ಜಾತ್ಯತೀತ ಭಾರತದಲ್ಲಿ ಸೌಹಾರ್ದತೆ ಮತ್ತು ಬಹುತ್ವ ನೆಲೆಯೂರಲು ಸಾಧ್ಯವೇ?

0
136

✍️ ಅಬ್ದುಲ್ ಅಝೀಝ್ ಉದ್ಯಾವರ

ಸ್ವತಂತ್ರ ಭಾರತದ ಇತಿಹಾಸವನ್ನು ಅವಲೋಕಿಸಿದಾಗ, ಒಂದು ಕಡೆ ಬಹುತ್ವ, ಜಾತ್ಯತೀತತೆ, ಸಮಾನತೆ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ನಮ್ಮ ಸಂವಿಧಾನವು ಭದ್ರ ಬುನಾದಿ ಹಾಕಿರುವುದು ಸ್ಪಷ್ಟವಾಗುತ್ತದೆ. ಮತ್ತೊಂದೆಡೆ, ಬ್ರಿಟಿಷರ ವಸಾಹತುಶಾಹಿ ಆಡಳಿತದ ವಿರುದ್ಧ ನಡೆದ ಸ್ವಾತಂತ್ರ್ಯ ಹೋರಾಟಕ್ಕೆ ಬೆಂಬಲ ನೀಡುವ ಬದಲು, ಅದಕ್ಕೆ ಪರೋಕ್ಷವಾಗಿ ಪೂರಕವಾದ ಸಾಮಾಜಿಕ ಮತ್ತು ರಾಜಕೀಯ ಶಕ್ತಿಗಳ ಇತಿಹಾಸವನ್ನೂ ನಾವು ವಿಮರ್ಶಾತ್ಮಕವಾಗಿ ಅರ್ಥಮಾಡಿಕೊಳ್ಳಬೇಕಾಗಿದೆ. ಅದರಲ್ಲೂ ಜಾತಿ ಶ್ರೇಣೀಕರಣ ಮತ್ತು ಸಾಮಾಜಿಕ ಅಸಮಾನತೆಯನ್ನು ಸಮರ್ಥಿಸುವ ಮನುವಾದಿ ಚಿಂತನೆಯ ಪಾತ್ರವನ್ನು ಅತೀ ಮುಖ್ಯವಾದುದು

ಸ್ವಾತಂತ್ರ್ಯ ದೊರೆತು ಏಳು ದಶಕಗಳಿಗೂ ಹೆಚ್ಚು ಕಾಲ ಕಳೆದರೂ, ಸಂವಿಧಾನದ ಆಶಯಗಳು ಸಂಪೂರ್ಣವಾಗಿ ಇಂದಿಗೂ ಸಾಕಾರಗೊಂಡಿಲ್ಲ. ಇದಕ್ಕೆ ಹಲವು ಕಾರಣಗಳಿವೆ. ಅವುಗಳಲ್ಲಿ ಪ್ರಮುಖವಾದವು ಮನುವಾದಿ ಸಾಮಾಜಿಕ ಮತ್ತು ರಾಜಕೀಯ ಮನೋಭಾವವನ್ನು ಸೈದ್ಧಾಂತಿಕವಾಗಿ ಎದುರಿಸುವಲ್ಲಿ ಕಂಡುಬಂದಿರುವ ಅಸ್ಪಷ್ಟತೆ, ರಾಜಿ ಮನೋಭಾವ ಹಾಗೂ ಹೋರಾಟಗಳಿಗೆ ಅಗತ್ಯವಾದ ಸ್ಪಷ್ಟ ಸೈದ್ಧಾಂತಿಕ ನೆಲೆ ಮತ್ತು ದೂರದೃಷ್ಟಿಯ ಕೊರತೆ, ಭಾರತೀಯ ಸಮಾಜದ ಐತಿಹಾಸಿಕ ಹಿನ್ನೆಲೆ, ಸಾಮಾಜಿಕ ರಚನೆ ಮತ್ತು ಅಧಿಕಾರ ಸಂಬಂಧಗಳ ಕುರಿತು ಆಳವಾದ ಅರಿವು ಬೆಳೆಸಿಕೊಳ್ಳದಿರುವುದೂ ಇದಕ್ಕೆ ಮುಖ್ಯ ಕಾರಣವಾಗಿದೆ.

