ರಾನ್ನಿ, ಆ. 7: ನಡು ರಸ್ತೆಗೆ ಎಳೆದು ಹಾಕಿ ಮಾಜಿ ಸೈನಿಕನನ್ನು ಕ್ರೂರವಾಗಿ ಥಳಿಸಿದ ಘಟನೆ ನಡೆದಿದ್ದು ಹೊಟೇಲ್ ಮಾಲಿಕ ಸಹಿತ ನಾಲ್ವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಸೋಮವಾರ ಎರಡು ಗಂಟೆಯ ಹೊತ್ತಿಗೆ ಮಾಜಿ ಸೈನಿಕ ಶಿವಕುಮಾರ್ ಎಂಬವರಿಗೆ ನಡು ರಸ್ತೆಯಲ್ಲಿ ಹಲ್ಲೆ ನಡೆಸಲಾಗಿತ್ತು. ಇದರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ್ದು ಗುಂಪು ಹತ್ಯೆ ಎನ್ನುವ ರೀತಿಯಲ್ಲಿ ಪ್ರಚಾರವಾಗಿತ್ತು. ನಂತರ ಶಿವಕುಮಾರ್ ರ ದೂರಿನಲ್ಲಿ ರಾನ್ನಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಶಿವಕುಮಾರ್ ಹೊಟೇಲ್ಗೆ ಬಂದು ಜಗಳ ಮಾಡಿದ್ದಾನೆ ಎಂದು ಹೊಟೇಲ್ ಮಾಲಕ ಪ್ರತಿ ದೂರು ಸಲ್ಲಿಸಿದ್ದಾನೆ. ಹೊಟೇಲ್ನಲ್ಲಿ ಗಿರಾಕಿಯೊಂದಿಗೆ ಮಾತಿನ ಚಕಮಕಿ ನಡೆಸಿದ ಈತ ನಂತರ ಹೊರಗೆ ಗಿರಾಕಿಗೆ ಥಳಿಸಿದ್ದ. ಇದೇ ವೇಳೆ ಹೊಟೇಲ್ ನೌಕರ ತನಗೂ ಶಿವಕುಮಾರ್ ಹೊಡೆದಿದ್ದಾನೆ ಎಂದು ಜಗಳ ತೆಗೆದಿದ್ದಾನೆ. ಇದನ್ನು ಪ್ರಶ್ನಿಸಿದ ಹೊಟೇಲ್ ಮಾಲಕ ಪ್ರಕಾಶ್ರ ವಿರುದ್ಧವೂ ಶಿವಕುಮಾರ್ ಕೈಎತ್ತಿದ್ದಾನೆ ಎನ್ನಲಾಗಿದೆ. ನಂತರ ಶಿವಕುಮಾರ್ ರನ್ನು ಹೊಟೇಲು ಮಾಲಕ ಪ್ರಕಾಶ್ (50), ನೌಕರರಾದ ಶೈಲೇಂದ್ರನ್ (54), ಅನೀಶ್ (35), ಮಣಿ (28) ಸೇರಿ ಥಳಿಸಿದ್ದರು. ಹೊಟೇಲ್ ಮಾಲಕ ತನ್ನ ಪ್ರತಿ ದೂರಿನಲ್ಲಿ ತನ್ನ ಪತ್ನಿಗೂ ವಾಚಾಮಗೋಚರವಾಗಿ ಶಿವಕುಮಾರ್ ಅಶ್ಲೀಲವಾಗಿ ಬೈದಿದ್ದಾನೆ ಎಂದು ತಿಳಿಸಿದ್ದು ಪ್ರತ್ಯಕ್ಷದರ್ಶಿಗಳು ಶಿವಕುಮಾರನೇ ಜಗಳ ಆರಂಭಿಸಿದ್ದ ಎಂದು ವಿವರ ನೀಡಿದ್ದಾರೆ. ಗಾಯಾಳು ಮಾಜಿ ಸೈನಿಕ ಶಿವಕುಮಾರ್ ರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.












