✍️ ಏ.ಕೆ. ಕುಕ್ಕಿಲ
ಈದ್ ಅಂದರೆ ಹಬ್ಬ. ಖುಷಿಯೋಂಕಾ ಈದ್ ಅಂದರೆ, ಖುಷಿಯ ಹಬ್ಬ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ನವೆಂಬರ್ 9ರಂದು ದೀಪಾವಳಿಗೆ ಶುಭ ಕೋರುತ್ತಾ, ‘ಖುಷಿಯೋಂಕಾ ಈದ್’ ಎಂದು ಹೇಳಿದರು. ಬಿಜೆಪಿ ಈ ಈದ್ ಎಂಬ ಪದವನ್ನೇ ಎತ್ತಿಕೊಂಡಿತು. ಖರ್ಗೆ ಅವರ ಹೇಳಿಕೆಯನ್ನು ಮುಸ್ಲಿಮ್ ಓಲೈಕೆ ಎಂದು ಆಕ್ಷೇಪಿಸಿತು. ಅವರ ಹಿಂದೂ ವಿರೋಧಿ ಮನಸ್ಥಿತಿಯ ಪ್ರತಿಬಿಂಬ ಎಂದು ತಿವಿಯಿತು. ಕೇವಲ ಈ ಹೇಳಿಕೆಯನ್ನು ವಿರೋಧಿಸುವುದಕ್ಕಾಗಿಯೇ ಬಿಜೆಪಿಯ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಪತ್ರಿಕಾಗೋಷ್ಠಿ ಕರೆದರು. ಸೋಶಿಯಲ್ ಮೀಡಿಯಾದಲ್ಲೂ ‘ಈದ್’ ಪದಕ್ಕೆ ಆಕ್ಷೇಪ ವ್ಯಕ್ತವಾಯಿತು. ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರಲ್ಲೂ ಒಂದು ಬಗೆಯ ಗೊಂದಲ ಕಾಣಿಸಿತು. ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರಿಂದ ಪ್ರಬಲ ವಿರೋಧ ವ್ಯಕ್ತವಾಗುತ್ತಿದ್ದರೂ ಕಾಂಗ್ರೆಸ್ನ ಹೆಚ್ಚಿನವರು ತಮ್ಮ ಅಧ್ಯಕ್ಷರ ಸಮರ್ಥನೆಗೆ ಬರದೇ ತಪ್ಪಿಸಿಕೊಂಡರು. ಅಷ್ಟಕ್ಕೂ,
ಫೆಸ್ಟಿವಲ್ ಎಂಬ ಪದವನ್ನು ಸಹಜವಾಗಿ ಸ್ವೀಕರಿಸುವ ಮತ್ತು ದೀಪಾವಳಿ ಫೆಸ್ಟಿವಲ್ ಅಂದರೆ ಯಾವ ವಿರೋಧವೂ ಇಲ್ಲದ ದೇಶದಲ್ಲಿ ಈದ್ಗೆ ವಿರೋಧ ಯಾಕಾಯಿತು?
