ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಭಾರತೀಯ ರೈಲ್ವೆಯ ಹಳೆಯ ‘ರಾಯ್ ರಿಸರ್ವೇಶನ್ ಅಗೇನ್ಸ್ಟ್ ಕ್ಯಾನ್ಸಲೇಷನ್’ ವ್ಯವಸ್ಥೆಯು ಶೀಘ್ರದಲ್ಲೇ ಕೊನೆಗೊಳ್ಳಬಹುದು, ಆದರೂ ಈ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಕೈಗೊಳ್ಳಲಾಗಿಲ್ಲ. ಪ್ರಯಾಣಿಕರ ಸೌಕರ್ಯವನ್ನು ಗಮನದಲ್ಲಿಟ್ಟುಕೊಂಡು, ಈ ಸೌಲಭ್ಯವನ್ನು ನಿಲ್ಲಿಸಬೇಕೆ ಎಂಬ ಕುರಿತು ರೈಲ್ವೆ ಇಲಾಖೆಯು ಚಿಂತನೆ ನಡೆಸುತ್ತಿದೆ. ವರದಿಯೊಂದರ ಪ್ರಕಾರ, ಒಂದೇ ಬರ್ತ್ನಲ್ಲಿ ಇಬ್ಬರು ಪ್ರಯಾಣಿಸುವ ಈ ನಿಯಮವನ್ನು ಪ್ರಶ್ನಿಸಲಾಗುತ್ತಿದೆ.
ಆರ್ಎಸಿ ರೈಲು ಟಿಕೆಟ್ ಪ್ರಕಾರ ಇಬ್ಬರು ಪ್ರಯಾಣಿಕರು ಒಂದೇ ಬರ್ತ್ ಅನ್ನು (ಅಂದರೆ ಸೈಡ್ ಲೋವರ್) ಹಂಚಿಕೊಳ್ಳಬೇಕಾಗುತ್ತದೆ. ಆಶ್ಚರ್ಯಕರ ಸಂಗತಿಯೆಂದರೆ, ಇಬ್ಬರೂ ಪ್ರಯಾಣಿಕರಿಂದ ಪೂರ್ಣ ಶುಲ್ಕವನ್ನು (ಪ್ರಯಾಣ ದರ) ವಸೂಲಿ ಮಾಡಲಾಗುತ್ತದೆ. ಆದರೆ ಪ್ರತಿಯಾಗಿ ಮಲಗಲು ಅರ್ಧ ಜಾಗ ಮಾತ್ರ ಸಿಗುತ್ತದೆ. ಈ ವಿಷಯದ ಬಗ್ಗೆ ಸಂಸದೀಯ ಸಮಿತಿಯು ಆಕ್ಷೇಪಣೆ ವ್ಯಕ್ತಪಡಿಸಿದೆ.
ಪ್ರಯಾಣಿಕರಿಗೆ ಮಲಗಲು ಪೂರ್ಣ ಜಾಗ ಸಿಗದಿದ್ದಾಗ, ಅವರಿಂದ ಪೂರ್ಣ ದರವನ್ನು ವಸೂಲಿ ಮಾಡುವುದು ಯಾವುದೇ ರೀತಿಯಲ್ಲೂ ಸರಿಯಲ್ಲ ಎಂದು ಸಮಿತಿ ತಿಳಿಸಿದೆ. ಈ ವ್ಯವಸ್ಥೆಯನ್ನು ಮರುಪರಿಶೀಲಿಸುವಂತೆ ರೈಲ್ವೆಗೆ ಸೂಚಿಸಲಾಗಿದೆ.
ಆರ್ಎಸಿ ಆರಂಭವಾಗಲು ಕಾರಣ ರೈಲ್ವೆ ಟಿಕೆಟು ಕಾಯ್ದಿರುಸುವಿಕೆ ಮ್ಯಾನುವೇಲ್ ರೀತಿಯಲ್ಲಿ ನಡೆಯುತ್ತಿದ್ದಾಗ, ರದ್ದತಿ ಮತ್ತು ಖಾಲಿ ಸೀಟುಗಳನ್ನು ರಿಯಲ್-ಟೈಮ್ನಲ್ಲಿ ಟ್ರ್ಯಾಕ್ ಮಾಡಲು ಯಾವುದೇ ಡಿಜಿಟಲ್ ವ್ಯವಸ್ಥೆ ಇರಲಿಲ್ಲ. ಆ ಕಾಲದಲ್ಲಿ ಹೆಚ್ಚಿನ ಜನರಿಗೆ ರೈಲಿನಲ್ಲಿ ಅವಕಾಶ ಕಲ್ಪಿಸಲು ಈ ವ್ಯವಸ್ಥೆಯನ್ನು ಆರಂಭಿಸಲಾಗಿತ್ತು.ಆರ್ಎಸಿ ಟಿಕೆಟ್ನಲ್ಲಿ ಕುಳಿತುಕೊಳ್ಳಲು ಖಚಿತತೆ, ಮಲಗಲು ಅಲ್ಲ: ಖಾಯ್ದಿರಿಸಿದ ಟಿಕೆಟ್ ಇದ್ದರೆ ರೈಲಿನಲ್ಲಿ ಕುಳಿತುಕೊಳ್ಳಲು ಪಕ್ಕಾ ಜಾಗ ಸಿಗುತ್ತದೆ, ಆದರೆ ಮಲಗಲು ಪೂರ್ಣ ಬರ್ತ್ನ ಯಾವುದೇ ಗ್ಯಾರಂಟಿ ಇರುವುದಿಲ್ಲ.
