✍️ ಮರಿಯಮ್ ಶಹೀರಾ
ಫ್ಯಾಮಿಲಿ ಕೌನ್ಸಿಲರ್
ಕುಟುಂಬವು ಇಸ್ಲಾಮಿನ ಸಾಮಾಜಿಕ ವ್ಯವಸ್ಥೆಯ ಮೂಲ ಘಟಕವಾಗಿದೆ. ಒಂದು ಉತ್ತಮ ಸಮಾಜದ ನಿರ್ಮಾಣವು ಉತ್ತಮ ಕುಟುಂಬದಿಂದ ಆರಂಭವಾಗುತ್ತದೆ. ಪ್ರವಾದಿ ಮುಹಮ್ಮದ್(ಸ) ಅವರ ಚರ್ಯೆಯಲ್ಲಿ ಕುಟುಂಬ ಜೀವನಕ್ಕೆ ಸಂಬಂಧಿಸಿದಂತೆ ಪ್ರೀತಿ, ಕರುಣೆ, ನ್ಯಾಯ, ಪರಸ್ಪರ ಗೌರವ, ಜವಾಬ್ದಾರಿ ಮತ್ತು ಹಕ್ಕುಗಳ ಕುರಿತು ಅತ್ಯಂತ ಸುಂದರವಾದ ಮಾರ್ಗದರ್ಶನವನ್ನು ಕಾಣಬಹುದು.
ಇಸ್ಲಾಮ್ ಕುಟುಂಬವನ್ನು ಕೇವಲ ರಕ್ತ ಸಂಬಂಧಗಳ ಸಮೂಹವಾಗಿ ನೋಡುವುದಿಲ್ಲ. ಅದು ಅಮಾನತ್, ಜವಾಬ್ದಾರಿ, ಹಕ್ಕು ಮತ್ತು ಕರುಣೆಯ ಸಂಬಂಧ ಎಂದು ಪರಿಗಣಿಸುತ್ತದೆ.
ದಾಂಪತ್ಯದಲ್ಲಿ ಸಮಾನತೆ ಮತ್ತು ಪರಸ್ಪರ ಗೌರವ
ಕುರ್ಆನ್ ದಾಂಪತ್ಯ ಸಂಬಂಧವನ್ನು ಅಧಿಕಾರದ ಸಂಬಂಧವಾಗಿ ಮಾತ್ರವಲ್ಲ, ಸ್ನೇಹ, ಪ್ರೀತಿ ಮತ್ತು ಕರುಣೆಯ ಸಂಬಂಧವಾಗಿ ವಿವರಿಸುತ್ತದೆ. “ನಿಮ್ಮ ನಡುವೆ ಪ್ರೀತಿ ಮತ್ತು ಕರುಣೆಯನ್ನು ಉಂಟುಮಾಡಿದನು.” (30:21) ಗಂಡ ಮತ್ತು ಹೆಂಡತಿ ಪರಸ್ಪರರ ಉಡುಪುಗಳಂತೆ ಎಂದು ಕುರ್ಆನ್ ಹೇಳುತ್ತದೆ: “ಅವರು ನಿಮಗೆ ಉಡುಪು, ನೀವು ಅವರಿಗೆ ಉಡುಪು.” (2:187) ಉಡುಪು ಹೇಗೆ ಮನುಷ್ಯನನ್ನು ರಕ್ಷಿಸುತ್ತದೆ, ಮುಚ್ಚುತ್ತದೆ ಮತ್ತು ಆರಾಮ ನೀಡುತ್ತದೆ ಎಂಬಂತೆ, ಪತಿ-ಪತ್ನಿಯರು ಪರಸ್ಪರರಿಗೆ ರಕ್ಷಣೆ, ಗೌರವ ಮತ್ತು ನೆಮ್ಮದಿಯ ಮೂಲವಾಗಬೇಕು.
ಪ್ರವಾದಿ(ಸ) ಹೇಳಿದರು: “ನಿಮ್ಮಲ್ಲಿ ಅತ್ಯುತ್ತಮರು ತಮ್ಮ ಕುಟುಂಬದವರಿಗೆ ಅತ್ಯುತ್ತಮರಾಗಿರುವವರು” (ತಿರ್ಮಿದಿ) ಇದು ಪುರುಷನ ಶ್ರೇಷ್ಠತೆಯನ್ನು ಅಧಿಕಾರ ಪ್ರದರ್ಶನದಲ್ಲಿ ಅಲ್ಲ, ಕುಟುಂಬದ ಮೇಲಿನ ಉತ್ತಮ ವರ್ತನೆ ಮತ್ತು ಜವಾಬ್ದಾರಿಯಲ್ಲಿ ಅಳೆಯುತ್ತದೆ.
