ವಿದ್ಯಾರ್ಥಿ ಕೆನ್ನೆಗೆ ಏಟು ಪ್ರಕರಣದ ಬೆನ್ನಲ್ಲೇ ಮುಸ್ಲಿಂ ವಿದ್ಯಾರ್ಥಿಯನ್ನು ಅಪ್ಪಿಕೊಂಡ ಹಿಂದೂ ವಿದ್ಯಾರ್ಥಿ

0
175

ಸನ್ಮಾರ್ಗ ವಾರ್ತೆ

ಉತ್ತರ ಪ್ರದೇಶ: ಶಿಕ್ಷಕಿಯ ಮಾತಿನಂತೆ ಮುಸ್ಲಿಂ ವಿದ್ಯಾರ್ಥಿಯೋರ್ವನ ಕೆನ್ನೆಗೆ ಇತರ ವಿದ್ಯಾರ್ಥಿಗಳು ಬಾರಿಸಿದ್ದ ಘಟನೆಯು ದೇಶಾದ್ಯಂತ ಚರ್ಚೆಗೊಳಗಾಗಿರುವ ಮದ್ಯೆಯೇ ರೈತ ಮುಖಂಡರ ನಡೆಯು ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.

ರಾಷ್ಟ್ರಾದ್ಯಂತ ಚರ್ಚೆಗೊಳಗಾಗಿರುವ ಮುಝಾಫರ್ ನಗರದ ಘಟನೆಯ ವಿಡಿಯೋ ವೈರಲಾದ ವಿಷಯ ತಿಳಿದ ಭಾರತೀಯ ಕಿಸಾನ್ ಯೂನಿಯನ್‌ ಮುಖಂಡ ನರೇಶ್ ಟಿಕಾಯತ್ ನೇತೃತ್ವದ ರೈತ ಮುಖಂಡರ ತಂಡ, ಮುಝಾಫರ್ ನಗರದ ಖುಬ್ಬಾಪುರ ಗ್ರಾಮಕ್ಕೆ ಭೇಟಿ ನೀಡಿ ಸಂತ್ರಸ್ತ ವಿದ್ಯಾರ್ಥಿಯ ಕುಟುಂಬದೊಂದಿಗೆ ಮಾತುಕತೆ ನಡೆಸಿದೆ.

ಈ ಕುರಿತು ಮಾತನಾಡಿದ ನರೇಶ್ ಟಿಕಾಯತ್, “ಈ ಘಟನೆ ನಾಚಿಕೆಗೇಡಿನ ಸಂಗತಿ. ಧರ್ಮದ ಕಾರಣಕ್ಕೆ ಪರಸ್ಪರ ಪ್ರೀತಿಯ ವಾತಾವರಣವನ್ನು ಕೆಡಲು ನಾವು ಬಿಡುವುದಿಲ್ಲ” ಎಂದು ಸ್ಪಷ್ಟಪಡಿಸಿದರು.

ಆ ಬಳಿಕ ಕೆನ್ನೆಗೆ ಹೊಡೆದಿದ್ದ ಹಿಂದೂ ವಿದ್ಯಾರ್ಥಿ ಮತ್ತು ಹೊಡೆತ ತಿಂದಿದ್ದ ಮುಸ್ಲಿಂ ವಿದ್ಯಾರ್ಥಿಯನ್ನು ಹತ್ತಿರಕ್ಕೆ ಕರೆದು ಪರಸ್ಪರ ಅಪ್ಪಿಕೊಳ್ಳುವಂತೆ ಸೂಚಿಸಿದರು.

ಆಲಿಂಗಿಸಿಕೊಂಡ ವಿದ್ಯಾರ್ಥಿಗಳಿಬ್ಬರ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದ್ದು, ರೈತ ಮುಖಂಡರ ನಡೆಯು ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.

“ಯಾವ ಟೀಚರ್ ಮಾತು ಕೇಳಿ ಒಂದು ಮಗು ಮತ್ತೊಂದು ಮಗುವಿನ ಕೆನ್ನೆಗೆ ಬಾರಿಸಿತ್ತೋ, ಇಂದು ರೈತ ಮುಖಂಡರುಗಳು ಮುಂದೆ ಬಂದು ಆ ಎರಡು ಮಕ್ಕಳಿಗೆ ಬುದ್ಧಿ ಹೇಳಿ, ಇಬ್ಬರು ಆತ್ಮೀಯವಾಗಿ ತಬ್ಬಿಕೊಳ್ಳುವ ಹಾಗೆ ಮಾಡಿದರು. ಇದೆ ನಮ್ಮ ನಿಜವಾದ ಭಾರತ ದೇಶದ ಸಂಸ್ಕೃತಿ. ದ್ವೇಷದ ಗಾಯಕ್ಕೆ ಪ್ರೀತಿಯ ಮುಲಾಮು ಹಚ್ಚಿದ್ದಾರೆ’ ಎಂದು ಹಲವರು ವಿಡಿಯೋ ಹಂಚಿಕೊಂಡಿದ್ದಾರೆ.