ಸನ್ಮಾರ್ಗ ಸಂಪಾದಕೀಯ
ಇಸ್ಲಾಮೋಫೋಬಿಯಾ ಅಥವಾ ಇಸ್ಲಾಮ್ನ ಬಗ್ಗೆ ಭೀತಿ ಹರಡುವ ವ್ಯವಸ್ಥಿತ ಷಡ್ಯಂತ್ರವೊಂದು ಅತ್ಯಂತ ಯೋಜನಾಬದ್ಧವಾಗಿ ಮತ್ತು ಅತ್ಯಂತ ಶಕ್ತಿಯುತವಾಗಿ ನಡೆಯುತ್ತಿದೆ ಎಂಬುದು ಬರೇ ಊಹೆ ಅಲ್ಲ, ಪ್ರಖರ ಸತ್ಯ ಎಂಬುದು ಸಾಬೀತಾಗಿದೆ.
ಮ್ಯಾನ್ಯುಫ್ಯಾಕ್ಚರಿಂಗ್ ದಿ ಗ್ರೇಟ್ ರಿಪ್ಲೇಸ್ಮೆಂಟ್' ಎಂಬ ಶೀರ್ಷಿಕೆಯಲ್ಲಿ ಬಿಡುಗಡೆಯಾದ ವರದಿಯೊಂದು ಈ ಬಗ್ಗೆ ಹಲವು ಆಘಾತಕಾರಿ ಸತ್ಯಗಳನ್ನು ಬಹಿರಂಗಕ್ಕೆ ತಂದಿದೆ. ವಿಶ್ವದಾದ್ಯಂತ 30ಕ್ಕೂ ಹೆಚ್ಚು ದೇಶಗಳಲ್ಲಿ ಮುಸ್ಲಿಮರ ವಿರುದ್ಧ ಷಡ್ಯಂತ್ರವನ್ನು ರಚಿಸಲು ಮತ್ತು ಸುಳ್ಳು ಪ್ರಚಾರವನ್ನು ನಡೆಸಲು ಇಸ್ರೇಲ್ ಮೂಲದ ಏಜೆನ್ಸಿಗಳು ಅತ್ಯಂತ ಯೋಜನಾಬದ್ಧವಾಗಿ ಕೆಲಸ ಮಾಡಿದ್ದಾರೆ ಎಂದು ಮಾರ್ಕ್ ಓವೆನ್ ಜೋನ್ಸ್ ಮತ್ತು ಸೋಹನ್ ಡಿಸೋಜ ನಡೆಸಿದ ಅಧ್ಯಯನದಲ್ಲಿ ತಿಳಿದು ಬಂದಿದೆ. ಡಿಜಿಟಲ್ ಲೋಕದಲ್ಲಿ ಇದುವರೆಗೆ ದಾಖಲಾದ ಅತ್ಯಂತ ದೊಡ್ಡ ಅಪಪ್ರಚಾರದ ಕೃತ್ಯವಾಗಿ ಇದನ್ನು ಪರಿಗಣಿಸಿದೆ.
