ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: 2024ರಲ್ಲಿ ಲೋಕಸಭೆ, ವಿಧಾನಸಭೆಗೆ ನಡೆದಿದ್ದ ಚುನಾವಣೆಯಲ್ಲಿ ಮಹಾರಾಷ್ಟ್ರ, ಹರಿಯಾಣ, ಜಮ್ಮು ಕಾಶ್ಮೀರಗಳ 200 ಕ್ಷೇತ್ರಗಳಲ್ಲಿ ಸಂಜೆ ಐದು ಗಂಟೆಯ ನಂತರ ಎಷ್ಟು ಮಂದಿ ಮತದಾನ ಮಾಡಿದ್ದಾರೆ ಎಂಬ ಲೆಕ್ಕಗಳೇ ಚುನಾವಣಾ ಆಯೋಗದ ಬಳಿ ಇಲ್ಲ ಎಂಬ ಹೊಸ ತನಿಖಾ ವರದಿಯನ್ನು ದಿ ರಿಪೋರ್ಟರ್ಸ್ ಕಲೆಕ್ಟಿವ್ ಬಹಿರಂಗಪಡಿಸಿದೆ.
ಇದರಿಂದ ಚುನಾವಣಾ ಆಯೋಗಕ್ಕೆ ಮತದಾನದ ಕೊನೆಯ ಗಂಟೆಗಳಲ್ಲಿ ಮತ್ತು ಸಂಜೆ ಆರು ಗಂಟೆಗೆ ಮತದಾನ ಮುಕ್ತಾಯಗೊಂಡ ನಂತರ ಮತಗಟ್ಟೆಯಲ್ಲಿ ಏನೇನು ನಡೆದಿದೆ ಎಂದು ಪರಿಶೀಲಿಸಲು ಆಗಿಲ್ಲ. 467 ವಿಧಾನಸಭಾ ಕ್ಷೇತ್ರಗಳಲ್ಲಿ ಮತ್ತು 63 ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣಾ ಅಧಿಕಾರಿಗಳು ನೀಡಿದ್ದ ವರದಿಯನ್ನು ರಿಪೋರ್ಟರ್ಸ್ ಕಲೆಕ್ಟಿವ್ ಪರಿಶೀಲಿಸಿತ್ತು. ಚುನಾವಣಾ ಆಯೋಗ ಸಾರ್ವಜನಿಕಗೊಳಿಸದ 4,212 ಫಿಸಿಕಲ್ ದಾಖಲೆಗಳನ್ನು ಅವಲೋಕಿಸಲಾಗಿತ್ತು.
ಮತಗಳ ಲೆಕ್ಕ ಇಲ್ಲದ 200 ಚುನಾವಣಾ ಕ್ಷೇತ್ರಗಳಲ್ಲಿ 132 ಕ್ಷೇತ್ರಗಳು ಮಹಾರಾಷ್ಟ್ರದ್ದಾಗಿದ್ದು ಇದರಲ್ಲಿ 114 ವಿಧಾನಸಭಾ ಕ್ಷೇತ್ರಗಳು ಮತ್ತು 18 ಲೋಕಸಭಾ ಕ್ಷೇತ್ರಗಳು ಸೇರಿವೆ. ಜಮ್ಮು ಕಾಶ್ಮೀರದ ಒಂದು ಲೋಕಸಭಾ ಸೀಟು ಮತ್ತು 44 ವಿಧಾನಸಭಾ ಸೀಟುಗಳು, ಹರಿಯಾಣದಲ್ಲಿ 22 ವಿಧಾನಸಭಾ ಸೀಟುಗಳು ಮತ್ತು ಒಂದು ಲೋಕಸಭಾ ಕ್ಷೇತ್ರಗಳಲ್ಲಿ ಸಂಜೆ ಐದು ಗಂಟೆ ನಂತರ ಆಗಿರುವ ಮತದಾನದ ಲೆಕ್ಕಗಳು ಚುನಾವಣಾ ಆಯೋಗದ ಬಳಿ ಇಲ್ಲ. ಜಮ್ಮು ಕಾಶ್ಮೀರದ ದೇವಸರ್ ಚುನಾವಣಾ ಕ್ಷೇತ್ರದಲ್ಲಿ ಇದೇ ರೀತಿ ಆಗಿದೆ.