ಪುರುಷರ ಜವಾಬ್ದಾರಿ
ಇಸ್ಲಾಮ್ ಪುರುಷನಿಗೆ ಕುಟುಂಬದಲ್ಲಿ ಕೆಲವು ಹೆಚ್ಚುವರಿ ಜವಾಬ್ದಾರಿಗಳನ್ನು ನೀಡಿದೆ. ಕುಟುಂಬದ ಆರ್ಥಿಕ ನಿರ್ವಹಣೆ, ರಕ್ಷಣೆ ಮತ್ತು ಅಗತ್ಯಗಳನ್ನು ಪೂರೈಸುವುದು ಆತನ ಪ್ರಮುಖ ಕರ್ತವ್ಯಗಳಾಗಿದೆ.
ಕುರ್ಆನ್ ಹೇಳುತ್ತದೆ: “ಪುರುಷರು ಮಹಿಳೆಯರ ಮೇಲೆ ಜವಾಬ್ದಾರರು; ಏಕೆಂದರೆ ಅಲ್ಲಾಹ್ ಕೆಲವರಿಗೆ ಕೆಲವರಿಗಿಂತ ಕೆಲವು ಜವಾಬ್ದಾರಿಗಳನ್ನು ನೀಡಿದ್ದಾನೆ ಮತ್ತು ಅವರು ತಮ್ಮ ಸಂಪತ್ತಿನಿಂದ ಖರ್ಚು ಮಾಡುತ್ತಾರೆ”. (4:34) ಇಲ್ಲಿ “ಜವಾಬ್ದಾರಿ” ಎಂಬುದು ದೌರ್ಜನ್ಯ ಅಥವಾ ಸರ್ವಾಧಿಕಾರಕ್ಕೆ ಪರವಾನಗಿ ಅಲ್ಲ. ಅದು ಪೋಷಣೆ, ರಕ್ಷಣೆ, ನ್ಯಾಯ ಮತ್ತು ಹೊಣೆಗಾರಿಕೆಯನ್ನು ಸೂಚಿಸುತ್ತದೆ.
ಪ್ರವಾದಿ(ಸ) ಹೇಳಿದರು: “ನಿಮ್ಮಲ್ಲಿ ಪ್ರತಿಯೊಬ್ಬರೂ ಜವಾಬ್ದಾರರು ಮತ್ತು ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯ ಬಗ್ಗೆ ಪ್ರಶ್ನಿಸಲ್ಪಡುವರು.” (ಬುಖಾರಿ, ಮುಸ್ಲಿಮ್) ಆದ್ದರಿಂದ ಕುಟುಂಬದ ನಾಯಕತ್ವವು ಅಧಿಕಾರಕ್ಕಿಂತ ಮೊದಲು ಅಮಾನತ್ ಆಗಿದೆ.
ಮಹಿಳೆಯರ ಆಸ್ತಿ ಹಕ್ಕು
ಇಸ್ಲಾಮಿನ ಆಗಮನಕ್ಕೂ ಮೊದಲು ಅನೇಕ ಸಮಾಜಗಳಲ್ಲಿ ಮಹಿಳೆಯರಿಗೆ ಸ್ವತಂತ್ರ ಆಸ್ತಿ ಹಕ್ಕು ಇರಲಿಲ್ಲ. ಕುರ್ಆನ್ ಮಹಿಳೆಗೆ ಸ್ವತಂತ್ರ ಆಸ್ತಿ ಮತ್ತು ವಾರಸುದಾರಿಕೆಯ ಹಕ್ಕನ್ನು ನೀಡಿತು. “ಪುರುಷರಿಗೆ ಅವರು ಗಳಿಸಿದುದರಲ್ಲಿ ಪಾಲಿದೆ ಮತ್ತು ಮಹಿಳೆಯರಿಗೆ ಅವರು ಗಳಿಸಿದುದರಲ್ಲಿ ಪಾಲಿದೆ.” (4:32)
ಹಾಗೆಯೇ ವಾರಸುದಾರಿಕೆಯಲ್ಲಿ ಮಹಿಳೆಯರ ಪಾಲನ್ನು ಸ್ಪಷ್ಟವಾಗಿ ನಿರ್ಧರಿಸಲಾಗಿದೆ: “ಪೋಷಕರು ಮತ್ತು ಸಮೀಪದ ಸಂಬಂಧಿಕರು ಬಿಟ್ಟುಹೋದ ಆಸ್ತಿಯಲ್ಲಿ ಪುರುಷರಿಗೆ ಪಾಲಿದೆ; ಮಹಿಳೆಯರಿಗೂ ಪಾಲಿದೆ.” (4:3)
ಮಹಿಳೆಯ ಸ್ವಂತ ಸಂಪತ್ತು ಅವಳದೇ. ಮದುವೆಯಾದ ನಂತರವೂ ಅವಳ ಆಸ್ತಿಯ ಮೇಲೆ ಪತಿಗೆ ಸ್ವಯಂ ಹಕ್ಕು ದೊರೆಯುವುದಿಲ್ಲ.
