ಸನ್ಮಾರ್ಗ ಸಂಪಾದಕೀಯ
ಮಕ್ಕಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಪೋಷಕರು ವಿಫಲರಾಗುತ್ತಿದ್ದಾರೋ ಅಥವಾ ಪೋಷಕರನ್ನು ಅರ್ಥ ಮಾಡಿಕೊಳ್ಳುವಲ್ಲಿ ಮಕ್ಕಳು ವಿಫಲರಾಗುತ್ತಿದ್ದಾರೋ ಎಂಬ ಪ್ರಶ್ನೆಯನ್ನು ಎತ್ತುವುದಕ್ಕೆ ಪೂರಕ ಘಟನೆಗಳು ಆಗಾಗ ನಡೆಯುತ್ತಿರುತ್ತವೆ. ಉಡುಪಿಯ ಬ್ರಹ್ಮಾವರ ಮತ್ತು ಮಹಾರಾಷ್ಟ್ರದ ಖಾವ್ಡಾ ಎಂಬಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳು ಈ ಪ್ರಶ್ನೆಯನ್ನು ಮತ್ತೊಮ್ಮೆ ಎತ್ತಿದೆ.
ಶಾಹಿದ್ ಅಲಿ ಎಂಬ 31 ವರ್ಷದ ಬ್ರಹ್ಮಾವರದ ಯುವಕ ತನ್ನ ತಂದೆ ಮೆಹಬೂಬ್ ಅಲಿ ಮತ್ತು ತಾಯಿ ಶಂಶಾದ್ ಬೇಗಂ ಅವರನ್ನು ಸುತ್ತಿಗೆಯಿಂದ ಹೊಡೆದು ಹತ್ಯೆ ಮಾಡಿದ್ದಾನೆ. ಅದರಲ್ಲೂ ಈ ಹತ್ಯೆಯಿಂದ ತಪ್ಪಿಕೊಳ್ಳಲು ತಾಯಿ ಶಕ್ತಿ ಮೀರಿ ಯತ್ನಿಸಿದ್ದಾರೆ. ಅವರ ಕೈ ಬೆರಳು ತುಂಡಾಗಿದೆ. ಆದರೂ ಆತನ ಮನಸ್ಸು ಕರಗಲಿಲ್ಲ. ಹತ್ಯೆ ಮಾಡಿದ ಬಳಿಕ ಸುಮಾರು 14 ಗಂಟೆಗಳ ಕಾಲ ಮೃತದೇಹಗಳ ಜೊತೆ ಕಳೆದಿದ್ದಾನೆ. ಮಾತ್ರವಲ್ಲ, ಈ ಹತ್ಯೆಗೆ ತನ್ನ ಹೆತ್ತವರು ಕೊಟ್ಟ ಕಿರುಕುಳವೇ ಕಾರಣ ಎಂದು ಸಮರ್ಥಿಸಿಕೊಂಡಿದ್ದಾನೆ. ‘ತಂದೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಪೀಡಿಸುತ್ತಿದ್ದರು, 30 ವರ್ಷವಾದರೂ ಮದುವೆ ಆಗಿಲ್ಲ, ನೀನು ನಿಷ್ಪçಯೋಜಕ ಎಂದು ಹಂಗಿಸುತ್ತಿದ್ದರು, ತಂದೆಯನ್ನು ತಾಯಿ ಬೆಂಬಲಿಸುತ್ತಿದ್ದರು, ಈ ಹಿನ್ನೆಲೆಯಲ್ಲಿ ಹತ್ಯೆ ಮಾಡಿದೆ..’ ಎಂದು ಆತ ಹೇಳಿರುವುದಾಗಿ ಉಡುಪಿ ಎಸ್.ಪಿ. ಹರಿರಾಮ್ ಹೇಳಿದ್ದಾರೆ. ಆದರೆ ಆತನ ತಾಯಿಯ ಸಹೋದರ ಈ ಹೇಳಿಕೆಯನ್ನು ತಿರಸ್ಕರಿಸಿದ್ದಾರೆ. ಹೆತ್ತವರು ಈತನನ್ನು ಪ್ರೀತಿಯಿಂದಲೇ ನೋಡಿಕೊಳ್ಳುತ್ತಿದ್ದರು ಎಂದು ಹೇಳಿದ್ದಾರೆ. ಆದರೆ ಇತ್ತೀಚೆಗೆ ಈತ ಮೌನಿಯಾಗಿದ್ದ, ಮೊಬೈಲ್ನಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದ ಎಂದವರು ಹೇಳಿದ್ದಾರೆ.
