ಹಾಜಿಗಳು ಹೊಲಿದ ಬಟ್ಟೆಗಳನ್ನು ಧರಿಸಬಹುದೇ?-ಪ್ರಶ್ನೋತ್ತರ

0
907

ಅಬೂ ರಯ್ಯಾನ್, ಉಡುಪಿ

ಪ್ರಶ್ನೆ:ಹಾಜಿಗಳು ಹೊಲಿದ ಬಟ್ಟೆಗಳನ್ನು ಧರಿಸಬಾರದು ಎಂದು ಹಜ್ಜ್ ತರಗತಿಯಲ್ಲಿ ಹೇಳಿದ್ದಾರೆ. ಆದರೆ ಸಣ್ಣ ಹೊಲಿಗೆ ಇರುವ ಚಪ್ಪಲಿ, ಸೊಂಟ ಪಟ್ಟಿ ಧರಿಸಬಹುದು ಎಂದೂ ಹೇಳಲಾಗಿದೆ. ಈ ಬಗ್ಗೆ ನಮ್ಮ ಕೆಲವರಲ್ಲಿ ಗೊಂದಲ ಉಂಟಾಗಿದೆ. ಇದನ್ನು ಪರಿಹರಿಸುವಿರಾ?

ಉತ್ತರ: ಹೊಲಿದದ್ದನ್ನು ಧರಿಸಬಾರದು ಎಂದು ಸ್ಪಷ್ಟವಾಗಿ ಹೇಳುವ ಆಯತ್ ಅಥವಾ ಹದೀಸ್ ಇಲ್ಲ ಎಂಬುದು ವಾಸ್ತವಿಕ ಸಂಗತಿಯಾಗಿದೆ. ಹಾಗಂತ ಹೊಲಿದ ಬಟ್ಟೆಯನ್ನು ಧರಿಸಬಹುದು ಎಂದಲ್ಲ. ಬದಲಾಗಿ, ಹಜ್ಜ್ ಅಥವಾ ಉಮ್ರಾಕ್ಕೆ ಇಹ್ರಾಮ್ ಮಾಡುವವರು ಯಾವುದನ್ನೆಲ್ಲಾ ಧರಿಸಬಾರದು ಎಂದು ಪ್ರವಾದಿ(ಸ) ಕಲಿಸಿದ್ದಾರೆ. ಉದಾಹರಣೆಗೆ, ಪ್ರವಾದಿ(ಸ) ಹೇಳಿದರು, ಇಹ್ರಾಮ್‍ಗೆ ಪ್ರವೇಶಿಸಿದವನು ಅಂಗಿ, ಶಿರವಸ್ತ್ರ, ಟೊಪ್ಪಿ, ನಿಲುವಂಗಿ, ಕುಂಕುಮ ಹೂವಿನಂತಹ ಸುಗಂಧವಿರುವವುಗಳಿಂದ ರಂಗು ಹಾಕಿದ ಬಟ್ಟೆ, ಬೂಟುಗಳನ್ನು ಧರಿಸಬಾರದು. ಬೂಟುಗಳಿಗೆ ಬದಲಾಗಿ ಚಪ್ಪಲಿಗಳು ದೊರೆಯದಿದ್ದರೆ ಮಣಿಗಂಟಿಗಿಂತ ಕೆಳಗೆ ನಿಲ್ಲುವ ರೀತಿಯಲ್ಲಿ ಅದನ್ನು ಅವನು ಕೊಯ್ದು ತೆಗೆಯಲಿ. (ಬುಖಾರಿ, ಮುಸ್ಲಿಮ್)