ಮದುವೆಯಲ್ಲಿ ಹೆಣ್ಣಿನ ಒಪ್ಪಿಗೆ
ಇಸ್ಲಾಮ್ನಲ್ಲಿ ವಿವಾಹವು ಬಲವಂತದ ಒಪ್ಪಂದವಲ್ಲ. ಮಹಿಳೆಯ ಒಪ್ಪಿಗೆಯು ಮಹತ್ವದ್ದಾಗಿದೆ. ಪ್ರವಾದಿ(ಸ) ಹೇಳಿದರು: “ವಿಧವೆಯು ತನ್ನ ಬಗ್ಗೆ ಹೆಚ್ಚು ಹಕ್ಕುಳ್ಳವಳು; ಕನ್ಯೆಯ ಅನುಮತಿಯನ್ನು ಪಡೆಯಬೇಕು.” (ಬುಖಾರಿ, ಮುಸ್ಲಿಮ್)
ಒಬ್ಬ ಮಹಿಳೆ ತನ್ನ ಇಚ್ಛೆಗೆ ವಿರುದ್ಧವಾಗಿ ಮದುವೆ ಮಾಡಿಕೊಡುವ ಘಟನೆಯಲ್ಲಿಯೂ, ಪ್ರವಾದಿ(ಸ) ಅವಳಿಗೆ ತನ್ನ ಆಯ್ಕೆಯ ಹಕ್ಕನ್ನು ನೀಡಿದರು. ಇದು ವಿವಾಹದಲ್ಲಿ ಮಹಿಳೆಯ ಇಚ್ಛೆ ಮತ್ತು ಸಮ್ಮತಿಯ ಮಹತ್ವವನ್ನು ತೋರಿಸುತ್ತದೆ.
ಮಹಿಳೆಯರ ಸಾಮಾಜಿಕ ಹಕ್ಕುಗಳು
ಪ್ರವಾದಿ(ಸ) ಅವರ ಕಾಲದಲ್ಲಿ ಮಹಿಳೆಯರು ಕೇವಲ ಮನೆಯೊಳಗೆ ಸೀಮಿತವಾಗಿರಲಿಲ್ಲ. ಅವರು ಜ್ಞಾನವನ್ನು ಕಲಿತರು, ಪ್ರಶ್ನಿಸಿದರು, ಸಾಮಾಜಿಕ ವಿಷಯಗಳಲ್ಲಿ ಭಾಗವಹಿಸಿದರು, ದಾನ ಮಾಡಿದರು ಮತ್ತು ಅಗತ್ಯವಿದ್ದಾಗ ಸಮಾಜ ಸೇವೆಯಲ್ಲೂ ಪಾಲ್ಗೊಂಡರು.
ಸಹಾಬಿ ಮಹಿಳೆಯರು ಪ್ರವಾದಿ(ಸ) ಅವರ ಬಳಿಗೆ ನೇರವಾಗಿ ಪ್ರಶ್ನೆಗಳನ್ನು ಕೇಳುತ್ತಿದ್ದರು. ಜ್ಞಾನವನ್ನು ಪಡೆಯಲು ಮಹಿಳೆಯರಿಗಾಗಿ ಪ್ರತ್ಯೇಕ ಸಮಯವನ್ನು ನೀಡುವಂತೆ ಕೇಳಿದಾಗ, ಪ್ರವಾದಿ(ಸ) ಅವರಿಗೆ ವಿಶೇಷವಾಗಿ ಬೋಧನೆ ಮಾಡಲು ಸಮಯ ನಿಗದಿಪಡಿಸಿದರು.ಇದು ಮಹಿಳೆಯ ಜ್ಞಾನಾರ್ಜನೆ ಮತ್ತು ಸಾಮಾಜಿಕ ಭಾಗವಹಿಸುವಿಕೆಯ ಹಕ್ಕಿಗೆ ಮಹತ್ವ ನೀಡಿದುದನ್ನು ತೋರಿಸುತ್ತದೆ.
