ಹಮಾಸ್ ಕುರಿತು ಮಾಹಿತಿಗೆ ಗಾಝದಲ್ಲಿ ಸಿಗರೆಟ್ ಮತ್ತು ಕಾಫಿ ಹಂಚಿದ ಇಸ್ರೇಲ್

0
4

ಸನ್ಮಾರ್ಗ ವಾರ್ತೆ

ಗಾಝ: ಹಮಾಸ್ ಹಾಗೂ ಇತರ ಫೆಲೆಸ್ತೀನಿ ಸಶಸ್ತ್ರ ಗುಂಪುಗಳ ಕುರಿತು ಗುಪ್ತಚರ ಮಾಹಿತಿ ಕಲೆಹಾಕುವ ಉದ್ದೇಶದಿಂದ ಇಸ್ರೇಲ್ ಸೇನೆಯು ಡ್ರೋನ್‌ಗಳ ಮೂಲಕ ಕರಪತ್ರಗಳ ಜೊತೆಗೆ ಸಿಗರೆಟ್ ಮತ್ತು ಕಾಫಿ ಪ್ಯಾಕೆಟ್‌ಗಳನ್ನು ವಿತರಿಸಿದೆ. ಗಾಝ ಸಿಟಿ ಮತ್ತು ಅಲ್-ಶಿಫಾ ಆಸ್ಪತ್ರೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಸ್ರೇಲಿ ಕಾಪ್ಟರ್ ಡ್ರೋನ್‌ಗಳು ಈ ಕರಪತ್ರಗಳು, ಸಿಗರೆಟ್ ಮತ್ತು ಕಾಫಿ ಪ್ಯಾಕೆಟ್‌ಗಳನ್ನು ಕೆಳಗೆ ಬೀಳಿಸಿವೆ. ಈ ಕರಪತ್ರಗಳಲ್ಲಿ ಭದ್ರತಾ ಸಂಸ್ಥೆಗಳೊಂದಿಗೆ ಕೆಲಸ ಮಾಡುವಂತೆ ಮತ್ತು ಇಸ್ರೇಲಿ ಗುಪ್ತಚರ ಸೇವೆಯನ್ನು ಸಂಪರ್ಕಿಸುವಂತೆ ಕೋರಿ ವಾಟ್ಸಾಪ್ ಸಂಖ್ಯೆಗಳನ್ನು ಮುದ್ರಿಸಲಾಗಿದೆ. “ನಮ್ಮೊಂದಿಗೆ ಸೇರಿ ನಿಮ್ಮ ಜೀವನವನ್ನು ಬದಲಾಯಿಸಿ” ಎಂಬ ಸಂದೇಶಗಳ ಜೊತೆಗೆ, ಇಸ್ರೇಲ್ ದಾಳಿಯಲ್ಲಿ ಹತ್ಯೆಗೀಡಾದ ಅಥವಾ ಇಸ್ರೇಲಿನ ಗುರಿಯಲ್ಲಿರುವ ಕೆಲವು ಫೆಲೆಸ್ತೀನಿ ಪ್ರಮುಖರ ಫೋಟೋಗಳನ್ನು ಸಹ ಇದರಲ್ಲಿ ಮುದ್ರಿಸಲಾಗಿದೆ.

