ಮುಂಬರುವ ವಿಧಾನಸಭಾ ಚುನಾವಣೆಗೂ ಮುನ್ನ ಎಸ್‌ಐಆರ್‌ ಸಂಬಂಧಿತ ಎಲ್ಲ ಸಮಸ್ಯೆಗಳನ್ನು ಪರಿಹರಿಸಿ: ಜಮಾಅತೆ ಇಸ್ಲಾಮೀ ಹಿಂದ್ ಆಗ್ರಹ

0
134

ಸನ್ಮಾರ್ಗ ವಾರ್ತೆ

ನವದೆಹಲಿ: ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಬಳಿಕ ಮತದಾರರ ಪಟ್ಟಿಯಲ್ಲಿ ಉಂಟಾಗಿರುವ ಗಂಭೀರ ಅಕ್ರಮಗಳು ಮತ್ತು ಆತಂಕಗಳ ಕುರಿತಾಗಿ ಜಮಾಅತೆ ಇಸ್ಲಾಮೀ ಹಿಂದ್ (JIH) ಕಳವಳ ವ್ಯಕ್ತಪಡಿಸಿದೆ. ದೋಷಪೂರಿತ ಮತದಾರರ ಪಟ್ಟಿಯ ಆಧಾರದ ಮೇಲೆ ಮುಂಬರುವ ವಿಧಾನಸಭಾ ಚುನಾವಣೆಗಳನ್ನು ನಡೆಸದಂತೆ ಎಚ್ಚರಿಸಿದೆ. ಜೆಐಎಚ್‌ ನಡೆಸಿರುವ ಪತ್ರಿಕಾಗೋಷ್ಠಿಯಲ್ಲಿ, ರಾಜಕೀಯ ನಾಯಕರು ಮತ್ತು ಭಿನ್ನಾಭಿಪ್ರಾಯ ವ್ಯಕ್ತಪಡಿಸುವವರ ವಿರುದ್ಧದ ಗುರಿಪಡಿಸಿದ ಕ್ರಮಗಳು, ಚಳಿಗಾಲದ ಸಿದ್ಧತೆ ಹಾಗೂ ಮಾಲಿನ್ಯ ನಿಯಂತ್ರಣದ ಬಗ್ಗೆಯೂ ಕಳವಳ ವ್ಯಕ್ತಪಡಿಸಿತು.

ಎಸ್‌ಐಆರ್‌ ಮತ್ತು ಮುಂಬರುವ ವಿಧಾನಸಭಾ ಚುನಾವಣೆಗಳ ಕುರಿತು ಮಾತನಾಡಿದ APCR ಕಾರ್ಯದರ್ಶಿ ನದೀಮ್ ಖಾನ್ ಅವರು, “ಭಾರತದ ಚುನಾವಣಾ ಆಯೋಗದ (ECI) ನಿಷ್ಪಕ್ಷಪಾತತೆ ಮತ್ತು ಸಮಗ್ರತೆ ಹಾಗೂ ಮುಖ್ಯ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ಅವರ ಕಾರ್ಯವೈಖರಿಯ ಬಗ್ಗೆ ಗಂಭೀರ ಆತಂಕಗಳು ವ್ಯಕ್ತವಾಗಿವೆ. ಈ ಆತಂಕಗಳನ್ನು ಪರಿಹರಿಸದೆ ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ, ಗೋವಾ ಮತ್ತು ಮಣಿಪುರಗಳಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗಳನ್ನು ನಡೆಸಿದರೆ, ಹಿಂದಿನ ಚುನಾವಣೆಗಳ ಪುನರಾವರ್ತನೆಯಾಗಲಿದೆ. ಆಗ ಲಕ್ಷಾಂತರ ಅರ್ಹ ಮತದಾರರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಲು ಸಾಧ್ಯವಾಗಿರಲಿಲ್ಲ ಹಾಗೂ ಸಾವಿರಾರು ನಕಲಿ ಮತದಾರರನ್ನು ಪಟ್ಟಿಗೆ ಸೇರಿಸಲಾಗಿತ್ತು.