2023 ಅಕ್ಟೋಬರ್ನಿಂದ 2026ರ ಅಕ್ಟೋಬರ್ ವರೆಗೆ ನಡೆದ ಈ ದ್ವೇಷ ಮತ್ತು ಅಪಪ್ರಚಾರದ ಅಭಿಯಾನಕ್ಕಾಗಿ 8.2 ಮಿಲಿಯನ್ ಡಾಲರ್ ಅಥವಾ ಸುಮಾರು 78 ಕೋಟಿ ರೂಪಾಯಿಯನ್ನು ಖರ್ಚು ಮಾಡಲಾಗಿದೆ. ಯುರೋಪ್, ಅಮೆರಿಕ ಏಷ್ಯಾ ಮತ್ತು ಮಧ್ಯಪ್ರಾಚ್ಯಗಳಲ್ಲಿ ಸುಮಾರು 80 ಕೋಟಿ ಮಂದಿ ಈ ದ್ವೇಷದ ಜಾಹೀರಾತುಗಳನ್ನು ವೀಕ್ಷಿಸಿದ್ದಾರೆ ಎಂಬುದು ಅಧ್ಯಯನದಿಂದ ವ್ಯಕ್ತವಾಗಿದೆ. ಮುಖ್ಯವಾಗಿ, ಜನಾಂಗೀಯವಾದ, ಇಸ್ಲಾಮೋಫೋಬಿಯಾ, ವಲಸೆ ವಿರೋಧಿ ನಿಲುವುಗಳನ್ನು ಉತ್ತೇಜಿಸಲು ಈ ಮೂಲಕ ಪ್ರಯತ್ನಿಸಲಾಗಿದೆ. ಹಾಗೆಯೇ ಕತಾರ್ ಮತ್ತು ಇರಾನ್ ವಿರೋಧಿ ಅಭಿಪ್ರಾಯಗಳನ್ನು ಸಾರ್ವಜನಿಕರಲ್ಲಿ ತುಂಬಲು ಈ ಹಣವನ್ನು ಬಳಸಲಾಗಿದೆ. ಸೋಶಿಯಲ್ ಮೀಡಿಯಾ ಜಾಹೀರಾತುಗಳು ಎಐ ನಿರ್ಮಿತ ವೀಡಿಯೋಗಳು, ಸಂಗೀತ ಮತ್ತು ಇನ್ನಿತರ ಡಿಜಿಟಲ್ ಪ್ಲ್ಯಾಟ್ಫಾರ್ಮ್ ಮೂಲಕ ಈ ಸುಳ್ಳುಗಳನ್ನು ಹರಡಲಾಗಿದೆ. ತೆಫ್ಟ್ ಕತಾರ್ ಎಂಬ ಹೆಸರಿನ ಒಂದು ಅಭಿಯಾನವನ್ನೇ ನಡೆಸಲಾಗಿದೆ. ಈ ಅಭಿಯಾನದ ಉದ್ದೇಶ ಏನೆಂದರೆ, ಯುರೋಪನ್ನು ಇಸ್ಲಾಮ್ಮಯವಾಗಿಸಲು ಕತಾರ್ ಭೂ ಕಳ್ಳತನ ಮಾಡುತ್ತಾ ಇದೆ ಎಂದು ಹೇಳುವುದು. ಯುರೋಪಿನ ಕಟ್ಟಡಗಳನ್ನು ಅರಬರು ಖರೀದಿಸುತ್ತಿದ್ದಾರೆ ಮತ್ತು ಅವುಗಳನ್ನು ಮಸೀದಿಗಳನ್ನಾಗಿ ಪರಿವರ್ತಿಸುತ್ತಿದ್ದಾರೆ ಎಂದು ನಂಬಿಸುವುದು. ಅದರಲ್ಲೂ ಯುರೋಪನ್ನು ಕತಾರ್ ಇಸ್ಲಾಮೀಕರಣಗೊಳಿಸುತ್ತಿದೆಯೆಂಬ ಭಯವನ್ನು ಬಿತ್ತುವುದು ಈ ಅಭಿಯಾನದ ಉದ್ದೇಶವಾಗಿದೆ. ಯುರೋಪಿಯನ್ ಮೂಲದ ಜನರನ್ನು ಸ್ಥಳಾಂತರಿಸಲಾಗುತ್ತಿದೆ ಮತ್ತು ಬೇರೆ ಮೂಲದವರನ್ನು ತಂದು ಅಲ್ಲಿ ನೆಲೆಗೊಳಿಸಲಾಗುತ್ತಿದೆಯೆಂಬ ಜಾಹೀರಾತುಗಳನ್ನೂ ಈ ಅಭಿಯಾನದ ಭಾಗವಾಗಿ ಹಂಚಿಕೆ ಮಾಡಲಾಗಿದೆ. ಫೇಸ್ಬುಕ್ನಲ್ಲಿ 1473 ಜಾಹೀರಾತುಗಳು, ಯೂಟ್ಯೂಬ್ನಲ್ಲಿ 189 ವೀಡಿಯೋಗಳು ಮತ್ತು ಟಿಕ್ಟಾಕ್ನಲ್ಲಿ 359 ಜಾಹೀರಾತುಗಳನ್ನು ಸಂಶೋಧಕರು ಪರಿಶೀಲನೆಗೆ ಒಡ್ಡಿದ್ದು, ಆ ಬಳಿಕ ಈ ಅಪಪ್ರಚಾರದ ಅಗಾಧ ಮಟ್ಟವನ್ನು ಪತ್ತೆ ಹಚ್ಚಿದ್ದಾರೆ. ಅಂದಹಾಗೆ,
ಇಸ್ಲಾಮೋಫೋಬಿಯಾಕ್ಕಾಗಿ ಖರ್ಚು ಮಾಡಲಾದ 78 ಕೋಟಿ ರೂಪಾಯಿ ಪೈಕಿ ಏಷ್ಯಾದಲ್ಲೂ ದೊಡ್ಡ ಮೊತ್ತವನ್ನು ಬಳಸಲಾಗಿದೆ. ಭಾರತದಲ್ಲಿ ಸದ್ಯ ಅಸ್ತಿತ್ವದಲ್ಲಿ ಮುಸ್ಲಿಮ್ ದ್ವೇಷ ಮತ್ತು ಇಸ್ರೇಲ್ ಪ್ರೇಮದ ಅಲೆಯನ್ನು ನೋಡಿದರೆ ಇದರ ಹಿಂದೆ ಯೋಜಿತ ಷಡ್ಯಂತ್ರದ ಪಾತ್ರ ಇರುವುದು ನಿಶ್ಚಿತಯೆಂದು ಕಾಣುತ್ತದೆ. ಸ್ವತಂತ್ರ ಫೆಲೆಸ್ತೀನ್ ಪರ ಭಾರತ ಸರಕಾರದ ನಿಲುವು ಇಂದು ನಿನ್ನೆಯದಲ್ಲ. ಇದಕ್ಕೆ ನೆಹರು ಕಾಲದಿಂದ ವಾಜಪೇಯಿವರೆಗೆ ಬಹುದೀರ್ಘ ಇತಿಹಾಸವಿದೆ. ಫೆಲೆಸ್ತೀನ್ನಂತೆ ಭಾರತವೂ ಒಂದು ಕಾಲದಲ್ಲಿ ಬ್ರಿಟಿಷರ ಒಡೆದು ಆಳುವ ನೀತಿಯ ಬಲಿಪಶುವಾಗಿತ್ತು. ಒಂದಾಗಿದ್ದ ಭಾರತವನ್ನು ತುಂಡರಿಸಿ ಪಾಕಿಸ್ತಾನವನ್ನಾಗಿ ಮಾಡುವ ಮೂಲಕ ಗಡಿ ಘರ್ಷಣೆಗೆ ಅವಕಾಶವೊಂದನ್ನು ಸದಾ ಕಾಲ ತೆರೆದಿಟ್ಟ ಕುಖ್ಯಾತಿ ಬ್ರಿಟಿಷರದ್ದು. ಫೆಲೆಸ್ತೀನ್ನ ಕತೆಯೂ ಇದಕ್ಕಿಂತ ಭಿನ್ನವಲ್ಲ.
