ಸನ್ಮಾರ್ಗ ವಾರ್ತೆ:
ಬೆಂಗಳೂರು: ಆ. 10 :ದೇಶದ ಬಹುತೇಕ ರಾಜ್ಯಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿರುವುದರಿಂದ ಒಂದು ಕಡೆ ಮಳೆ ಬಂದ ನೆಮ್ಮದಿಯಾದರೆ, ಇನ್ನೊಂದೆಡೆ, ಪ್ರವಾಹದ ಭೀತಿಯಿಂದ ನಲುಗುವಂತಾಗಿದೆ. ತಮಿಳುನಾಡು, ಒಡಿಶಾ, ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ.
ಕೇರಳದಲ್ಲಿ ಮಳೆ
ಪಕ್ಕದ ರಾಜ್ಯವಾದ ಕೇರಳದ ಮಲಪ್ಪುರಂ ನ ನೀಲಾಂಬುರ್ ನ ಕವಲಪ್ಪಾರ ಮುತ್ತಪ್ಪನ್ ಬೆಟ್ಟದಲ್ಲಿ ಭಾರೀ ಭೂಕುಸಿತ ಉಂಟಾಗಿದ್ದು, 18 ಮನೆಗಳು ಸಂಪೂರ್ಣ ಮಣ್ಣಿನಡಿಯಲ್ಲಿ ಹೂತುಹೋಗಿದೆ. ಈ ಬಾರಿಯ ಮಳೆಯಲ್ಲಿ ಉಂಟಾದ ಅತಿ ಭೀಕರ ದುರಂತವಾಗುವ ಎಲ್ಲ ಸಾಧ್ಯತೆಗಳೂ ಇದ್ದು, ಸುಮಾರು 46 ಮಂದಿ ಈ ಮನೆಗಳಲ್ಲಿ ಇದ್ದರು ಎನ್ನಲಾಗುತ್ತಿದ್ದು, ಮೂರು ಮೃತದೇಹಗಳು ಪತ್ತೆಯಾಗಿವೆ ಎಂದು ಈಗಿನ ವರದಿಗಳು ತಿಳಿಸಿವೆ. 300ಕ್ಕೂ ಅಧಿಕ ಮಂದಿಯನ್ನು ಸುತ್ತಮುತ್ತಲಿನ ಪ್ರದೇಶದಿಂದ ಸ್ಥಳಾಂತರಿಸಲಾಗಿದೆ.
ಕೇರಳ ಪ್ರವಾಹಕ್ಕೆ ಈವರೆಗೆ 31 ಮಂದಿ ಸಾವಿಗೀಡಾಗಿದ್ದು, 738 ಶಿಬಿರಗಳಲ್ಲಿ 64,013 ಮಂದಿ ಆಶ್ರ ಪಡೆದಿದ್ದಾರೆ. ಎರ್ನಾಕುಳಂ, ಇಡುಕ್ಕಿ, ತ್ರಿಶ್ಶೂರ್, ಪಾಲ ಕ್ಕಾಡ್, ಮಲಪ್ಪುರಂ, ಕಲ್ಲಿಕೋಟೆ, ವಯನಾಡ್, ಕಣ್ಣೂರು, ಕಾಸರಗೋಡು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಇದರಲ್ಲೂ ವಯನಾಡಿನ ಸುಮಾರು 100 ಎಕರೆ ಪ್ರದೇಶದ ಉದ್ದಕ್ಕೂ ಚಾಚಿಕೊಂಡಿರುವ ಪುದುಮಲೈ ಗ್ರಾಮದ ಚಹಾ ಎಸ್ಟೇಟ್ ನೀರಿನಿಂದ ಸಂಪೂರ್ಣ ಆವೃತ್ತವಾದದ್ದು ಮಳೆಯ ಭೀಕರತೆಗೆ ಸಾಕ್ಷಿ.
