ಗಾಝಾ ಮಳೆ: ಸಂತ್ರಸ್ತರಾದ ಎರಡು ಲಕ್ಷಕ್ಕೂ ಅಧಿಕ ಮಂದಿ

0
4

ಸನ್ಮಾರ್ಗ ವಾರ್ತೆ

ಗಾಝಾದಲ್ಲಿ ತೀವ್ರಗೊಂಡಿರುವ ಮಳೆ ಮತ್ತು ಪ್ರವಾಹದಿಂದಾಗಿ 2 ಲಕ್ಷಕ್ಕೂ ಅಧಿಕ ಮಂದಿ ಸಂತ್ರಸ್ತರಾಗಿದ್ದು, ಮಾನವೀಯ ಬಿಕ್ಕಟ್ಟು ಮತ್ತಷ್ಟು ಗಂಭೀರವಾಗಿದೆ. ಪ್ರವಾಹದಿಂದ ಈಗಾಗಲೇ ಹಲವರು ಮೃತಪಟ್ಟಿದ್ದು, 40 ಸಾವಿರಕ್ಕೂ ಅಧಿಕ ಕುಟುಂಬಗಳ ಆಶ್ರಯ ತಾಣಗಳು ಹಾನಿಗೊಳಗಾಗಿವೆ. ಈ ಹಿನ್ನೆಲೆಯಲ್ಲಿ ಚಳಿಗಾಲದ ತುರ್ತು ಪರಿಹಾರ ಸಾಮಗ್ರಿಗಳನ್ನು ತಕ್ಷಣವೇ ತಲುಪಿಸಬೇಕೆಂದು ವಿಶ್ವಸಂಸ್ಥೆಯ ಪರಿಹಾರ ಮುಖ್ಯಸ್ಥ ಟಾಮ್ ಫ್ಲೆಚರ್ ಎಚ್ಚರಿಕೆ ನೀಡಿದ್ದಾರೆ.

ಗಾಜಾದ ಜನರಿಗೆ ಬೆಚ್ಚಗಿನ ಬಟ್ಟೆ, ಹೊದಿಕೆ, ಸುರಕ್ಷಿತ ತಾಪನ ವ್ಯವಸ್ಥೆ, ಇಂಧನ, ಜನರೇಟರ್‌ಗಳು ಹಾಗೂ ಪ್ರವಾಹದ ನೀರು ತೆರವುಗೊಳಿಸುವ ಪಂಪ್‌ಗಳ ತುರ್ತು ಅಗತ್ಯವಿದೆ. ಇವುಗಳನ್ನು ಪೂರೈಸಲು ಯೋಜನೆ ಸಿದ್ಧವಿದ್ದರೂ ಅನುಷ್ಠಾನದಲ್ಲಿ ವಿಳಂಬವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಗಡಿಗಳನ್ನು ಮುಚ್ಚುವುದು ಅಥವಾ ನೆರವು ವಿತರಣೆಯನ್ನು ವಿಳಂಬಿಸುವುದು ಅಂತರರಾಷ್ಟ್ರೀಯ ಮಾನವೀಯ ಕಾನೂನಿನ ಉಲ್ಲಂಘನೆಯಾಗಬಹುದು ಎಂದು ಟಾಮ್ ಫ್ಲೆಚರ್ ಎಚ್ಚರಿಸಿದ್ದಾರೆ. ಎಲ್ಲಾ ಗಡಿ ಮಾರ್ಗಗಳನ್ನು ತೆರೆಯಬೇಕು, ಪರಿಹಾರ ಸಂಸ್ಥೆಗಳಿಗೆ ಕಾರ್ಯಾಚರಣೆಗೆ ಅವಕಾಶ ನೀಡಬೇಕು ಹಾಗೂ ಚಳಿಗಾಲದ ನೆರವಿಗೆ ತಕ್ಷಣ ಧನಸಹಾಯ ಒದಗಿಸಬೇಕು ಎಂದು ವಿಶ್ವಸಂಸ್ಥೆ ಆಗ್ರಹಿಸಿದೆ. ಪ್ರವಾಹ ಮತ್ತು ಚಳಿಯಿಂದ ಕಂಗೆಟ್ಟಿರುವ ಗಾಜಾ ಜನರಿಗೆ ತುರ್ತು ನೆರವು ತಲುಪಿಸುವುದು ಈಗ ಅತ್ಯಂತ ಅಗತ್ಯವಾಗಿದೆ