ಫೆಲೆಸ್ತೀನ್ ಎಂಬ ವಿಶಾಲ ಭೂಪ್ರದೇಶವನ್ನು 1922ರಲ್ಲಿ ತನ್ನ ತೆಕ್ಕೆಯೊಳಗೆ ಸೇರಿಸಿಕೊಂಡ ಬ್ರಿಟಿಷರು, 1948ರಲ್ಲಿ ಬಿಟ್ಟು ಹೋಗುವಾಗ ಆವರೆಗೂ ಆಸ್ತಿತ್ವದಲ್ಲೇ ಇಲ್ಲದ ಇಸ್ರೇಲ್ ಎಂಬ ರಾಷ್ಟ್ರವನ್ನು ಹುಟ್ಟು ಹಾಕಿದರು. 1922ರಲ್ಲಿ ಫೆಲೆಸ್ತೀನ್ ಹೇಗಿತ್ತೆಂದರೆ ಇಸ್ರೇಲ್’ ಎಂಬ ರಾಷ್ಟ್ರದ ಕುರುಹೇ ಇರಲಿಲ್ಲ. ಅದಕ್ಕೊಂದು ನಿರ್ದಿಷ್ಟ ನಕಾಶೆ, ಗಡಿ ಗುರುತೂ ಇರಲಿಲ್ಲ. ಹೀಗೆ ಐಡೆಂಟಿಟಿಯೇ ಇಲ್ಲದ ರಾಷ್ಟ್ರವೊಂದಕ್ಕೆ ಅಡಿಪಾಯವನ್ನು ಹಾಕಿದಷ್ಟೇ ಅಲ್ಲ, ಇಸ್ರೇಲ್ನ ಕೈಗೆ ಫೆಲೆಸ್ತೀನ್ನ ನಿಯಂತ್ರಣ ಸಿಗುವಂಥ ತಂತ್ರವನ್ನು ಹೆಣೆದು ಬಿಟ್ಟು ಹೋಯಿತು. ಇಸ್ರೇಲ್ ರಾಷ್ಟ್ರ ಸ್ಥಾಪನೆಯಾದ 1948 ಮೇ 14ರ ಮೊದಲು ಫೆಲೆಸ್ತೀನ್ನಲ್ಲಿ ವ್ಯಾಪಕ ದೌರ್ಜನ್ಯ ನಡೆಯಿತು. ಇಸ್ರೇಲ್ ಸ್ಥಾಪನೆಯ ಮೊದಲು ಹಗಾನ, ಇರ್ಗುನ್ ಮತ್ತು ಲೇಹಿ ಎಂಬ ಸಶಸ್ತ್ರ ಸಂಘಟನೆಗಳು ಸಕ್ರಿಯವಾಗಿದ್ದವು. 1948 ಎಪ್ರಿಲ್ 9ರಂದು ಇರ್ಗುನ್ ಮತ್ತು ಲೇಹಿ ಸಂಘಟನೆಗಳು ದೇರ್ ಯಾಸೀನ್ ಎಂಬ ಅರಬ್ ಹಳ್ಳಿಯ ಮೇಲೆ ನಡೆಸಿದ ದಾಳಿಯಲ್ಲಿ 100ಕ್ಕಿಂತಲೂ ಅಧಿಕ ಫೆಲೆಸ್ತೀನಿಯರು ಹತ್ಯೆಗೀಡಾದರು. ಈ ಘಟನೆಯ ಬಳಿಕ ಸುತ್ತಮುತ್ತಲಿನ ಲಕ್ಷಕ್ಕಿಂತಲೂ ಅಧಿಕ ಫೆಲೆಸ್ತೀನಿಯರು ಮನೆಮಾರುಗಳನ್ನು ತೊರೆದು ವಲಸೆ ಹೋದರು. ಹೀಗೆ ಖಾಲಿಯಾದ ಹಳ್ಳಿಯನ್ನು ಇಸ್ರೇಲ್ ತನ್ನ ಒಡೆತನಕ್ಕೆ ಪಡೆದುಕೊಂಡಿತು. 1948 ಮೇ 14ರಂದು ಸ್ವತಂತ್ರ ಇಸ್ರೇಲ್ ಘೋಷಣೆಯಾದ ಬಳಿಕ ಅರಬ್ ರಾಷ್ಟ್ರಗಳು ಯುದ್ಧ ಘೋಷಿಸಿದವು. ಈ ಯುದ್ಧದಲ್ಲಿ ಅಮೆರಿಕ, ಬ್ರಿಟನ್, ಜರ್ಮನಿಗಳು ಇಸ್ರೇಲ್ ಜೊತೆ ನಿಂತು ಅರಬ್ ರಾಷ್ಟ್ರಗಳನ್ನು ಸೋಲಿಸಿದವು. ಇದರಿಂದಾಗಿ ಭಾರೀ ಪ್ರಮಾಣದಲ್ಲಿ ವಲಸೆ ನಡೆಯಿತಲ್ಲದೇ, ಆ ಭೂಭಾಗಗಳನ್ನು ತನ್ನೊಳಗೆ ಸೇರಿಸಿಕೊಂಡ ಇಸ್ರೇಲ್ ಹಿಗ್ಗುತ್ತಾ ಹೋಯಿತು.
