ಕ್ಷೇತ್ರ ಮರುವಿಂಗಡಣೆಗೆ ಸ್ಪಷ್ಟ, ಪಾರದರ್ಶಕ ಮತ್ತು ಸಂವಿಧಾನಬದ್ಧ ಚೌಕಟ್ಟು ರೂಪಿಸಲು ಕೇಂದ್ರಕ್ಕೆ ಜಮಾಅತೆ ಇಸ್ಲಾಮೀ ಹಿಂದ್ ಆಗ್ರಹ

0
6

ಸನ್ಮಾರ್ಗ ವಾರ್ತೆ

ನವದೆಹಲಿ: ಕ್ಷೇತ್ರ ಮರುವಿಂಗಡಣೆ (Delimitation) ಹಾಗೂ ಹೊಸ ಚುನಾವಣಾ ಕ್ಷೇತ್ರಗಳ ರಚನೆಗೆ ಸಂಬಂಧಿಸಿದಂತೆ ಸ್ಪಷ್ಟ, ದೋಷರಹಿತ ಮತ್ತು ಸಂವಿಧಾನಬದ್ಧ ಚೌಕಟ್ಟನ್ನು ರೂಪಿಸುವಂತೆ ಜಮಾಅತೆ ಇಸ್ಲಾಮೀ ಹಿಂದ್ ರಾಷ್ಟ್ರೀಯ ಅಧ್ಯಕ್ಷ ಸೈಯದ್ ಸಆದುಲ್ಲಾ ಹುಸೇನಿ ಅವರು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅವರು, ಕ್ಷೇತ್ರಗಳ ಗಡಿ ನಿರ್ಧಾರದಲ್ಲಿ ರಾಜಕೀಯ ಹಸ್ತಕ್ಷೇಪ, ಪಕ್ಷಪಾತ ಹಾಗೂ ತಾರತಮ್ಯಪೂರಿತ ಕ್ರಮಗಳಿಗೆ ಅವಕಾಶವಿಲ್ಲದಂತೆ ಸೂಕ್ತ ರಕ್ಷಣಾತ್ಮಕ ವ್ಯವಸ್ಥೆ ಕಲ್ಪಿಸಬೇಕು. ಕ್ಷೇತ್ರ ಮರುವಿಂಗಡಣೆಗೆ ಸಂಬಂಧಿಸಿದ ಮಾನದಂಡಗಳು, ವಿಧಾನಗಳು ಮತ್ತು ಸುರಕ್ಷತಾ ಕ್ರಮಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿ, ಮಸೂದೆಯನ್ನು ಮಂಡಿಸುವ ಮೊದಲು ರಾಜಕೀಯ ಪಕ್ಷಗಳು ಹಾಗೂ ಸಾರ್ವಜನಿಕರೊಂದಿಗೆ ವ್ಯಾಪಕ ಸಮಾಲೋಚನೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಕ್ಷೇತ್ರ ಮರುವಿಂಗಡಣೆಯು ಪ್ರಜಾಸತ್ತಾತ್ಮಕ ಪ್ರಾತಿನಿಧ್ಯ, ಒಕ್ಕೂಟ ವ್ಯವಸ್ಥೆಯ ಸಮತೋಲನ ಮತ್ತು ಎಲ್ಲ ಪ್ರದೇಶಗಳು ಹಾಗೂ ಸಮುದಾಯಗಳ ರಾಜಕೀಯ ಹಕ್ಕುಗಳ ಮೇಲೆ ಪರಿಣಾಮ ಬೀರುವ ಮಹತ್ವದ ವಿಷಯವಾಗಿದೆ. ಆದ್ದರಿಂದ ಇದನ್ನು ತರಾತುರಿಯಲ್ಲಿ ಕೈಗೊಳ್ಳದೆ ರಾಜ್ಯ ಸರ್ಕಾರಗಳು, ರಾಜಕೀಯ ಪಕ್ಷಗಳು ಮತ್ತು ನಾಗರಿಕ ಸಮಾಜದ ಸಂಘಟನೆಗಳ ಅಭಿಪ್ರಾಯಗಳನ್ನು ಪರಿಗಣಿಸಬೇಕು ಎಂದು ಅವರು ಹೇಳಿದ್ದಾರೆ.

ಅಸ್ಸಾಂ ಮತ್ತು ಜಮ್ಮು-ಕಾಶ್ಮೀರದ ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಗಳು ಧಾರ್ಮಿಕ ಅಲ್ಪಸಂಖ್ಯಾತರ ರಾಜಕೀಯ ಪ್ರಾತಿನಿಧ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳ ಬಗ್ಗೆ ಆತಂಕ ಮೂಡಿಸಿವೆ. ಅಲ್ಲದೆ, ಪ್ರಸ್ತಾವಿತ ಕ್ಷೇತ್ರ ಮರುವಿಂಗಡಣೆ ಆಯೋಗದ ಅಧಿಕಾರಗಳು, ಸಾಂಸ್ಥಿಕ ನಿಯಂತ್ರಣಗಳ ಕೊರತೆ ಹಾಗೂ ನ್ಯಾಯಾಂಗ ಮೇಲ್ವಿಚಾರಣೆಯ ಅಭಾವದ ಬಗ್ಗೆಯೂ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ.

ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಮರುವಿಂಗಡಣೆ ಎರಡು ಪ್ರತ್ಯೇಕ ವಿಷಯಗಳಾಗಿದ್ದು, ಅವುಗಳನ್ನು ಪರಸ್ಪರ ಜೋಡಿಸಬಾರದು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಮಹಿಳೆಯರಿಗೆ ಅರ್ಥಪೂರ್ಣ ರಾಜಕೀಯ ಪ್ರಾತಿನಿಧ್ಯ ಕಲ್ಪಿಸುವುದನ್ನು ಜಮಾಅತೆ ಇಸ್ಲಾಮೀ ಹಿಂದ್ ಬೆಂಬಲಿಸುತ್ತದೆ. ಸೂಕ್ತ ಉಪಮೀಸಲಾತಿಗಳೊಂದಿಗೆ ಪ್ರಸ್ತುತ ವ್ಯವಸ್ಥೆಯಲ್ಲಿಯೇ ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸಬೇಕು. ಕ್ಷೇತ್ರ ಮರುವಿಂಗಡಣೆಯನ್ನು ಪ್ರತ್ಯೇಕವಾಗಿ ಪಾರದರ್ಶಕ ಮತ್ತು ಸಂವಿಧಾನಬದ್ಧವಾಗಿ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಪ್ರಜಾಸತ್ತಾತ್ಮಕ ಸಂಸ್ಥೆಗಳ ವಿಶ್ವಾಸಾರ್ಹತೆ, ಪ್ರತಿಯೊಂದು ಮತಕ್ಕೂ ಸಮಾನ ಮೌಲ್ಯ ಹಾಗೂ ಎಲ್ಲ ಪ್ರದೇಶಗಳು ಮತ್ತು ಸಮುದಾಯಗಳಿಗೆ ನ್ಯಾಯಯುತ ಪ್ರಾತಿನಿಧ್ಯ ಖಾತರಿಪಡಿಸುವುದು ಸರ್ಕಾರದ ಆದ್ಯತೆಯಾಗಿರಬೇಕು ಎಂದು ಸೈಯದ್ ಸಆದುಲ್ಲಾ ಹುಸೇನಿ ತಿಳಿಸಿದ್ದಾರೆ.