ವಾರದ ಕ್ಲಾಸ್
ಮಂಗಳೂರು: ಮಂಗಳೂರಿನ ಅಡ್ಯಾರಿನ ಬಾರಕಾ ಇಂಟರ್ನ್ಯಾಷನಲ್ ಸ್ಕೂಲ್ ಆ್ಯಂಡ್ ಕಾಲೇಜಿನ ಎರಡು ದಿನಗಳ ವಾರ್ಷಿಕೋತ್ಸವ SPECTRA 2026 ನವೆಂಬರ್ 20 ಮತ್ತು 21ರಂದು ಅತ್ಯಂತ ಸಂಭ್ರಮ ಹಾಗೂ ಸಡಗರದಿಂದ ನಡೆಯಿತು. ಬಾಲಕಿಯರ ಮತ್ತು ಬಾಲಕರ ವಿಭಾಗಗಳಿಗೆ ಪ್ರತ್ಯೇಕವಾಗಿ ಆಯೋಜಿಸಲಾದ ಈ ಕಾರ್ಯಕ್ರಮಗಳಲ್ಲಿ ಅಪಾರ ಸಂಖ್ಯೆಯ ಪೋಷಕರು, ಗಣ್ಯರು, ಹಿತೈಷಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಬರಕಾ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ನ ಆಡಳಿತ ನಿರ್ದೇಶಕಿ ಶ್ರೀಮತಿ ನರ್ಗೀಸ್ ಅಶ್ರಫ್ ಹಾಗೂ ನಿರ್ದೇಶಕ ಶ್ರೀ ಮೊಹಮ್ಮದ್ ಅಯಾನ್ ಉಪಸ್ಥಿತರಿದ್ದರು. ವಿವಿಧ ಕ್ಷೇತ್ರಗಳ ಹಲವು ಗಣ್ಯರು ಕಾರ್ಯಕ್ರಮಕ್ಕೆ ಮೆರುಗು ನೀಡಿದರು.
ಬಾಲಕಿಯರ ವಿಭಾಗದ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಝೈಬುನ್ನಿಸಾ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ದುಬೈನ ಇನ್ಫೋಸ್ಕಿಲ್ಸ್ ಸಂಸ್ಥೆಯ ಸಂಸ್ಥಾಪಕಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಭಾವನಾತ್ಮಕ ಬುದ್ಧಿಮತ್ತೆ ತಂತ್ರಜ್ಞೆ ಮತ್ತು ಕಾರ್ಪೊರೇಟ್ ತರಬೇತುದಾರರಾದ ಡಾ. ನಸ್ರೀನ್ ಅಹ್ಮದ್ ಬಾವ ಹಾಗೂ ಸಮಾಜ ಸೇವಕಿ ಶ್ರೀಮತಿ ಸಫಿಯಾ ಬೇಗಂ ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದರು.

ಬಾಲಕರ ವಿಭಾಗದ ಕಾರ್ಯಕ್ರಮದಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (MUDA) ಅಧ್ಯಕ್ಷರಾದ ಶ್ರೀ ಸಂತೋಷ್ ಕುಮಾರ್ ಶೆಟ್ಟಿ, ಹಿರಿಯ ನ್ಯಾಯವಾದಿ ಹಾಗೂ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಶ್ರೀ ಅಶ್ವನಿ ಕುಮಾರ್ ರೈ, ಯುನಿವೆಫ್ ಮಂಗಳೂರು ಅಧ್ಯಕ್ಷರಾದ ಶ್ರೀ ರಫೀಉದ್ದೀನ್ ಕುದ್ರೋಳಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಹಾಗೂ ಕನ್ನಡ ಜಾಗೃತಿ ಸಮಿತಿಯ ಸದಸ್ಯರಾದ ಶ್ರೀ ಅಸ್ಸೈನಾರ್ ತಾಳಿತ್ತನೂಜಿ ಮತ್ತು ಅಡ್ಯಾರ್ ಪಂಚಾಯತ್ ಸದಸ್ಯರಾದ ಶ್ರೀ ಅಬ್ದುಲ್ ರಝಾಕ್ ಗೌರವ ಅತಿಥಿಗಳಾಗಿ ಭಾಗವಹಿಸಿದ್ದರು.
ಎರಡು ದಿನಗಳ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆ, ಸೃಜನಶೀಲತೆ ಹಾಗೂ ಆತ್ಮವಿಶ್ವಾಸವನ್ನು ಅನಾವರಣಗೊಳಿಸುವ ವೈವಿಧ್ಯಮಯ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಪ್ರದರ್ಶನಗಳನ್ನು ನೀಡಿದರು. ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ವೈವಿಧ್ಯತೆಯನ್ನು ಪ್ರತಿಬಿಂಬಿಸಿದ ಕಾರ್ಯಕ್ರಮಗಳು ಇಸ್ಲಾಮಿನ ಮೌಲ್ಯಗಳು ಹಾಗೂ ಆಧುನಿಕ ಶಿಕ್ಷಣದ ಸಮನ್ವಯವನ್ನು ಸಾರಿದವು. ಸಮಯ ನಿರ್ವಹಣೆಯ ಮಹತ್ವ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಜೀವನ, ಆದರ್ಶ ಮತ್ತು ಕೊಡುಗೆಗಳನ್ನು ಪರಿಚಯಿಸುವ ಅರ್ಥಪೂರ್ಣ ಪ್ರಸ್ತುತಿಗಳು ವಿಶೇಷ ಗಮನ ಸೆಳೆದವು.