ಚುನಾವಣಾ ಆಯೋಗದ ನಿಯಮದ ಪ್ರಕಾರ ಮತದಾನ ಮುಗಿಯುವ ವರೆಗೆ ಪ್ರತಿ ಎರಡು ಗಂಟೆಗಳಲ್ಲಿ ಬೂತ್ನಲ್ಲಿ ಆಗಿರುವ ಮತದಾನದ ಲೆಕ್ಕಗಳನ್ನು ಪ್ರಿಸೈಡಿಂಗ್ ಅಧಿಕಾರಿ ಡೈರಿಯಲ್ಲಿ ಬರೆದಿಡಬೇಕಾಗುತ್ತದೆ. ಮತಗಟ್ಟೆಗೆ ಬರುವ ಪ್ರತಿಯೊಬ್ಬ ಮತದಾರರನ್ನು ಗುರುತಿಸುವ ಫಾರ್ಮ್ 17ಎ ಯ ಲೆಕ್ಕಕ್ಕೆ ಡೈರಿಯ ಲೆಕ್ಕಗಳು ಸರಿಹೊಂದಬೇಕಾಗುತ್ತದೆ. ಆದರೆ ಕೊನೆಹಂತದ ಮತದಾನದ ವಿವರಗಳನ್ನು ಕೈಬಿಡುವುದು ಚುನಾವಣಾ ಆಯೋಗದ ನಿಯಮದ ಉಲ್ಲಂಘನೆಯಾಗಿದೆ. ಮತದಾನ ಮುಕ್ತಾಯಗೊಳ್ಳುವ ಸಮಯದಲ್ಲಿ ಸಣ್ಣ ಪಾರ್ಟಿಗಳ ಪೋಲಿಂಗ್ ಏಜೆಂಟ್ಗಳಲ್ಲಿ ಹಲವರು ಮತಗಟ್ಟೆಯಿಂದ ಹೊರಟು ಹೋಗುವುದರಿಂದ ಈ ಸಮಯವನ್ನು ಬಳಸಿಕೊಂಡು ನಕಲಿ ವೋಟು ಹಾಕಲ್ಪಡುವ ಸಾಧ್ಯತೆ ಇದೆ ಎಂದು ರಿಪೋರ್ಟರ್ಸ್ ಕಲೆಕ್ಟಿವ್ ಹೇಳುತ್ತಿದೆ.
2024 ನವೆಂಬರ್ 20ಕ್ಕೆ ನಡೆದಿದ್ದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಸಂಜೆ ಐದು ಗಂಟೆಗೆ 58.22 ಶೇಕಡ ಮತದಾನ ಆಗಿತ್ತು. ಮರುದಿನ ಬೆಳಗ್ಗೆ ಈ ಲೆಕ್ಕ ನೋಡಿದಾಗ ಮತದಾನದ ಪ್ರಮಾಣ 66.05 ಶೇಕಡಕ್ಕೆ ಹೆಚ್ಚಳವಾಗಿತ್ತು. ಸಾಲಿನಲ್ಲಿ ನಿಂತವರು ನಂತರ ವೋಟು ಹಾಕಿದ್ದಾರೆ ಎಂದು ಮುಖ್ಯ ಚುನಾವಣಾಧಿಕಾರಿ ಸ್ಪಷ್ಟೀಕರಣ ನೀಡಿದ್ದರು.
ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂಧೆ ಗೆದ್ದಿರುವ ಕೊಪ್ರಿ- ಪಚ್ಖಾಡಿ ವಿಧಾನಸಭಾ ಕ್ಷೇತ್ರದಲ್ಲಿ ಸಂಜೆ ಐದು ಗಂಟೆವರೆಗೆ 1.13 ಲಕ್ಷ ಮತದಾನ ಆಗಿತ್ತು. ಆದರೆ ಕೊನೆಯಲ್ಲಿ 2.03 ಲಕ್ಷ ಮತದಾರರು ಮತ ಹಾಕಿದ್ದಾರೆ ಎಂದು ಲೆಕ್ಕ ತೋರಿಸಲಾಗಿತ್ತು. 366 ಮತಗಟ್ಟೆಗಳಲ್ಲಿ ಸಂಜೆ ಐದು ಗಂಟೆಯ ನಂತರ 89,878 ಮತದಾರರು ಮತದಾನ ಮಾಡಿದ್ದಾರೆ. ಮತದಾನದ ಸಮಯ ಮುಕ್ತಾಯಗೊಳ್ಳುವಾಗ ಸಾಲಿನಲ್ಲಿ ನಿಂತವರಿಗೆ ಅಧಿಕಾರಿಗಳು ಸಹಿಹಾಕಿದ ಸ್ಲಿಪ್ಗಳನ್ನು ಕೊಡಬೇಕೆಂದು ನಿಯಮ ಇದೆ. ಆದರೆ, ರಿಪೋರ್ಟರ್ ಕಲೆಕ್ಟಿವ್ ಪರಿಶೀಲಿಸಿದ 530 ಚುನಾವಣಾ ಕ್ಷೇತ್ರಗಳಲ್ಲಿ 23 ಕ್ಷೇತ್ರ ನಿಯಮದ ಪ್ರಕಾರ ಎಷ್ಟು ಸ್ಲಿಪ್ ಕೊಡಲಾಗಿದೆ ಎಂಬುದನ್ನು ಬರೆದಿಟ್ಟಿಲ್ಲ.