ಅರೇಬಿಕ್ ಮತ್ತು ಉರ್ದು- ಎರಡೂ ಭಾಷೆಗಳಲ್ಲೂ ಹಬ್ಬವನ್ನು ಈದ್ ಎಂದೇ ಹೇಳುತ್ತಾರೆ. ಉರ್ದು ಈ ದೇಶಕ್ಕೆ ಅಪರಿಚಿತ ಭಾಷೆ ಅಲ್ಲ. 2011ರ ಜನಗಣತಿ ಪ್ರಕಾರ, ಭಾರತದಲ್ಲಿ ಉರ್ದು ಭಾಷೆ ಮಾತಾಡುವವರ ಸಂಖ್ಯೆ 5 ಕೋಟಿಯನ್ನೂ ಮೀರಿದೆ. ಇದು ಭಾರತದಲ್ಲಿ 7ನೇ ಅತ್ಯಧಿಕ ಮಾತಾಡುವ ಭಾಷೆಯಾಗಿದೆ. ಕಾಶ್ಮೀರ, ಉತ್ತರ ಪ್ರದೇಶ, ಬಿಹಾರ, ಮಹಾರಾಷ್ಟç, ಕರ್ನಾಟಕ, ತೆಲಂಗಾಣ, ಜಾರ್ಖಂಡ್, ಪಶ್ಚಿಮ ಬಂಗಾಳ ಮತ್ತು ದೆಹಲಿಯಲ್ಲಿ ಎರಡನೇ ಅತೀ ಹೆಚ್ಚು ಮಾತಾಡುವ ಭಾಷೆಯಾಗಿದೆ. ತೆಲಂಗಾಣ, ಪಶ್ಚಿಮ ಬಂಗಾಳ ಮತ್ತು ಬಿಹಾರದಲ್ಲಿ ರಾಜ್ಯದ ದ್ವಿತೀಯ ಅಧಿಕೃತ ಭಾಷೆಯಾಗಿದೆ. ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದಲ್ಲಿ ಹೆಚ್ಚುವರಿ ಅಧಿಕೃತ ಭಾಷೆಯಾಗಿದೆ. ಇಷ್ಟೆಲ್ಲಾ ಇದ್ದೂ, ಖರ್ಗೆ ಯವರ ಈದ್ ಯಾಕೆ ವಿವಾದಕ್ಕೆ ಒಳಗಾಯಿತು? ಕನಿಷ್ಠ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರಲ್ಲೂ ಸಮರ್ಥನೆಗೆ ಮಾಡಿಕೊಳ್ಳಲಾಗದಷ್ಟು ಗೊಂದಲ ಯಾಕಾಗಿ ಹುಟ್ಟಿತು? ಹಾಗಂತ,
ಖರ್ಗೆಯವರು ಉದ್ದೇಶಪೂರ್ವಕವಾಗಿ ʻಈದ್' ಪದ ಬಳಸಿರುವುದಲ್ಲ.
ಅದವರ ಸಹಜ ಭಾಷೆ. ಸಂಸತ್ತಿನಲ್ಲಿ ಅಥವಾ ಸಾರ್ವಜನಿಕ ಸಭೆಗಳಲ್ಲಿ ಮಾತಾಡುವಾಗ ಅವರು ಉರ್ದು ಪದಗಳನ್ನು ಓತಪ್ರೋತವಾಗಿ ಬಳಸುತ್ತಾರೆ. ಇತ್ತಿಹಾದ್, ಜಮ್ಹೂರಿಯತ್, ಖಿದ್ಮತ್, ತಹಜೀಬ್.. ಹೀಗೆ ಉರ್ದು ಪದಗಳು ಅವರ ಮಾತಿನಲ್ಲಿ ಉದ್ದಕ್ಕೂ ಕಾಣಿಸುತ್ತಿರುತ್ತದೆ. ಇದಕ್ಕೆ ಕಾರಣ ಏನೆಂದರೆ, ಇವರು ಪ್ರಾಥಮಿಕ ಶಿಕ್ಷಣವನ್ನು ಉರ್ದು ಮಾಧ್ಯಮದಲ್ಲೇ ಪಡೆದಿದ್ದಾರೆ. ಇವರು ಹುಟ್ಟಿದ್ದು ಬೀದರ್ ಜಿಲ್ಲೆಯ ಬಾಲ್ಕಿ ತಾಲೂಕಿನ ವರವಟ್ಟಿ ಗ್ರಾಮದಲ್ಲಿ. ಆ ಬಳಿಕ ಕಲಬುರ್ಗಿ ಭಾಗಕ್ಕೆ ಬಂದು ನೆಲೆಸಿದರು. ಇದು ಹೈದರಾಬಾದ್ ಸಂಸ್ಥಾನದ ಆಡಳಿತದ ಭಾಗವಾದ ಪ್ರದೇಶವಾಗಿದ್ದುದರಿಂದ ಇಲ್ಲೂ ಉರ್ದುವೇ ಶಿಕ್ಷಣ ಮಾಧ್ಯಮವಾಗಿತ್ತು. ಹೈದರಾಬಾದ್ ಸಂಸ್ಥಾನದ ಆಡಳಿತ ಭಾಷೆಯೂ ಉರ್ದುವಾಗಿತ್ತು. ಆದ್ದರಿಂದ ಖರ್ಗೆಯವರ ಮಾತುಗಳಲ್ಲಿ ಹಿಂದಿಗಿಂತಲೂ ಹೆಚ್ಚು ಉರ್ದು ಪದಗಳೇ ಕಾಣಿಸುತ್ತವೆ. ಆದರೂ,
ಒಂದು ಪ್ರಶ್ನೆ ಉಳಿದೇ ಉಳಿಯುತ್ತದೆ.
