“ಒಬ್ಬ ಮಹಿಳೆಯೊಳಗೆ ಎಷ್ಟು ಹೋರಾಟವನ್ನು ಹೊತ್ತುಕೊಳ್ಳಲು ಸಾಧ್ಯ?’; ಬಿಲ್ಕಿಸ್ ಬಾನು ಪ್ರಕರಣದಲ್ಲಿ: ಬರ್ಖಾ ದತ್

0
28

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದ 11 ಅಪರಾಧಿಗಳಲ್ಲಿ ಇಬ್ಬರಿಗೆ ಸುಪ್ರೀಂ ಕೋರ್ಟ್ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿ ಜಾಮೀನು ಮಂಜೂರು ಮಾಡಿದ ಬೆನ್ನಲ್ಲೇ, ಬಿಲ್ಕಿಸ್ ಬಾನು ಮತ್ತೊಮ್ಮೆ ಗುಜರಾತ್ ತೊರೆಯುತ್ತಿದ್ದಾರೆ ಎಂದು ಹಿರಿಯ ಪತ್ರಕರ್ತೆ ಬರ್ಖಾ ದತ್ ತಿಳಿಸಿದ್ದಾರೆ. ತಾನು ಮತ್ತು ತನ್ನ ಪತಿ ಹೋರಾಟವನ್ನು ಮುಂದುವರಿಸುತ್ತೇವೆ ಎಂದೂ, ತಮ್ಮ ಮಕ್ಕಳಿಗಾಗಿ ಹಾಗೂ ಸಾಮೂಹಿಕ ಅತ್ಯಾಚಾರದ ವೇಳೆ ಕೊಲ್ಲಲ್ಪಟ್ಟ ಮೂರು ವರ್ಷದ ಮಗಳು ಸಾಲಿಹಾಳಿಗಾಗಿ ತಾನು ಈ ಹೋರಾಟ ನಡೆಸುತ್ತಿರುವುದಾಗಿಯೂ ಬಿಲ್ಕಿಸ್ ಸ್ಪಷ್ಟಪಡಿಸಿದ್ದಾರೆ.

“ಒಬ್ಬ ಮಹಿಳೆಯೊಳಗೆ ಎಷ್ಟು ಹೋರಾಟದ ಕಿಚ್ಚು/ಧೈರ್ಯವನ್ನು ಹೊತ್ತುಕೊಳ್ಳಲು ಸಾಧ್ಯ?” ಎಂಬ ಪ್ರಶ್ನೆಯೊಂದಿಗೆ ಬರ್ಖಾ ದತ್ ತಮ್ಮ ಬರಹವನ್ನು ಮುಕ್ತಾಯಗೊಳಿಸಿದ್ದಾರೆ. 2022ರಲ್ಲಿ ಗುಜರಾತ್ ಸರ್ಕಾರ 11 ಅಪರಾಧಿಗಳಿಗೆ ಶಿಕ್ಷೆಯ ವಿನಾಯಿತಿ ನೀಡಿ ಬಿಡುಗಡೆ ಮಾಡಿತ್ತು. ಆ ಸಂದರ್ಭದಲ್ಲಿ ಪರೋಲ್ ಸಮಿತಿಯಲ್ಲಿದ್ದ ಶಾಸಕರೊಬ್ಬರು ಅಪರಾಧಿಗಳು ಒಳ್ಳೆಯ ವ್ಯಕ್ತಿಗಳು ಮತ್ತು ‘ಸಂಸ್ಕಾರವಂತ ಬ್ರಾಹ್ಮಣರು’ ಎಂದು ಹೇಳಿದ್ದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಜೈಲಿನ ಹೊರಗೆ ಅಪರಾಧಿಗಳಿಗೆ ಹಾರ ಹಾಕಿ ಸನ್ಮಾನಿಸಿದ್ದು ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿತ್ತು.

2024ರ ಸುಪ್ರೀಂ ಕೋರ್ಟ್ ಮಧ್ಯಪ್ರವೇಶದ ನಂತರ 2024ರಲ್ಲಿ ಗುಜರಾತ್ ಸರಕಾರ ನೀಡಿದ್ದ ಶಿಕ್ಷಾ ವಿನಾಯಿತಿ ಆದೇಶವನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್, 11 ಅಪರಾಧಿಗಳನ್ನು ಮತ್ತೆ ಜೈಲಿಗೆ ಕಳುಹಿಸಿತ್ತು. 17 ವರ್ಷಗಳಿಗೂ ಹೆಚ್ಚು ಕಾಲ ಜೈಲು ಶಿಕ್ಷೆ ಅನುಭವಿಸಿರುವ ಅಂಶ ಹಾಗೂ ಒಬ್ಬ ಅಪರಾಧಿಯ ದೈಹಿಕ ಅಂಗವೈಕಲ್ಯವನ್ನು ಪರಿಗಣಿಸಿ, ಈಗ ಇಬ್ಬರು ಅಪರಾಧಿಗಳಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ.