ಅಂತಾರಾಷ್ಟ್ರೀಯ ಕಾನೂನು ಉಲ್ಲಂಘಿಸುವ ದೇಶಗಳಿಗೆ ಅಮೆರಿಕ ಸೈನಿಕ ಸಹಾಯ ನೀಡಬಾರದು: ಅಬ್ದುಲ್ ಅಲ್ ಸಈದ್

0
5

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್: ಅಮೆರಿಕದಿಂದ ನೆರವು ಪಡೆಯುವ ದೇಶಗಳು ಅಂತಾರಾಷ್ಟ್ರೀಯ ಕಾನೂನುಗಳನ್ನು ಉಲ್ಲಂಘಿಸುತ್ತಿದ್ದರೆ, ಅಂತಹ ನೆರವಿನ ಬಳಕೆಯನ್ನು ಕಟ್ಟುನಿಟ್ಟಾಗಿ ಪರಿಶೀಲಿಸಬೇಕು ಎಂದು ಅಲ್ ಸಈದ್ ಆಗ್ರಹಿಸಿದ್ದಾರೆ. ಈ ತತ್ವವು ಕೇವಲ ಇಸ್ರೇಲ್‌ಗೆ ಮಾತ್ರವಲ್ಲದೆ, ತಮ್ಮ ಕುಟುಂಬ ಮೂಲದ ದೇಶವಾದ ಈಜಿಪ್ಟ್ ಹಾಗೂ ಪಾಕಿಸ್ತಾನ, ಜೋರ್ಡಾನ್ ಮತ್ತು ಸೌದಿ ಅರೇಬಿಯಾ ಮುಂತಾದ ಎಲ್ಲಾ ದೇಶಗಳಿಗೂ ಅನ್ವಯಿಸಬೇಕು ಎಂದು ಅವರು ತಿಳಿಸಿದ್ದಾರೆ.

ಅಮೆರಿಕದ ತೆರಿಗೆದಾರರ ಹಣವನ್ನು ವಿದೇಶಿ ಸೈನ್ಯಗಳಿಗೆ ಬಾಂಬ್‌ಗಳು ಮತ್ತು ಟ್ಯಾಂಕ್‌ಗಳನ್ನು ಖರೀದಿಸಲು ಬಳಸಬಾರದು ಎಂದು ಯುಎಸ್ ಸೆನೆಟರ್-ಎಲೆಕ್ಟ್ ಅಬ್ದುಲ್ ಅಲ್ ಸಈದ್ ಸ್ಪಷ್ಟಪಡಿಸಿದ್ದಾರೆ. ತೆರಿಗೆ ಹಣವನ್ನು ವಿದೇಶಗಳಿಗೆ ಮಿಲಿಟರಿ ನೆರವಾಗಿ ನೀಡುವುದಕ್ಕಿಂತ ದೇಶದೊಳಗೆ ಉತ್ತಮ ಶಾಲೆಗಳು ಮತ್ತು ಆರೋಗ್ಯ ಸೌಲಭ್ಯಗಳನ್ನು ಕಲ್ಪಿಸಲು ಬಳಸಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇಸ್ರೇಲ್‌ಗೆ ನೀಡುವ ವಾರ್ಷಿಕ ಮಿಲಿಟರಿ ನೆರವನ್ನು ಹಂತ ಹಂತವಾಗಿ ನಿಲ್ಲಿಸುವ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರವನ್ನು ಅಲ್ ಸಈದ್ ಸ್ವಾಗತಿಸಿದ್ದಾರೆ. ಇದರೊಂದಿಗೆ, ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಉಲ್ಲಂಘನೆಗೆ ಬಳಕೆಯಾಗುವ ಆಯುಧಗಳ ಮಾರಾಟವನ್ನೂ ಸಂಪೂರ್ಣವಾಗಿ ಸ್ಥಗಿತಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಇತ್ತೀಚೆಗೆ ನಡೆದ ಯುಎಸ್ ಮಧ್ಯಂತರ ಚುನಾವಣೆಯಲ್ಲಿ ಮಿಷಿಗನ್ ಸೆನೆಟ್ ಸ್ಥಾನದಿಂದ ರಿಪಬ್ಲಿಕನ್ ಅಭ್ಯರ್ಥಿಯನ್ನು ಸೋಲಿಸಿ ಗೆಲುವು ಸಾಧಿಸಿರುವ ಅಬ್ದುಲ್ ಅಲ್ ಸಈದ್, ಅಮೆರಿಕದ ಸೆನೆಟ್‌ಗೆ ಆಯ್ಕೆಯಾದ ಮೊದಲ ಮುಸ್ಲಿಂ ವ್ಯಕ್ತಿ ಎಂಬ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದ್ದಾರೆ.