ಪಾಪ್ಯುಲರ್ ಫ್ರಂಟ್ ವಿರುದ್ಧ ಮಾನಹಾನಿಕರ ವರದಿ: ಸಂಜೆ ಪತ್ರಿಕೆಗೆ ದಂಡ

0
1074

ಮಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ವಿರುದ್ಧ ಮಾನಹಾನಿಕರ ಸುಳ್ಳುಸುದ್ದಿ ಪ್ರಕಟಿಸಿದ್ದ ಕರಾವಳಿಯ ಸಂಜೆ ಪತ್ರಿಕೆಗೆ ಜಿಲ್ಲಾ ನ್ಯಾಯಾಲಯವು 15,000 ರೂಪಾಯಿ ದಂಡ ಮತ್ತು ಸಂಘಟನೆಯ ವಿರುದ್ಧ ಪೂರ್ವಾಗ್ರಹಪೀಡಿತವಾಗಿ ಇಂತಹ ಮಾನಹಾನಿಕರ ಸುಳ್ಳುಸುದ್ದಿ ಪ್ರಕಟಿಸದಂತೆ ತಾಕೀತು ಮಾಡಿರುವುದಾಗಿ ವರದಿಯಾಗಿದೆ. ಈ ಕುರಿತಾದ ಆದೇಶದ ಪ್ರತಿಯನ್ನು ಸಂಘಟನೆಯು ಮಾಧ್ಯಮಗಳಿಗೆ ಬಿಡುಗಡೆಗೊಳಿಸಿದೆ.

2013ರಲ್ಲಿ ಪತ್ರಿಕೆಯು ಪಾಪ್ಯುಲರ್ ಫ್ರಂಟ್ ವಿರುದ್ಧ ಸುಳ್ಳುಸುದ್ದಿಯನ್ನು ಪ್ರಕಟಿಸಿ ಅದರ ಕಾರ್ಯಕರ್ತರನ್ನು ಕೆಟ್ಟ ಪದಗಳನ್ನು ಬಳಸಿ ಪೂರ್ವಾಗ್ರಹಪೀಡಿತ ವರದಿಯನ್ನು ಪ್ರಕಟಿಸಿತ್ತು ಎಂದಿರುವ ಪಾಪ್ಯುಲರ್ ಫ್ರಂಟ್ ಅದರ ವಿರುದ್ಧ 2013ರಲ್ಲೇ ಕಾನೂನು ಸಮರಕ್ಕೆ ಇಳಿದಿತ್ತು. ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರಿನ 5ನೆ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಲಯವು ಪತ್ರಿಕೆಯ ವರದಿಯಲ್ಲಿ ಯಾವುದೇ ಸತ್ಯಾಂಶ ಇಲ್ಲವೆಂದೂ, ಸುದ್ದಿಯ ಅಧಿಕೃತತೆಯನ್ನು ರುಜುವಾತು ಪಡಿಸುವಲ್ಲಿ ಪತ್ರಿಕೆಯು ವಿಫಲವಾಗಿರುವುದರಿಂದ ಪತ್ರಿಕೆಯು ಅಪರಾಧವು ಎಸಗಿರುವುದಾಗಿ ದೃಢಪಡಿಸಿತು. ಈ ಪ್ರಕರಣದ ತೀರ್ಪನ್ನು ಪ್ರಕಟಿಸಿದ ನ್ಯಾಯಾಲಯವು ಪತ್ರಿಕೆಯು ಮಾನನಷ್ಟ ದಂಡ 15,000 ರೂಪಾಯಿ ಪಾವತಿಸುವಂತೆ ಮತ್ತು ಇಂತಹ ಕೃತ್ಯಗಳನ್ನು ಪುನರಾವರ್ತಿಸದಂತೆ ತಾಕೀತು ಮಾಡಿದೆ. ಸದ್ರಿ ಪತ್ರಿಕೆಯ ಯಾವುದೇ ಸಿಬ್ಬಂದಿಯು ಪಾಪ್ಯುಲರ್ ಫ್ರಂಟ್ ವಿರುದ್ಧ ಮಾನಹಾನಿಕರ ಸುದ್ದಿಯನ್ನು ಪ್ರಕಟಿಸದಂತೆ ಎಚ್ಚರಿಕೆಯನ್ನು ಮಾನ್ಯ ನ್ಯಾಯಾಲಯವು ತನ್ನ ತೀರ್ಪಿನ ಪ್ರತಿಯಲ್ಲಿ ಉಲ್ಲೇಖಿಸಿದೆ. ಅಲ್ಲದೆ, ವಿಧಿಸಲಾಗಿರುವ ದಂಡ ಮೊತ್ತಕ್ಕೆ ವರ್ಷಕ್ಕೆ ಶೇ. 6 ಹೆಚ್ಚುವರಿ ದಂಡವನ್ನು ಸೇರಿಸಿ ಕೊಡುವಂತೆಯೂ ನ್ಯಾಯಾಲಯ ತನ್ನ ತೀರ್ಪಿನಲ್ಲಿ ತಿಳಿಸಿದೆ.

ಪ್ರಕರಣಕ್ಕೆ ಸಂಬಂಧಿಸಿ ನ್ಯಾಯವಾದಿ ಎಸ್.ಎಸ್.ಖಾಝಿ ವಾದಿಸಿದ್ದರು.