ಇಂತಹ ಹದೀಸ್‍ಗಳ ಆಧಾರದಲ್ಲಿ ಹೊಲಿಗೆ ಇರುವ ಬಟ್ಟೆಯನ್ನು ಧರಿಸಬಾರದು ಎಂದು ಹೇಳಲಾಗಿದೆಯೆಂದು ಇಮಾಮ್‍ಗಳು ಸಂಶೋಧನೆ ನಡೆಸಿ ಹೊರಡಿಸಿದ ಫತ್ವಾ ಆಗಿದೆ. ಶರೀರವನ್ನು ಪೂರ್ತಿಯಾಗಿ ಮುಚ್ಚುವ, ಅದೇ ರೀತಿ ಯಾವುದಾದರೂ ಅಂಗಾಂಗಗಳನ್ನು ಮುಚ್ಚುವ ಆಕೃತಿಯಲ್ಲಿ ತಯಾರಿಗೊಳಿಸಿದ ಯಾವುದೇ ಬಟ್ಟೆಯನ್ನು ಇಹ್ರಾಮ್ ಮಾಡಿದವರು ಧರಿಸಬಾರದು ಎಂದಿದೆ. ಹೊಲಿಗೆ ಹಾಕಿದ್ದು ಎಂಬುದು ಹೊಲಿಗೆ ಇಲ್ಲದೆ ನೂಲಿನ ಯಾವುದೇ ಸ್ಪರ್ಶವಿಲ್ಲದೆ ತಯಾರುಗೊಳಿಸಲಾಗುವ ಬಟ್ಟೆಗಳನ್ನೋ ಸೂಟ್‍ಗಳನ್ನೋ ಹೊಲಿಗೆ ಇಲ್ಲ ಎಂದು ಧರಿಸುವಂತಿಲ್ಲ. ಅದೇ ರೀತಿ ಶರೀರಾಕೃತಿಯಲ್ಲಿ ಅವಯವಗಳ ಆಕೃತಿಯಲ್ಲಿ ಹೊಲಿಯಲ್ಪಡದ ಚಪ್ಪಲಿ, ಬೆಲ್ಟ್, ಸೊಂಟ ಪಟ್ಟಿ, ಅಂಚು ಹೊಲಿದ ಪಂಚೆ, ಶಾಲು ಮುಂತಾದವುಗಳು ಅವುಗಳಲ್ಲಿ ಹೊಲಿಗೆ ಹಾಕಿದರೂ ಗುರುತು ಅಥವಾ ನೂಲು ಇದೆಯೆಂದು ಅವುಗಳನ್ನು ಉಪೇಕ್ಷಿಸಬೇಕಾಗಿಯೂ ಇಲ್ಲ. ಅದೇ ರೀತಿ ಸಾಮಾನ್ಯ ರೀತಿಯಲ್ಲಿ ಧರಿಸುವ ಅಂಗಿ, ಪ್ಯಾಂಟ್, ಒಳ ಉಡುಪು ಮುಂತಾದವುಗಳನ್ನು ಧರಿಸಬಹುದು. ಈ ಹೇಳಿದ್ದೆಲ್ಲವೂ ಪುರುಷರಿಗೆ ಮಾತ್ರ ಅನ್ವಯವಾಗುತ್ತದೆ.

ಇಮಾಮ್ ನವವಿ ಹೇಳುತ್ತಾರೆ, “ಪೂರ್ಣವಾಗಿ ಮುಚ್ಚುವಂತಹದ್ದು ಅಥವಾ ಇದಕ್ಕೆ ಸಮಾನವಾದದ್ದೋ ಆದವುಗಳನ್ನು ಧರಿಸುವುದು ಇಹ್ರಾಮ್‍ಗೆ ಪ್ರವೇಶಿಸಿದವನಿಗೆ ನಿಷಿದ್ಧವಾಗುತ್ತದೆ. ಆದ್ದರಿಂದ ಶರೀರವನ್ನು ಪೂರ್ಣವಾಗಿ ಮುಚ್ಚುವ ಅಥವಾ ಯಾವುದಾದರೂ ಅಂಗಾಂಗಗಳನ್ನು ಮುಚ್ಚುವ ಎಲ್ಲವೂ ನಿಷಿದ್ಧವಾಗಿದೆ. ಅದು ಹೊಲಿದದ್ದಾದರೂ ಹೊಲಿಯದ್ದಾದರೂ ಸರಿ ಎಲ್ಲವೂ ಒಂದೇ ರೀತಿಯಾಗಿದೆ.” (ಮಜ್‍ಮೂಅ 7/246)

ಇನ್ನು ಇಂತಹ ಬಟ್ಟೆಗಳನ್ನು ಕೈಬಿಟ್ಟು ಕೇವಲ ಒಂದು ಪಂಚೆ ಧರಿಸಲೂ ಹೋಗಿ ಇನ್ನೊಂದು ಬಟ್ಟೆಯನ್ನು ಹೊದ್ದುಕೊಳ್ಳಲೂ ಮಾತ್ರ ಹೇಳಿದ್ದರ ಹಿಂದೆ ಪ್ರಧಾನವಾಗಿ ಮೂರು ಯುಕ್ತಿಗಳು ಇವೆ ಎಂದು ವಿದ್ವಾಂಸರು ಸ್ಪಷ್ಟಪಡಿಸುತ್ತಾರೆ.