ಫೆಸ್ಟಿವಲ್ಗೆ ಇಲ್ಲದ ವಿರೋಧ ಈದ್ಗೆ ಏಕಾಯಿತು? ದೀಪಾವಳಿಗೆ ಮಾತ್ರವಲ್ಲ, ಗಣೇಶ ಚತುರ್ಥಿ, ಕೃಷ್ಣಾಷ್ಟಮಿ ಸಹಿತ ಬಹುತೇಕ ಹಿಂದೂ ಆಚರಣೆಗಳ ಜೊತೆ ಫೆಸ್ಟಿವಲ್ ಎಂಬ ಪದವನ್ನು ಬಳಸಲಾಗುತ್ತದೆ ಮತ್ತು ಅದು ಸಹಜವೆಂಬಂತೆ ಸ್ವೀಕಾರವೂ ಆಗಿದೆ. ಇಂಗ್ಲಿಷ್ನ ಹಬ್ಬ ಆಗಬಹುದು ಎಂದಾದರೆ ಅರೇಬಿಕ್ನ ಹಬ್ಬ ಯಾಕೆ ಬೇಡ? ಬಾಹ್ಯ ನೋಟಕ್ಕೆ ಈ ಪ್ರಶ್ನೆ ಸರಳವಾಗಿ ಕಂಡರೂ ಇದಕ್ಕೊಂದು ಆಳ ಆಯಾಮವಿದೆ.
ಫೆಸ್ಟಿವಲ್ ಎಂಬುದು ಯಾವುದೇ ಧರ್ಮಗ್ರಂಥದ ಮೂಲ ಭಾಷೆ ಅಲ್ಲ. ವೇದಗಳು ಎಂದು ಹೇಳುವ ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದಗಳ ಮೂಲ ಭಾಷೆ ವೈದಿಕ ಸಂಸ್ಕೃತ. ಉಪನಿಷತ್ತುಗಳು, ಬ್ರಾಹ್ಮಣಗಳು ಮತ್ತು ಅರಣ್ಯಕಗಳು ವೈದಿಕ ಅಥವಾ ಶಾಸ್ತ್ರೀಯ ಸಂಸ್ಕೃತ ಭಾಷೆಯಲ್ಲಿದೆ. ಮಹಾಭಾರತ ಮತ್ತು ರಾಮಾಯಣಗಳು ಶಾಸ್ತ್ರೀಯ ಸಂಸ್ಕೃತ ಭಾಷೆಯಲ್ಲಿದೆ. ವಿಷ್ಣು ಪುರಾಣ, ಭಾಗವತ ಪುರಾಣಗಳು ಶಾಸ್ತ್ರೀಯ ಸಂಸ್ಕೃತ ಭಾಷೆಯಲ್ಲಿದೆ. ಸ್ಮೃತಿಗಳಾಗಿ ಗುರುತಿಸಿಕೊಳ್ಳುವ ಮನುಸ್ಮೃತಿ, ಯಜ್ಞವಾಲ್ಕ್ಯ ಸ್ಮೃತಿ ಮತ್ತು ದರ್ಶನಗಳಾಗಿ ಪರಿಚಿತವಾಗಿರುವ ನ್ಯಾಯ, ವೈಶೇಷಿಕ, ಸಾಂಖ್ಯ, ಯೋಗ, ಮೀಮಾಂಸು, ವೇದಾಂತ ಇತ್ಯಾದಿಗಳೆಲ್ಲ ಸಂಸ್ಕೃತ ಭಾಷೆಯಲ್ಲಿದೆ. ಕ್ರೈಸ್ತರ ಧರ್ಮಗ್ರಂಥವಾಗಿರುವ ಓಲ್ಡ್ ಟೆಸ್ಟಾಮೆಂಟ್ನ ಮುಖ್ಯ ಭಾಗ ಹಿಬ್ರೂ ಭಾಷೆಯಲ್ಲಿದ್ದರೆ ಕೆಲವು ಭಾಗಗಳು ಅರಾಮಿಕ್ ಭಾಷೆಯಲ್ಲಿದೆ. ನ್ಯೂ ಟೆಸ್ಟಾ ಮೆಂಟ್ ಗ್ರಂಥವು ಗ್ರೀಕ್ ಭಾಷೆಯಲ್ಲಿದೆ. ಹಾಗೆಯೇ, ಯಹೂದಿಯರ ಧರ್ಮಗ್ರಂಥವಾಗಿ ಪರಿಗಣಿಸಿರುವ ತೋರಾದ ಮೂಲ ಭಾಷೆ ಹೀಬ್ರೂ. ಆದರೆ,