ವೃದ್ಧರ ಆರೈಕೆ
ಇಸ್ಲಾಮ್ನಲ್ಲಿ ವೃದ್ಧ ಪೋಷಕರ ಆರೈಕೆಗೆ ಅತ್ಯಂತ ಉನ್ನತ ಸ್ಥಾನವಿದೆ. ಕುರ್ಆನ್ ಹೇಳುತ್ತದೆ: “ಅವರಿಗೆ ‘ಉಫ್’ ಎಂದೂ ಹೇಳಬೇಡಿ; ಅವರನ್ನು ಗದರಿಸಬೇಡಿ; ಅವರೊಂದಿಗೆ ಗೌರವಯುತ ಮಾತುಗಳನ್ನು ಆಡಿರಿ.” (17:23)
“ನನ್ನ ಪ್ರಭುವೇ! ಅವರು ನನ್ನನ್ನು ಬಾಲ್ಯದಲ್ಲಿ ಪೋಷಿಸಿದಂತೆ, ನೀನು ಅವರ ಮೇಲೆ ಕರುಣೆ ತೋರು.” (17:24) ವೃದ್ಧಾಪ್ಯದಲ್ಲಿ ಪೋಷಕರು ಮಕ್ಕಳ ಮೇಲೆ ಅವಲಂಬಿತರಾದಾಗ ಅವರನ್ನು ಹೊರೆ ಎಂದು ನೋಡುವುದಲ್ಲ; ಅವರ ಸೇವೆಯನ್ನು ಇಬಾದತ್ ಮತ್ತು ಪ್ರತಿಫಲದ ಅವಕಾಶವೆಂದು ನೋಡುವುದು ಇಸ್ಲಾಮಿನ ಮಾರ್ಗದರ್ಶನವಾಗಿದೆ.
ಅಂತರ-ಪೀಳಿಗೆಯ ಸಂಬಂಧಗಳು
ಇಸ್ಲಾಮಿನ ಕುಟುಂಬ ವ್ಯವಸ್ಥೆಯಲ್ಲಿ ಮಕ್ಕಳು, ಪೋಷಕರು, ಅಜ್ಜ-ಅಜ್ಜಿ ಮತ್ತು ಇತರ ಸಂಬಂಧಿಕರ ನಡುವೆ ಸಂಬಂಧವನ್ನು ಕಾಪಾಡುವುದು ಬಹಳ ಮುಖ್ಯ. ಪ್ರವಾದಿ(ಸ) ಹೇಳಿದರು: “ನಮ್ಮ ಹಿರಿಯರನ್ನು ಗೌರವಿಸದವನು ಮತ್ತು ನಮ್ಮ ಕಿರಿಯರ ಮೇಲೆ ಕರುಣೆ ತೋರದವನು ನಮ್ಮವರಲ್ಲ”. ಇದು ಕುಟುಂಬದಲ್ಲಿ ಎರಡು ದಿಕ್ಕಿನ ಜವಾಬ್ದಾರಿಯನ್ನು ಕಲಿಸುತ್ತದೆ: ಹಿರಿಯರಿಗೆ ಗೌರವ — ಕಿರಿಯರಿಗೆ ಕರುಣೆ. ಹೀಗಾಗಿ ಒಂದು ಆರೋಗ್ಯಕರ ಇಸ್ಲಾಮಿ ಕುಟುಂಬದಲ್ಲಿ ಪೀಳಿಗೆಗಳ ನಡುವೆ ಜ್ಞಾನ, ಅನುಭವ, ಪ್ರೀತಿ ಮತ್ತು ಮೌಲ್ಯಗಳ ವರ್ಗಾವಣೆ ನಡೆಯಬೇಕು.