ಇದಕ್ಕಿಂತ ದಿನಗಳ ಮೊದಲು ಮಹಾರಾಷ್ಟçದ ಖಾವ್ಡಾ ಬೆಟ್ಟದಲ್ಲಿ ಇಂಥದ್ದೇ ಹೃದಯವಿದ್ರಾವಕ ಘಟನೆ ನಡೆದಿತ್ತು. ಕುನಾಲ್ ಚಂಗುಡೆ ಎಂಬ 18ರ ಯುವಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆಟ್ಟದ ತುದಿಯಲ್ಲಿ ನಿಂತಿದ್ದ. ಈತ ಸಾಮಾನ್ಯ ಯುವಕನಲ್ಲ, ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 92% ಅಂಕ ಪಡೆದಿದ್ದ. ನೀಟ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ. ಐಫೋನ್ ನೀಡದೇ ಇರುವುದಕ್ಕೆ ಆತ್ಮಹತ್ಯೆ ಬೆದರಿಕೆ ಹಾಕಿದ್ದ ಎಂದು ಆರಂಭದಲ್ಲಿ ವರದಿಯಾಗಿತ್ತು. ಸುಮಾರು ಮೂರು ಗಂಟೆಗಳ ಕಾಲ ಆತ ಬೆಟ್ಟದ ತುದಿಯಲ್ಲಿ ನಿಂತಿದ್ದ. 500 ಅಡಿ ಆಳ ಪ್ರಪಾತವಿದ್ದ ಬೆಟ್ಟ. ಈ ನಡುವೆ ಹೆತ್ತ ತಾಯಿ-ತಂದೆ, ಪೊಲೀಸರು ಮತ್ತು ಕುಟುಂಬಸ್ಥರೆಲ್ಲ ಸೇರಿ ವಿಧವಿಧವಾಗಿ ಈತನ ಮನವೊಲಿಸಲು ಯತ್ನಿಸಿದರು. ಕೊನೆಗೆ ತಂದೆ ಮಗನ ಹತ್ತಿರ ಹೋದರು. ಕೈ ಹಿಡಿದು ಎಳೆಯಲು ಯತ್ನಿಸಿದರು. ಆ ಸಮಯದಲ್ಲಿ ಆಯತಪ್ಪಿ ಇಬ್ಬರೂ ಬೆಟ್ಟದಿಂದ ಕೆಳಗೆ ಬಿದ್ದರು. ಅದರ ಬೆನ್ನಿಗೇ ತಾಯಿಯೂ ಬೆಟ್ಟದಿಂದ ಕೆಳಗೆ ಜಿಗಿದರು. ಹೀಗೆ ಮೂವರೂ ಪ್ರಾಣ ಕಳಕೊಂಡರು. ಆ ಪೋಷಕರ ಹದಿಹರೆಯದ ಮಗಳು ಒಂಟಿಯಾದಳು. ಆದರೆ,
ಈ ಯುವಕನ ಆತ್ಮಹತ್ಯೆ ಬೆದರಿಕೆಗೆ ಐಫೋನ್ ಕಾರಣ ಆಗಿರಲಿಲ್ಲ ಎಂಬುದು ತಡವಾಗಿ ಗೊತ್ತಾಯಿತು. ಕುನಾಲ್ನ ತಂದೆ ಈಗಾಗಲೇ ಐಫೋನ್ ಖರೀದಿಸಿ ಕೊಟ್ಟಿದ್ದರು. ನೀಟ್ ಕೋಚಿಂಗ್ ಶುಲ್ಕವನ್ನೂ ಕಟ್ಟಿದ್ದರು. ಟ್ರಕ್ ಚಾಲಕರಾಗಿದ್ದ ಅವರು ಆರ್ಥಿಕವಾಗಿ ಸದೃಢವೇ ಆಗಿದ್ದರು. ಆದರೆ ಇವರು ಮತ್ತು ಪತ್ನಿಯ ನಡುವೆ ಸಮಸ್ಯೆ ಇತ್ತು. ಸದಾ ಘರ್ಷಣೆಗಳಾಗುತ್ತಿತ್ತು. ಇವರು ಮನೆ ಬಿಟ್ಟು ಹೋಗಿದ್ದರು, ಕೌಟುಂಬಿಕವಾಗಿ ಇರುವ ಈ ಘರ್ಷಣೆಯೇ ಮಗನ ಮೇಲೆ ಪರಿಣಾಮ ಬೀರಿರುವ ಸಾಧ್ಯತೆ ಇದ್ದು, ಹೆತ್ತವರನ್ನು ಬೆದರಿಸಲು ಈತ ಆತ್ಮಹತ್ಯೆಯ ಬೆದರಿಕೆ ಹಾಕಿರಬಹುದು ಎಂದು ಕುಟುಂಬಸ್ಥರು ಹೇಳಿದ್ದಾರೆ.
