ಲಕ್ನೊ,ಆ. 6: ಜಮ್ಮು ಕಾಶ್ಮೀರದಿಂದ 370ನೇ ವಿಧಿಯನ್ನು ತೆಗೆದು ಹಾಕಿದ ಕುರಿತು ಪ್ರತಿಕ್ರಿಯೆ ವ್ಯಕ್ತಪಡಿಸುತ್ತಾ ಸಮಾಜವಾದಿ ಪಾರ್ಟಿ ಅಧ್ಯಕ್ಷ ಅಖಿಲೇಶ್ ಯಾದವ್ ಪಾಕ್ ಆಕ್ರಮಿತ ಕಾಶ್ಮೀರ ಏನು ಮಾಡುತ್ತೀರಿ ಎಂದು ಪ್ರಶ್ನಿಸಿದ್ದಾರೆ. ಜ್ಞಾನೇಶ್ವರ ಮಿಶ್ರ ಜಯಂತಿಯ ಸಂದರ್ಭದಲ್ಲಿ ಶ್ರದ್ಧಾಂಜಲಿ ಅರ್ಪಿಸಿದ ಬಳಿಕ ಅವರು ಮಾತಾಡುತ್ತಿದ್ದರು.
ಯಾರನ್ನೂ ದಮನಿಸಬಾರದು. ಎಲ್ಲರೂ ನಮ್ಮ ಜನರೇ. ಎಲ್ಲರೊಂದಿಗೆ ಮಾತನಾಡೋಣ. ಸಮಸ್ಯೆ ಕಾಶ್ಮೀರದ್ದೇ ಅಲ್ಲ. ಮುಂದಿನ ಪ್ರಶ್ನೆ ಪಾಕ್ ಆಕ್ರಮಿತ ಕಾಶ್ಮೀರ ಏನಾದೀತು ಎಂಬುದಾಗಿದೆ ಎಂದು ಅಖಿಲೇಶ್ ಹೇಳಿದರು.
ದೇಶ ಪರಸ್ಪರ ವಿಮರ್ಶೆಗಳಿಂದ ಮುನ್ನಡೆಯುತ್ತದೆ. ಎಲ್ಲರ ಸಹಮತದಿಂದ ಯಾವುದೇ ಸಮಸ್ಯೆಗೆ ಪರಿಹಾರ ದೊರಕುತ್ತದೆ. ಕೆಲವು ನಾಯಕರನ್ನು ದಿಗ್ಬಂಧನದಲ್ಲಿರಿಸುವುದು ಮತ್ತು ಸಂಸ್ಥೆಗಳನ್ನು ತಮ್ಮ ಒತ್ತಡದಲ್ಲಿ ತರುವುದನ್ನು ಬಿಜೆಪಿ ಮಾಡುತ್ತಿದೆ ಎಂದು ಅಖಿಲೇಶ್ ಹೇಳಿದರು. ಕಾಶ್ಮೀರ ಕೇಂದ್ರ ಸರಕಾರ 370ನೆ ವಿಧಿ ರದ್ದು ಪಡಿಸಿದ್ದು ಮಾತ್ರವಲ್ಲದೆ ರಾಜ್ಯವನ್ನು ಎರಡಾಗಿ ವಿಭಜಿಸಿ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದೆ. ಜಮ್ಮು ಕಾಶ್ಮೀರದಲ್ಲಿ ಸರಕಾರ ಇದ್ದರೂ ಅದು ದಿಲ್ಲಿ ಸರಕಾರದಂತೆ ಆಗಲಿದೆ. ಅಲ್ಲಿ ರಾಜ್ಯದ ಮುಖ್ಯಸ್ಥ ರಾಜ್ಯಪಾಲ ಆಗಿರುತ್ತಾರೆ. ಪೊಲೀಸರು ಜಮ್ಮುಕಾಶ್ಮೀರದ ಮುಖ್ಯಮಂತ್ರಿಯ ಬದಲು ರಾಜ್ಯಪಾಲರಿಗೆ ವರದಿ ಸಲ್ಲಿಸಲಿದ್ದಾರೆ. ಅಂದರೆ ಕಾನೂನು ವ್ಯವಸ್ಥೆ ಕೇಂದ್ರ ಸರಕಾರದ ಪಾಲಾಗಲಿದೆ. ಈವರೆಗೂ ಪೊಲೀಸ್ ವ್ಯವಸ್ಥೆ ಜಮ್ಮು ಕಾಶ್ಮೀರದ ಬಳಿಯೇ ಇತ್ತು.