ವಾರ್ಷಿಕೋತ್ಸವದ ಅಂಗವಾಗಿ ಸಿಬಿಎಸ್ಇ 10ನೇ ತರಗತಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಇದರೊಂದಿಗೆ ಪಠ್ಯೇತರ ಹಾಗೂ ವಿವಿಧ ಸಹಪಠ್ಯ ಚಟುವಟಿಕೆಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನೂ ಗುರುತಿಸಿ ಗೌರವಿಸಲಾಯಿತು.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಮುಖ್ಯ ಅತಿಥಿ ಶ್ರೀಮತಿ ಝೈಬುನ್ನಿಸಾ ಅವರು, ಇಸ್ಲಾಮಿಕ್ ಶಿಕ್ಷಣದ ಹಿನ್ನೆಲೆಯೊಂದಿಗೆ ಸಿಬಿಎಸ್ಇ ಶಿಕ್ಷಣ ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ಬರಕಾ ತಂಡದ ಪ್ರಯತ್ನವನ್ನು ಶ್ಲಾಘಿಸಿದರು. ಗುಣಮಟ್ಟದ ಆಧುನಿಕ ಶಿಕ್ಷಣದ ಜೊತೆಗೆ ನೈತಿಕ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವ ಸಂಸ್ಥೆಯ ಕಾರ್ಯವನ್ನು ಅವರು ಪ್ರಶಂಸಿಸಿದರು.
ಬಾಲಕರ ವಿಭಾಗದ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ಸಂತೋಷ್ ಕುಮಾರ್ ಶೆಟ್ಟಿ ಅವರು ಶಿಕ್ಷಣ ಕ್ಷೇತ್ರಕ್ಕೆ ಸಂಸ್ಥೆಯ ಆಡಳಿತ ಮಂಡಳಿ ನೀಡುತ್ತಿರುವ ಅಮೂಲ್ಯ ಕೊಡುಗೆಯನ್ನು ಶ್ಲಾಘಿಸಿದರು. ಶ್ರೀ ಅಶ್ವನಿ ಕುಮಾರ್ ರೈ ಅವರು ಆಡಳಿತ ಮಂಡಳಿ ಹಾಗೂ ಶಾಲಾ ಬಳಗದ ಪ್ರಯತ್ನಗಳನ್ನು ಮೆಚ್ಚಿ, ವಿದ್ಯಾರ್ಥಿಗಳು ತಮ್ಮ ಸರ್ವತೋಮುಖ ಬೆಳವಣಿಗೆಗಾಗಿ ಶೈಕ್ಷಣಿಕ ಸಾಧನೆಯಷ್ಟೇ ಕ್ರೀಡೆಗಳಿಗೂ ಸಮಾನ ಆದ್ಯತೆ ನೀಡಬೇಕೆಂದು ಕರೆ ನೀಡಿದರು.

ಸಂಸ್ಥೆಯ ನಿರ್ದೇಶಕ ಶ್ರೀ ಮೊಹಮ್ಮದ್ ಅಯಾನ್ ಅವರು ಅಧ್ಯಕ್ಷರಾದ ಶ್ರೀ ಮೊಹಮ್ಮದ್ ಅಶ್ರಫ್ ಅವರ ಸಂದೇಶವನ್ನು ಸಭೆಗೆ ತಲುಪಿಸುತ್ತಾ, ಎಲ್ಲ ವ್ಯವಹಾರಗಳು ಮತ್ತು ಸಾಂಸ್ಥಿಕ ಚಟುವಟಿಕೆಗಳಲ್ಲಿ ಪಾರದರ್ಶಕತೆ, ಪ್ರಾಮಾಣಿಕತೆ ಹಾಗೂ ಹೊಣೆಗಾರಿಕೆಯನ್ನು ಕಾಪಾಡಿಕೊಳ್ಳುವ ಮಹತ್ವವನ್ನು ಒತ್ತಿಹೇಳಿದರು.
ಬರಕಾ ಇಂಟರ್ನ್ಯಾಷನಲ್ ಸ್ಕೂಲ್ ಆ್ಯಂಡ್ ಕಾಲೇಜು ಶೈಕ್ಷಣಿಕ ಉತ್ಕೃಷ್ಟತೆಯ ಜೊತೆಗೆ ನೈತಿಕ ಮೌಲ್ಯಗಳು, ಸಾಮಾಜಿಕ ಹೊಣೆಗಾರಿಕೆ, ನಾಯಕತ್ವ ಗುಣಗಳು ಮತ್ತು ಸೃಜನಶೀಲತೆಯನ್ನು ಬೆಳೆಸುವ ಸಮಗ್ರ ಶಿಕ್ಷಣಕ್ಕೆ ಬದ್ಧವಾಗಿದೆ ಎಂಬುದನ್ನು SPECTRA 2026 ಮತ್ತೊಮ್ಮೆ ಸಾಬೀತುಪಡಿಸಿತು.