ಈ ಎರಡೂ ಘಟನೆಗಳಲ್ಲಿ ಪೋಷಕರಿಗೆ ಮಹತ್ವದ ಪಾಠಗಳಿವೆ. 50-60 ವರ್ಷಗಳ ಹಿಂದಿನಂಥ ವಾತಾವರಣ ಈಗಿನದ್ದಲ್ಲ. ಆಧುನಿಕ ತಂತ್ರಜ್ಞಾನದ ಭರಪೂರ ಲಾಭದೊಂದಿಗೆ ಈಗಿನ ಜೆನ್ಝಿ ಪೀಳಿಗೆ ಬೆಳೆಯುತ್ತಿದೆ. ಅದಕ್ಕೆ ಜಗತ್ತಿನಲ್ಲಿ ಏನೇನು ನಡೆಯುತ್ತಿದೆ ಅನ್ನುವುದು ಹೆತ್ತವರಿಗಿಂತಲೂ ಹೆಚ್ಚು ಗೊತ್ತಿದೆ. ಮೊಬೈಲಲ್ಲಿ ಹೆತ್ತವರಿಗೆ ಗೊತ್ತಿಲ್ಲದ ಹತ್ತು-ಹಲವು ಆ್ಯಪ್ಗಳ ಬಗ್ಗೆ ತಿಳಿದಿದೆ. ಹೆತ್ತವರು ಇವರ ಮೊಬೈಲ್ನಲ್ಲಿ ಹುಡುಕಿದರೂ ಸಿಗದಷ್ಟು ರಹಸ್ಯವಾಗಿ ತಮಗೆ ಬೇಕಾದುದನ್ನು ಅದೇ ಮೊಬೈಲ್ನೊಳಗೆ ಇಟ್ಟುಕೊಳ್ಳುವಷ್ಟೂ ಈ ಪೀಳಿಗೆ ಬೆಳೆದಿದೆ. ಮೊಬೈಲಲ್ಲಿ ನೋಡಬಹುದಾದ ಮತ್ತು ನೋಡಬಾರದ ಎಲ್ಲವೂ ಈ ಪೀಳಿಗೆಯ ಕೈಗೆ ಚಿಟಿಕೆ ಹೊಡೆಯುವುದರೊಳಗೆ ಸಿಗುತ್ತಿದೆ. ಮೊಬೈಲ್ ಇಲ್ಲದೇ ಕಾಲೇಜಿಗೆ ಹೋಗಲು ಸಾಧ್ಯವೇ ಇಲ್ಲ ಎಂಬಂಥ ಪರಿಸ್ಥಿತಿಯನ್ನು ಕಾಲೇಜುಗಳೇ ನಿರ್ಮಿಸುತ್ತಿವೆ. ಇಡೀ ಕಲಿಕಾ ಪ್ರಕ್ರಿಯೆಯೇ ಮೊಬೈಲ್ ಕೇಂದ್ರಿತವಾಗಿರುವಾಗ ಮೊಬೈಲ್ ಉಪಯೋಗಿಸಬೇಡಿ ಎಂದು ಹೇಳುವುದಕ್ಕೆ ಅರ್ಥವೇ ಇರುವುದಿಲ್ಲ.