ಮನುವಾದಿ ವ್ಯವಸ್ಥೆಯನ್ನು ಮತ್ತು ಕೋಮುವಾದಿ ರಾಜಕಾರಣವನ್ನು ಪರಿಣಾಮಕಾರಿಯಾಗಿ ಎದುರಿಸಬೇಕಾದರೆ, ಮೊದಲು ಸಂವಿಧಾನದ ಮೂಲ ಆಶಯಗಳು, ಭಾರತೀಯ ಸಮಾಜದ ಇತಿಹಾಸ, ಸಾಮಾಜಿಕ ಅಸಮಾನತೆಯ ಸ್ವರೂಪ ಹಾಗೂ ಕೋಮುವಾದಿ ರಾಜಕಾರಣಕ್ಕೆ ಸೈದ್ಧಾಂತಿಕ ಮತ್ತು ರಾಜಕೀಯ ಶಕ್ತಿ ಎಲ್ಲಿಂದ ದೊರೆಯುತ್ತದೆ ಎಂಬುದರ ಕುರಿತು ಸ್ಪಷ್ಟವಾದ ತಿಳುವಳಿಕೆ ಅತ್ಯಗತ್ಯ.

ಇಂದು ಸಮಾಜದಲ್ಲಿ ಹದಗೆಡುತ್ತಿರುವ ಸೌಹಾರ್ದತೆ ಮತ್ತು ದುರ್ಬಲಗೊಳ್ಳುತ್ತಿರುವ ಮಾನವೀಯ ಸಂಬಂಧಗಳನ್ನು ಮರುಸ್ಥಾಪಿಸುವ ಉದ್ದೇಶದಿಂದ ಅಲ್ಲಲ್ಲಿ ಸೌಹಾರ್ದ ಸಮಾವೇಶಗಳು, ಸಂವಾದಗಳು ಮತ್ತು ವಿವಿಧ ಧರ್ಮಗಳ ಜನರನ್ನು ಒಳಗೊಂಡ ಕಾರ್ಯಕ್ರಮಗಳು ನಡೆಯುತ್ತಿವೆ. ಇವು ಸ್ವಾಗತಾರ್ಹ ಪ್ರಯತ್ನಗಳೇ ಆಗಿವೆ. ಆದರೆ ಇಂತಹ ವೇದಿಕೆಗಳ ಆಶಯ ಮತ್ತು ಅವುಗಳ ಪ್ರಾಯೋಗಿಕ ನಡೆಗಳ ನಡುವೆ ಕೆಲವೊಮ್ಮೆ ಗಂಭೀರವಾದ ವೈರುಧ್ಯಗಳು ಕಾಣಿಸಿಕೊಳ್ಳುತ್ತಿವೆ.

ಸಾರ್ವಜನಿಕವಾಗಿ ತಮ್ಮನ್ನು ಜಾತ್ಯತೀತರೆಂದು ಗುರುತಿಸಿಕೊಳ್ಳುವ ಕೆಲವರು, ಮತ್ತೊಂದೆಡೆ ಕೋಮುವಾದಿ ರಾಜಕಾರಣಕ್ಕೆ ಪರೋಕ್ಷವಾಗಿ ಇಂಧನ ತುಂಬುವ ಶಕ್ತಿಗಳಾಗಿದ್ದಾರೆ. ಧರ್ಮದ ಹೆಸರಿನಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಧಾರ್ಮಿಕ ಮತ್ತು ಮಾನವೀಯ ಮೌಲ್ಯಗಳಿಗಿಂತ ವಿಭಜಕ ಅಜೆಂಡಾಗಳು ಮುನ್ನೆಲೆಗೆ ಬರುತ್ತಿವೆ. ಅದೇ ರೀತಿ, ಸೌಹಾರ್ದತೆಯ ಸಂದೇಶ ಸಾರಬೇಕಾದ ವೇದಿಕೆಗಳಲ್ಲಿಯೂ ಕೋಮುವಾದಿ ರಾಜಕಾರಣಕ್ಕೆ ಬೆಂಬಲ ನೀಡುವವರು ಸೌಹಾರ್ದತೆಯ ಪ್ರತಿನಿಧಿಗಳಾಗಿ ಕಾಣಿಸಿಕೊಂಡಿರುವ ಉಧಾಹರಣೆಗಳಿವೆ.

ಇಂತಹ ವಿದ್ಯಮಾನಗಳು ಸಹಜವಾಗಿಯೇ ಒಂದು ಪ್ರಶ್ನೆಯನ್ನು ಹುಟ್ಟುಹಾಕುತ್ತವೆ. ಸಾಮಾಜಿಕ ಬದ್ಧತೆ, ಸಾರ್ವಜನಿಕ ಸಂಬಂಧಗಳು ಮತ್ತು ಸೌಹಾರ್ದತೆಯ ಹೆಸರಿನಲ್ಲಿ ನಾವು ಅರಿವಿಲ್ಲದೆಯೇ ಸೈದ್ಧಾಂತಿಕ ರಾಜಿಗೆ ಒಳಗಾಗುತ್ತಿದ್ದೇವೆಯೇ?

ಇಂತಹ ಸೈದ್ಧಾಂತಿಕ ಗೊಂದಲಗಳ ಅಂತಿಮ ಪರಿಣಾಮವನ್ನು ಎದುರಿಸಬೇಕಾಗುವುದು ಕೋಮುವಾದಿ ರಾಜಕಾರಣದ ಬಲಿಪಶುಗಳಾಗುತ್ತಿರುವ ಸಮುದಾಯಗಳು, ವಿಶೇಷವಾಗಿ ಅಲ್ಪಸಂಖ್ಯಾತರು, ಜಾತ್ಯತೀತ ಮೌಲ್ಯಗಳಿಗೆ ಬದ್ಧರಾಗಿರುವವರು ಮತ್ತು ತಳಮಟ್ಟದಲ್ಲಿ ನಿರಂತರವಾಗಿ ಹೋರಾಡುತ್ತಿರುವ ಕಾರ್ಯಕರ್ತರು.

ಸೌಹಾರ್ದತೆ ಎಂಬುದು ಕೇವಲ ವೇದಿಕೆಯ ಮೇಲಿನ ಭಾಷಣವಲ್ಲ. ಅದು ನಮ್ಮ ಸೈದ್ಧಾಂತಿಕ ನಿಲುವು, ರಾಜಕೀಯ ನಡೆ ಮತ್ತು ಸಾಮಾಜಿಕ ಬದ್ಧತೆಯಲ್ಲಿ ಪ್ರತಿಫಲಿಸಬೇಕಾದ ಮೌಲ್ಯಗಳಾಗಿವೆ. ಸೌಹಾರ್ದತೆ ಎಂದರೆ ಪರಸ್ಪರರ ಅಸ್ತಿತ್ವವನ್ನು, ಸಂಸ್ಕೃತಿಯನ್ನು, ಧಾರ್ಮಿಕ ನಂಬಿಕೆಗಳನ್ನು ,ಆಚರಣೆಗಳನ್ನು ಗೌರವಿಸುವುದು; ತನ್ನ ಧಾರ್ಮಿಕ ವಿಶ್ವಾಸ ,ನಂಬಿಕೆ, ಸಂಸ್ಕೃತಿ ಮತ್ತು ಆಚರಣೆಯನ್ನು ಬಲಿಕೊಡುವುದಲ್ಲ!