ಇಸ್ರೇಲಿನ ಈ ತಂತ್ರವನ್ನು ಗಾಝದ ನಿವಾಸಿಗಳು ತೀವ್ರವಾಗಿ ಖಂಡಿಸಿದ್ದು, ಇದು ಕಪಟ ತಂತ್ರವೆಂದು ವ್ಯಂಗ್ಯವಾಡಿದ್ದಾರೆ. ಅಧಿಕೃತ ಮಾರ್ಗಗಳ ಮೂಲಕ ಅಗತ್ಯ ವಸ್ತುಗಳು ಮತ್ತು ಸಿಗರೆಟ್ ಗಳನ್ನು ಇಸ್ರೇಲ್ ತಡೆಯುತ್ತಿದೆ. ಡ್ರೋನ್ ಮೂಲಕ ಮೇಲಿಂದ ಕೆಳಗೆ ಹಾಕುತ್ತದೆ. ಇದರಲ್ಲಿ ಬೇಹುಗಾರಿಕೆ ನಡೆಸುವುದು ಇಸ್ರೇಲಿನ ಗುರಿಯಾಗಿದೆ ಎಂದಿದ್ದಾರೆ. ಬಿಕ್ಕಟ್ಟಿನ ಪರಿಸರದಲ್ಲಿ ಅತ್ಯಂತ ದುರ್ಲಭವಾಗಿರುವ ಸಿಗರೆಟ್ ಮತ್ತು ಕಾಫಿಯನ್ನು ಪಡೆದುಕೊಳ್ಳಲು ಜನರು ಮುಗಿಬೀಳಬಹುದು ಎಂದು ಇಸ್ರೇಲ್ ಭಾವಿಸಿತ್ತು. ಅಧಿಕೃತ ಗಡಿ ಚೆಕ್‌ಪೋಸ್ಟ್ ಮೂಲಕ ಸಿಗರೇಟ್ ಗಾಝಕ್ಕೆ ಬರದಂತೆ ಒಂದು ವರ್ಷದಿಂದ ತಡೆ ಹಿಡಿದಿದೆ. ಸೋಮವಾರ ಮಧ್ಯಾಹ್ನ ದೇರುಲ್ ಬಲಾಹ್‌ನ ಮಾರ್ಕೆಟಿನಲ್ಲಿ ಡ್ರೋನ್‌ ಮೂಲಕ ಇಸ್ರೇಲ್ ಸಿಗರೇಟ್ ಕಾಫಿ ಹಾಕಿತು. ಜನ ಓಡಿ ಬಂದು ಹೆಕ್ಕಿ ಹೋಗಿರುವುದು ಇಸ್ರೇಲಿಗೆ ಸಹಾಯ ಮಾಡುವ ಉದ್ದೇಶದಲ್ಲಲ್ಲ. ಸಿಗರೇಟ್ ಅವರಿಗೆ ಬೇಕಿತ್ತು ಎಂದು ಮಾರ್ಕೆಟಿನಲ್ಲಿ ತರಕಾರಿ ವ್ಯಾಪಾರ ಮಾಡುವ ಮೂಮಿನ್ ಅಬು ಅಜ್ವ ಅವರು ದಿ ನ್ಯಾಶನಲ್‌ಗೆ ಹೇಳಿದರು.

2023 ಅಕ್ಟೋಬರಿನಲ್ಲಿ ಯುದ್ಧ ಆರಂಭವಾದ ನಂತರ ವಸತಿ ಬಟ್ಟೆಬರೆ ಇಲ್ಲದೆ ಗಾಝದ 20 ಲಕ್ಷಕ್ಕೂ ಹೆಚ್ಚು ಜನರ ಬದುಕು ಶೋಚನೀಯವಾಗಿದೆ. ಯುದ್ಧ ವಿರಾಮ ಅಸ್ತಿತ್ವದಲ್ಲಿದ್ದರೂ ಇಸ್ರೇಲ್ ಆಗಾಗ ದಾಳಿ ಮಾಡುತ್ತಿದೆ. ಗಾಝದಲ್ಲಿ ಇಸ್ರೇಲ್ ಈವರೆಗೆ 75 ಸಾವಿರ ಮಂದಿಯನ್ನು ಹತ್ಯೆ ಮಾಡಿದೆ ಮತ್ತು ಹೆಚ್ಚು ಜನಸಾಮಾನ್ಯರನ್ನೇ ಅದು ಹತ್ಯೆ ಮಾಡಿದೆ ಎಂದು ವರದಿಯಾಗಿದೆ.