ಬಿಸಿಸಿಐ ವತಿಯಿಂದ ಉದ್ಯಮಶೀಲ ತರಬೇತಿ ಕಾರ್ಯಾಗಾರ ಉದ್ಘಾಟನೆ

0
799

ಮಂಗಳೂರು, : ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಇದರ ವತಿಯಿಂದ ಆಯೋಜಿಸಲಾದ ಉದ್ಯಮಶೀಲ ತರಬೇತಿ ಕಾರ್ಯಾಗಾರವು ನಗರದ ಕಂಕನಾಡಿಯಲ್ಲಿನ ಟಿ. ಆರ್. ಎಫ್ ಹಾಲ್ ನಲ್ಲಿ, ಬಿ. ಸಿ. ಸಿ ಐ. ಇದರ ಅಧ್ಯಕ್ಷರಾದ ಎಸ್. ಎಂ. ರಶೀದ್ ಹಾಜಿಯವರ ಅಧ್ಯಕ್ಷತೆಯಲ್ಲಿ, ಕುವೈಟ್ ನಲ್ಲಿನ ಅನಿವಾಸಿ ಉದ್ಯಮಿ ಅಬ್ದುಲ್ ಹಮೀದ್ ಕುಲ್ಯಾರ್ ರವರು ಉದ್ಘಾಟಿಸಿದರು.

ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಯುವ ಅನಿವಾಸಿ ಉದ್ಯಮಿ ಜನಾಬ್ ಅಬ್ದುಲ್ ಹಮೀದ್ ಕುಲ್ಯಾರ್ ರವರು,

ಇಂದಿನ ಆಧುನಿಕ ಯುಗದಲ್ಲಿನ ಹೊಸ ಹೊಸ ಆವಿಷ್ಕಾರಗಳಿಗನುಗುಣವಾಗಿರುವ ಯೋಜನೆಗಳನ್ನು ಅರಿತು ಹೊಸ ಉಪಾಯಗಳು ಮತ್ತು ಆಲೋಚನೆಗಳೊಂದಿಗೆ ಸಾಧನೆಯ ಛಲದೊಂದಿಗೆ, ಯಾವುದಕ್ಕೂ ಧೃತಿಗೆಡದೆ ಉದ್ಯಮರಂಗದಲ್ಲಿ ಮುಂದಡಿಯಿಡಬೇಕು ಎಂಬುವುದನ್ನು ತಮ್ಮ ಅನುಭವಗಳ ಆಧಾರದೊಂದಿಗೆ ವಿವರಿಸಿ, ಉದ್ಯಮಿಗಳಾಗಲು ಆಕಾಂಕ್ಷಿಗಳಾಗಿರುವ ಯುವಕರಿಗೆ ಬಹಳ ಪ್ರೋತ್ಸಾಹನೀಯ ಸಲಹೆಗಳನ್ನು ನೀಡಿದರು.

ನಂತರ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬ್ಯಾರೀಸ್ ಚೇಂಬರ್ ಇದರ ಅಧ್ಯಕ್ಷರಾದ ಜನಾಬ್ ಎಸ್.ಎಂ. ರಶೀದ್ ಹಾಜಿಯವರು, ಉದ್ಯಮರಂಗದಲ್ಲಿ ತೊಡಗಿಸಿಕೊಳ್ಳುವವನು, ಮೊಟ್ಟಮೊದಲು ತಾನು ಆರಂಭಿಸುವ ಉದ್ಯಮದ ಬಗ್ಗೆ ಸಾಕಷ್ಟು ಅಧ್ಯಯನಶೀಲನಾಗಿರಬೇಕು ಎಂದರಲ್ಲದೆ, ಮುಂದೆ ಎದುರಾಗುವ ಯಾವುದೇ ಸವಾಲುಗಳನ್ನು ಹೇಗೆ ಸಕಾರಾತ್ಮಕವಾಗಿ ಸ್ವೀಕರಿಸಿಕೊಳ್ಳಬೇಕೆಂಬ ಬಗ್ಗೆ ಅತ್ಯಮೂಲ್ಯ ವಿಚಾರಗಳನ್ನು ಸಭಿಕರೊಂದಿಗೆ ಹಂಚಿಕೊಂಡರು. ನಾವು ಆಯೋಜಿಸಿದ ಇಂಥ ಕಾರ್ಯಾಗಾರಗಳನ್ನು ಜನರು ಹುಡುಕಿಕೊಂಡು ಹೋಗಿ, ದುಬಾರಿ ಹಣವನ್ನು ಪಾವತಿಸಿ ಕಲಿತುಕೊಳ್ಳುವವರನ್ನು ಸಮಾಜದಲ್ಲಿ ನಾವು ಕಾಣುತ್ತೇವೆ. ಆದರೆ ಇಲ್ಲಿ ನಾವು ಯಾರಿಂದಲೂ ಅಂತಹ ಹಣ ವಸೂಲಿ ಮಾಡದೆ, ನಮ್ಮ ಖರ್ಚಿನಿಂದಲೇ ನುರಿತ ಸಂಪನ್ಮೂಲ ವ್ಯಕ್ತಿಗಳಾಗಿರುವ ತರಬೇತುದಾರರಿಂದಲೇ ಉಚಿತವಾಗಿ ಸಮುದಾಯವು ಉದ್ದಿಮೆ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸುವ ನಿಟ್ಟಿನಲ್ಲಿ ನೀಡುತ್ತಿದ್ದೇವೆ. ಮಾತ್ರವಲ್ಲದೆ ಬಿ.ಸಿ.ಸಿ.ಐ ಹಮ್ಮಿಕೊಂಡಿರುವ ಇತರ ಯೋಜನೆಗಳನ್ನು ಕೂಡಾ ಅವರು ಇದರೊಂದಿಗೆ ವಿವರಿಸಿದರು.