ವಿವಿಧ ಧಾರ್ಮಿಕ ಹಿನ್ನೆಲೆಯ ಜನರ ನಡುವಿನ ಸಂವಾದ, ಸ್ನೇಹ ಮತ್ತು ಸಹಬಾಳ್ವೆಯ ಪ್ರಯತ್ನಗಳನ್ನು ನಿರ್ಲಕ್ಷಿಸಬೇಕೆಂದಲ್ಲ. ವಾಸ್ತವವಾಗಿ, ಕೋಮುವಾದದ ಪ್ರಭಾವವನ್ನು ಕಡಿಮೆ ಮಾಡಲು ಇಂತಹ ಪ್ರಯತ್ನಗಳು ಅತ್ಯಂತ ಅಗತ್ಯವಾಗಿವೆ. ದೇಶದ ವಿವಿಧ ಭಾಗಗಳಲ್ಲಿ ವಿವಿಧ ಧರ್ಮಗಳ ಜನರು ಒಟ್ಟಾಗಿ ಬದುಕುವ, ಪರಸ್ಪರ ಸಹಕರಿಸುವ ಮತ್ತು ಸಮಾಜದ ಒಳಿತಿಗಾಗಿ ಸಾಮೂಹಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸಕಾರಾತ್ಮಕ ಪ್ರಯತ್ನಗಳು ನಡೆಯುತ್ತಿವೆ. ಇವುಗಳನ್ನು ಸ್ವಾಗತಿಸುವುದರ ಜೊತೆಗೆ ಮತ್ತಷ್ಟು ಬಲಪಡಿಸುವ ಜವಾಬ್ದಾರಿಯೂ ನಮ್ಮ ಮೇಲಿದೆ.

ಆದರೆ ಈ ಪ್ರಯತ್ನಗಳು ಸಾರ್ವಜನಿಕ ಸಮಾವೇಶಗಳು, ಸೌಹಾರ್ದ ಸಭೆಗಳು ಮತ್ತು ವೇದಿಕೆಯ ಭಾಷಣಗಳಿಗೆ ಮಾತ್ರ ಸೀಮಿತವಾಗಬಾರದು. ಅವು ವೈಯಕ್ತಿಕ ಸಂಬಂಧಗಳ ಮೂಲಕವೂ ಗಟ್ಟಿಗೊಳ್ಳಬೇಕು. ನೆರೆಹೊರೆಯವರಾಗಿ, ಸ್ನೇಹಿತರಾಗಿ, ಸಹೋದ್ಯೋಗಿಗಳಾಗಿ ಮತ್ತು ಸಾಮಾಜಿಕ ಕಾರ್ಯಕರ್ತರಾಗಿ ವಿವಿಧ ಧರ್ಮಗಳ ಜನರು ಪರಸ್ಪರರ ಸುಖದುಃಖಗಳಲ್ಲಿ ಭಾಗಿಯಾಗಬೇಕು. ಸ್ಥಳೀಯ ಸಮಸ್ಯೆಗಳು, ಶಿಕ್ಷಣ, ಆರೋಗ್ಯ, ಪರಿಸರ, ಬಡತನ ಮತ್ತು ಸಾರ್ವಜನಿಕ ಹಿತಾಸಕ್ತಿಯ ವಿಚಾರಗಳಲ್ಲಿ ಒಟ್ಟಾಗಿ ಕಾರ್ಯನಿರ್ವಹಿಸಬೇಕು. ಇಂತಹ ಸಂಬಂಧಗಳು ತಳಮಟ್ಟದಲ್ಲಿ ಬಲಗೊಂಡಾಗ ಮಾತ್ರ ಸಮುದಾಯಗಳ ನಡುವಿನ ಅಂತರ ಕಡಿಮೆಯಾಗಿ, ಪರಸ್ಪರ ವಿಶ್ವಾಸ ಬೆಳೆಯಲು ಸಾಧ್ಯ. ವ್ಯವಸ್ಥಿತವಾಗಿ ಸಮಾಜದಲ್ಲಿ ಬಿತ್ತಲಾಗುತ್ತಿರುವ ಅಪನಂಬಿಕೆ, ಸಂಶಯ ಮತ್ತು ಪೂರ್ವಗ್ರಹಗಳನ್ನು ನಿವಾರಿಸುವುದಕ್ಕೂ ಇದು ಪರಿಣಾಮಕಾರಿ ಮಾರ್ಗವಾಗಿದೆ.