ಮಕ್ಕಳ ಹಕ್ಕುಗಳು
ಇಸ್ಲಾಮ್ ಮಕ್ಕಳಿಗೆ ಜನನಕ್ಕೂ ಮುನ್ನವೇ ಕೆಲವು ಹಕ್ಕುಗಳನ್ನು ಗುರುತಿಸಿದೆ. ಜನನದ ನಂತರ ಅವರಿಗೆ ಉತ್ತಮ ಹೆಸರು, ಪ್ರೀತಿ, ಪೋಷಣೆ, ಶಿಕ್ಷಣ ಮತ್ತು ಉತ್ತಮ ಸಂಸ್ಕಾರ ನೀಡುವುದು ಪೋಷಕರ ಜವಾಬ್ದಾರಿಯಾಗಿದೆ. ಪ್ರವಾದಿ(ಸ) ಮಕ್ಕಳೊಂದಿಗೆ ಅತ್ಯಂತ ಪ್ರೀತಿಯಿಂದ ವರ್ತಿಸುತ್ತಿದ್ದರು. ಮಕ್ಕಳನ್ನು ಮುದ್ದಾಡುತ್ತಿದ್ದರು, ಅವರೊಂದಿಗೆ ಮಾತನಾಡುತ್ತಿದ್ದರು ಮತ್ತು ಅವರ ಭಾವನೆಗಳನ್ನು ಗೌರವಿಸುತ್ತಿದ್ದರು. ಒಮ್ಮೆ ಪ್ರವಾದಿ(ಸ) ತಮ್ಮ ಮೊಮ್ಮಗನನ್ನು ಮುದ್ದಾಡುತ್ತಿರುವುದನ್ನು ಕಂಡ ವ್ಯಕ್ತಿಯೊಬ್ಬನು, “ನನಗೆ ಹತ್ತು ಮಕ್ಕಳಿದ್ದಾರೆ; ನಾನು ಅವರಲ್ಲಿ ಯಾರನ್ನೂ ಮುದ್ದಾಡಿಲ್ಲ” ಎಂದನು. ಆಗ ಪ್ರವಾದಿ ﷺ ಹೇಳಿದರು: “ಕರುಣೆ ತೋರದವನಿಗೆ ಕರುಣೆ ತೋರಲಾಗುವುದಿಲ್ಲ”. (ಬುಖಾರಿ, ಮುಸ್ಲಿಮ್) ಇದು ಮಕ್ಕಳ ಮಾನಸಿಕ ಬೆಳವಣಿಗೆಯಲ್ಲಿ ಪ್ರೀತಿ ಮತ್ತು ಭದ್ರತೆಯ ಮಹತ್ವವನ್ನು ಸ್ಪಷ್ಟಪಡಿಸುತ್ತದೆ.
ಮಕ್ಕಳ ಮಾನಸಿಕ ವಿಕಾಸ ಮತ್ತು ವ್ಯಕ್ತಿತ್ವ
ಮಕ್ಕಳನ್ನು ಕೇವಲ ವಿಧೇಯರಾಗುವಂತೆ ಬೆಳೆಸುವುದಲ್ಲ; ಅವರ ಆತ್ಮವಿಶ್ವಾಸ, ವಿಚಾರಶಕ್ತಿ ಮತ್ತು ಉತ್ತಮ ವ್ಯಕ್ತಿತ್ವವನ್ನು ಬೆಳೆಸುವುದು ಅಗತ್ಯ. ಪ್ರವಾದಿ ಲುಕ್ಮಾನ್(ಅ) ತಮ್ಮ ಮಗನಿಗೆ ನೀಡಿದ ಉಪದೇಶವು ಇದಕ್ಕೆ ಅತ್ಯುತ್ತಮ ಉದಾಹರಣೆ. ಅವರು ಮಗನಿಗೆ ಏಕದೇವತ್ವ, ನಮಾಝ್, ಒಳಿತಿನ ಆಜ್ಞೆ, ಕೆಟ್ಟದ್ದರಿಂದ ದೂರವಿರುವುದು, ಸಹನೆ ಮತ್ತು ವಿನಯದ ಕುರಿತು ಹಂತ ಹಂತವಾಗಿ ಬೋಧಿಸಿದರು. (ಸೂರ ಲುಕ್ಮಾನ್ 13–19) ಇದು ಮಕ್ಕಳಿಗೆ ಕೇವಲ ನಿಯಮಗಳನ್ನು ಹೇಳುವುದಕ್ಕಿಂತ ಮೌಲ್ಯ ಮತ್ತು ಜೀವನದ ದೃಷ್ಟಿಕೋನವನ್ನು ಕಲಿಸುವ ಮಾದರಿಯಾಗಿದೆ.