ಹಿಂದೂಗಳಾಗಲಿ ಕ್ರೈಸ್ತರಾಗಿರಲಿ ತಮ್ಮ ಧರ್ಮಗ್ರಂಥದ ಮೂಲ ಪದಗಳನ್ನು ಅದೇ ರೂಪದಲ್ಲಿ ಸಾರ್ವಜನಿಕವಾಗಿ ಭಾರತದಲ್ಲಿ ಹಂಚಿಕೊಳ್ಳುವುದು ಶೂನ್ಯ ಅನ್ನುವಷ್ಟು ಕಡಿಮೆ. ಸಂಸ್ಕೃತವು ಅರ್ಚಕರ ಭಾಷೆಯಾಗಿ ಮಂದಿರದೊಳಕ್ಕೆ ಸೀಮಿತವಾಗಿದೆ. ಸಂಸ್ಕೃತದಲ್ಲಿ ದೂರದರ್ಶನದಲ್ಲಿ ಸುದ್ದಿ ಬುಲೆಟಿನ್ ಪ್ರಸಾರವಾಗುತ್ತಿರುವುದನ್ನು ಬಿಟ್ಟರೆ ಮತ್ತು ಪಿಎಂ ಇವಿದ್ಯಾ ಜ್ಞಾನಗಂಗಾ ಎಂಬ ಹೆಸರಲ್ಲಿ ಸೆಂಟ್ರಲ್ ಸಂಸ್ಕೃತ್ ಯೂನಿವರ್ಸಿಟಿ ಮತ್ತು ಎನ್ಸಿಇಆರ್ಟಿ ಜಂಟಿಯಾಗಿ ಪ್ರಾರಂಭಿಸಿರುವ ಶಿಕ್ಷಣಕ್ಕೆ ಸಂಬಂಧಿಸಿದ ಸಂಸ್ಕೃತ ಚಾನೆಲನ್ನು ಬಿಟ್ಟರೆ NDTV ಯಂತೆ ಅಥವಾ TV9 ಕನ್ನಡದಂತೆ ಪೂರ್ಣ ಪ್ರಮಾಣದ ಸಂಸ್ಕೃತ ಚಾನೆಲ್ಲೂ ಎಲ್ಲೂ ಇಲ್ಲ. ಈ ಹಿಂದೆ ಉತ್ತರಾಖಂಡ ಸರಕಾರ ಪೂರ್ಣಪ್ರಮಾಣದ ಸಂಸ್ಕೃತ ಚಾನೆಲ್ ಪ್ರಾರಂಭಿಸುವ ಘೋಷಣೆ ಮಾಡಿ ತಣ್ಣಗೆ ಅದನ್ನು ಕಸದ ಬುಟ್ಟಿಗೆ ಹಾಕಿದೆ. ಆದರೆ,
ಹೀಬ್ರೂ ಮತ್ತು ಗ್ರೀಕ್ ಭಾಷೆಗಳ ಪರಿಸ್ಥಿತಿ ಹೀಗಿಲ್ಲವಾದರೂ ಭಾರತದಲ್ಲಿರುವ ಕ್ರೈಸ್ತರು ಸಾರ್ವಜನಿಕ ಭಾಷಣಗಳಲ್ಲಿ ಮತ್ತು ಸಂವಹನದ ಸಮಯದಲ್ಲಿ ಮೂಲ ಧಾರ್ಮಿಕ ಪದಗಳನ್ನು ಅದೇ ರೂಪದಲ್ಲಿ ಉಲ್ಲೇಖಿಸುವುದು ಅಪರೂಪ. ಇಸ್ರೇಲ್ನ ಅಧಿಕೃತ ರಾಷ್ಟ್ರೀಯ ಭಾಷೆ ಹೀಬ್ರೂ. ಶಿಕ್ಷಣ, ಮಾಧ್ಯಮ, ನ್ಯಾಯಾಲಯ ಮತ್ತು ದೈನಂದಿನ ಜೀವನದಲ್ಲಿ ಹೀಬ್ರೂ ಭಾಷೆಯನ್ನು ಇಸ್ರೇಲ್ನಲ್ಲಿ ಬಳಸಲಾಗುತ್ತದೆ. ಗ್ರೀಕ್ ಭಾಷೆಯು ಗ್ರೀಸ್ ಮತ್ತು ಸೈಪ್ರಸ್ ದೇಶಗಳ ಅಧಿಕೃತ ಮುಖ್ಯ ಭಾಷೆಯಾಗಿದೆ. ಆದರೆ,
ಭಾರತೀಯ ಮುಸ್ಲಿಮರೂ ಸೇರಿದಂತೆ ಜಾಗತಿಕ ಮುಸ್ಲಿಮರ ಬದುಕು ಮತ್ತು ಭಾವ ಇದಕ್ಕಿಂತ ತೀರಾ ಭಿನ್ನ.