ಇಲ್ಲಿ ಮತ್ತೊಂದು ಅಂಶವನ್ನು ಸ್ಪಷ್ಟಪಡಿಸಬೇಕಾಗಿದೆ. ಸೌಹಾರ್ದತೆ ಅಥವಾ ಜಾತ್ಯತೀತ ಸಮಾಜದ ನಿರ್ಮಾಣಕ್ಕಾಗಿ ಯಾರೂ ತಮ್ಮ ಧಾರ್ಮಿಕ ವಿಶ್ವಾಸ, ನಂಬಿಕೆ ಮತ್ತು ಆಚರಣೆಗಳನ್ನು ತ್ಯಜಿಸಬೇಕಾಗಿಲ್ಲ. ಸಂವಿಧಾನವು ಪ್ರತಿಯೊಬ್ಬರಿಗೂ ನೀಡಿರುವ ಧಾರ್ಮಿಕ ಸ್ವಾತಂತ್ರ್ಯವನ್ನು ಗೌರವಿಸುವುದೇ ನೈಜ ಜಾತ್ಯತೀತತೆಯ ಲಕ್ಷಣ. ಪರಸ್ಪರರ ಧಾರ್ಮಿಕ ಅಸ್ತಿತ್ವವನ್ನು ಗೌರವಿಸುತ್ತಲೇ ಸಹಬಾಳ್ವೆ ನಡೆಸುವುದೇ ಬಹುತ್ವದ ನಿಜವಾದ ಸೌಂದರ್ಯ.

ವ್ಯಕ್ತಿಗಳೊಂದಿಗೆ ಸಂವಾದ ಬೇರೆ, ಸಿದ್ಧಾಂತಗಳೊಂದಿಗೆ ರಾಜಿ ಬೇರೆ!

ಸಾಮಾಜಿಕ ಸೌಹಾರ್ದತೆಯ ಪ್ರಯತ್ನಗಳು ಕೋಮುವಾದಿ ರಾಜಕಾರಣದೊಂದಿಗೆ ಸೈದ್ಧಾಂತಿಕ ರಾಜಿ ಮಾಡಿಕೊಳ್ಳುವುದಕ್ಕೆ ಪರ್ಯಾಯವಾಗಬಾರದು. ವ್ಯಕ್ತಿಗಳೊಂದಿಗೆ ಸ್ನೇಹ ಬೆಳೆಸುವುದು, ಅವರೊಂದಿಗೆ ಸಂವಾದ ನಡೆಸುವುದು ಮತ್ತು ಭಿನ್ನಾಭಿಪ್ರಾಯಗಳನ್ನು ಚರ್ಚಿಸುವುದು ಒಂದು ವಿಚಾರ. ಆದರೆ ಕೋಮುವಾದಿ ಸಿದ್ಧಾಂತಗಳಿಗೆ ಸಾಮಾಜಿಕ ಮತ್ತು ರಾಜಕೀಯ ಮಾನ್ಯತೆ ದೊರಕಿಸುವ ರೀತಿಯಲ್ಲಿ ಅವುಗಳನ್ನು ಸೌಹಾರ್ದತೆಯ ವೇದಿಕೆಗಳಲ್ಲಿ ಪ್ರತಿಷ್ಠಾಪಿಸುವುದು ಸಂಪೂರ್ಣ ಭಿನ್ನವಾದ ವಿಚಾರ.

ಈ ಎರಡರ ನಡುವಿನ ವ್ಯತ್ಯಾಸವನ್ನು ಜಾತ್ಯತೀತ ಸಂಘಟನೆಗಳು, ಪ್ರಗತಿಪರ ಶಕ್ತಿಗಳು ಮತ್ತು ಸೌಹಾರ್ದತೆಯ ಪರವಾಗಿ ಕೆಲಸ ಮಾಡುವವರು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು. ಮಾನವೀಯತೆ, ಸ್ವಾತಂತ್ರ್ಯ, ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಜಾತ್ಯತೀತತೆ ಇವುಗಳ ಆಧಾರದಲ್ಲಿ ಮಾತ್ರ ಸಮಾಜದಲ್ಲಿ ಶಾಶ್ವತ ಬದಲಾವಣೆ ತರಲು ಸಾಧ್ಯ.

ಭಿನ್ನಾಭಿಪ್ರಾಯ ಹೊಂದಿರುವವರೊಂದಿಗೆ ಸಂವಾದ ನಡೆಸುವುದು ಮತ್ತು ಅವರ ಮನೋಭಾವದಲ್ಲಿ ಬದಲಾವಣೆ ತರಲು ಪ್ರಯತ್ನಿಸುವುದು ಪ್ರಜಾಸತ್ತಾತ್ಮಕ ಮಾರ್ಗವೇ ಆಗಿದೆ. ಆದರೆ ಆ ಪ್ರಕ್ರಿಯೆಯಲ್ಲಿ ನಮ್ಮ ಮೂಲ ಸೈದ್ಧಾಂತಿಕ ನಿಲುವುಗಳನ್ನೇ ದುರ್ಬಲಗೊಳಿಸುವುದು ಜಾತ್ಯತೀತತೆಯಲ್ಲ.

ಕೋಮುವಾದಿ ಮನೋಭಾವ ಹೊಂದಿರುವ ವ್ಯಕ್ತಿಯೊಂದಿಗೆ ಸಂವಾದ ನಡೆಸುವುದು ಒಂದು ವಿಚಾರವಾದರೆ, ಕೋಮುವಾದಿ ರಾಜಕಾರಣಕ್ಕೆ ಸೈದ್ಧಾಂತಿಕ ಮಾನ್ಯತೆ ನೀಡುವ ರೀತಿಯಲ್ಲಿ ಅವರನ್ನು ಸೌಹಾರ್ದತೆಯ ಪ್ರತಿನಿಧಿಗಳಾಗಿ ಬಿಂಬಿಸುವುದು ಮತ್ತೊಂದು ವಿಚಾರ. ಈ ವ್ಯತ್ಯಾಸವನ್ನು ಗುರುತಿಸುವ ಪ್ರಬುದ್ಧತೆ ನಮ್ಮ ಸಾಮಾಜಿಕ ಮತ್ತು ರಾಜಕೀಯ ಚಟುವಟಿಕೆಗಳಲ್ಲಿ ಇರಬೇಕು.

ಜಾತ್ಯತೀತ ಮೌಲ್ಯಗಳಿಗೆ ಬದ್ಧರಾಗಿರುವವರು ಕೋಮುವಾದಿ ಮನೋಭಾವಕ್ಕೆ ಒಳಗಾಗುವುದು ಎಷ್ಟು ಅಪಾಯಕಾರಿ ಎಂಬುದನ್ನು ಅರಿತುಕೊಳ್ಳಬೇಕು. ಅದೇ ರೀತಿ, ನಿರಂತರ ಸಂವಾದ, ಮಾನವೀಯ ನಡವಳಿಕೆ ಮತ್ತು ಸಮಾನತೆಯ ಮೌಲ್ಯಗಳ ಪ್ರತಿಪಾದನೆಯ ಮೂಲಕ ಕೋಮುವಾದಿ ಮನೋಭಾವ ಹೊಂದಿರುವ ವ್ಯಕ್ತಿಗಳಲ್ಲಿಯೂ ಬದಲಾವಣೆ ತರಲು ಪ್ರಯತ್ನಿಸಬೇಕು. ಆದರೆ ಇಂತಹ ಪ್ರಯತ್ನಗಳಿಗೆ ಸೈದ್ಧಾಂತಿಕ ಸ್ಪಷ್ಟತೆ ಮತ್ತು ರಾಜಿರಹಿತ ಮೌಲ್ಯಬದ್ಧತೆ ಅನಿವಾರ್ಯ.

