ಸೌದಿಯಲ್ಲೊಂದು ಹೃದಯ ಕಲಕುವ ಘಟನೆ: ಒಂಟೆ ಮೇಯಿಸುತ್ತಾ ಮೇಯಿಸುತ್ತಾ ಮರಳಿ ಬರುವ ಆಸೆಯನ್ನೇ ಬಿಟ್ಟಿದ್ದ ದಿನೇಶ್ ತಿವಾರಿ ಮರಳಿ ಬಂದರು

0
1718

ದಮ್ಮಾಂ, ಆ. 5: ನಲವತ್ತು ತಿಂಗಳ ಕಾಲ ನೂರಾರು ಒಂಟೆಗಳು ಮತ್ತು ಆಡುಗಳನ್ನು ಮೇಯಿಸಿ ಅದರ ಜೊತೆ ಬದುಕಿದ ಉತ್ತರಪ್ರದೇಶದ ಬನಾರಸ್ ನಿವಾಸಿ ದಿನೇಶ್ ತಿವಾರಿಗೆ (50) ಕೊನೆಗೂ ವಿಮೋಚನೆ ಸಿಕ್ಕಿದೆ. ಕ್ರೂರ ಹಿಂಸೆ ಅನುಭವಿಸಿದ, ಅಗತ್ಯಕ್ಕೆ ತಕ್ಕಷ್ಟು ಆಹಾರ ಕೂಡ ಸಿಗದೆ ಪ್ರಾಣಿಗಳೊಂದಿಗೆ ಮಲಗಿ ನಿದ್ರಿಸಬೇಕಾದ ಬಂದ ವ್ಯಕ್ತಿ ಈಗ ಪುನರ್ಜನ್ಮ ಸಿಕ್ಕಿದ ಸಂತೋಷದಲ್ಲಿದ್ದಾರೆ. ಮನೆಯ ಗಾರ್ಡ್ ಕೆಲಸ ವೀಸಾದಲ್ಲಿ ಸೌದಿಗೆ ಬಂದ ತಿವಾರಿ ದಮ್ಮಾಮ್‍ನಿಂದ ನೂರು ಕಿಲೋಮೀಟರ್ ದೂರದ ಮರುಭೂಮಿಯ ಒಂಟೆ ಸಾಕಣೆ ಕೇಂದ್ರಕ್ಕೆ ಕಳುಹಿಸಲ್ಪಟ್ಟಿದ್ದರು ಮತ್ತು ಅಲ್ಲಿಂದ ಪಾರಾಗಲು ಸಾಧ್ಯವಿಲ್ಲದ ರೀತಿಯಲ್ಲಿ ಅವರ ಕೆಲಸವಿತ್ತು.

ದಿನೇಶ ಕುರಿತು ವಿವರಗಳೇ ಇಲ್ಲದ ಪರಿಸ್ಥಿತಿಯಾದಾಗ ಮನೆಯವರು ಸೌದಿಯ ಗೆಳೆಯರು ಮತ್ತು ಅಧಿಕಾರಿಗಳಿಗೆ ದೂರು ನೀಡಿದರು. ನಂತರ ಭಾರತದ ದೂತವಾಸ ನೀಡಿದ ವಿವರದ ಪ್ರಕಾರ ದಮ್ಮಾಮ್‍ನ ಸಾಮಾಜಿಕ ಕಾರ್ಯಕರ್ತ ಝಕೀರ್ ಎಂಬವರು ತಿವಾರಿಯನ್ನು ಹುಡುಕಿದರು. ಒಂಟೆಗಳಿಗೆ ಹುಲ್ಲು ಮತ್ತು ನೀರು ತಂದು ಕೊಡುವ ಚಾಲಕನ ಸಹಾಯದಲ್ಲಿ ಮರುಭೂಮಿಯ ನಡುವಿನಿಂದ ದಿನೇಶ ತಿವಾರಿಯನ್ನು ಪಾರು ಮಾಡಿ ಕೋರ್ಟಿನಲ್ಲಿ ಅವರು ಹಾಜರುಪಡಿಸಿದರು. ದಿನೇಶ್ ತಿವಾರಿ ಕಾಣೆಯಾಗಿ ಮೂರನೆ ದಿವಸ ಪ್ರಾಯೋಜಕ ಹುರೂಬ್ ಮಾಡಿ ತಪ್ಪಿಸಿಕೊಳ್ಳಲು ನೋಡಿದ್ದಾನೆ.

ಕೇಸು ಕೊಟ್ಟ ಬಳಿಕ ಹುರೂಬ್ ಮಾಡಿದ್ದರಿಂದ ಲೇಬರ್ ಕೋರ್ಟು ಪ್ರಾಯೋಜಕನ ಪ್ರತಿನಿಧಿಯನ್ನು ಕರೆಯಸಿಕೊಂಡು ತಿವಾರಿಯನ್ನು ಊರಿಗೆ ಕಳುಹಿಸುವಂತೆ ಸೂಚಿಸಿತು. 32,000 ರಿಯಾಲ್ ಬಾಕಿ ಮೊತ್ತವು ತಿವಾರಿಗೆ ಲಭಿಸಲಿಕ್ಕಿದೆ ಎಂದು ಕೋರ್ಟು ತೀರ್ಮಾನಿಸಿತು. ಹದಿನೈದು ಆಡುಗಳು ಸತ್ತಿವೆ. ಅದರ ನಷ್ಟಪರಿಹಾರವನ್ನು ದಿನೇಶ್ ಕೊಡಬೇಕೆಂದು ಪ್ರಾಯೋಜಕ ವಾದಿಸಿದರೂ ಕೋರ್ಟು ಅಂಗೀಕರಿಸಲಿಲ್ಲ. ಹದಿನೈದು ದಿವಸದೊಳಗೆ ಪ್ರಾಯೋಜಕ ಕೋರ್ಟು ತೀರ್ಪನ್ನು ಜಾರಿಗೊಳಿಸಬೇಕೆಂದು ಸೂಚಸಿತು. ಇದಕ್ಕೆ ಅಡ್ಡಬಂದರೆ ಹೆಚ್ಚು ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಕೋರ್ಟು ಎಚ್ಚರಿಕೆಯನ್ನೂ ನೀಡಿದೆ.