ಅಲ್ ಐನ್‌ ಫ್ರೆಂಡ್ಸ್ ವತಿಯಿಂದ ಕರಾವಳಿ ಪ್ರೀಮಿಯರ್ ಲೀಗ್ – 2026

0
13

ಸನ್ಮಾರ್ಗ ವಾರ್ತೆ

ಅಲ್ ಐನ್: ಅಲ್ ಐನ್ ಫ್ರೆಂಡ್ಸ್ ವತಿಯಿಂದ ಆಯೋಜಿಸಲಾದ ಬಹುನಿರೀಕ್ಷಿತ ಕರಾವಳಿ ಪ್ರೀಮಿಯರ್ ಲೀಗ್ – 2026 (ಸೀಸನ್ 5) ಕ್ರಿಕೆಟ್ ಪಂದ್ಯಾವಳಿಯು ಅಲ್ ಐನ್‌ನ EFS ಕ್ರೀಡಾಂಗಣದಲ್ಲಿ ಅದ್ದೂರಿಯಾಗಿ ನಡೆಯಿತು.

ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಬಿಲಾಲ್ ಅಹ್ಮದ್, ಅನ್ಸಾಫ್, ಫರಾಝ್ ಹಾಗೂ ಅಲ್ತಾಫ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಬಿಲಾಲ್ ಅಹ್ಮದ್ ಅವರು, ಅಲ್ ಐನ್ ಫ್ರೆಂಡ್ಸ್ ಸಂಘಟನೆಯ ಕಾರ್ಯವೈಖರಿ, ಸದಸ್ಯರ ಒಗ್ಗಟ್ಟು ಹಾಗೂ ಕ್ರೀಡಾಕೂಟದ ಮೂಲಕ ಬೆಳೆಸುತ್ತಿರುವ ಸ್ನೇಹ ಮತ್ತು ಬಾಂಧವ್ಯವನ್ನು ಶ್ಲಾಘಿಸಿದರು.

ಪಂದ್ಯಾವಳಿಯಲ್ಲಿ ಕರಾವಳಿ ವೋರ್ಟೆಕ್ಸ್, ಕರಾವಳಿ ಟೈಟಾನ್ಸ್, ಕರಾವಳಿ ಸ್ಪಾರ್ಟನ್ಸ್ ಹಾಗೂ ಕರಾವಳಿ ಬುಲ್ಸ್ ಸೇರಿದಂತೆ ನಾಲ್ಕು ತಂಡಗಳು ಭಾಗವಹಿಸಿ ತಮ್ಮ ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸಿದವು. ರೋಚಕ ಹಣಾಹಣಿಗಳ ಬಳಿಕ ಕರಾವಳಿ ಟೈಟಾನ್ಸ್ ತಂಡವು ಕರಾವಳಿ ಪ್ರೀಮಿಯರ್ ಲೀಗ್–2026ರ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿತು.

ವೈಯಕ್ತಿಕ ಪ್ರಶಸ್ತಿ ವಿಜೇತರು

  • ಪಂದ್ಯಶ್ರೇಷ್ಠ (Player of the Match): ಥ್ವೈಬ್ ಮರಕ್ಕಿಣಿ
  • ಅತ್ಯುತ್ತಮ ಬ್ಯಾಟ್ಸ್‌ಮನ್: ಥ್ವೈಬ್ ಮರಕ್ಕಿಣಿ
  • ಸರಣಿಶ್ರೇಷ್ಠ (Player of the Series): ಥ್ವೈಬ್ ಮರಕ್ಕಿಣಿ
  • ಅತ್ಯುತ್ತಮ ಬೌಲರ್: ಇಮ್ರಾನ್ ತೋಡಾರ್
  • ಅತ್ಯುತ್ತಮ ಫೀಲ್ಡರ್: ಫೈಝಲ್ ಬೆಳ್ಳಾರೆ

ಊರಿನ ಹಬ್ಬದ ವಾತಾವರಣ

ಈ ಬಾರಿಯ ಕೆಪಿಎಲ್ ಕೇವಲ ಕ್ರಿಕೆಟ್ ಪಂದ್ಯಾವಳಿಯಾಗಿ ಉಳಿಯದೆ, ಊರಿನ ಹಬ್ಬದ ಸಂಭ್ರಮವನ್ನು ನೆನಪಿಸುವಂತಹ ಕುಟುಂಬ ಸಮಾಗಮವಾಗಿ ಮೂಡಿಬಂತು. ಕುಟುಂಬ ಸದಸ್ಯರು, ಮಕ್ಕಳು ಹಾಗೂ ಸ್ನೇಹಿತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ತಂದರು.

ಮಕ್ಕಳ ಉತ್ಸಾಹ, ಕುಟುಂಬ ಸದಸ್ಯರ ಉಪಸ್ಥಿತಿ, ಸದಸ್ಯರ ಒಗ್ಗಟ್ಟು, ಆಹಾರ, ಮನರಂಜನೆ ಹಾಗೂ ಕ್ರಿಕೆಟ್‌ನ ರೋಚಕ ಕ್ಷಣಗಳು ಎಲ್ಲರಲ್ಲೂ ತವರೂರಿನ ವಾತಾವರಣದ ನೆನಪು ಮೂಡಿಸಿದವು.

“ನಾವು ದೂರದ ಊರಿನಲ್ಲಿ ಇರಬಹುದು, ಆದರೆ ನಮ್ಮ ಸಂಭ್ರಮ, ಸ್ನೇಹ ಮತ್ತು ಸಂಸ್ಕೃತಿ ಸದಾ ನಮ್ಮೂರಿನಂತೆಯೇ ಇರಲಿ” ಎಂಬ ಭಾವನೆಗೆ ಈ ಕಾರ್ಯಕ್ರಮ ಸಾಕ್ಷಿಯಾಯಿತು.

ಅಲ್ ಐನ್ ಫ್ರೆಂಡ್ಸ್‌ನ ಸದಸ್ಯರ ಪರಿಶ್ರಮ, ಸಂಘಟನಾ ಸಾಮರ್ಥ್ಯ, ಪ್ರಾಯೋಜಕರ ಸಹಕಾರ ಹಾಗೂ ಆಟಗಾರರ ಸಕ್ರಿಯ ಭಾಗವಹಿಸುವಿಕೆಯಿಂದ ಕರಾವಳಿ ಪ್ರೀಮಿಯರ್ ಲೀಗ್–2026 (ಸೀಸನ್ 5) ಯಶಸ್ವಿಯಾಗಿ ಸಂಪನ್ನಗೊಂಡಿತು.