ಆದರೆ ಬರ್ತ್ ಅಪ್ಗ್ರೇಡ್ ಆಗುವ ಅವಕಾಶವಿತ್ತು. ಪ್ರಯಾಣಕ್ಕೂ ಮುನ್ನ ಬೇರೆ ಯಾರಾದರೂ ತಮ್ಮ ಟಿಕೆಟ್ ರದ್ದುಗೊಳಿಸಿದರೆ ಅಥವಾ ರೈಲು ಹೊರಡುವವರೆಗೆ ಬರದಿದ್ದರೆ, ಖಾಲಿಯಾಗುವ ಪೂರ್ಣ ಬರ್ತ್ ಅನ್ನು ಪ್ರಯಾಣಿಕರಿಗೆ ನೀಡಲಾಗುತ್ತದೆ. ಟಿಕೆಟ್ ರದ್ದಾದಾಗ, ವೇಟಿಂಗ್ ಲಿಸ್ಟ್ ಪ್ರಯಾಣಿಕರಿಗೆ ಖಚಿತ ಸೀಟ್ ನೀಡುವುದಕ್ಕಿಂತ ಮುಂಚೆ ಆ ಸೀಟನ್ನು ಆರ್ಎಸಿ ಪ್ರಯಾಣಿಕರಿಗೆ ಹಂಚಿಕೆ ಮಾಡಲಾಗುತ್ತದೆ. ಪ್ರಯಾಣದ ವೇಳೆ ರೈಲು ಹೊರಟ ನಂತರ ದಾರಿಯಲ್ಲಿ ಯಾವುದಾದರೂ ಬರ್ತ್ ಖಾಲಿಯಾದರೆ, ನಿಯಮಗಳ ಪ್ರಕಾರ ಅದೂ ಸಹ ಆರ್ಎಸಿ ಪ್ರಯಾಣಿಕರಿಗೆ ಸಿಗಬಹುದು. ಒಂದು ವೇಳೆ ಪೂರ್ಣ ಬರ್ತ್ ಖಾಲಿಯಾಗದಿದ್ದರೆ, ಕುಳಿತುಕೊಳ್ಳುವ ಜಾಗದಲ್ಲೇ ಪ್ರಯಾಣವನ್ನು ಮುಂದುವರಿಸಬೇಕಾಗುತ್ತದೆ. ಕೆಲವೊಮ್ಮೆ ಒಂದೇ ಸೀಟಿನಲ್ಲಿ ಪುರುಷ ಮತ್ತು ಮಹಿಳಾ ಪ್ರಯಾಣಿಕರಿಗೆ ಸೀಟು ಸಿಕ್ಕಾಗ ಇರಿಸುಮುರಿಸಿನ ಪರಿಸ್ಥಿತಿ ಎದುರಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಟಿಕೆಟ್ ಪರೀಕ್ಷಕರಿಗೆ ಬೇರೆ ಕಡೆ ವ್ಯವಸ್ಥೆ ಮಾಡುವುದು ತುಂಬಾ ಕಷ್ಟವಾಗುತ್ತದೆ. ರೈಲು ಹೊರಡುವ ನಿಗದಿತ ಸಮಯಕ್ಕಿಂತ ಅರ್ಧ ಗಂಟೆ ಮುಂಚಿತವಾಗಿ ಆರ್ಎಸಿ ಟಿಕೆಟ್ ಅನ್ನು ಆನ್ಲೈನ್ನಲ್ಲಿ ರದ್ದುಗೊಳಿಸಬಹುದು ಮತ್ತು ಮರುಪಾವತಿಗಾಗಿ ಅರ್ಜಿ ಸಲ್ಲಿಸಬಹುದು. ರೈಲು ಸಂಪೂರ್ಣವಾಗಿ ರದ್ದಾದರೆ, ಮರುಪಾವತಿ ಹಣವು ಸ್ವಯಂಚಾಲಿತವಾಗಿ ನಿಮ್ಮ ಖಾತೆಗೆ ಜಮೆ ಆಗುತ್ತದೆ.