ಸಮಾಜದಲ್ಲಿ ಪರಸ್ಪರ ವಿಶ್ವಾಸ, ಸಮಾನ ಅವಕಾಶಗಳು, ಸಾಮಾಜಿಕ ನ್ಯಾಯ, ಧಾರ್ಮಿಕ ಸ್ವಾತಂತ್ರ್ಯ, ಸಹಿಷ್ಣುತೆ ಮತ್ತು ಮಾನವೀಯ ಸಂಬಂಧಗಳು ಗಟ್ಟಿಗೊಳ್ಳುವುದೂ ನೈಜ ಅಭಿವೃದ್ಧಿಯ ಅವಿಭಾಜ್ಯ ಅಂಗಗಳಾಗಿವೆ. ಇಂತಹ ಸಾಮಾಜಿಕ ವಿಶ್ವಾಸ ಮತ್ತು ಸಹಬಾಳ್ವೆಯ ವಾತಾವರಣ ನಿರ್ಮಾಣವಾದಾಗ ಮಾತ್ರ ಪ್ರಜಾಸತ್ತಾತ್ಮಕ ವ್ಯವಸ್ಥೆ ಬಲಗೊಳ್ಳುತ್ತದೆ.

ಧರ್ಮ, ಜಾತಿ, ಭಾಷೆ ಮತ್ತು ಸಂಸ್ಕೃತಿಯ ವೈವಿಧ್ಯಗಳನ್ನು ಸಂಘರ್ಷದ ಕಾರಣಗಳನ್ನಾಗಿ ನೋಡುವ ಬದಲು, ಅವುಗಳನ್ನು ಭಾರತದ ಸಾಮಾಜಿಕ ಶಕ್ತಿಯಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಮುಂದಿನ ಪೀಳಿಗೆಗೆ ನಾವು ಹಸ್ತಾಂತರಿಸಬೇಕಾದದ್ದು ನ್ಯಾಯ, ಸಮಾನತೆ, ಸ್ವಾತಂತ್ರ್ಯ, ಸಹೋದರತೆ ಮತ್ತು ಮಾನವೀಯತೆಯ ಮೌಲ್ಯಗಳ ಮೇಲೆ ನಿಂತಿರುವ ಶಾಂತಿಯುತ ಭಾರತವನ್ನಾಗಿದೆ.

ಸೈದ್ಧಾಂತಿಕ ಸ್ಪಷ್ಟತೆ ಮತ್ತು ತಳಮಟ್ಟದ ಸಾಮಾಜಿಕ ಸೌಹಾರ್ದತೆ ಇವೆರಡೂ ಪರಸ್ಪರ ವಿರೋಧಿಗಳಲ್ಲ; ಅವು ಒಂದಕ್ಕೊಂದು ಪೂರಕವಾಗಿರಬೇಕು. ಈ ಎರಡನ್ನೂ ಸಮಾನ ಬದ್ಧತೆಯಿಂದ ಮುನ್ನಡೆಸಿದಾಗ ಮಾತ್ರ ಕೋಮುವಾದದ ಪ್ರಭಾವವನ್ನು ಎದುರಿಸಿ, ನ್ಯಾಯ, ಸಮಾನತೆ, ಸ್ವಾತಂತ್ರ್ಯ, ಸಹೋದರತೆ ಮತ್ತು ಬಹುತ್ವದ ಆಧಾರದಲ್ಲಿ ಸದೃಢ ಭಾರತವನ್ನು ನಿರ್ಮಿಸಲು ಸಾಧ್ಯ.