ಈ ಅಂಕಿ-ಅಂಶಗಳು ಅತ್ಯಂತ ದೊಡ್ಡದಾಗಿದ್ದು ಆತಂಕಕಾರಿಯಾಗಿವೆ. ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ, ಗೋವಾ ಮತ್ತು ಮಣಿಪುರಗಳಲ್ಲಿ ವಿಶೇಷ ತೀವ್ರ ಪರಿಷ್ಕರಣೆ (SIR)ಗೂ ಮುನ್ನ ಸುಮಾರು 18.71 ಕೋಟಿ ಇದ್ದ ಮತದಾರರ ಸಂಖ್ಯೆ ಅಂತಿಮ ಪಟ್ಟಿಯಲ್ಲಿ 16.43 ಕೋಟಿಗೆ ಇಳಿಕೆಯಾಗಿದೆ ಎಂದು ವರದಿಯಾಗಿದೆ. ಅಂದರೆ ಸುಮಾರು 2.29 ಕೋಟಿ ಮತದಾರರಷ್ಟು (12.2%) ಇಳಿಕೆ ಕಂಡುಬಂದಿದೆ.

ಈ ಇಳಿಕೆಯ ಪೈಕಿ ಸುಮಾರು ಶೇ.90ರಷ್ಟು ಉತ್ತರ ಪ್ರದೇಶದಲ್ಲೇ ದಾಖಲಾಗಿದ್ದು, ಅಲ್ಲಿ ಮತದಾರರ ಸಂಖ್ಯೆ ಸುಮಾರು 2.04 ಕೋಟಿ (13.24%) ಕಡಿಮೆಯಾಗಿದೆ. ಪಂಜಾಬ್‌ನಲ್ಲಿ ಸುಮಾರು 14 ಲಕ್ಷ, ಉತ್ತರಾಖಂಡದಲ್ಲಿ 8 ಲಕ್ಷ, ಮಣಿಪುರದಲ್ಲಿ 1.3 ಲಕ್ಷ ಮತ್ತು ಗೋವಾದಲ್ಲಿ 1.27 ಲಕ್ಷ ಮತದಾರರ ಇಳಿಕೆ ವರದಿಯಾಗಿದೆ.

ವಿವಿಧ ರಾಜ್ಯಗಳ ಮತದಾರರ ಪಟ್ಟಿಯಲ್ಲಿ ಕಂಡುಬಂದಿರುವ ಈ ಪ್ರಮಾಣದ ಇಳಿಕೆಯು ಪಾರದರ್ಶಕ ಪರಿಶೀಲನೆಯ ಅಗತ್ಯವನ್ನು ಒತ್ತಿಹೇಳುತ್ತದೆ. ಮುಂಬರುವ ವಿಧಾನಸಭಾ ಚುನಾವಣೆಗೂ ಮುನ್ನ ಯಾವುದೇ ಅರ್ಹ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು” ಎಂದು ಹೇಳಿದರು.

ನದೀಮ್ ಖಾನ್ ಅವರು ಮುಂದುವರಿದು, “ಚುನಾವಣಾ ಆಯೋಗದ ನಿಷ್ಪಕ್ಷಪಾತತೆಯ ಮೇಲಿನ ಜನರ ವಿಶ್ವಾಸಕ್ಕೆ ಗಂಭೀರ ಹಾನಿಯಾಗಿದೆ. ಚುನಾವಣಾ ಪ್ರಕ್ರಿಯೆಯ ಮೇಲಿನ ಸಾರ್ವಜನಿಕ ವಿಶ್ವಾಸವನ್ನು ಮರುಸ್ಥಾಪಿಸದಿದ್ದರೆ, ಮುಂಬರುವ ಚುನಾವಣೆಗಳ ವಿಶ್ವಾಸಾರ್ಹತೆ ಗಂಭೀರವಾಗಿ ದುರ್ಬಲಗೊಳ್ಳಲಿದೆ. ಜನರು ಎತ್ತಿರುವ ಈ ಆತಂಕಗಳನ್ನು ಚುನಾವಣೆ ಘೋಷಿಸುವ ಅಥವಾ ನಡೆಸುವ ಮುನ್ನ ಒಂದು ಅಥವಾ ಎರಡು ತಿಂಗಳೊಳಗೆ ಪರಿಹರಿಸಬೇಕು. ಎಸ್‌ಐಆರ್‌ ಪ್ರಕ್ರಿಯೆಯ ಸುತ್ತಲಿನ ಗಂಭೀರ ಆತಂಕಗಳಿಗೆ ನೈತಿಕ ಹೊಣೆ ಹೊತ್ತು ಮುಖ್ಯ ಚುನಾವಣಾ ಆಯುಕ್ತರು ತಕ್ಷಣ ರಾಜೀನಾಮೆ ನೀಡಬೇಕು” ಎಂದು ಆಗ್ರಹಿಸಿದರು.

