ಸನ್ಮಾರ್ಗ ವಾರ್ತೆ
ಅಮೆರಿಕದಲ್ಲಿ ನಡೆದ ಮಧ್ಯಂತರ ಚುನಾವಣೆಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ರಿಪಬ್ಲಿಕನ್ ಪಕ್ಷ ಹೀನಾಯ ಸೋಲು ಅನುಭವಿಸಿದ್ದು, ಸೆನೆಟ್ ಮೇಲಿನ ತನ್ನ ಹಿಡಿತವನ್ನು ಕಳೆದುಕೊಂಡಿದೆ. ಜೀವನ ವೆಚ್ಚದ ಏರಿಕೆ, ಇಂಧನ ಬೆಲೆಗಳ ಹೆಚ್ಚಳ ಹಾಗೂ ಇರಾನ್ ಜೊತೆಗಿನ ದೀರ್ಘಕಾಲದ ಯುದ್ಧದಿಂದ ಬೇಸತ್ತಿರುವ ಅಮೆರಿಕದ ಮತದಾರರು ಈ ಚುನಾವಣೆಯ ಮೂಲಕ ‘ಯುದ್ಧ ಬೇಡ’ ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆ ಎಂದು ಇರಾನ್ ಸಂಸತ್ ಸ್ಪೀಕರ್ ಹಾಗೂ ಅಮೆರಿಕದೊಂದಿಗಿನ ಮಾತುಕತೆಯ ಮುಖ್ಯ ಸಮಾಲೋಚಕ ಮಹ್ಮದ್ ಬಘೇರ್ ಘಾಲಿಬಾಫ್ ಹೇಳಿದ್ದಾರೆ.
ಕಳೆದ ಫೆಬ್ರವರಿಯಲ್ಲಿ ಆರಂಭವಾದ ಸಂಘರ್ಷದಿಂದ ಜಾಗತಿಕ ಇಂಧನ ಮಾರುಕಟ್ಟೆ ಹಾಗೂ ಹಾರ್ಮುಜ್ ಜಲಸಂಧಿಯ ಮೂಲಕ ನಡೆಯುವ ಸಾಗಣೆಗೆ ತೀವ್ರ ಅಡಚಣೆ ಉಂಟಾಗಿದೆ. ಇದು ಟ್ರಂಪ್ ಅವರ ಜನಪ್ರಿಯತೆ ಕುಸಿಯಲು ಪ್ರಮುಖ ಕಾರಣವಾಗಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಚುನಾವಣಾ ಫಲಿತಾಂಶವನ್ನು ಉಲ್ಲೇಖಿಸಿ ಅಮೆರಿಕಕ್ಕೆ ಎಚ್ಚರಿಕೆ ನೀಡಿರುವ ಘಾಲಿಬಾಫ್, ತನ್ನದೇ ಜನರ ಅಭಿಪ್ರಾಯವನ್ನು ಕಡೆಗಣಿಸಿ ಅಮೆರಿಕ ಸರ್ಕಾರ ಯುದ್ಧ ನೀತಿಯನ್ನು ಮುಂದುವರಿಸಿದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ. ಕತಾರ್ ಮಧ್ಯಸ್ಥಿಕೆಯಲ್ಲಿ ವಾಷಿಂಗ್ಟನ್ ಮತ್ತು ತೆಹರಾನ್ ನಡುವೆ ಪರೋಕ್ಷ ಮಾತುಕತೆಗಳು ನಡೆಯುತ್ತಿದ್ದರೂ, ತೈಲ ನಿರ್ಬಂಧ ತೆರವು ಹಾಗೂ ಹಾರ್ಮುಜ್ ಜಲಸಂಧಿಯ ಪುನರಾರಂಭದ ವಿಚಾರದಲ್ಲಿ ಇನ್ನೂ ಒಮ್ಮತ ಮೂಡಿಲ್ಲ.
ಅಮೆರಿಕದ ಜನರ ವಿರೋಧದ ನಡುವೆಯೂ ಟ್ರಂಪ್ ಆಡಳಿತ ತನ್ನ ವಿದೇಶಾಂಗ ಮತ್ತು ಯುದ್ಧ ನೀತಿಯಲ್ಲಿ ಬದಲಾವಣೆ ಮಾಡಿಕೊಳ್ಳುತ್ತದೆಯೇ ಎಂಬುದು ಈಗ ಜಾಗತಿಕ ಮಟ್ಟದಲ್ಲಿ ಕುತೂಹಲ ಮೂಡಿಸಿದೆ.