ಒಂದು, ಎಲ್ಲಾ ಅಲಂಕಾರಗಳನ್ನೂ ಸಿಂಗಾರಗಳನ್ನೂ ತೊರೆದು ಅಪ್ಪಟ ವಿರಕ್ತಿಯಲ್ಲಿರುವಂತಹ ರೂಪವು ಅಲ್ಲಾಹನ ಮುಂದೆ ಒಬ್ಬನನ್ನು ಹೆಚ್ಚು ವಿನಯವಂತನೂ ವಿಧೇಯನೂ ಆಗಿ ಮಾಡುತ್ತದೆ. ಅಲಂಕಾರ ಮಾಡಿ ತಯಾರಾಗಿ ಬರುವುದಕ್ಕಿಂತ ಹೆಚ್ಚು ಆಧ್ಯಾತ್ಮಿಕತೆಯು ಈ ಎರಡು ವಸ್ತ್ರಗಳನ್ನು ಮಾತ್ರ ಧರಿಸಿದಾಗ ದೊರೆಯುತ್ತದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.

ಎರಡು, ಮನುಷ್ಯರೆಲ್ಲರೂ ಸಮಾನರಾಗಿದ್ದಾರೆ ಎಂಬ ಪ್ರಜ್ಞೆಯನ್ನು ಹೆಚ್ಚು ಪ್ರತಿಫಲಿಸುವಂತೆ ಮಾಡಲು ಸಹಾಯಕವಾಗಿದೆ. ಜೀವಿತಾವಧಿಯಲ್ಲಿ ರಂಗು ರಂಗಿನ ನಯವು ಮನೋಹರವಾದ ಬಟ್ಟೆಗಳನ್ನು ಧರಿಸಿ ಗೊತ್ತಿರುವ ರಾಜರುಗಳೂ ಶ್ರೀಮಂತರೂ ಕಡಿಮೆ ಗುಣಮಟ್ಟದ ಬಟ್ಟೆಗಳನ್ನು ಧರಿಸಲು ನಿರ್ಬಂಧಿತರಾದ ಬಡವರೂ ಒಂದೇ ಬಟ್ಟೆಯನ್ನು ಧರಿಸುವಾಗ ಸಕಲ ಲೋಕಗಳ ಪ್ರಭುವಾದ ಅಲ್ಲಾಹನ ಮುಂದೆ ನಾವೆಲ್ಲರೂ ಸಮಾನರಾದ ದಾಸರಾಗಿದ್ದೇವೆ ಎಂದು ಪ್ರಾಯೋಗಿಕವಾಗಿ ಸಾಬೀತಾಗುತ್ತದೆ.

ಮೂರು, ಬಟ್ಟೆಯಿಲ್ಲದೆ ನಗ್ನನಾಗಿ ಈ ಜಗತ್ತಿಗೆ ಬಂದ ಮನುಷ್ಯನು ಎಷ್ಟೇ ಆಡಂಬರ ಜೀವನ ಸಾಗಿಸಿದರೂ ಮರಣ ಹೊಂದಿದರೆ ಇಂತಹ ಮೂರು ತುಂಡು ಬಟ್ಟೆಯಿಂದ ಸುತ್ತಿ ದಫನ ಮಾಡಲಾಗುತ್ತದೆ ಎಂಬ ಪ್ರಜ್ಞೆಯನ್ನು ಮೂಡಿಸಲು ಸಹಾಯವಾಗುತ್ತದೆ. ಇದರಿಂದಾಗಿ ಹೆಚ್ಚು ದೇವಭಕ್ತರೂ ವಿನೀತರೂ ಆಗಲು ಹಾಜಿಗಳಿಗೆ ಸಾಧ್ಯವಾಗುತ್ತದೆ.