ಬಿ.ಸಿ ಸಿ.ಐ. ಇದರ ಉಪಾಧ್ಯಕ್ಷರು ಮತ್ತು ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಇದರ ಸಂಸ್ಥಾಪಕರೂ ಆಗಿರುವ ಜನಾಬ್ ಅಬ್ದುಲ್ ರವೂಫ್ ಪುತ್ತಿಗೆಯವರು ಈ ಸಂಧರ್ಭದಲ್ಲಿ ಮಾತನಾಡಿ ಯುವ ಸಮೂಹಕ್ಕೆ ಕೆಲವು ಮಾರ್ಗದರ್ಶನ ಹಾಗೂ ಹಿತವಚನಗಳನ್ನು ನೀಡಿದರು.

ಉದ್ಘಾಟನಾ ಸಮಾರಂಭದ ನಂತರ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಅಬ್ರಹಾಂ ಜೇಮ್ಸ್ ರವರು ಉದ್ಯಮಿಶೀಲರಾಗ ಬಯಸಿದವರಿಗೆ, ಯಾವ ವ್ಯಾಪಾರವನ್ನು ಯಾವ ರೀತಿಯಲ್ಲಿ ಹೇಗೆ ಅಭಿವೃದ್ಧಿಪಡಿಸಬಹುದು ಎಂಬ ವಿಚಾರಗಳನ್ನು ಬಹಳ ವಸ್ತುನಿಷ್ಠವಾಗಿ, ಉಪನ್ಯಾಸ, ಬರಹ, ಚಿತ್ರ ಪ್ರದರ್ಶನ ಹೀಗೆ ಪ್ರಾಯೋಗಿಕವಾಗಿ, ವಿವಿಧ ಆಯಾಮಗಳಲ್ಲಿ ತಮ್ಮ ತರಬೇತಿಯನ್ನು ನೀಡಿದರು.

ಅಲ್ಲದೆ ವ್ಯಾಪಾರೋದ್ದಿಮೆಗೆ ಸಂಬಂಧಿಸಿದಂತೆ, ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳ ವತಿಯಿಂದ ಸಿಗಲಾಗುವ ವಿವಿಧ ಸೌಲಭ್ಯಗಳು ಮತ್ತು ಅದನ್ನು ಪಡೆಯುವ ವಿಧಾನಗಳು ಅಂತೆಯೇ ತೆರಿಗೆ ವಿನಾಯಿತಿಗಿರುವ ಮಾನದಂಡಗಳು ಮುಂತಾದ ಹಲವಾರು ಮಾಹಿತಿಗಳನ್ನು ನೀಡಿದರು.

ಆರಂಭದಲ್ಲಿ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದ ಟಿ.ಆರ್.ಎಫ್. ಸಲಹೆಗಾರರಾದ ರಫೀಕ್ ಮಾಸ್ಟರ್ ಕಾರ್ಯಕ್ರಮವನ್ನು ನಿರೂಪಿಸಿದರು. ಕೊನೆಯಲ್ಲಿ ಅಬ್ದುಲ್ ಖಾದರ್ ಕುಕ್ಕಾಜೆ ಧನ್ಯವಾದವಿತ್ತರು.