ಆದರೆ, ಒಂದು ಕಾಲದಲ್ಲಿ ಸ್ವತಂತ್ರವಾಗಿದ್ದ ಫೆಲೆಸ್ತೀನ್ 1948ರ ಬಳಿಕ ರಾಷ್ಟ್ರ ಸ್ಥಾನಮಾನದ ಮಾನ್ಯತೆಯೂ ಸಿಗದೆ ಇಸ್ರೇಲ್ನ ನಿಯಂತ್ರಣದಲ್ಲೇ ಉಸಿರಾಡುತ್ತಾ ಬಂದಿತು. ಇದು ಹೇಗೆಂದರೆ, ಪಾಕಿಸ್ತಾನವನ್ನು ಸ್ವತಂತ್ರ ರಾಷ್ಟ್ರವೆಂದು ಘೋಷಿಸಿ ಅದರ ಕೈಯಲ್ಲಿ ಭಾರತದ ನಿಯಂತ್ರಣವನ್ನು ಕೊಟ್ಟಂತೆ. ಪಾಕನ್ನು ರಕ್ಷಿಸಲು ಅಮೆರಿಕ, ಚೀನಾ ಟೊಂಕ ಕಟ್ಟಿ ನಿಂತಂತೆ. ಆದ್ದರಿಂದಲೇ,
ಭಾರತ ಈ ಅನ್ಯಾಯವನ್ನು ಪ್ರಶ್ನಿಸುತ್ತಾ ಬಂತು. ಫೆಲೆಸ್ತೀನಿಯನ್ನರ ಪರ ವಿಶ್ವಸಂಸ್ಥೆಯಲ್ಲೂ ಜಾಗತಿಕ ವೇದಿಕೆಗಳಲ್ಲೂ ಧ್ವನಿಯೆತ್ತುತ್ತಾ ಬಂತು. ಆದರೆ ಕಳೆದೊಂದು ದಶಕದಿಂದ ಈ ವಾತಾವರಣದಲ್ಲಿ ಬದಲಾವಣೆಯಾಗಿದೆ. ಫೆಲೆಸ್ತೀನಿಯರನ್ನು ದ್ವೇಷಿಸುವ ಮತ್ತು ಇಸ್ರೇಲ್ನ್ನು ಅಪ್ಪಿಕೊಳ್ಳುವ ಮನಸ್ಥಿತಿ ಬಲಪಡೆಯುತ್ತಿವೆ. ಬಹುಶಃ ಈ ಮನಸ್ಥಿತಿಯ ಹಿಂದೆ ಇಸ್ರೇಲ್ನ ಯೋಜಿತ ಅಪಪ್ರಚಾರದ ಪ್ರಭಾವ ಢಾಳಾಗಿ ಇರುವುದು ಕಾಣಿಸುತ್ತಿದೆ. ಕೇವಲ ಭಾರತದಲ್ಲಿ ಮಾತ್ರವಲ್ಲ, ಯುರೋಪಿಯನ್ ರಾಷ್ಟ್ರಗಳಲ್ಲೂ ಈ ಮನಸ್ಥಿತಿ ಬೆಳೆಯುವುದಕ್ಕೆ ನೀರು, ಗೊಬ್ಬರವನ್ನು ಹಾಕಲಾಗುತ್ತಿದೆ ಎಂಬುದಕ್ಕೂ ಆಧಾರ ಸಿಕ್ಕಿದೆ. ಭಾರತದಲ್ಲಿ ಹೇಗೆ ಮುಸ್ಲಿಮರ ವಿರುದ್ಧ ಲ್ಯಾಂಡ್ ಜಿಹಾದ್ ಎಂಬ ಹೆಸರಲ್ಲಿ ಅಪಪ್ರಚಾರ ಮಾಡಲಾಗುತ್ತಿದೆಯೋ ಅದೇ ರೀತಿಯಲ್ಲಿ ಯುರೋಪಿನಲ್ಲೂ ಅಪಪ್ರಚಾರ ಮಾಡಲಾಗುತ್ತಿರುವುದಕ್ಕೆ `ಮ್ಯಾನ್ಯುಫ್ಯಾಕ್ಚರಿಂಗ್ ದಿ ಗ್ರೇಟ್ ರಿಪ್ಲೇಸ್ಮೆಂಟ್’ ವರದಿಯು ಆಧಾರವನ್ನು ಒದಗಿಸಿದೆ. ಇರಾನ್ ವಿರುದ್ಧ ಅರಬ್ ರಾಷ್ಟ್ರಗಳಲ್ಲಿರುವ ಅನುಮಾನಗಳ ಹಿಂದೆಯೂ ಇಸ್ರೇಲ್ನ ಪಾತ್ರ ಖಂಡಿತ ಇರಬಹುದು. ಅರಬ್ ರಾಷ್ಟ್ರಗಳ ಪಾಲಿಗೆ ಇರಾನ್ ಯಾವತ್ತೂ ಶತ್ರು ರಾಷ್ಟ್ರ ಮತ್ತು ಅದು ಸೌದಿ ಸಹಿತ ವಿವಿಧ ಅರಬ್ ರಾಷ್ಟ್ರಗಳ ಮೇಲೆ ಆಧಿಪತ್ಯ ಸ್ಥಾಪಿಸಲು ಹವಣಿಸುತ್ತಿದೆ ಎಂಬ ಪ್ರಚಾರವನ್ನು ಅತ್ಯಂತ ಸಮರ್ಪಕವಾಗಿ ಇಸ್ರೇಲ್ ಬಿತ್ತಿರುವ ಸಾಧ್ಯತೆಯಿದೆ. ಅರಬ್ ಆಡಳಿತಗಳನ್ನು ಈ ಪ್ರಚಾರಗಳ ಮೂಲಕ ಮರುಳುಗೊಳಿಸಲು ಇಸ್ರೇಲ್ ಬಹುತೇಕ ಯಶಸ್ವಿಯಾಗಿರುವುದೂ ಕಾಣಿಸುತ್ತಿದೆ. ಇರಾನ್ ಎಂಬುದು ಇಸ್ರೇಲ್, ಅಮೆರಿಕ ಮತ್ತು ಗಲ್ಫ್ ರಾಷ್ಟ್ರಗಳ ಶತ್ರು ಎಂಬುದು ಈಗ ಬಿಂಬಿತವಾಗಿರುವುದು ಆಕಸ್ಮಿತವಲ್ಲ. ಅದಕ್ಕಾಗಿ ಕೋಟಿ ಕೋಟಿ ರೂಪಾಯಿಯನ್ನು ಇಸ್ರೇಲ್ ಖರ್ಚುಮಾಡಿದೆ. ಹೀಗೆ ತನ್ನ ಲಾಭಕ್ಕಾಗಿ ಇಸ್ಲಾಮೋಫೋಬಿಯಾ ಮತ್ತು ಇರಾನ್ ಫೋಬಿಯಾವನ್ನು ಇಸ್ರೇಲ್ ಅತ್ಯಂತ ವ್ಯವಸ್ಥಿತವಾಗಿ ಹರಡಿದೆ ಎಂಬುದನ್ನು ವರದಿಯು ಸ್ಪಷ್ಟಪಡಿಸಿದೆ.
ಈ ವರದಿಯ ಕಾರಣದಿಂದಲಾದರೂ ಜಗತ್ತು ಕಣ್ಣು ತೆರೆಯಲಿ.