ರಾಜ್ಯದಲ್ಲಿ ಮಳೆ
ಕರ್ನಾಟಕವೂ ಪ್ರವಿವಾಹ ಭೀತಿಯಿಂದ ತತ್ತರಿಸಿದ್ದು, ರಾಜ್ಯದ ಉದ್ದಗಲದಿಂದ ಪ್ರವಾಹದ ವರದಿಗಳು ಬರುತ್ತಿವೆ. ಕೊಡಗಿನಲ್ಲಿ ಸತತ ನಾಲ್ಕನೇ ದಿನವೂ ಮಳೆ ನಿರಂತರ ಸುರಿಯುತ್ತಿರುವ ಕಾರಣ ಕೋರಂಗಾಲ ಮತ್ತು ತೋರ ಎಂಬಲ್ಲಿ ಭೂಕುಸಿತ ಸಂಭವಿಸಿದ್ದು, ಏಳು ಮಂದಿ ಮೃತಪಟ್ಟಿರುವ ವರದಿಗಳು ಬಂದಿವೆ. ಬೆಳಗಾವಿಯೊಂದರಲ್ಲೇ 1.45 ಲಕ್ಷ ಮಂದಿ ಅನಿಶ್ಚಿತತೆಗೆ ಸಿಲುಕಿದ್ದು, ರಾಜ್ಯಾದ್ಯಂತ ಸುಮಾರು 2.20 ಲಕ್ಷಕ್ಕೂ ಹೆಚ್ಚು ಮಂದಿ ಮನೆ, ಮಠ ತೊರೆದಿದ್ದು, ನಿರಾತ್ರಿತರ ಕೇಂದ್ರ, ಸಂಬಂಧಿಕರ ಮನೆ ಸೇರಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಒಟ್ಟಾರೆ ಕಳೆದ ನಾಲ್ಕು ದಿನಗಳಲ್ಲಿ 31 ಮಂದಿ ರಾಜ್ಯದಲ್ಲಿ ಮೃತಪಟ್ಟಿದ್ದಾರೆ. ಇದೇ ವೇಳೆ, ಉತ್ತರ ಕರ್ನಾಟಕದಲ್ಲಿ ಬೆಳಗಾವಿ, ಬಾಗಲಕೋಟೆ, ವಿಜಯಪುರ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಮತ್ತೆ 40ಕ್ಕೂ ಹೆಚ್ಚು ಹಳ್ಳಿಗಳಿಗೆ ಪ್ರವಾಹದ ನೀರು ನುಗ್ಗಿದೆ.

ರಸ್ತೆ ಮಾರ್ಗಗಳಿಗೆ ತಡೆ
ಪ್ರವಾಹದಿಂದ ಈಗಾಗಲೇ ರಾಜ್ಯಾದ್ಯಂತ 170 ರಸ್ತೆಗಳು ಸಂಪರ್ಕ ಕಡಿತಗೊಂಡಿದೆ. ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಕಲೇಶಪುರ ಬಳಿ ಗುಡ್ಡಕುಸಿದು ಸಂಪರ್ಕ ಕಡಿತಗೊಂಡಿದ್ದರೆ, ಶಿರಾಡಿ, ಚಾರ್ಮಾಡಿ ಘಾಟ್ನಲ್ಲಿ ವಾಹನ ಸಂಚಾರ ಸ್ಥಗಿತ, ಬೆಂಗಳೂರು-ಮಂಗಳೂರು ನಡುವೆ ಸಂಚಾರ ಅಸ್ತವ್ಯಸ್ತಗೊಂಡಿದೆ. ಇನ್ನು ಕೊಡಗು ಮತ್ತು ಮಂಗಳೂರನ್ನು ಸಂಪರ್ಕಿಸುವ ಸಂಪಾಜೆ ಘಾಟ್ನಲ್ಲೂ ಅಲ್ಲಲ್ಲಿ ಗುಡ್ಡಕುಸಿತದ ವರದಿಯಿದ್ದು, ಭಾರೀ ವಾಹನಗಳ ಸಂಚಾರವನ್ನು ನಿಷೇಧ ವಿಧಿಸಲಾಗಿದೆ ಎಂದು ವರದಿ ಬಂದಿದೆ.
ಬೆಳತ್ತಂಗಡಿ ತಾಲೂಕಿನ ನೇತ್ರಾವತಿ, ಕಪಿಲ, ಮೃತ್ಯುಂಜಯ, ಸೋಮಾವತಿ ನದಿಗಳು, ನೆರಿಯ ಮತ್ತು ಅಣಿಯೂರು ಹೊಳೆಯಲ್ಲಿ ಪ್ರವಾಹದ ನೀರು ಉಕ್ಕಿಹರಿದಿದೆ. ಲಾೖಲ, ನಾವೂರು, ಇಂದಬೆಟ್ಟು, ಮಿತ್ತಬಾಗಿಲು, ಮಲವಂತಿಗೆ, ಕಡಿರುದ್ಯಾವರ, ಮುಂಡಾಜೆ, ಕಲ್ಮಂಜ, ಚಾರ್ಮಾಡಿ, ಪುದುವೆಟ್ಟು, ಧರ್ಮಸ್ಥಳ, ಶಿಶಿಲ, ಕೊಕ್ಕಡ, ನಿಡ್ಲೆ, ಬೆಳಾಲು ಗ್ರಾಮಗಳಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ ಎಂದು ವರದಿಯಾಗಿದೆ.