ಪ್ರವಾದಿ(ಸ) ಅವರ ಕುಟುಂಬ ಜೀವನ – ಒಂದು ಮಾದರಿ
ಪ್ರವಾದಿ(ಸ) ಅವರ ಜೀವನದಲ್ಲಿ ಕುಟುಂಬದೊಂದಿಗೆ ಪ್ರೀತಿ ಮತ್ತು ಸಹಕಾರದ ಅನೇಕ ಉದಾಹರಣೆಗಳಿವೆ. ಆಯಿಶಾ(ರ) ಅವರಿಂದ ವರದಿಯಾಗಿದೆ: “ಪ್ರವಾದಿ(ಸ) ತಮ್ಮ ಕುಟುಂಬದ ಕೆಲಸಗಳಲ್ಲಿ ಸಹಾಯ ಮಾಡುತ್ತಿದ್ದರು”. (ಬುಖಾರಿ) ಇದು ಮನೆಯ ಕೆಲಸವನ್ನು ಕೇವಲ ಮಹಿಳೆಯ ಜವಾಬ್ದಾರಿ ಎಂದು ನೋಡುವ ಮನೋಭಾವಕ್ಕೆ ಒಂದು ಸುಂದರ ಪರ್ಯಾಯವನ್ನು ನೀಡುತ್ತದೆ. ಅವರು ತಮ್ಮ ಪತ್ನಿಯರೊಂದಿಗೆ ಸಮಾಲೋಚನೆ ನಡೆಸುತ್ತಿದ್ದರು. ಹುದೈಬಿಯಾ ಒಪ್ಪಂದದ ಸಂದರ್ಭದಲ್ಲಿ ಉಮ್ಮು ಸಲಮಾ(ರ) ಅವರ ಸಲಹೆಯನ್ನು ಸ್ವೀಕರಿಸಿದ ಘಟನೆ, ಮಹಿಳೆಯ ಬುದ್ಧಿವಂತಿಕೆ, ಅನುಭವ ಮತ್ತು ಸಲಹೆಗೆ ನೀಡಿದ ಗೌರವದ ಪ್ರಮುಖ ಉದಾಹರಣೆಯಾಗಿದೆ.
ಕುಟುಂಬದಲ್ಲಿ ನ್ಯಾಯ ಮತ್ತು ಹಿಂಸೆಯಿಂದ ದೂರವಿರುವುದು
ಕುಟುಂಬದೊಳಗಿನ ಭಿನ್ನಾಭಿಪ್ರಾಯಗಳು ಸಹಜವಾಗಿರಬಹುದು. ಆದರೆ ಅವು ದೌರ್ಜನ್ಯ, ಅವಮಾನ ಅಥವಾ ಅನ್ಯಾಯಕ್ಕೆ ಕಾರಣವಾಗಬಾರದು. ಕುರ್ಆನ್ ಹೇಳುತ್ತದೆ: “ಓ ಸತ್ಯವಿಶ್ವಾಸಿಗಳೇ, ನೀವು ಬಲಾತ್ಕಾರವಾಗಿ ಸ್ತ್ರೀಯರ ವಾರೀಸುದಾರರಾಗುವುದು ನಿಮಗೆ ಧರ್ಮಬದ್ಧವಲ್ಲ. ಅವರನ್ನು ಸತಾಯಿಸಿ, ನೀವು ಅವರಿಗೆ ಕೊಟ್ಟಿದ್ದ ವಿವಾಹಧನದ ಒಂದಂಶವನ್ನು ದಕ್ಕಿಸಿಕೊಳ್ಳಲು ಪ್ರಯತ್ನಿಸುವುದೂ ನಿಮಗೆ ಧರ್ಮಬದ್ಧವಲ್ಲ”. (4:19)
ಪ್ರವಾದಿ(ಸ) ಅವರ ಜೀವನ ಚರ್ಯೆಯು ನಮಗೆ ಕುಟುಂಬದ ಸಮಸ್ಯೆಗಳನ್ನು ಕೋಪದಿಂದಲ್ಲ, ಸಹನೆ, ಸಂವಾದ, ಕ್ಷಮೆ ಮತ್ತು ನ್ಯಾಯದಿಂದ ಪರಿಹರಿಸುವ ಪಾಠವನ್ನು ನೀಡುತ್ತದೆ.
ಸೀರತ್ನ ಕೌಟುಂಬಿಕ ಆಯಾಮವನ್ನು ಅಧ್ಯಯನ ಮಾಡಿದಾಗ ನಮಗೆ ಒಂದು ಸಮಗ್ರ ಕುಟುಂಬದ ಮಾದರಿ ಕಾಣುತ್ತದೆ: ಪುರುಷನಿಗೆ ಜವಾಬ್ದಾರಿ, ಮಹಿಳೆಗೆ ಗೌರವ ಮತ್ತು ಹಕ್ಕು, ಮಕ್ಕಳಿಗೆ ಪ್ರೀತಿ ಮತ್ತು ಶಿಕ್ಷಣ, ವೃದ್ಧರಿಗೆ ಗೌರವ ಮತ್ತು ಆರೈಕೆ, ದಂಪತಿಗಳಿಗೆ ಪರಸ್ಪರ ಪ್ರೀತಿ ಮತ್ತು ಕರುಣೆ. ಇಸ್ಲಾಮಿನ ಕುಟುಂಬ ವ್ಯವಸ್ಥೆಯ ಗುರಿ ಯಾರನ್ನಾದರೂ ಮತ್ತೊಬ್ಬರ ಮೇಲೆ ದಬ್ಬಾಳಿಕೆ ಮಾಡುವಂತೆ ಮಾಡುವುದು ಅಲ್ಲ. ಬದಲಾಗಿ ಪ್ರತಿಯೊಬ್ಬರಿಗೂ ಅವರ ಹಕ್ಕು ಮತ್ತು ಜವಾಬ್ದಾರಿಯನ್ನು ನೀಡಿ, ಪ್ರೀತಿ ಮತ್ತು ನ್ಯಾಯದ ಮೇಲೆ ಕುಟುಂಬವನ್ನು ನಿರ್ಮಿಸುವುದಾಗಿದೆ.