ಈಜಿಪ್ಟ್, ಟ್ಯುನೀಷಿಯಾ, ಅಲ್ಜೀರಿಯಾ, ಮೌರಿಟಾನಿಯಾ, ಸುಡಾನ್, ಸೊಮಾಲಿಯಾ ಮುಂತಾದ ಉತ್ತರ ಆಫ್ರಿಕಾ ರಾಷ್ಟ್ರಗಳೂ ಸೇರಿದಂತೆ ಅರಬ್ ಲೀಗ್ನ 22 ರಾಷ್ಟ್ರಗಳ ಅಧಿಕೃತ ಭಾಷೆ ಅರೇಬಿಕ್. ವಿಶ್ವಸಂಸ್ಥೆಯ 6 ಅಧಿಕೃತ ಭಾಷೆಗಳಲ್ಲಿ ಅರೇಬಿಕ್ ಕೂಡ ಒಂದು. ಅಲ್ ಜಝೀರಾ, ಅಲ್ ಅರಬಿಯಾ, MBC, beIn Sports, Rotana ಇತ್ಯಾದಿಗಳೂ ಸೇರಿದಂತೆ ಅರೇಬಿಕ್ ಭಾಷೆಯಲ್ಲಿ 1300ರಿಂದ 1400ರಷ್ಟು ಸ್ಯಾಟಲೈಟ್ ಟಿವಿ ಚಾನೆಲ್ಗಳಿವೆ. ನೂರಾರು ಪತ್ರಿಕೆಗಳಿವೆ. ಪವಿತ್ರ ಕುರ್ಆನಿನ ಭಾಷೆಯೂ ಅರಬಿಯೇ. ಮುಸ್ಲಿಮರು ಜಗತ್ತಿನ ಯಾವ ರಾಷ್ಟ್ರದಲ್ಲೇ ಬದುಕುತ್ತಿರಲಿ ಮತ್ತು ಯಾವ ಭಾಷೆಯನ್ನೇ ಆಡುತ್ತಿರಲಿ, ಅವರಾಡುವ ಮಾತಿನ ಜೊತೆ ಪವಿತ್ರ ಕುರ್ಆನಿನ ಅರಬಿ ಪದಗಳು ಕಾಣಿಸಿಕೊಳ್ಳುವುದು ಸಹಜ. ಇತರ ಯಾವ ಧರ್ಮೀಯರಲ್ಲೂ ಇಲ್ಲದ ಈ ವಿಶೇಷತೆಯು ಮುಸ್ಲಿಮರನ್ನು ಆಗಾಗ ಕಟಕಟೆಯಲ್ಲಿ ನಿಲ್ಲಿಸುತ್ತಲೂ ಬಂದಿದೆ. ವಿಶೇಷವಾಗಿ ಭಾರತದಲ್ಲಿ ಇಂಥ ಪದಗಳನ್ನೇ ಅಪಾರ್ಥಕ್ಕೆ ಒಳಪಡಿಸಿ ಮುಸ್ಲಿಮರನ್ನು ಬೇಟೆಯಾಡಲಾಗುತ್ತಿದೆ. ಮುಖ್ಯವಾಗಿ, ಜಿಹಾದ್, ಕಾಫಿರ್, ಉಮ್ಮಾ, ಶರಿಯಾ, ಹಲಾಲ್, ಅಝಾನ್, ಹಿಜಾಬ್, ಅಲ್ಲಾಹ್ ಇತ್ಯಾದಿ ಇತ್ಯಾದಿ ಪದಗಳು ಈ ದೇಶದಲ್ಲಿ ಆಗಾಗ ಮುಸ್ಲಿಮರಿಗೆ ಸವಾಲನ್ನು ಒಡ್ಡುತ್ತವೆ. ಭಾರತದ ರಾಜಕೀಯವು ಭಾಷೆ, ಧರ್ಮ ವನ್ನು ಹೆಣೆದುಕೊಂಡ ರೂಪದಲ್ಲಿ ಇರುವುದರಿಂದ ಈ ಪದಗಳನ್ನು ರಾಜಕೀಯ ಲಾಭದ ದೃಷ್ಟಿಯಲ್ಲಿ ಬಳಸಲಾಗುತ್ತದೆ. ಜನಸಾಮಾನ್ಯರಿಗೆ ಈ ಪದಗಳ ಅರ್ಥ ಸ್ಪಷ್ಟ ವಾಗಿಲ್ಲದಿರುವುದರಿಂದ ಈ ಪದಗಳನ್ನು ತೋರಿಸಿ ಇಸ್ಲಾಮನ್ನು ಮತ್ತು ಮುಸ್ಲಿಮರನ್ನು ಅಪಾಯಕಾರಿಗಳಂತೆ ಬಿಂಬಿಸುವುದಕ್ಕೂ ಸುಲಭವಾಗುತ್ತದೆ. ಜಿಹಾದ್ ಅಂದರೆ ಹಿಂದೂಗಳ ಹತ್ಯೆಗೆ ಕರೆಕೊಡುವ ಪದ ಎಂದು ಈಗಾಗಲೇ ಈ ದೇಶದಲ್ಲಿ ನಂಬಿಸಿ ಬಿಡಲಾಗಿದೆ. ಭಯೋತ್ಪಾದನೆಯನ್ನು ಜಿಹಾದ್ನ ಭಾಗವಾಗಿ ಪ್ರಚಾರ ಮಾಡಲಾಗಿದೆ. ಕಾಫಿರ್ ಎಂಬ ಪದವನ್ನು ಬೈಗುಳದ ಭಾಷೆಯಾಗಿ ವ್ಯಾಖ್ಯಾನಿಸಲಾಗಿದೆ.
ಕಾಫಿರ್ ಅಂದರೆ ನಾಸ್ತಿಕ ಅಥವಾ ನಂಬಿಕೆ ಇಲ್ಲದವರು ಎಂಬರ್ಥದಲ್ಲಿ ಪವಿತ್ರ ಕುರ್ಆನ್ ಬಳಸಿದ್ದರೂ ಅದನ್ನು ಮರೆಮಾಚಿ ಕಾಫಿರ್ರೆಂದರೆ ಹಿಂದೂಗಳು ಎಂದೂ ಪ್ರಚಾರ ಮಾಡಲಾಗಿದೆ. ʻಉಮ್ಮಾ’ ಎಂದರೆ, ಸಮುದಾಯ, ಮುಸ್ಲಿಮ್ ಸಮುದಾಯ ಎಂದರ್ಥ. ಆದರೆ, ದೇಶದಲ್ಲಿ ಈ ಪದಕ್ಕೆ ವಿದೇಶಿ ನಿಷ್ಠೆ ಎಂಬ ಅರ್ಥವನ್ನು ಕೊಟ್ಟು ದುರ್ವ್ಯಾಖ್ಯಾನ ಮಾಡಲಾಗಿದೆ. ʻಶರಿಯಾ' ಎಂದರೆ ಹಿಂಸಾತ್ಮಕವಾದ ಅತೀ ಕ್ರೂರ ಕಾನೂನು ಎಂದು ಭಾರತೀಯರನ್ನು ನಂಬಿಸಲಾಗಿದೆ. ನಿಜವಾಗಿ ಶರಿಯಾ ಅಂದರೆ ಇಸ್ಲಾಮಿಕ್ ಕಾನೂನು. ಹಲಾಲ್’ ಎಂಬ ಪದಕ್ಕೆ ಈ ದೇಶದಲ್ಲಿ ಎಂಥ ಅಘಾತಕಾರಿ ಅರ್ಥವನ್ನು ಕಲ್ಪಿಸಲಾಗಿದೆಯೆಂದರೆ, ಅದನ್ನು ಕೇಳಿದರೆ, ಮೂಲ ಅರೆಬಿಕ್ ಭಾಷೆ ಮಾತಾಡುವವರು