“ಸಂಪೂರ್ಣ ಎಸ್‌ಐಆರ್‌ ಪ್ರಕ್ರಿಯೆಯನ್ನು ನಿಷ್ಪಕ್ಷಪಾತವಾಗಿ ಮತ್ತು ಪಾರದರ್ಶಕವಾಗಿ ಪರಿಶೀಲಿಸಬೇಕು. ತಪ್ಪಾಗಿ ಹೊರಗಿಡಲಾಗಿರುವ ಅರ್ಹ ಮತದಾರರನ್ನು ಮತ್ತೆ ಮತದಾರರ ಪಟ್ಟಿಗೆ ಸೇರಿಸಬೇಕು. ಮತದಾರರ ಪಟ್ಟಿಯಿಂದ ಕೈಬಿಡಲಾದವರು, ಹೊಸದಾಗಿ ಸೇರ್ಪಡೆಗೊಂಡವರು, ಮರುಸ್ಥಾಪಿಸಲಾದವರು, ಸಲ್ಲಿಕೆಯಾದ ಆಕ್ಷೇಪಣೆಗಳು ಹಾಗೂ ಅವುಗಳ ಮೇಲಿನ ತೀರ್ಮಾನಗಳ ಕುರಿತು ರಾಜ್ಯವಾರು ಸ್ಪಷ್ಟ ಮಾಹಿತಿಯನ್ನು ಚುನಾವಣಾ ಆಯೋಗ ಪ್ರಕಟಿಸಬೇಕು” ಎಂದು ಕೋರಿದರು.

“ವಿಧಾನಸಭಾ ಚುನಾವಣೆಗಳನ್ನು ನಿಗದಿತ ವೇಳಾಪಟ್ಟಿಯಂತೆ ನಡೆಸಬೇಕು. ಆದರೆ ಅದಕ್ಕೂ ಮೊದಲು ಮತದಾರರ ಪಟ್ಟಿಗೆ ಸಂಬಂಧಿಸಿದ ಆತಂಕಗಳನ್ನು ಪರಿಹರಿಸಿ, ಚುನಾವಣಾ ಪ್ರಕ್ರಿಯೆಯು ನ್ಯಾಯಸಮ್ಮತ, ಪಾರದರ್ಶಕ ಮತ್ತು ಎಲ್ಲರನ್ನೂ ಒಳಗೊಂಡಿರುವುದಾಗಿ ಜನರಿಗೆ ಭರವಸೆ ನೀಡಬೇಕು” ಎಂದು ಹೇಳಿದರು.

ರಾಜಕೀಯ ನಾಯಕರು ಮತ್ತು ಭಿನ್ನಾಭಿಪ್ರಾಯ ವ್ಯಕ್ತಪಡಿಸುವವರ ವಿರುದ್ಧದ ಗುರಿಪಡಿಸಿದ ಕ್ರಮಗಳಿಗೆ ಖಂಡನೆ

ರಾಜಕೀಯ ನಾಯಕರು ಮತ್ತು ಭಿನ್ನಾಭಿಪ್ರಾಯ ವ್ಯಕ್ತಪಡಿಸುವವರ ವಿರುದ್ಧದ ಗುರಿಪಡಿಸಿದ ಕ್ರಮಗಳ ಕುರಿತು ಮಾತನಾಡಿದ ಜೆ.ಐ.ಎಚ್‌ ಉಪಾಧ್ಯಕ್ಷ ಪ್ರೊ. ಸಲೀಂ ಎಂಜಿನಿಯರ್ ಅವರು, “ನಾಯಕರು, ಹೋರಾಟಗಾರರು ಮತ್ತು ಭಿನ್ನಾಭಿಪ್ರಾಯ ವ್ಯಕ್ತಪಡಿಸುವವರ ವಿರುದ್ಧ ರಾಜಕೀಯ ಸೇಡಿಗಾಗಿ ಕ್ರಿಮಿನಲ್ ಪ್ರಕರಣಗಳು ಹಾಗೂ ತನಿಖಾ ಸಂಸ್ಥೆಗಳನ್ನು ಬಳಸುವುದನ್ನು” ಖಂಡಿಸಿದರು.