ಕುರ್ಆನಿನ ಸುಂದರ ಮಾರ್ಗದರ್ಶನ: “ನೀವು ಪರಸ್ಪರರೊಂದಿಗೆ ಉತ್ತಮ ರೀತಿಯಲ್ಲಿ ಜೀವನ ನಡೆಸಿರಿ.” (4:19) ಆದ್ದರಿಂದ ಇಂದಿನ ಕುಟುಂಬ ಸಂಕಷ್ಟಗಳಿಗೆ ಪರಿಹಾರ ಹುಡುಕುವಾಗ, ಸೀರತ್ ನಮಗೆ ಕೇವಲ ಐತಿಹಾಸಿಕ ಘಟನೆಗಳನ್ನು ನೀಡುವುದಿಲ್ಲ; ಇಂದಿಗೂ ಅನ್ವಯವಾಗುವ ಕುಟುಂಬ ಜೀವನದ ಮೌಲ್ಯಗಳನ್ನು ನೀಡುತ್ತದೆ. ಅಧಿಕಾರಕ್ಕಿಂತ ಜವಾಬ್ದಾರಿ, ಹಕ್ಕಿಗಿಂತ ಮೊದಲು ಕರ್ತವ್ಯ, ಕಾಠಿಣ್ಯದ ಬದಲು ಕರುಣೆ, ಹಾಗೂ ಸಂಬಂಧಗಳಲ್ಲಿ ಸ್ವಾರ್ಥಕ್ಕಿಂತ ಅಲ್ಲಾಹನ ಭಯ ಮತ್ತು ನ್ಯಾಯ.
ಒಂದು ಕುಟುಂಬದಲ್ಲಿ ಸಮಾನತೆ, ಪರಸ್ಪರ ಗೌರವ, ಜವಾಬ್ದಾರಿ, ಹಕ್ಕುಗಳು, ಪ್ರೀತಿ, ಕರುಣೆ ಮತ್ತು ಕ್ಷಮೆ ನೆಲೆಸಿದ್ದರೆ, ಈ ಲೋಕದಲ್ಲಿಯೇ ಕುಟುಂಬವು ನೆಮ್ಮದಿ ಮತ್ತು ಸಂತೋಷದ ತಾಣವಾಗುತ್ತದೆ. ಈ ರೀತಿಯ ಇಸ್ಲಾಮೀ ಕುಟುಂಬದಲ್ಲಿ ಗಂಡ-ಹೆಂಡತಿ ಪರಸ್ಪರರಿಗೆ ಉಡುಪಿನಂತಿದ್ದು, ಮಕ್ಕಳು ಪ್ರೀತಿ ಮತ್ತು ಉತ್ತಮ ಸಂಸ್ಕಾರದಲ್ಲಿ ಬೆಳೆಯುತ್ತಾರೆ. ವೃದ್ಧರು ಗೌರವ ಮತ್ತು ಆರೈಕೆಯನ್ನು ಪಡೆಯುತ್ತಾರೆ. ಪ್ರತಿಯೊಬ್ಬರೂ ತಮ್ಮ ಹಕ್ಕುಗಳನ್ನು ಮಾತ್ರ ಕೇಳುವುದಕ್ಕಿಂತ ತಮ್ಮ ಜವಾಬ್ದಾರಿಗಳನ್ನು ಅರಿತುಕೊಂಡು ನಿರ್ವಹಿಸುತ್ತಾರೆ.
