯ ಸಚಿವ ಎಲ್. ಮುರುಗನ್ ಅವರ ರಾಜೀನಾಮೆಯಿಂದಾಗಿ ಈ ಸ್ಥಾನ ತೆರವಾಗಿತ್ತು. ಉತ್ತರ ಪ್ರದೇಶದಿಂದ ರಾಜ್ಯಸಭೆ ಸದಸ್ಯರಾಗಿರುವ ಪುರಿ ಅವರ ಅವಧಿಯು ನವೆಂಬರ್‌ನಲ್ಲಿ ಮುಕ್ತಾಯಗೊಳ್ಳಲಿದೆ. ಈ ತಿಂಗಳ ಆರಂಭದಲ್ಲಿ ಮುಂಬರುವ ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಎಂಟು ಹೊಸ ಮುಖಗಳನ್ನು ಕಣಕ್ಕಿಳಿಸಿದಾಗ, ಯುಪಿಯಲ್ಲಿ ಪುರಿ ಅವರನ್ನು ಮತ್ತೆ ನಾಮನಿರ್ದೇಶನ ಮಾಡಿರಲಿಲ್ಲ. ಕೇಂದ್ರ ನಾಯಕತ್ವವು ಈಗ ಮಧ್ಯಪ್ರದೇಶದಲ್ಲಿ ಸ್ಥಾನ ನೀಡುವ ಮೂಲಕ ಹರ್ದೀಪ್ ಸಿಂಗ್ ಪುರಿ ಅವರನ್ನು ರಕ್ಷಿಸುತ್ತಿದೆ.

ಜೆಫ್ರಿ ಎಪಿಸ್ಟೀನ್ ಅವರೊಂದಿಗೆ ಹರ್ದೀಪ್ ಸಿಂಗ್ ಪುರಿ ಇರುವ ಚಿತ್ರಗಳು ಮತ್ತು ದಾಖಲೆಗಳು ಬಿಡುಗಡೆಯಾದ ನಂತರ ಕೇಂದ್ರ ಸರ್ಕಾರವು ಆತ್ಮರಕ್ಷಣೆಯ ಸ್ಥಿತಿಗೆ ತಳ್ಳಲ್ಪಟ್ಟಿತ್ತು. ಕಳೆದ ವಾರ, ಅಮೆರಿಕದ ನ್ಯಾಯಾಂಗ ಇಲಾಖೆಯು ಹರ್ದೀಪ್ ಸಿಂಗ್ ಪುರಿ ಮತ್ತು ಎಪಿಸ್ಟೀನ್ ಒಂದೇ ಕೊಠಡಿಯಲ್ಲಿ ಕುಳಿತಿರುವ ಚಿತ್ರವನ್ನು ಬಿಡುಗಡೆ ಮಾಡಿತ್ತು. ಇದರೊಂದಿಗೆ ಕಾಂಗ್ರೆಸ್ ಸಚಿವರ ವಿರುದ್ಧ ರಂಗಕ್ಕಿಳಿಯಿತು.

ಸಂಸದೀಯ ವ್ಯವಹಾರಗಳ ಸಚಿವಾಲಯವನ್ನೂ ನಿರ್ವಹಿಸುತ್ತಿದ್ದ ಮುರುಗನ್, ರಾಜ್ಯಸಭಾ ಸದಸ್ಯರಾಗಿ 2030 ರವರೆಗೆ ಅವಧಿ ಇದ್ದಾಗಲೂ ಕೇಂದ್ರ ಸಂಪುಟ ಮತ್ತು ರಾಜ್ಯಸಭೆಗೆ ರಾಜೀನಾಮೆ ನೀಡಿದ್ದರು. ಉತ್ತರ ಪ್ರದೇಶದ ಎಲ್ಲಾ 10 ರಾಜ್ಯಸಭಾ ಅಭ್ಯರ್ಥಿಗಳು (ಬಿಜೆಪಿಯಿಂದ ಎಂಟು ಮತ್ತು ಸಮಾಜವಾದಿ ಪಕ್ಷದಿಂದ ಇಬ್ಬರು) ಈ ತಿಂಗಳ ಆರಂಭದಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಲಾಗಿತ್ತು.

‘ಎಪಿಸ್ಟೀನ್ ಫೈಲ್ಸ್’ನಲ್ಲಿ ಭಾಗಿಯಾಗಿದ್ದಾರೆ ಎಂದು ಪುರಿ ಈಗಾಗಲೇ ಆರೋಪ ಎದುರಿಸುತ್ತಿದ್ದರು. ಅಂದಿನಿಂದಲೂ ಕೇಂದ್ರ ಸರ್ಕಾರ ಪುರಿ ಅವರನ್ನು ರಕ್ಷಿಸಿಕೊಂಡು ಬರುತ್ತಿದೆ. ಪುರಿ ಅವರಿಗೆ ತಮ್ಮ ಕಡೆಯ ವಿವರಣೆ ನೀಡಲು ಅವಕಾಶ ಕಲ್ಪಿಸಲು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿ ಕರೆಯಲಾಗಿತ್ತು. ಇಂಟರ್ನ್ಯಾಷನಲ್ ಪೀಸ್ ಇನ್ಸ್ಟಿಟ್ಯೂಟ್‌ನಲ್ಲಿ ಕೆಲಸ ಮಾಡುವಾಗ ಅಧಿಕೃತ ಉದ್ದೇಶಗಳಿಗಾಗಿ ನಿಯೋಗದೊಂದಿಗೆ ತಾವು ಮೂರ್ನಾಲ್ಕು ಬಾರಿ ಎಪಿಸ್ಟೀನ್ ಅವರನ್ನು ಭೇಟಿಯಾಗಿದ್ದಾಗಿ ಸಚಿವರು ವಿವರಿಸಿದ್ದರು. ತಮ್ಮ ಹೆಸರು ಕೇವಲ ಒಂದು ಇ-ಮೇಲ್‌ನಲ್ಲಿ ಮಾತ್ರ ಉಲ್ಲೇಖಿಸಲಾಗಿದೆ ಮತ್ತು ಅದು ಲಿಂಕ್ಡ್‌ಇನ್ ಸಂಸ್ಥಾಪಕ ರೀಡ್ ಹಾಫ್‌ಮನ್‌ಗೆ ಸಂಬಂಧಿಸಿದಂತೆ ಭಾರತದಲ್ಲಿ ಇಂಟರ್ನೆಟ್ ಉದ್ಯಮದ ಸಾಧ್ಯತೆಗಳ ಕುರಿತಾಗಿತ್ತು ಎಂದು ಪುರಿ ವಿವರಿಸಿದ್ದರು.