ಚಾರ್ಮಾಡಿ ಪ್ರದೇಶದಲ್ಲಿ 35ಕ್ಕೂ ಅಧಿಕ ಮನೆಗಳು ಜಲಾವೃತವಾಗಿದ್ದು, ನಾವೂರು, ಕಾಜೂರು-ಕೊಲ್ಲಿ ಪ್ರದೇಶಗಳಲ್ಲಿ, ಪುದುವೆಟ್ಟು ಗ್ರಾಮದ ಬೊಲ್ಮನಾರು ಪೆಲತ್ತೇರಿ, ಕೇರ್ಯ ಪ್ರದೇಶದಲ್ಲಿ 15ಕ್ಕೂ ಅಧಿಕ ಮನೆಗಳು ಸಂಕಷ್ಟಕ್ಕೆ ಸಿಲುಕಿವೆ ಎಂದು ವರದಿಯಾಗಿದೆ. ಹಾಗೆಯೇ, ಪಜಿರಡ್ಕ ಪ್ರದೇಶದಲ್ಲಿ ಕುಟುಂಬವೊಂದು ನೆರೆ ನೀರಿಗೆ ಸಿಲುಕಿ ಮನೆಯ ಮಹಡಿಯ ಮೇಲೆ ಬಂದು ರಕ್ಷಣೆಗಾಗಿ ಬೊಬ್ಬೆ ಹಾಕುತ್ತಿದ್ದ ವರದಿಗಳಿವೆ.
ಸೇತುವೆ ಕೊಚ್ಚಿಕೊಂಡು ಹೋಯಿತು
ಸೋಮಂತ್ತಡ್ಕದಿಂದ ದಿಡುಪೆಗೆ ಸಂಪರ್ಕ ಕಲ್ಪಿಸುವ ಕುಕ್ಕಾವು ಸೇತುವೆ ಪ್ರವಾಹದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ನೆರಿಯ ಗ್ರಾಮದ ಬಂಜಾರಿನಲ್ಲಿ ಹಳೆಯ ಸೇತುವೆ ಕೊಚ್ಚಿ ಹೋಗಿದೆ. ನೇತ್ರಾವರು ನದಿಯು ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ಬಂಟವಾಳದ ಹಲವಾರು ಪ್ರದೇಶಗಳೂ ಸೇರಿದಂತೆ ನದಿಪಾತ್ರ ಪರದೇಶಗಳ ಮನೆಗಳಲ್ಲಿ ಭಯ ಆವರಿಸಿದೆ. ಬಂಟವಾಳ ಮತ್ತು ಬೆಳತಂಗಡಿ ನಡುವೆ ರಸ್ತೆ ಸಂಚಾರ ರದ್ದುಗೊಳಿಸಿರುವ ವರದಿಗಳು ಬಂದಿವೆ. ಹಾಗೆಯೇ ಉಪ್ಪಿನಂಗಡಿಯಿಂದ ಮಾಣಿ ಪುತ್ತೂರು ರಸ್ತೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿರುವ ಸೂಚನೆ ಸಿಕ್ಕಿದೆ.
ಉಳ್ಳಾಲ
ಉಳ್ಳಾಲದ ಬಹುತೇಕ ಪ್ರದೇಶಗಳು ಜಲಾವೃತಗೊಂಡಿರುವ ವರದಿಗಳು ಬಂದಿದ್ದು, ಉಳ್ಳಾಲದ ಅಳೇಕಲ, ಹಳೆಕೋಟೆ, ಉಳಿಯ, ಮಿಲ್ಲತ್ ನಗರ, ಬಸ್ತಿಪಡ್ಪು ಮತ್ತಿತರ ಪ್ರದೇಶಗಳು ಜಲಾವೃತಗೊಂಡಿವೆ. ಹಲವು ಮನೆ,ಅಂಗಡಿ ಮುಂಗಟ್ಟುಗಳ ಅಂಗಳ ಮತ್ತು ಒಳಗೆ ನೆರೆ ನೀರು ನುಗ್ಗಿವೆ ಎಂದು ಮೂಲಗಳು ತಿಳಿಸಿವೆ. ಕಲ್ಲಾಪು, ಪಟ್ಲದಲ್ಲೂ ಮನೆಗಳಿಗೆ ನೆರೆ ನೀರು ನುಗ್ಗಿದೆ. ಈ ಪ್ರದೇಶದ ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ಜೆಪ್ಪಿನಮೊಗೆರು ಸಂಪೂರ್ಣ ಜಲಾವೃತವಾಗಿದೆ.