“ಇಂತಹ ಕ್ರಮಗಳು ಸಾರ್ವಜನಿಕರ ಸಂಸ್ಥೆಗಳ ಮೇಲಿನ ವಿಶ್ವಾಸವನ್ನು ದುರ್ಬಲಗೊಳಿಸುತ್ತವೆ, ಶಾಂತಿಯುತ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸುವುದನ್ನು ನಿರುತ್ಸಾಹಗೊಳಿಸುತ್ತವೆ ಮತ್ತು ಕಾನೂನು ಎಲ್ಲರಿಗೂ ಸಮಾನವಾಗಿ ಹಾಗೂ ನ್ಯಾಯಯುತವಾಗಿ ಅನ್ವಯಿಸಬೇಕು ಎಂಬ ಪ್ರಜಾಸತ್ತಾತ್ಮಕ ತತ್ವವನ್ನು ದುರ್ಬಲಗೊಳಿಸುತ್ತವೆ.

ಹಿರಿಯ ನಾಯಕ ಆಜಂ ಖಾನ್ ಅವರ ಪ್ರಕರಣವು ಗಂಭೀರ ಆತಂಕಗಳನ್ನು ಹುಟ್ಟುಹಾಕುತ್ತದೆ. ಅವರ ವಿರುದ್ಧ ಹಲವಾರು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗಿದ್ದು, ಅವರು ದೀರ್ಘಕಾಲ ಜೈಲಿನಲ್ಲಿದ್ದರು. ಅವರು ಸ್ಥಾಪಿಸಿದ ಮೊಹಮ್ಮದ್ ಅಲಿ ಜೌಹರ್ ವಿಶ್ವವಿದ್ಯಾಲಯವೂ ಅಧಿಕೃತ ಕ್ರಮಗಳನ್ನು ಎದುರಿಸಿದೆ. ನ್ಯಾಯಾಲಯವು ಅವರಿಗೆ ಜಾಮೀನು ನೀಡಿದ ಬಳಿಕ, ಜೈಲಿನಿಂದ ಹೊರಬಂದ ಕೆಲವೇ ನಿಮಿಷಗಳಲ್ಲಿ ಮತ್ತೊಂದು ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ED) ಅವರನ್ನು ಬಂಧಿಸಿ ಮತ್ತೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಿತು.

ಆಜಂ ಖಾನ್ ಪ್ರಕರಣವು ಆಡಳಿತ ವ್ಯವಸ್ಥೆಯನ್ನು ಪ್ರಶ್ನಿಸುವವರ ವಿರುದ್ಧ ನಡೆಯುತ್ತಿರುವ ಇಂತಹ ಅನೇಕ ‘ರಾಜಕೀಯ ಬೇಟೆ’ಗಳ ದೀರ್ಘ ಪಟ್ಟಿಯಲ್ಲಿನ ಮತ್ತೊಂದು ಪ್ರಕರಣವಾಗಿದೆ. ತನಿಖಾ ಸಂಸ್ಥೆಗಳ ಅಧಿಕಾರವನ್ನು ರಾಜಕೀಯ ವಿರೋಧಿಗಳನ್ನು ಶಿಕ್ಷಿಸಲು ಅಥವಾ ಭಿನ್ನಾಭಿಪ್ರಾಯವನ್ನು ಹತ್ತಿಕ್ಕಲು ಬಳಸಲಾಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಇಂತಹ ನಿರಂತರ ಕ್ರಮಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುವ ಅಗತ್ಯವಿದೆ” ಎಂದು ಹೇಳಿದರು.

ಚಳಿಗಾಲದ ಸಿದ್ಧತೆ ಮತ್ತು ಮಾಲಿನ್ಯ ನಿಯಂತ್ರಣಕ್ಕೆ ಒತ್ತು

ಚಳಿಗಾಲದ ಸಿದ್ಧತೆ ಮತ್ತು ಮಾಲಿನ್ಯ ನಿಯಂತ್ರಣದ ಬಗ್ಗೆಯೂ ಮಾತನಾಡಿದ ಪ್ರೊ. ಸಲೀಂ ಎಂಜಿನಿಯರ್ ಅವರು, “ಮುಂಬರುವ ಚಳಿಗಾಲದಿಂದ ಜನರನ್ನು ರಕ್ಷಿಸಲು ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಸಮಯೋಚಿತ ಹಾಗೂ ಸಮನ್ವಯಿತ ಕ್ರಮಗಳನ್ನು ಕೈಗೊಳ್ಳಬೇಕು ಎಂದು JIH ಆಗ್ರಹಿಸುತ್ತದೆ.