ದಂಗಾಗಿ ಹೋದರು. ಮಾಂಸ ಮತ್ತು ಮುಸ್ಲಿಮರು ಬಳಸುವ ಉತ್ಪನ್ನಗಳ ಹೆಸರು ಎಂಬ ಅರ್ಥವನ್ನು ಇದಕ್ಕೆ ಕೊಡಲಾಗಿದೆ. ಪ್ರಾಣಿಯ ಕೊರಳನ್ನು ಕತ್ತರಿಸಿ ಸಾಯಿಸುವುದನ್ನೇ ಹಲಾಲ್ ಎಂದು ನಂಬಿದವರಿದ್ದಾರೆ. ಹಲಾಲ್ ಎಂದರೆ ಕತ್ತು ಕೊಯ್ಯುವುದು ಎಂದರ್ಥವಲ್ಲ. ಅನುಮತಿಸಲಾದದ್ದು ಅಥವಾ ಶುದ್ಧವಾದದ್ದು ಎಂದು ಅರ್ಥ. ಹಲಾಲ್ ಆಹಾರ ಎಂದರೆ ಶುದ್ಧ ಆಹಾರ ಎಂದು ಅರ್ಥವೇ ಹೊರತು ಪ್ರಾಣಿಯ ಮಾಂಸ ಎಂದು ಅರ್ಥ ಅಲ್ಲ. ʻಅಝಾನ್'ಗೂ ಇಂಥದ್ದೇ ಅಸಂಗತ ಅರ್ಥವನ್ನು ನೀಡಲಾಗಿದೆ. ಸಾರ್ವಜನಿಕರಿಗೆ ತೊಂದರೆ ಕೊಡುವುದು ಮತ್ತು ಹಿಂದೂಗಳ ಹತ್ಯೆಗೆ ಕರೆಕೊಡುವುದು ಎಂಬಂತೆ ಅಝಾನ್ನ್ನು ನೋಡಲಾಗುತ್ತಿದೆ. ಅಝಾನ್ ಎಂಬುದು ನಮಾಝ್ಗೆ ಜನರನ್ನು ಮಸೀದಿಯತ್ತ ಕರೆಯುವ ಘೋಷಣೆಯೇ ಹೊರತು ಅದರಲ್ಲಿ ಹಿಂದೂ ವಿರೋಧಿಯಾದುದು ಯಾವುದೂ ಇಲ್ಲ. ಹಿಜಾಬ್ ಎಂದರೆ ಮರೆಮಾಚುವುದು ಎಂದು ಅರ್ಥ. ಸಭ್ಯ ಉಡುಪು ಎಂದೂ ಹೇಳಬಹುದು. ಆದರೆ, ಹಿಜಾಬ್ ಎಂದರೆ ಬುರ್ಖಾದಿಂದ ಸಂಪೂರ್ಣ ಮೈಮುಚ್ಚಿ ಕೊಂಡ ಮಹಿಳೆ ಎಂದು ಅಂದುಕೊಂಡಿರುವವರೇ ಧಾರಾಳ ಇದ್ದಾರೆ. ಬುರ್ಖಾಕ್ಕೂ ಹಿಜಾಬ್ ಎಂಬ ಪದಕ್ಕೂ ನೇರ ಸಂಬಂಧ ಇಲ್ಲ. ಹಿಜಾಬ್ ಎಂಬ ಪದ ಮಹಿಳೆಯಂತೆ ಪುರುಷರಿಗೂ ಅನ್ವಯಿಸುತ್ತದೆ. ಸಭ್ಯ ಉಡುಪು ಧರಿಸುವುದನ್ನು ಮಹಿಳೆಗೆ ಮಾತ್ರ ಕಡ್ಡಾಯಗೊಳಿಸಲಾಗಿಲ್ಲ. ಅದೇರೀತಿ, ಅಲ್ಲಾಹ್’ ಎಂದರೆ ಮುಸ್ಲಿಮರ ದೇವ ಎಂಬಂತೆ ಬಿಂಬಿಸಲಾಗಿದೆ. ನಿಜವಾಗಿ, ಅಲ್ಲಾಹ್ ಎಂಬ ಪದವನ್ನು ಭಾರತೀಯ ಉಪಖಂಡಕ್ಕೆ ಸಂಬಂಧಿಸಿದಂತೆ ಈಶ್ವರ್ ಎಂದು ಹೇಳಬಹುದು. ಸರ್ವಶಕ್ತ, ಸೃಷ್ಟಿಕರ್ತ, ದೇವ ಇತ್ಯಾದಿ ಅರ್ಥಗಳ ಗುಚ್ಚವೇ ಅಲ್ಲಾಹ್. ವಿಷಾದ ಏನೆಂದರೆ,
ಈ ಅರಬಿಕ್ ಪದಗಳ ಬಗ್ಗೆ ಮತ್ತು ಮುಸ್ಲಿಮರ ಆಚಾರ-ಸಂಪ್ರದಾಯ, ಸಂಸ್ಕೃತಿಗಳ ಬಗ್ಗೆ ಸಮಾಜಕ್ಕೆ ಎಷ್ಟು ಸಮರ್ಪಕವಾಗಿ ಮತ್ತು ಸಮಗ್ರವಾಗಿ ತಿಳಿಸಬೇಕಿತ್ತೋ ಅಷ್ಟು ಪ್ರಮಾಣದಲ್ಲಿ ತಿಳಿಸಲು ಮುಸ್ಲಿಮರು ವಿಫಲರಾಗಿದ್ದಾರೆ. ಈ ದೇಶದ ಹಿಂದೂಗಳಿಗಿಂತ ಭಿನ್ನವಾದ ಆರಾಧನೆ ಮತ್ತು ಆಚರಣಾ ಕ್ರಮವೊಂದು ಮುಸ್ಲಿಮರಲ್ಲಿದೆ. ಧರ್ಮಗ್ರಂಥದ ಭಾಷೆಯೂ ಈ ಮಣ್ಣಿನದ್ದಲ್ಲ. ಆದ್ದರಿಂದ ಇಂಥ ಪದಗಳನ್ನು ಹೆಚ್ಚೆಚ್ಚು ಬಳಸುವುದೇ ಅಪಪ್ರಚಾರವನ್ನು ದೂರ ಮಾಡಲು ಇರುವ ಒಂದು ದಾರಿಯಾದರೆ ಈ ಪದಗಳ ನಿಜವಾದ ಅರ್ಥವನ್ನು ಸಾಧ್ಯವಿರುವ ಎಲ್ಲಾ ಮಾಧ್ಯಮಗಳ ಮೂಲಕ ಪದೇ ಪದೇ ಸಾರ್ವಜನಿಕರ ಮುಂದಿಡುವುದು ಇನ್ನೊಂದು ದಾರಿಯಾಗಿದೆ. ಇದು ಪದೇ ಪದೇ ಪುನರಾ ವರ್ತನೆಯಾಗುತ್ತಾ ಹೋದರೆ ಈ ಪದಗಳನ್ನು ತೋರಿಸಿ ಇಸ್ಲಾಮನ್ನು ಮತ್ತು ಮುಸ್ಲಿಮರನ್ನು ಬೆನ್ನಟ್ಟುವವರು ಹಿಂಜರಿಯುತ್ತಾ ಹೋಗಬಹುದು.
`ಈದ್’ ಪದದ ಸುತ್ತ ಹುಟ್ಟಿಕೊಂಡ ವಿವಾದವು ಈ ನಿಟ್ಟಿನಲ್ಲಿ ಮುಸ್ಲಿಮರಿಗೆ ಪ್ರೇರಣೆ ಮತ್ತು ಎಚ್ಚರಿಕೆಯಾಗಲಿ.
ಟಿ












