ಯುದ್ಧ ಭೀತಿಯ ನಡುವೆಯೂ ಹೆಚ್ಚಿದ ಕತರ್ ಪ್ರವಾಸೋದ್ಯಮ

0
90

ಸನ್ಮಾರ್ಗ ವಾರ್ತೆ

ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಪ್ರಕ್ಷುಬ್ಧ ವಾತಾವರಣ ಮತ್ತು ಯುದ್ಧಭೀತಿಯ ನಡುವೆಯೂ ಕತಾರ್ ಪ್ರವಾಸೋದ್ಯಮ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡಿದೆ. ಪ್ರಸಕ್ತ ವರ್ಷದ ಮೊದಲ ಹತ್ತು ತಿಂಗಳಲ್ಲಿ ಸುಮಾರು 30 ಲಕ್ಷ ಪ್ರವಾಸಿಗರನ್ನು ಆಕರ್ಷಿಸುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಕತಾರ್‌ನ ಭೂ, ವಾಯು ಮತ್ತು ಸಮುದ್ರ ಮಾರ್ಗಗಳ ಮೂಲಕ ಒಟ್ಟು 29.5 ಲಕ್ಷಕ್ಕೂ ಅಧಿಕ ಮಂದಿ ದೇಶಕ್ಕೆ ಭೇಟಿ ನೀಡಿದ್ದಾರೆ ಎಂದು ಕತಾರ್ ಪ್ರವಾಸೋದ್ಯಮ ಇಲಾಖೆ ಅಧಿಕೃತ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ.

ವಿಶೇಷವಾಗಿ ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ ಅಕ್ಟೋಬರ್‌ನಲ್ಲಿ ಪ್ರವಾಸಿಗರ ಆಗಮನದಲ್ಲಿ ಶೇ. 21.7ರಷ್ಟು ಏರಿಕೆ ಕಂಡುಬಂದಿದೆ. ಅಕ್ಟೋಬರ್ ತಿಂಗಳೊಂದರಲ್ಲೇ 3.36 ಲಕ್ಷಕ್ಕೂ ಅಧಿಕ ಪ್ರವಾಸಿಗರು ಕತಾರ್‌ಗೆ ಆಗಮಿಸಿರುವುದು ದೇಶದ ಪ್ರವಾಸೋದ್ಯಮದ ಜನಪ್ರಿಯತೆಗೆ ಸಾಕ್ಷಿಯಾಗಿದೆ.

ಪ್ರವಾಸಿಗರ ಆಗಮನದಲ್ಲಿ ಜಿಸಿಸಿ ರಾಷ್ಟ್ರಗಳ ಪಾಲು ಅತಿ ಹೆಚ್ಚಾಗಿದ್ದು, ಈ ದೇಶಗಳಿಂದ 11.76 ಲಕ್ಷ ಮಂದಿ (ಶೇ. 39.9) ಕತಾರ್‌ಗೆ ಭೇಟಿ ನೀಡಿದ್ದಾರೆ. ಏಷ್ಯಾ ಮತ್ತು ಓಷಿಯಾನಿಯಾ ಪ್ರದೇಶಗಳಿಂದ 6.30 ಲಕ್ಷ (ಶೇ. 21.4), ಯುರೋಪ್‌ನಿಂದ 6.20 ಲಕ್ಷ (ಶೇ. 21), ಅಮೆರಿಕ ಖಂಡದಿಂದ 2.16 ಲಕ್ಷ ಹಾಗೂ ಇತರ ಅರಬ್ ರಾಷ್ಟ್ರಗಳಿಂದ 2.09 ಲಕ್ಷ ಪ್ರವಾಸಿಗರು ಆಗಮಿಸಿದ್ದಾರೆ. ಜಾಗತಿಕ ಮಟ್ಟದಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದ್ದರೂ, ಕತಾರ್‌ನ ಪ್ರವಾಸೋದ್ಯಮ ಕ್ಷೇತ್ರವು ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿರುವುದು ಈ ಅಂಕಿಅಂಶಗಳಿಂದ ಸ್ಪಷ್ಟವಾಗಿದೆ.