ಪರಿಸ್ಥಿತಿ ಗಂಭೀರವಾದ ಬಳಿಕ ಕ್ರಮ ಕೈಗೊಳ್ಳುವುದಕ್ಕಿಂತ ಮುಂಚಿತವಾಗಿಯೇ ಸಿದ್ಧತೆಗಳನ್ನು ಆರಂಭಿಸಬೇಕು. ರಾತ್ರಿ ಆಶ್ರಯ ತಾಣಗಳನ್ನು ಹೆಚ್ಚಿಸಿ, ಅವುಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು. ಬೆಚ್ಚಗಿನ ಹೊದಿಕೆಗಳು ಮತ್ತು ಬಟ್ಟೆಗಳ ಲಭ್ಯತೆಯನ್ನು ಖಚಿತಪಡಿಸಬೇಕು. ಬಿಸಿ ಆಹಾರವನ್ನು ಒದಗಿಸಬೇಕು. ಅಪಾಯದ ಸಾಧ್ಯತೆ ಹೆಚ್ಚಿರುವ ಪ್ರದೇಶಗಳಲ್ಲಿ ಸಂಚಾರಿ ಆರೋಗ್ಯ ಘಟಕಗಳನ್ನು ಸ್ಥಾಪಿಸಬೇಕು.

JIH ತನ್ನದೇ ಆದ ಪ್ರಯತ್ನಗಳು ಹಾಗೂ ಅದರೊಂದಿಗೆ ಕಾರ್ಯನಿರ್ವಹಿಸುವ ಸಂಘಟನೆಗಳ ಮೂಲಕ ದೇಶದಾದ್ಯಂತ ಚಳಿಗಾಲದ ಪರಿಹಾರ ಕಾರ್ಯಗಳನ್ನು ಕೈಗೊಳ್ಳುತ್ತಿದೆ. ಇದರಲ್ಲಿ ಧರ್ಮ, ಜಾತಿ ಅಥವಾ ಹಿನ್ನೆಲೆಯ ಭೇದವಿಲ್ಲದೆ ಅಗತ್ಯವಿರುವವರಿಗೆ ಹೊದಿಕೆಗಳ ವಿತರಣೆ ಮತ್ತು ಇತರ ನೆರವು ಒದಗಿಸುವ ಕಾರ್ಯಗಳು ಸೇರಿವೆ. ಸ್ಥಳೀಯ ಪರಿಹಾರ ಕಾರ್ಯಗಳಿಗೆ ಸಾರ್ವಜನಿಕರು ಸಹಕಾರ ನೀಡಬೇಕು. ತಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ವೃದ್ಧರು, ಒಂಟಿಯಾಗಿ ವಾಸಿಸುವವರು ಮತ್ತು ನಿರಾಶ್ರಿತರ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಎಂದು ಅವರು ಮನವಿ ಮಾಡಿದರು.

ಅಪಾಯಕಾರಿ ವಾಯುಮಾಲಿನ್ಯವನ್ನು ತಡೆಗಟ್ಟಲು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ನಿರ್ಮಾಣ ಕಾಮಗಾರಿಗಳಿಂದ ಉಂಟಾಗುವ ಧೂಳು ಮತ್ತು ತ್ಯಾಜ್ಯ ಸುಡುವುದರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಮಾಲಿನ್ಯ ಪೀಡಿತ ಪ್ರದೇಶಗಳಲ್ಲಿ ಸಮನ್ವಯಿತ ಮಾಲಿನ್ಯ ನಿಯಂತ್ರಣ ಕ್ರಮಗಳನ್ನು ಜಾರಿಗೆ ತರಬೇಕು. ಮಾಲಿನ್ಯ ಅಪಾಯಕಾರಿ ಮಟ್ಟ ತಲುಪುವ ಮುನ್ನವೇ ಸಾರ್ವಜನಿಕರಿಗೆ ಅಗತ್ಯ ಮಾಹಿತಿ ನೀಡುವುದು, ನಿರಂತರ ಮೇಲ್ವಿಚಾರಣೆ ನಡೆಸುವುದು ಮತ್ತು ಮಕ್ಕಳು, ವೃದ್ಧರು ಹಾಗೂ ಈಗಾಗಲೇ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವವರಿಗೆ ಅಗತ್ಯ ಆರೋಗ್ಯ ರಕ್ಷಣಾ ಕ್ರಮಗಳನ್ನು ಕೈಗೊಳ್ಳುವುದು ಅತ್ಯಗತ್ಯ” ಎಂದು ಹೇಳಿದರು.