ಬದಲಾದ ಜಗತ್ತಿನ ಈ ವಾಸ್ತವಗಳನ್ನು ಅರ್ಥ ಮಾಡಿಕೊಂಡು ಅದಕ್ಕೆ ತಕ್ಕಂತೆ ತಮ್ಮ ಆಲೋಚನೆಗಳನ್ನು ಮರುರೂಪಿಸಿಕೊಳ್ಳುವ ಬುದ್ಧಿವಂತಿಕೆಯನ್ನು ಪೋಷಕರು ಪ್ರದರ್ಶಿಸಬೇಕು. ಹದಿಹರೆಯದ ಯುವಕ-ಯುವತಿಯರನ್ನು ಬಾಲ್ಯದಲ್ಲಿ ತಿದ್ದಿದಂತೆಯೇ ಹರೆಯದಲ್ಲೂ ಅದೇ ವಿಧಾನದಲ್ಲಿ ತಿದ್ದುವ ಪ್ರಯತ್ನ ಮಾಡಬಾರದು. ಹರೆಯದಲ್ಲಿ ಅವರು ಸಾಕಷ್ಟು ಕಲಿತಿರುತ್ತಾರೆ. ಹೊರಗೆ ಗೆಳೆಯರನ್ನು ಪಡೆದಿರುತ್ತಾರೆ. ತಮ್ಮದೇ ಸ್ವತಂತ್ರ ಐಡೆಂಟಿಟಿಯನ್ನು ರೂಪಿಸುವ ಉಮೇದಿನಲ್ಲಿರುತ್ತಾರೆ. ಮನೆಯಲ್ಲಿ ನಡೆಯುವ ಚರ್ಚೆಯ ವೇಳೆ ತಮ್ಮದೇ ಅಭಿಪ್ರಾಯ ಹೇಳಲು ಬಯಸುತ್ತಾರೆ. ಆ ಅಭಿಪ್ರಾಯಕ್ಕೆ ಮಾನ್ಯತೆ ಮತ್ತು ಗೌರವ ಸಿಗಬೇಕೆಂದು ಬಯಸುತ್ತಾರೆ. ಮದುವೆ ಇತ್ಯಾದಿ ಸಾರ್ವಜನಿಕ ಕಾರ್ಯಕ್ರಮದ ಸಮಯದಲ್ಲಿ ತಮ್ಮ ಪ್ರತ್ಯೇಕ ಗುರುತನ್ನು ಛಾಪಿಸಲು ಯತ್ನಿಸುತ್ತಾರೆ. ಇಂಥ ಪೀಳಿಗೆಯನ್ನು ಅರ್ಥ ಮಾಡಿಕೊಳ್ಳದೇ ಪೋಷಕರು ವರ್ತಿಸತೊಡಗಿದರೆ ಕೆಲವು ಮಕ್ಕಳ ಮೇಲೆ ಇದು ತೀವ್ರ ಅಡ್ಡ ಪರಿಣಾಮವನ್ನು ಬೀರಬಲ್ಲುದು. ತಮ್ಮ ಪ್ರತಿಭೆ, ಭಾವನೆ, ಅಭಿಪ್ರಾಯಗಳಿಗೆ ಹೆತ್ತವರು ಗಮನ ಕೊಡುತ್ತಿಲ್ಲ ಎಂಬ ನೋವು ಉಂಟಾಗಬಹುದು. ಈ ನೋವು ನಿಧಾನಕ್ಕೆ ಹೆತ್ತವರನ್ನೇ ತಿರಸ್ಕರಿಸುವ ಮಟ್ಟಕ್ಕೂ ಹೋಗಬಹುದು. ಸದ್ಯದ ಅಗತ್ಯ ಏನೆಂದರೆ,
ತಾವು ಹಾಕಿದ ಗೆರೆಯನ್ನು ಮಕ್ಕಳು ದಾಟಬಾರದು ಎಂಬಂಥ ಮನಸ್ಥಿತಿಯಿಂದ ಹೊರಬಂದು ಮಕ್ಕಳ ಅಭಿಪ್ರಾಯಕ್ಕೂ ಕಿವಿಯಾಗುವ ಉದಾರತೆಯನ್ನು ಪೋಷಕರು ತಾಳಬೇಕು. ಮಕ್ಕಳಲ್ಲಿ ಸದಾ ವಿನಮ್ರತೆ, ತಾಳ್ಮೆ, ವಿಧೇಯತೆ ಇತ್ಯಾದಿಗಳನ್ನು ಬಯಸುವ ಬದಲು, ಈ ಎಲ್ಲ ಬಯಕೆಗಳಿಗೆ ತಾವೆಷ್ಟು ಅರ್ಹರು ಎಂಬುದನ್ನು ವಿಶ್ಲೇಷಿಸಬೇಕು. ಮಕ್ಕಳು ಏನೇ ಹೇಳಿದರೂ ತಕ್ಷಣ ‘ನೋ’ ಎಂದು ಹೇಳುವ ಪೋಷಕರು ಧಾರಾಳ ಇದ್ದಾರೆ. ತಾವು ಹೇಳಿದ್ದನ್ನೇ ಮಾಡಬೇಕು ಎಂಬ ಏಕಮುಖ ವಾದ ಅನೇಕ ಪೋಷಕರಲ್ಲಿದೆ. ಇದು ಅತ್ಯಂತ ಅಪಾಯಕಾರಿ. ಬೆಳೆದ ಮಕ್ಕಳನ್ನು ಬಲವಂತದಿಂದ ಬಗ್ಗಿಸುವುದು ಇನ್ನಷ್ಟು ಅನಾಹುತಕ್ಕಷ್ಟೇ ಕಾರಣವಾದೀತು. ಅವರ ಬಳಿ ಕುಳಿತು ಅವರ ಅಭಿಪ್ರಾಯಗಳಿಗೆ ಕಿವಿಯಾಗಿ, ಸರಿ-ತಪ್ಪುಗಳನ್ನು ಆಲೋಚಿಸಿ ಅವರಿಗೆ ಮನವರಿಕೆ ಮಾಡಿಸುವ ಮತ್ತು ತಮ್ಮ ಅಭಿಪ್ರಾಯಕ್ಕಿಂತ ಅವರ ಅಭಿಪ್ರಾಯವೇ ಉತ್ತಮ ಎಂದಾದರೆ, ಅದನ್ನು ಶ್ಲಾಘನೆಯ ಮೂಲಕ ಒಪ್ಪಿಕೊಳ್ಳುವ ಉದಾರತೆಯನ್ನು ಹೆತ್ತವರು ತೋರ್ಪಡಿಸಬೇಕು. ಮನೆಯಲ್ಲಿ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೂ ಮೊದಲು ಹರೆಯದ ಮಕ್ಕಳಲ್ಲಿ ಅಭಿಪ್ರಾಯ ಕೇಳಬೇಕು. ಜೊತೆಗೇ, ಸಂದರ್ಭಾನುಸಾರ ತಿದ್ದುವ ಮಾತುಗಳನ್ನು ಅತೀ ಜಾಣತನ ಮತ್ತು ಬುದ್ಧಿವಂತಿಕೆಯಿಂದ ಮಾಡಬೇಕು. ಅಂದಹಾಗೆ,
ಬೆಳೆದ ಮಗನಿಗೆ ಉಪದೇಶಿಸುವ ಒಂದು ಸನ್ನಿವೇಶ ಪವಿತ್ರ ಕುರ್ಆನಿನ 31ನೇ ಅಧ್ಯಾಯವಾದ ಲುಕ್ಮಾನ್ನಲ್ಲಿದೆ. ‘ಓ ಮಗನೇ’ ಎಂಬ ಆಪ್ತ ಕರೆಯೊಂದಿಗೆ ತಂದೆ ಲುಕ್ಮಾನ್ರು ತನ್ನ ಮಗನಿಗೆ ಬೋಧಿಸುವ ಸನ್ನಿವೇಶ ಇದು. ಪೋಷಕರನ್ನು ಗೌರವಿಸು, ಒಳ್ಳೆಯದನ್ನು ಆದೇಶಿಸು, ಕೆಟ್ಟದ್ದನ್ನು ತಡೆ, ಅಹಂಕಾರ ಪಡಬೇಡ, ಸಹನೆ ವಹಿಸು.. ಎಂದೆಲ್ಲಾ ತಂದೆ ಉಪದೇಶಿಸುವ ಮೊದಲು ಓ ಮಗನೇ ಎಂದು ಪ್ರಾರಂಭಿಸುತ್ತಾರೆ. ಈ ಆಪ್ತ ಭಾಷೆ ಎಲ್ಲ ಪೋಷಕರದ್ದಾಗಬೇಕು.