ಈ ರೀತಿ ಮೌಲ್ಯಭರಿತ ಕುಟುಂಬಗಳು ಸೇರಿ ನೆಮ್ಮದಿಯುತ ಮತ್ತು ನ್ಯಾಯಯುತ ಸಮಾಜವನ್ನು ನಿರ್ಮಿಸುತ್ತವೆ. ಆದರೆ ಇಸ್ಲಾಮಿನ ದೃಷ್ಟಿಯಲ್ಲಿ ಕುಟುಂಬದ ಯಶಸ್ಸು ಈ ಲೋಕದ ನೆಮ್ಮದಿಗೆ ಮಾತ್ರ ಸೀಮಿತವಾಗಿಲ್ಲ. ಕುಟುಂಬದ ಸದಸ್ಯರು ಈಮಾನಿನೊಂದಿಗೆ, ಅಲ್ಲಾಹನ ವಿಧೇಯತೆಯಲ್ಲಿ ಬದುಕಿದರೆ, ಅದರ ಫಲಿತಾಂಶ ಪರಲೋಕದಲ್ಲಿಯೂ ದೊರೆಯುತ್ತದೆ.
ಅಲ್ಲಾಹನು ಹೇಳುತ್ತಾನೆ: “ಸತ್ಯವಿಶ್ವಾಸಿಗಳನ್ನೂ ವಿಶ್ವಾಸದ ಯಾವ ಮಟ್ಟದಲ್ಲಾದರೂ ಅವರನ್ನು ಅನುಸರಿಸಿದ ಅವರ ಸಂತಾನಗಳನ್ನೂ ನಾವು ಸ್ವರ್ಗದಲ್ಲಿ ಅವರೊಂದಿಗೆ ಸೇರಿಸುವೆವು ಮತ್ತು ಅವರ ಕರ್ಮದಲ್ಲೇನೂ ಅವರಿಗೆ ಕೊರತೆ ಮಾಡಲಾರೆವು.” (52:21)
ಸ್ವರ್ಗದಲ್ಲಿ ಅವರು ಪರಸ್ಪರ ಸಂತೋಷದಿಂದ ಭೇಟಿಯಾಗುವರು. ವಿವಿಧ ಬಗೆಯ ಹಣ್ಣುಗಳು ಮತ್ತು ಅವರು ಬಯಸುವ ಮಾಂಸವನ್ನು ನೀಡಲಾಗುವುದು. ಅಸಂಬದ್ಧ ಮಾತುಗಳಾಗಲಿ, ಪಾಪದ ಮಾತುಗಳಾಗಲಿ ಅಲ್ಲಿ ಇರುವುದಿಲ್ಲ. ಅವರು ತಮ್ಮ ಹಿಂದಿನ ಜೀವನವನ್ನು ನೆನಪಿಸಿಕೊಂಡು ಹೀಗೆ ಹೇಳುವರು: “ನಾವು ಹಿಂದೆ ನಮ್ಮ ಮನೆಯವರ ನಡುವೆ ಹೆದರುತ್ತ ಜೀವನ ನಡೆಸುತ್ತಿದ್ದೆವು. ಕೊನೆಗೆ ಅಲ್ಲಾಹನು ನಮ್ಮ ಮೇಲೆ ಅನುಗ್ರಹ ತೋರಿದನು ಮತ್ತು ಸುಟ್ಟು ಹಾಕುವಂತಹ ಗಾಳಿಯ ಯಾತನೆಯಿಂದ ನಮ್ಮನ್ನು ರಕ್ಷಿಸಿಬಿಟ್ಟನು. ನಾವು ಗತ ಜೀವನದಲ್ಲಿ ಅವನನ್ನೇ ಪ್ರಾರ್ಥಿಸುತ್ತಿದ್ದೆವು. ಅವನು ನಿಜಕ್ಕೂ ಮಹಾ ಉಪಕಾರಿಯೂ ಕರುಣಾನಿಧಿಯೂ ಆಗಿರುವನು.” (52:26–28)
ಆದ್ದರಿಂದ ನಮ್ಮ ಕುಟುಂಬವನ್ನು ಕೇವಲ ಈ ಲೋಕದಲ್ಲಿ ಬದುಕುವ ಸ್ಥಳವನ್ನಾಗಿ ಅಲ್ಲ; ಸ್ವರ್ಗಕ್ಕೆ ಕರೆದೊಯ್ಯುವ ಕುಟುಂಬವನ್ನಾಗಿ ರೂಪಿಸುವುದು ನಮ್ಮ ಗುರಿಯಾಗಬೇಕು. ಇಹಲೋಕದಲ್ಲಿ ನೆಮ್ಮದಿಯ ಕುಟುಂಬ, ಪರಲೋಕದಲ್ಲಿ ಒಂದಾಗಿ ಸೇರುವ ಕುಟುಂಬ — ಇದೇ ಇಸ್ಲಾಮಿನ ಕುಟುಂಬ ವ್ಯವಸ್ಥೆಯ ಸುಂದರ ಗುರಿ.












